Mysuru Dasara- ಮೈಸೂರಿನಲ್ಲಿ 'ಬೊಂಬೆ ಮನೆ ಪ್ರದರ್ಶನ' ಶುರು
ಮೈಸೂರು ದಸರಾದಲ್ಲಿ ಜಂಬೂ ಸವಾರಿಯ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿದ್ದರೆ ಇತ್ತ ಮನೆ ಮನೆಗಳಲ್ಲಿ ಬೊಂಬೆಗಳ ದಿಬ್ಬಣ ನಿಧಾನವಾಗಿ ಹೊರಡುತ್ತವೆ. ದಸರಾದ ಸಂದರ್ಭ ನವರಾತ್ರಿಯಲ್ಲಿ ಮನೆಮನೆಗಳಲ್ಲಿ ಬೊಂಬೆಗಳನ್ನು ಕೂರಿಸುವುದು ಹಿಂದಿನಿಂದಲೂ ನಡೆದು ಬಂದಿದ್ದು, ಇದಕ್ಕೆ ಮೆರಗು ನೀಡಲು ಮತ್ತು ಬೊಂಬೆ ಪ್ರಿಯರಿಗಾಗಿಯೇ ಬೊಂಬೆಗಳ ಪ್ರದರ್ಶನವನ್ನು ರಾಮ್ ಸನ್ಸ್ ಕಲಾ ಪ್ರತಿಷ್ಠಾನ ಮಾಡುತ್ತಾ ಬಂದಿದೆ.
ಕಳೆದ ಹದಿನೆಂಟು ವರ್ಷಗಳಿಂದ ಮೈಸೂರು ದಸರಾ ಸಂದರ್ಭ 'ಬೊಂಬೆ ಮನೆ ಪ್ರದರ್ಶನ'ದ ಮೂಲಕ ಮನೆ ಮನೆಗೆ ಲಗ್ಗೆಯಿಡುತ್ತಿದೆ. ಅಷ್ಟೇ ಅಲ್ಲದೆ ಬೊಂಬೆ ಪ್ರಿಯರ ಮನತಣಿಸುತ್ತಾ ಬಂದಿದೆ. ಜತೆಗೆ ನವರಾತ್ರಿಯಲ್ಲಿ ಬೊಂಬೆಗಳು ತಮ್ಮದೇ ವಿಶೇಷತೆಗಳಿಂದ ಎಲ್ಲರ ಸೆಳೆಯಲು ಶುರು ಮಾಡಿವೆ. ಮೈಸೂರು ನಗರದ ನಜರ್ ಬಾದ್ ನಲ್ಲಿರುವ ರಾಮ್ ಸನ್ಸ್ ಬೊಂಬೆ ಮನೆಗೆ ಹೋಗಿದ್ದೇ ಆದರೆ ವಿವಿಧ ನಮೂನೆಯ ಆಕರ್ಷಕ ಬೊಂಬೆಗಳು ಬಿಡಾರ ಹೂಡಿ ಗಮನಸೆಳೆಯುತ್ತವೆ.
ಈ ಬಾರಿ ಶುಭಕೃತ ಸಂವತ್ಸರದ ಶರನ್ನವರಾತ್ರಿ ಆರಂಭವಾಗುವುದಕ್ಕೂ ಹದಿನೆಂಟು ದಿನಗಳ ಮುಂಚೆಯೇ ದೇಶದ ಮೂಲೆಮೂಲೆಗಳ ಬೊಂಬೆಗಳು ಮೈಸೂರು ನಗರ ಪ್ರವೇಶಿಸಿ ರಾಮ್ ಸನ್ಸ್ ಬೊಂಬೆ ಮನೆಯಲ್ಲಿ ಬೆಚ್ಚಗೆ ಕುಳಿತಿರುವುದು ಕಾಣಿಸುತ್ತಿದೆ. ಬೊಂಬೆ ಮನೆಗೆ ಪ್ರವೇಶಿಸಿದರೆ ಅರೆಕ್ಷಣ, ಯಾವುದೋ ಪುಟಾಣಿ ಬೊಂಬೆ ಸ್ವರ್ಗಕ್ಕೆ ನಾವೇನಾದರೂ ಹೋಗಿದ್ದೇವೆಯೋ ಎಂಬ ಭಾವನೆ ಬಾರದಿರದು.

50 ರೂ.ಗಳಿಂದ ಹಿಡಿದು, 2.5 ಲಕ್ಷ ರೂ ಬೆಲೆ
ನೆಲದಿಂದ ಸೂರಿನೆಡೆ, ಅತ್ತಲಿಂದ ಇತ್ತ, ಎಲ್ಲೆಡೆ ಬೊಂಬೆಗಳದ್ದೇ ಕಾರುಬಾರಾಗಿದ್ದು, ಈ ವಿಶಾಲ ಬೊಂಬೆ ಮನೆಗೆ ಒಂದು ಅಟ್ಟವೂ ಇದ್ದು, ಮೆಟ್ಟಲೇರಿ ಹೋದರೆ ಇಲ್ಲೂ ಕೂಡ ಬೊಂಬೆ ರಾಜ್ಯ ಮೈಸೂರಲ್ಲದೆ, ಬೆಂಗಳೂರು, ಕಿನ್ನಾಳ, ಚನ್ನಪಟ್ಟಣ, ಪಲಿಮಾರುಗಳಲ್ಲಿ ತಯಾರಾದ ಬೊಂಬೆಗಳು. ಹೊರರಾಜ್ಯಗಳಾದ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ರಾಜಾಸ್ತಾನ, ಉತ್ತರಪ್ರದೇಶ, ಪಶ್ಚಿಮಬಂಗಾಳ ಮತ್ತು ಒಡಿಶಾಗಳಲ್ಲಿ ರಚಿಸಲಾಗಿರುವ ತರಾವರಿ ಬೊಂಬೆಗಳು, ಒಂದಕ್ಕಿಂತ ಒಂದು ಸುಂದರ, ಆಪ್ಯಾಯಮಾನ. 50 ರೂ.ಗಳಿಂದ ಹಿಡಿದು, ಎರಡೂವರೆ ಲಕ್ಷ ಬೆಲೆಬಾಳುವ ಬೊಂಬೆಗಳು ಇಲ್ಲಿರುವುದು ವಿಶೇಷವಾಗಿದೆ.
ಬೊಂಬೆಗಳ ಮೂಲಕವೇ ಇಡೀ ರಾಮಾಯಣವನ್ನು ಹಿಡಿದಿಡುವ ಪ್ರಯತ್ನವನ್ನು ಮಣ್ಣಿನ ಬೊಂಬೆ ಕಲಾವಿದರು ಮಾಡಿರುವುದನ್ನು ಕಾಣಬಹುದಾಗಿದೆ.

24 ವಿಹಂಗಮ ದೃಶ್ಯಗಳ ಅನನ್ಯತೆ
ಪುತ್ರಕಾಮೇಷ್ಠಿ ಯಾಗ, ಶ್ರೀರಾಮ ಜನನ, ತಾಟಕಾ ಸಂಹಾರ, ಮಾರೀಚ ಸುಬಾಹುಗಳ ಪಲಾಯನ, ಅಹಲ್ಯಾ ಉದ್ದಾರ, ಸೀತಾ ಸ್ವಯಂವರ, ಗುಹನ ದೋಣಿ ಪ್ರಯಾಣ, ಭರತನಿಗೆ ಪಾದುಕಾ ಪ್ರದಾನ, ಪಾದುಕಾ ಪಟ್ಟಾಭಿಷೇಕ, ಶೂರ್ಪನಖಿಗೆ ಶಿಕ್ಷೆ, ಮಾಯಾಮೃಗ-ಸೀತಾಪಹರಣ, ಜಟಾಯು ವಧೆ, ಶಬರಿ ಸತ್ಕಾರ, ವಾಲಿ ಮೋಕ್ಷ, ಸುಗ್ರೀವ ಪಟ್ಟಾಭಿಷೇಕ, ಅಶೋಕವನದಲ್ಲಿ ಚೂಡಾಮಣಿ ಪ್ರದಾನ, ರಾವಣ ದರ್ಬಾರ್, ವಿಭೀಷಣ ಪಟ್ಟಾಭಿಷೇಕ, ಸೇತುಬಂಧನ, ಸಂಜೀವಿನಿ ಪರ್ವತ, ಕುಂಭಕರ್ಣ ಉತ್ಥಾನ, ರಾವಣ ಸಂಹಾರ, ಸೀತಾ ಅಗ್ನಿ ಪ್ರವೇಶ ಮತ್ತು ಶ್ರೀ ರಾಮ ಪಟ್ಟಾಭಿಷೇಕ - ಹೀಗೆ 24 ವಿಹಂಗಮ ದೃಶ್ಯಗಳ ಅನನ್ಯತೆ ಬೊಂಬೆ ಮನೆಯಲ್ಲಿ ಮೇಳೈಸುತ್ತಿದೆ.

ಕಥೆ ಹೇಳುವ ಬೊಂಬೆಗಳು
ಇಷ್ಟೇ ಅಲ್ಲದೆ ಮೈಸೂರಿನ ಬೊಂಬೆ ಹಬ್ಬಕ್ಕೆ ಸಂಬಂಧಿಸಿದಂತೆ ಗೃಹಿಣಿಯರಿಗೆ ಬೊಂಬೆ ಕೂರಿಸಲು ಅಗತ್ಯವಿರುವ ಬೊಂಬೆಗಳನ್ನು ತಯಾರಿಸಲಾಗಿದ್ದು, ಈ ಪೈಕಿ ಮೈಸೂರು ಚಾಮುಂಡಿಯ ಉತ್ಸವಮೂರ್ತಿ, ಶಿರಸಿ ಮಾರಿಕಾಂಬಾ, ಕೇರಳದ ಚಂಡೆ ಮೇಳ, ಯೋಗ ನಿರತ ವಿನಾಯಕ ಮೂರ್ತಿಗಳು, ನಾಟ್ಯ ಮಯೂರಿ, ವಾದಿರಾಜ ತೀರ್ಥರು, ಗುರು ರಾಯರ ಜೀವನ ಗಾಥೆ, ಸಾಯಿಬಾಬಾ ಅವರ ಜೀವನ ಗಾಥೆ, ಚನ್ನಪಟ್ಟಣದ ಮುದ್ದು ಆನೆ ಹೀಗೆ ಹಲವಾರು ಬೊಂಬೆಗಳು ಬೊಂಬೆ ಕೂರಿಸುವವರಿಗೆ ಸಹಕಾರಿಯಾಗಿದೆ.

ಬೊಂಬೆ ಮನೆ ಪ್ರದರ್ಶನಕ್ಕೆ ಚಾಲನೆ
ಬೊಂಬೆಗಳಿಂದ ಮನೆಯನ್ನು ಅಲಂಕರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಬಹಳಷ್ಟು ಮನೆಗಳ ಕಪಾಟುಗಳಲ್ಲಿ, ದೇವರ ಮನೆಗಳಲ್ಲಿ ಸ್ಥಾನಪಡೆದಿವೆ. ಜತೆಗೆ ಮಕ್ಕಳ ಆಟಿಕೆಯಾಗಿಯೂ ಬಳಕೆಯಾಗುತ್ತಿವೆ. ಈ ಬಾರಿ ದಸರಾ ಪ್ರಯುಕ್ತ ರಾಮ್ ಸನ್ಸ್ ಕಲಾ ಪ್ರತಿಷ್ಠಾನವು ಸೆಪ್ಟೆಂಬರ್ 8 ರಿಂದ 'ಬೊಂಬೆ ಮನೆ ಪ್ರದರ್ಶನ'ಕ್ಕೆ ಚಾಲನೆ ನೀಡಲಾಗುತ್ತಿದೆ.
ಒಟ್ಟಾರೆಯಾಗಿ ಎರಡು ವರ್ಷಗಳ ಕಾಲ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಬೊಂಬೆಗಳ ಪ್ರದರ್ಶನ ಈ ಬಾರಿ ಆರಂಭವಾಗುತ್ತಿರುವುದು ಬೊಂಬೆ ಪ್ರಿಯರಿಗೆ ಖುಷಿ ತಂದಿದೆ.












Click it and Unblock the Notifications