ದಸರಾ ಕವನ:ವಿಜಯ ದೊರಕಲಿ ನಮಗೆ

ವಿಪಕ್ಷಃ ಪೌಲಸ್ತ್ಯೋ ರಣಭುವಿ ಸಹಾಯಾಶ್ಚ ಕಪಯಃ |
ತಥಾಪ್ಯೇಕೋ ರಾಮಃ ಸಕಲಮವಧೀದ್ರಾಕ್ಷಸಕುಲಂ
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ||
(ಸುಭಾಷಿತರತ್ನಭಾಂಡಾಗಾರ)
ಗೆಲಬೇಕು ಲಂಕೆಯನು, ಪದಕ್ರಮಿಸಬೇಕು ಕಡಲನು
ವೈರಿಯವ ರಾವಣನು, ಯುದ್ಧದಿ ನೆರವು ಕಪಿಗಳದು
ಆದರೂ ರಾಮನೊಬ್ಬನೆ ರಾಕ್ಷಸಕುಲವನಳಿಸಿದನು
ಶ್ರೇಷ್ಠರಿಗೆ ಸಿದ್ಧಿ ಸತ್ತ್ವದಲಿಹುದು, ಸಾಮಗ್ರಿಯಲಿರದು
***
ವಿಜಯ ದೊರಕಲಿ ನಮಗೆ ದಶ ದಿಕ್ಕುಗಳಮೇಲೆ;
ಯಶದ ಸೌಧ ಏಳಲಿ ಯತ್ನದ ತಳಹದಿಮೇಲೆ
ವಿಜಯ ದೊರಕಲಿ ನಮಗೆ ನವ ದ್ವಾರಗಳಮೇಲೆ;
ಅವು ನಮ್ಮ ಅಂಕೆಯಲ್ಲಿರಲಿ, ಮನ ಗುರುಶಾಲೆ
ವಿಜಯ ದೊರಕಲಿ ನಮಗೆ ಅಷ್ಟ ಮದಗಳಮೇಲೆ;
ಇಷ್ಟವಾಗಲಿ ವಿನಯ, ದೃಷ್ಟಿಯಿರಲಿ ನೆಲದಮೇಲೆ
ವಿಜಯ ದೊರಕಲಿ ನಮಗೆ ಸಪ್ತ ವ್ಯಸನಗಳಮೇಲೆ;
ಪ್ರಾಪ್ತವಾಗಲಿ ಹಿಡಿತ ಕೋಪ-ಕಾಮಗಳಮೇಲೆ
ವಿಜಯ ದೊರಕಲಿ ನಮಗೆ ಅರಿಷಡ್ವರ್ಗಗಳಮೇಲೆ;
ಅರಿವನಾವರಿಸಿರುವ ಅಂಧಕಾರದಮೇಲೆ
ವಿಜಯ ದೊರಕಲಿ ನಮಗೆ ಪಂಚ ಪಾತಕಗಳಮೇಲೆ;
ಕಿಂಚಿತ್ತಾದರೂ ಗೌರವವಿರಲಿ ಜೀವನಮೌಲ್ಯದಮೇಲೆ
ವಿಜಯ ದೊರಕಲಿ ನಮಗೆ ಕ್ರೂರ ಚತುಷ್ಟಯದಮೇಲೆ;
ಹಾರವಾಗಲಿ ಹೃದಯಕೆ ಅಂತಃಕರಣಮಾಲೆ
ವಿಜಯ ದೊರಕಲಿ ನಮಗೆ ತಾಪತ್ರಯದಮೇಲೆ;
ಈ ಪ್ರಪಂಚವು ಆ ದೇವದೇವನ ಲೀಲೆ
ವಿಜಯ ದೊರಕಲಿ ನಮಗೆ ಸ್ವೇಚ್ಛೆ-ಸ್ವೈರದಮೇಲೆ;
ಎಚ್ಚರವಿರಲಿ ಸದಾ ಇಹಪರಗಳಮೇಲೆ
ವಿಜಯ ದೊರಕಲಿ ನಮಗೆ ಭವದ ಮಾಯೆಯಮೇಲೆ;
ಅವ ಮೊದಲು; ನಾನು, ನನ್ನದು ಎಲ್ಲ ಆಮೇಲೆ
ಟಿಪ್ಪಣಿ:
* ದಶ ದಿಕ್ಕುಗಳು: ಎಂಟು ದಿಕ್ಕುಗಳು+ಊರ್ಧ್ವದಿಶೆ+ಅಧೋದಿಶೆ.
* ನವ ದ್ವಾರಗಳು: ಕಣ್ಣುಗಳು, ಕಿವಿಗಳು, ಮೂಗಿನ ಹೊಳ್ಳೆಗಳು, ಬಾಯಿ, ಮೂತ್ರದ್ವಾರ, ಗುದದ್ವಾರ.
* ಅಷ್ಟ ಮದಗಳು: ಧನ, ಕುಲ, ವಿದ್ಯಾ, ರೂಪ, ಯೌವನ, ಬಲ, ಪರಿವಾರ, ಅಧಿಕಾರ.
* ಸಪ್ತ ವ್ಯಸನಗಳು: ವಾಕ್ಪಾರುಷ್ಯ, ಅರ್ಥದೂಷಣ, ದಂಡಪಾರುಷ್ಯ (ಇವು ಕೋಪಜನ್ಯ), ಬೇಟೆ, ಜೂಜು, ಸ್ತ್ರೀ, ಪಾನ (ಇವು ಕಾಮಜನ್ಯ).
* ಅರಿಷಡ್ವರ್ಗಗಳು: ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ.
* ಪಂಚಪಾತಕಗಳು: ಬ್ರಹ್ಮಹತ್ಯೆ, ಸುರಾಪಾನ, (ಸ್ವರ್ಣ)ಸ್ತೇಯ(=ಕಳ್ಳತನ), ಗುರುಭಾರ್ಯಾ ಗಮನ ಮತ್ತು ಇವುಗಳನ್ನು ಮಾಡುವವರ ಸಹವಾಸ.
* ಕ್ರೂರ ಚತುಷ್ಟಯ: ದುರ್ಮನ, ದುರ್ಬುದ್ಧಿ, ದುರಹಂಕಾರ, ದುಶ್ಚಿತ್ತ.
* ಅಂತಃಕರಣ ಚತುಷ್ಟಯ: ಸುಮನ, ಸದ್ಬುದ್ಧಿ, ನಿರಹಂಕಾರ, ಸತ್‌ಚಿತ್ತ.
* ತಾಪತ್ರಯ: ಆಧ್ಯಾತ್ಮಿಕ ದುಃಖ, ಆಧಿಭೌತಿಕ ದುಃಖ, ಆಧಿದೈವಿಕ ದುಃಖ.
* ದೋಷದ್ವಯ: ಸ್ವೇಚ್ಛೆ, ಸ್ವೈರ.
* ಏಕಭ್ರಾಂತಿ: ಭವದ ಮಾಯೆ.
* ಅವ = ಭಗವಂತ.
ನಾಡಹಬ್ದ ದಸರಾ ಸಮಗ್ರ ಸುದ್ದಿಗಳಿಗಾಗಿ ಕ್ಲಿಕ್ಕಿಸಿ












Click it and Unblock the Notifications