ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಅಂಬಾರಿ ಯಾರ ಹೆಗಲೇರಲಿದೆ?

By * ಬಿ.ಎಂ.ಲವಕುಮಾರ್, ಕಗ್ಗೋಡ್ಲು, ಮೈಸೂರು
|
Google Oneindia Kannada News

Balarama, Elephant
ಮೈಸೂರು, ಸೆ.16:ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದ ಹೆಜ್ಜೆಯಿಡುತ್ತಿದ್ದ ಗಜಪಡೆಯ ಹಿರಿಯಣ್ಣ ಬಲರಾಮ ಇನ್ನು ಮೊದಲಿನಂತೆ ಅಂಬಾರಿ ಹೊರುವುದು ಅಸಾಧ್ಯ. ಈ ಬಾರಿಯ ದಸರಾ ಬಳಿಕ ಮುಂದಿನ ವರ್ಷವೂ ಬಲರಾಮನೇ ಜವಾಬ್ದಾರಿ ನಿರ್ವಹಿಸುವನೇ? ಉತ್ತರಾಧಿಕಾರಿಯ ಅಗತ್ಯವಿದೆಯೇ ಎಂಬುವುದು ತೀರ್ಮಾನವಾಗಲಿದೆ.

ಕಳೆದ ವರ್ಷವೇ ಬಲರಾಮನ ಶಕ್ತಿ ಕುಂದಿದ್ದು, ಜಂಬೂ ಸವಾರಿಗೆ ಬೇರೆ ಆನೆಯ ವ್ಯವಸ್ಥೆ ಮಾಡುವಂತೆ ಒತ್ತಡಗಳು ಬಂದಿತ್ತು. ಆದರೆ ಎಲ್ಲವನ್ನು ಸುಳ್ಳುಮಾಡಿದ ಬಲರಾಮ ಅಂಬಾರಿ ಹೊರುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದನು. ಆದರೆ ಈಗ ಬಲರಾಮನ ಬಲಗಣ್ಣು ಪೊರೆ ಬಂದಿದೆ ಎಂಬ ಅಂಶ ಬಯಲಾಗಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಆದರೆ ಇದರಿಂದ ಈ ವರ್ಷದ ಜಂಬೂ ಸವಾರಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬುವುದು ಸಂಬಂಧಿಸಿದ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಬಲರಾಮನ ಬಗ್ಗೆ ಒಂದಷ್ಟು: ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತು ಮುನ್ನಡೆಯುವ ಬಲರಾಮನಿಗೆ ಈಗ 52 ವರ್ಷ. ಸೌಮ್ಯ ಸ್ವಭಾವದ ಈತ 2.70ಮೀಟರ್ ಎತ್ತರ ಇದ್ದಾನೆ. ಹದಿನಾರು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು, ಕಳೆದ ಹನ್ನೆರಡು ವರ್ಷದಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ್ದಾನೆ.

ಬಲರಾಮನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಬಹುಶಃ ಆ ಸಂದರ್ಭದಲ್ಲಿ ಕಾಡಿನಲ್ಲಿ ಓಡಾಡಿಕೊಂಡಿದ್ದಾಗ ಗಿಡಗಂಟಿ ಕಣ್ಣಿಗೆ ಚುಚ್ಚಿದ್ದರಿಂದ ಗಾಯವಾಗಿತ್ತು. ಆದರೆ ಸೆರೆಹಿಡಿದ ಬಳಿಕ ಆನೆಶಿಬಿರದಲ್ಲಿ ಕಣ್ಣಿನಿಂದ ನೀರು ಬರುತ್ತಿದ್ದುದನ್ನು ಗಮನಿಸಿದ ವೈದ್ಯರು ಅದಕ್ಕೆ ಔಷಧಿ ಹಾಕಿ ಉಪಚಾರ ಮಾಡಿದ್ದರು.

ಈಗ ವಯಸ್ಸಾಗುತ್ತಿರುವುದರಿಂದ ಕಣ್ಣಿನಲ್ಲಿ ಪೊರೆ ಬೆಳೆಯತೊಡಗಿದ್ದು, ಇದರಿಂದ ದೃಷ್ಟಿ ಮಂದವಾಗತೊಡಗಿದೆ. ಅಲ್ಲದೆ ಶಸ್ತ್ರಚಿಕಿತ್ಸೆ ಮೂಲಕ ಪೊರೆ ತೆಗೆಯೋಣ ಎಂದರೆ ಅಂತಹ ಸೌಲಭ್ಯವೇ ಇಲ್ಲ ಎಂಬ ಮಾತು ಕೂಡ ಕೇಳಿ ಬಂದಿದೆ. ದೃಷ್ಟಿ ಸ್ವಲ್ಪ ಮಂದವಾದರೂ ಬಲರಾಮ ದೃಢಕಾಯನಾಗಿದ್ದು ಅಂಬಾರಿ ಹೊರುವ ಸಾಮರ್ಥ್ಯ ಹೊಂದಿದ್ದಾನೆ ಎಂಬುವುದು ಇದನ್ನು ಲಾಲನೆ ಪೋಷಣೆ ಮಾಡುವ ಮಾವುತ ಸಣ್ಣಯ್ಯ ಹಾಗೂ ಚಿಕಿತ್ಸೆ ನೀಡುತ್ತಿರುವ ಪಶುವೈದ್ಯಾಧಿಕಾರಿ ಡಾ.ನಾಗರಾಜು ಅವರ ಅಭಿಪ್ರಾಯವಾಗಿದೆ.

ದ್ರೋಣನ ನಂತರ ದಸರಾದಲ್ಲಿ ಅಂಬಾರಿ ಹೊತ್ತು ತನ್ನ ಜವಾಬ್ದಾರಿಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಿದ ಬಲರಾಮನ ನಂತರ ಈ ಜವಾಬ್ದಾರಿ ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. ಕೆ.ಗುಡಿ ಅರಣ್ಯ ಪ್ರದೇಶದ ಗಜೇಂದ್ರನಿಗೆ ಬಹುಶಃ ಚಿನ್ನದ ಅಂಬಾರಿ ಹೊರುವ ಅವಕಾಶ ಲಭ್ಯವಾಗುವ ಎಲ್ಲ ಲಕ್ಷಣಗಳು ಕಂಡುಬಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X