Year End Special 2024: ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ?
ಕೆಲವು ದಿನಗಳ ಹಿಂದೆ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದೇಶದ 3ನೇ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣ ಎಂದು ಘೋಷಣೆಯಾಗಿದೆ. ಅಂತರಾಷ್ಟ್ರೀಯ ಮತ್ತು ದೇಶಿಯ ಪ್ರಯಾಣಿಕರ ಸಂಖ್ಯೆಯಲ್ಲಿ ದೆಹಲಿ, ಮುಂಬೈ ಬಳಿಕ ಬೆಂಗಳೂರು ಸ್ಥಾನ ಪಡೆದಿದೆ. ಕರ್ನಾಟಕದ ಇತರ ನಿಲ್ದಾಣಗಳಿಗಿಂತ ಕೆಐಎನಿಂದ ಅತಿ ಹೆಚ್ಚಿನ ದೇಶಿಯ ವಿಮಾನಗಳು ಹಾರಾಟವನ್ನು ನಡೆಸುತ್ತವೆ.
2022-23, 2023-24ರಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದೇಶದ 3ನೇ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣದ ಸ್ಥಾನವನ್ನು ಉಳಿಸಿಕೊಂಡಿದೆ. ಈ ಕುರಿತ ಅಂಕಿ ಸಂಖ್ಯೆಗಳ ವರದಿಯನ್ನು ರಾಜ್ಯಸಭೆಯಲ್ಲಿ ಬಿಡುಗಡೆ ಮಾಡಲಾಗಿದೆ. ಅಂತರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ದೇಶದಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.

ಅಂಕಿ-ಸಂಖ್ಯೆಗಳ ಮಾಹಿತಿ: ದೇಶಿಯ ವಿಮಾನಗಳ ಸಂಚಾರದಲ್ಲಿ ಕರ್ನಾಟಕ ಶೇ 16ರಷ್ಟು ಪ್ರಗತಿಯನ್ನು ಸಾಧಿಸಿದೆ. 2022-23ರಲ್ಲಿ 3,02,55,765 ರಷ್ಟಿದ್ದ ಪ್ರಯಾಣಿಕರ ಸಂಚಾರ 2023-24ಕ್ಕೆ 3,51,13,640 ಆಗಿದೆ. ಅಂತರಾಷ್ಟ್ರೀಯ ವಿಮಾನಗಳ ಸಂಚಾರ ಶೇ 11.38ರಷ್ಟು ಹೆಚ್ಚಾಗಿದೆ. ಪ್ರಯಾಣಿಕರ ಸಂಖ್ಯೆ 12,50,195 ರಿಂದ 13,92,683 ಆಗಿದೆ.
ದೇಶಿಯ ವಿಮಾನಗಳ ಸಂಚಾರದಲ್ಲಿ ದೆಹಲಿ ಮತ್ತು ಮಹಾರಾಷ್ಟ್ರ ಕರ್ನಾಟಕವನ್ನು ಹಿಂದಿಕ್ಕಿವೆ. ದೆಹಲಿಯು 2023-24ರಲ್ಲಿ 5,41,07,308 ಪ್ರಯಾಣಿಕರ ಮೂಲಕ ಶೇ 54.07ರಷ್ಟು ಪ್ರಗತಿ ಸಾಧಿಸಿದೆ. ಮಹಾರಾಷ್ಟ್ರ 5,24,76,118 ಪ್ರಯಾಣಿಕರ ಮೂಲಕ ಶೇ 49.45ರಷ್ಟು ಪ್ರಗತಿ ಸಾಧಿಸಿದೆ.
ಅಂತರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ದೆಹಲಿ 91,83,880 ಪ್ರಯಾಣಿಕರ ಮೂಲಕ ಕರ್ನಾಟಕಕ್ಕಿಂತ 559.66ರಷ್ಟು ಮುಂದಿದೆ. ಮಹಾರಾಷ್ಟ್ರ 66,01,785 ಪ್ರಯಾಣಿಕರ ಮೂಲಕ 374.23ರಷ್ಟು ಮುಂದಿದೆ. ಕೇರಳ, ತಮಿಳುನಾಡು, ತೆಲಂಗಾಣ ಕರ್ನಾಟಕಕ್ಕಿಂತ ಹೆಚ್ಚಿನ ಅಂತರಾಷ್ಟ್ರೀಯ ಪ್ರಯಾಣಿಕರ ಹಾರಾಟವನ್ನು ದಾಖಲಿಸಿವೆ.
ಅಕ್ಟೋಬರ್ 17ರಂದು ಕೆಐಎ 782 ವಿಮಾನಗಳ ಸಂಚಾರಕ್ಕೆ ಸಾಕ್ಷಿಯಾಗಿದೆ. ಅಕ್ಟೋಬರ್ 11ರಂದು 770 ವಿಮಾನಗಳು ಹಾರಾಟ ನಡೆಸಿದ್ದವು. ಕೋವಿಡ್ ಅವಧಿಗೂ ಮೊದಲು 11 ಜನವರಿ 2019ರಂದು 750 ವಿಮಾನಗಳು ಒಂದು ದಿನ ಹಾರಾಟ ನಡೆಸಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣ ಆರಂಭವಾದಾಗ ಕೇವಲ ಒಂದು ರನ್ ವೇ ಮತ್ತು ಒಂದು ಟರ್ಮಿನಲ್ ಮೂಲಕ ಕೆಐಎ 9 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಣೆ ಮಾಡಿತ್ತು. ಈಗ ಎರಡು ರನ್ ವೇ, ಎರಡು ಟರ್ಮಿನಲ್ ಮೂಲಕ ನಿಲ್ದಾಣ ವರ್ಷದಲ್ಲಿ 40 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಣೆ ಮಾಡುತ್ತಿದೆ. ಸುಮಾರು 100 ನಗರಗಳಿಗೆ ಬೆಂಗಳೂರಿನಿಂದ ನೇರ ವಿಮಾನ ಸೇವೆ ಇದೆ.
ಸಹಕಾರ ಮತ್ತು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ರಾಜ್ಯಸಭೆಯಲ್ಲಿ ಮಾತನಾಡಿ,"2023ಕ್ಕೆ ಹೋಲಿಕೆ ಮಾಡಿದರೆ 2024ರಲ್ಲಿ ವಿಮಾನಯಾನ ಸಂಸ್ಥೆಗಳು ದರ ಸಮರದಲ್ಲಿ ಪಾಲ್ಗೊಂಡಿಲ್ಲ. ನಕಲಿ ಸೀಟು ಬ್ಲಾಕ್ ಮಾಡಿ ದರಗಳನ್ನು ಹೆಚ್ಚಿಸಿಲ್ಲ" ಎಂದು ಹೇಳಿದ್ದಾರೆ.
ಸಹಕಾರ ಮತ್ತು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ರಾಜ್ಯಸಭೆಯಲ್ಲಿ ಮಾತನಾಡಿ,"2023ಕ್ಕೆ ಹೋಲಿಕೆ ಮಾಡಿದರೆ 2024ರಲ್ಲಿ ವಿಮಾನಯಾನ ಸಂಸ್ಥೆಗಳು ದರ ಸಮರದಲ್ಲಿ ಪಾಲ್ಗೊಂಡಿಲ್ಲ. ನಕಲಿ ಸೀಟು ಬ್ಲಾಕ್ ಮಾಡಿ ದರಗಳನ್ನು ಹೆಚ್ಚಿಸಿಲ್ಲ" ಎಂದು ಹೇಳಿದ್ದಾರೆ.
"ಸರ್ಕಾರ ವಿಮಾನಯಾನ ಸಂಸ್ಥೆಗಳ ದರಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಸಂಸ್ಥೆಗಳಿಗೆ ಕಾರ್ಯಾಚರಣೆಯ ವಿಧಾನ ಸೇರಿದಂತೆ ಇತರ ಅಂಶಗಳ ಆಧಾರದ ಮೇಲೆ ದರಗಳನ್ನು ನಿಗದಿಗೊಳಿಸುವ ಸ್ವತಂತ್ರ್ಯವನ್ನು ನೀಡಲಾಗಿದೆ" ಎಂದು ಸಚಿವ ಮುರಳೀಧರ್ ಮೊಹೋಲ್ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications