ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಾತ್ರಿಯಲ್ಲಿ ನಂಬರ್‌ ಹರಟೆ

By Staff
|
Google Oneindia Kannada News


ನಮ್ಮ ಸೋಮಾರಿತನ ಬಿಡಿಸಕ್ಕೆ ಒಳ್ಳೆ ನಂಬರ್‌ ‘ಏಳು’
ಸ್ವಾಮಿ ವಿವೇಕಾನಂದರು ಭಾರತೀಯರಿಗೆ ಕರೆ ಕೊಟ್ಟಿದ್ದೂ ‘‘ಏಳು, ಎಚ್ಚರಗೊಳ್ಳು’’ ಅಂತಾನೇ! ಎಚ್ಚರಗೊಂಡಿದ್ದರೆ, ನಂಬರ್‌ 7ರ ಚಮತ್ಕಾರಗಳನ್ನು ಗಮನಿಸಿ!

Poornima Subrahmanya, Virginia ಪೂರ್ಣಿಮ ಸುಬ್ರಹ್ಮಣ್ಯ, ವರ್ಜೀನಿಯ, ಯು ಎಸ್‌ ಎ.
[email protected]
ಸ ರಿ ಗ ಮ ಪ ದ ನಿ .... ಏನಿದು, ಇದ್ದಕ್ಕಿದ್ದ ಹಾಗೇ ದಸರಾ ಕಛೇರಿ ನಡೀತಿದೆ ಅಂತ ಆಶ್ಚರ್ಯ ಪಡಬೇಡಿ. ಸಪ್ತಸ್ವರಗಳ ಸಂಗೀತ ಸಪ್ತರ್ಷಿಗಳಿಗೂ ಇಷ್ಟವಂತೆ.

ಮದುವೆಯಲ್ಲಿ ಸಪ್ತಪದಿ ಬಹಳ ಮಹತ್ವದ ವಿಧಿ. 7 ಹೆಜ್ಜೆ ಜೊತೆಯಾಗಿ ನಡೆದು, 7 ಜನ್ಮ ಒಟ್ಟಿಗೇ ಇರೋಣ ಅಂತ ಅಂದುಕೊಂಡರೂ 7 ದಿನಗಳ ಒಂದು ವಾರದಲ್ಲೇ ಎಲ್ಲ ಕಷ್ಟ-ಸುಖ ಗೊತ್ತಾಗುತ್ತೆ. ಮೊನ್ನೆ ರಮೇಶ್‌ ಪಿಚ್ಚರ್‌ ಬಿಸಿಬಿಸಿ ನೋಡಿದ ಮೇಲೆ ತಿಳೀತು, ಅದೇನೋ 7 years itch ಬೇರೆ ಇದೆಯಂತೆ. ಹೆಣ್ಣು ಮದುವೆಗೆ ಮೊದಲು ಏಳು ಮಲ್ಲಿಗೆ, ಆಮೇಲೆ ಏಳು ಮೆಲ್ಲಗೆ ಅನ್ನೋದು ಹಳೇ ಜೋಕ್‌.

ನಮ್ಮ ಸೋಮಾರಿತನ ಬಿಡಿಸಕ್ಕೆ ಒಳ್ಳೆ ನಂಬರ್‌ ‘‘ಏಳು’’. ಹೇಗೆ ಅಂದ್ರೆ ಒಳ್ಳೆ ಬೆಳಗಿನ ಜಾವದ ಸಕ್ಕರೆ ನಿದ್ದೇನ ಕೆಡಿಸಿಕ್ಕೆ ಅಮ್ಮ, ಅಪ್ಪ, ಹೆಂಡತಿ ಅಥವಾ ಕರ್ಕಶ ಅಲಾರಂ ‘‘ಏಳು ಏಳು’’ ಅಂತ ನಮ್ಮನ್ನು ಎಬ್ಬಿಸ್ತಾರೆ. (ಕೆಲವರನ್ನು ಸೂರ್ಯನ ಕಿರಣಗಳು ಎಬ್ಬಿಸುತ್ವೆ, ಆದರೆ ಆ ಉಷಾ ಕಿರಣಗಳೂ ಏಳು ಬಣ್ಣ ಸೇರಿ ಆಗಿರುತ್ತೆ.) ಇದಕ್ಕೆ ದೇವರೂ ಅಪವಾದವಲ್ಲ. ಬೆಳಗ್ಗೆ ಬೆಳಗ್ಗೆ ಮೈಕಾಸುರ ‘‘ಏಳು, ಎದ್ದೇಳು ಬೆಳಗಾಯಿತು’’ ಅಂತ ಆರ್ಭಟಿಸಿ ಪಾಪ ಹಾಯಾಗಿ ಮಲಗಿದ್ದ ದೇವರನ್ನೆಲ್ಲಾ ಎಬ್ಬಿಸಿಬಿಡ್ತಾನೆ. ವಿವೇಕಾನಂದರು ಭಾರತೀಯರಿಗೆ ಕರೆ ಕೊಟ್ಟಿದ್ದೂ ‘‘ಏಳು, ಎಚ್ಚರಗೊಳ್ಳು’’ ಅಂತಾನೇ!

ಹೆಂಡತಿಯನ್ನು ಎಬ್ಬಿಸುವ ಗಂಡಸರಲ್ಲಿ ಎರಡು ವಿಧ. ಹೆಂಡತಿ ಇನ್ನೂ ಮಲಗಿದ್ರೆ ‘‘ಏಳು, ಇನ್ನೂ ಎಷ್ಟು ಹೊತ್ತು? ಇನ್ನೂ ಬಿದ್ಕೊಂಡಿದ್ದೀಯಾ’’ ಅಂತ ಗುಡುಗುಡಿಸಿ ಎಬ್ಬಿಸೋರು ಹಲವು. ಕೆಲವರು ಬೆಡ್‌ ಕಾಫಿ ಕೊಟ್ಟು ‘‘ಗುಡ್‌ ಮಾರ್ನಿಂಗ್‌ ಮೇಡಮ್‌’’ ಅಂತಾರೆ. ಇನ್ನೂ ಒಂದು ವೆರೈಟಿ ಇದೆ, ಅದು ನಮ್ಮ ಕವಿ ಕಣವಿ ಥರದವರು. ‘‘ಏಳೆನ್ನ ಮನದನ್ನೆ, ಏಳು ಮುದ್ದಿನ ಕನ್ನೆ, ಏಳು ಮಂಗಳದಾಯಿ... ಉಷೆಯ ಗೆಳತಿ’’ ಅಂತ ಸುಶ್ರಾವ್ಯವಾಗಿ ಹಾಡ್ತಾ ಎಬ್ಬಿಸುವವರು. ಅಂಥಾ ಗಂಡ ಸಿಕ್ರೆ ಬರೀ ಏಳು ಜನ್ಮ ಯಾಕೆ, ಪ್ರತೀ ಜನ್ಮಕ್ಕೂ ಅವರೇ ಇರಲಿ. ಮೋಕ್ಷ-ಗೀಕ್ಷ ಏನೂ ಬೇಡ.

ನೀವು ‘‘ಏಳೇಳು ಶರಧಿಯು ಏಕವಾಗಿದೆ ಕಂಡ್ಯಾ, ಹೇಗೆ ಬಂದೆಯೋ ಹೇಳೋ ಕೋತಿ’’ ಹಾಡು ಕೇಳಿರಬಹುದು. ಈಗಿನ ಕಾಲದಲ್ಲಿ ಏಳು ಶರಧಿ ದಾಟಕ್ಕೆ ಏಳು 7ನೇ ಬೇಡ, ಬರೀ ಮೂರು 7 ಸಾಕು. ಕೆಸಿನೋಲಿ ಅದೃಷ್ಟ ಖುಲಾಯಿಸಿ ಸ್ಲಾಟ್‌ ಮೆಷೀನ್ನಲ್ಲಿ 777 ಬಂದ್ರೆ, ಏಳು ಶರಧಿ ದಾಟೋದಷ್ಟೇ ಅಲ್ಲ; 7 ಖಂಡಗಳಲ್ಲಿ ಇರುವ 7 ಅದ್ಭುತಗಳನ್ನೂ ನೋಡಿಬರಬಹುದು.

ಇಷ್ಟೆಲ್ಲಾ ಹರಟೆ ಹೊಡೆದ ಮೇಲೆ ಇವತ್ತು 7ರ ಜಾದೂ ಅಂತ ನಿಮಗೆ ಗೊತ್ತೇ ಇರುತ್ತೆ. ಬನ್ನಿ, ಈಗ 7ರ ಕೆಲವು ವಿಶೇಷಗಳನ್ನು ನೋಡೋಣ.

ಮೊದಲು 7ನ್ನು ಉಲ್ಟಾ ಮಾಡೋಣ. ಅಂದರೆ (reciprocal) 1/7

1/7 = 0.142857142857142857...

ಗಮನಿಸಿದರೆ 142857-142857-142857 ಸರಣಿ ಕಾಣುತ್ತದೆ.

ಈಗ 142857ನ್ನು 2, 3, 4, 5, 6 ಅಂಕಿಗಳಿಂದ ಗುಣಿಸೊಣ.

142857 x 2 = 285714
142857 x 3 = 428571
142857 x 4 = 571428
142857 x 5 = 714285
142857 x 6 = 857142

ಉತ್ತರಗಳೆಲ್ಲಾ 1-4-2-8-5-7 ವೃತ್ತ ಸರಣಿಯಲ್ಲೇ ಸುತ್ತುವುದನ್ನು ಗಮನಿಸಿ.

ಮತ್ತೆರಡು ವಿಶೇಷ:

857 x 857 - 142 x 142 = 714285

999,999 / 7 = 142857

ನೋಡಿದಿರಾ ಏಳರ ಚಮತ್ಕಾರ. ನಿಮಗೆ ಇದನ್ನು ಓದಿ ಏನಾದರೂ ಏ(ಹೇ)ಳಬೇಕೆನಿಸಿದರೆ ಏ(ಹೇ)ಳಿ...


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X