ವಿಶ್ವ ಫೋಟೊಗ್ರಫಿ ದಿನ: ವೀರೇಂದ್ರ ಹೆಗ್ಗಡೆಯವರ ಫೋಟೊಗ್ರಫಿ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು!
ಮಂಗಳೂರು, ಆಗಸ್ಟ್ 19: ದಕ್ಷಿಣ ಭಾರತದ ಪರಮ ಪವಿತ್ರ ತಾಣ ಧರ್ಮಸ್ಥಳ. ಅಲ್ಲಿನ ಅಭಯ ದಾನ, ಅನ್ನದಾನಕ್ಕೆ ಕೋಟ್ಯಂತರ ಭಕ್ತರು ಮನಸೋತಿದ್ದಾರೆ, ಮನಸೋಲುತ್ತಿದ್ದಾರೆ.
ಹೌದು. ಧರ್ಮಸ್ಥಳ ಎಂಬ ಹೆಸರನ್ನು ವಿಶ್ವವಿಖ್ಯಾತಗೊಳಿಸಿದವರು ಧರ್ಮಾಧಿಕಾರಿ ಪದ್ಮಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ. ಲಕ್ಷಾಂತರ ಭಕ್ತರ ಮನೆಗಳಲ್ಲಿ ಧರ್ಮಸ್ಥಳದ ಮಂಜುನಾಥನ ಚಿತ್ರದ ಜೊತೆಗೆ ವೀರೇಂದ್ರ ಹೆಗ್ಗಡೆಯವರ ಫೋಟೋಗೂ ಆರಾಧನೆಯಾಗುತ್ತಿದೆ. ಭಕ್ತರ ಮನೆಗಳ ಫೋಟೋಗಳಲ್ಲಿ ಪೂಜ್ಯನೀಯವಾಗಿರುವ ವೀರೇಂದ್ರ ಹೆಗ್ಗಡೆಯವರಿಗೂ ಫೋಟೊಗ್ರಫಿ ಅಂದರೆ ಅಚ್ಚುಮೆಚ್ಚು. ತನ್ನ ಸುಪ್ತ ಮನಸ್ಸಿನ ತುಡಿತಗಳನ್ನು ಫೋಟೋಗಳಲ್ಲಿ ಪ್ರದರ್ಶಿಸುವ ವೀರೇಂದ್ರ ಹೆಗ್ಗಡೆ ಸೂಪರ್ ಫೋಟೋಗ್ರಾಫರ್.
ವೀರೇಂದ್ರ ಹೆಗ್ಗಡೆಯವರ ಕೈಯಲ್ಲಿ ಕ್ಯಾಮೆರಾ ಇರದ ದಿನಗಳಿಲ್ಲ. ಪ್ರತಿ ಬಾರಿಯ ಪ್ರವಾಸದಲ್ಲಿ ತನ್ನ ನೆಚ್ಚಿನ ಕ್ಯಾಮೆರಾದೊಂದಿಗೆ ಪ್ರಯಾಣಿಸುವ ವೀರೇಂದ್ರ ಹೆಗ್ಗಡೆಯವರು ಭಾವ ತುಂಬಿದ ಫೋಟೋಗಳನ್ನು ಕ್ಲಿಕ್ಕಿಸುತ್ತಾರೆ. ಧರ್ಮಾಧಿಕಾರಿಯವರ ಫೋಟೋ ಫ್ರೇಮ್‌ಗಳನ್ನು ಗಮನಿಸಿದಾಗ ಶ್ರೇಷ್ಠ ಫೋಟೋಗ್ರಾಫರ್‌ಗಳಿಗೂ ಕಡಿಮೆ ಇಲ್ಲ.

ಪರಿಸರ ಮತ್ತು ಸಾಮಾಜಿಕ ಕಾಳಜಿ
ಅವರು ಕ್ಲಿಕ್ಕಿಸಿದ ಫೋಟೋಗಳಲ್ಲಿ ಅವರ ಪರಿಸರ ಮತ್ತು ಸಾಮಾಜಿಕ ಕಾಳಜಿಯನ್ನು ಕಾಣಬಹುದು. ಡಾ. ವೀರೇಂದ್ರ ಹೆಗ್ಗಡೆಯವರಿಗೆ ಬಾಲ್ಯದಿಂದಲೇ ಫೋಟೋ ತೆಗೆಯುವ ಗೀಳು. ಹೋದಲೆಲ್ಲಾ ಫೋಟೋಗಳನ್ನು ಕ್ಲಿಕ್ಕಿಸುವ ವೀರೇಂದ್ರ ಹೆಗ್ಗಡೆಯವರ ಫೋಟೋಗಳು ಒಂದಕ್ಕಿಂತ ಒಂದು ಸೂಪರ್. ವೀರೇಂದ್ರ ಹೆಗ್ಗಡೆಯವರ ಫೋಟೋಗಳಲ್ಲಿ ಸಾಮಾಜಿಕ ಮತ್ತು ಪರಿಸರ ಕಾಳಜಿ ಪ್ರತಿರೂಪಗೊಳಿಸುತ್ತದೆ. ವಿದೇಶ ಪ್ರವಾಸಗಳಲ್ಲಿ ಕ್ಯಾಮೆರಾದೊಂದಿಗೆ ಹೋಗುವ ಖಾವಂದರು ನೋಡಿದ ಎಲ್ಲಾ ಅದ್ಭುತ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾರೆ.

ಪ್ರತಿಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುದೆಂದರೆ ಇಷ್ಟ
ಡಾ. ಹೆಗ್ಗಡೆಯವರಿಗೆ ಪ್ರತಿಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುದೆಂದರೆ ತುಂಬಾ ಇಷ್ಟ. ತನ್ನ ಸುಪ್ತ ಮನಸ್ಸಿನ ಭಾವನೆಗೆಳನ್ನು ಫೋಟೋಗಳಲ್ಲಿ ಕಾಣುವ ವೀರೇಂದ್ರ ಹೆಗ್ಗಡೆಯವರಿಗೆ ತಾನೊಬ್ಬ ದೊಡ್ಡ ಫೋಟೋಗ್ರಾಫರ್ ಎಂಬ ಅಹಂಕಾರ ಇಲ್ಲ. ಪ್ರೋಫೇಶನ್ ಫೋಟೋಗ್ರಾಫರ್‌ಗೂ ಮೀರಿದ ಫೋಟೋಗಳನ್ನು ಕ್ಲಿಕ್ಕಿಸಿದರೂ ತಮ್ಮ ಫೋಟೋದ ಬಗ್ಗೆ ಎಂದೂ ಅಹಂ ಪ್ರದರ್ಶಿಸಿಲ್ಲ. ಪರಿಣತಿಯನ್ನು ಹೊಂದಿದ್ದರೂ ಮತ್ತಷ್ಟು ಕಲಿಯಬೇಕೆಂಬ ತನ್ಮಯತೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರದ್ದು.

ಓರ್ವ ಅದ್ಭುತ ಫೋಟೋ ಕಲಾವಿದರೂ ಹೌದು
ಫೋಟೋಗ್ರಾಫಿಯನ್ನು ಕಲೆ ಎಂದು ಹೇಳುವ ಧರ್ಮಾಧಿಕಾರಿಗಳು ಓರ್ವ ಅದ್ಭುತ ಫೋಟೋ ಕಲಾವಿದರೂ ಹೌದು. ಛಾಯಚಿತ್ರಗ್ರಾಹಕನ ಅಂತರಂಗದ ಪ್ರತಿಬಿಂಬ ಫೋಟೋಗಳಲ್ಲಿ ಕಾಣುವ ಮತ್ತು ವಸ್ತುವನ್ನು ಆಸ್ವಾಧಿಸುವ ಶಕ್ತಿ ಪೋಟೋಗ್ರಾಫರ್‌ಗಳಿಗೆ ಮಾತ್ರ ಇರುವುದರಿಂದ ಯುವಕರು ಹೆಚ್ಚೆಚ್ಚು ಫೋಟೋಗ್ರಾಫಿ ಹವ್ಯಾಸ ಅಳವಡಿಸಿಕೊಳ್ಳಬೇಕೆಂಬುದು ವೀರೇಂದ್ರ ಹೆಗ್ಗಡೆಯವರ ಮಾತಾಗಿದೆ.

ಪ್ರಕೃತಿಯ ಸುಂದರ ದೃಶ್ಯಕಾವ್ಯ ಕ್ಯಾಮೆರಾ ಕಣ್ಣಿನಲ್ಲಿ
ವೀರೇಂದ್ರ ಹೆಗ್ಗಡೆಯವರು ತಮ್ಮ ಕುಟುಂಬದ ಜೊತೆಗೆ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ. ಕುಟುಂಬದ ಜೊತೆಗೆ ಹೋದಾಗ ತನ್ನ ಕುಟುಂಬದ ಫೋಟೋವನ್ನು ವೀರೇಂದ್ರ ಹೆಗ್ಗಡೆಯವರೇ ಕ್ಲಿಕ್ಕಿಸುತ್ತಾರೆ. ಮನೆಯ ಯಜಮಾನ ಕೈಚಳಕದಲ್ಲಿ ತಾವು ಸೆರೆಯಾಗಿರುವುದು ಕಂಡು ಕುಟುಂಬದವರೂ ಖುಷಿಯಾಗುತ್ತಾರೆ. ಹೆಚ್ಚಾಗಿ ಚೀನಾ ದೇಶಕ್ಕೆ ಪ್ರವಾಸಕ್ಕೆ ಹೋಗುವ ಹೆಗ್ಗಡೆ ಕುಟುಂಬ ಅಲ್ಲಿನ ಜನ, ಅವರ ಜೀವನ ಶೈಲಿಯ ಬಗ್ಗೆ ಅಧ್ಯಯನ ಮಾಡುತ್ತಾರೆ. ಪ್ರಕೃತಿ ಸುಂದರ ದೃಶ್ಯಕಾವ್ಯವನ್ನು ಕ್ಯಾಮೆರಾ ಕಣ್ಣಿನಲ್ಲಿ ಹೆಗ್ಗಡೆಯವರು ಅದ್ಭುತವಾಗಿ ಸೆರೆಹಿಡಿಯುತ್ತಾರೆ.

ಹೆಗ್ಗಡೆಯವರ ಫೋಟೋ ಫ್ರೇಮ್ ಅದ್ಭುತ
ತನ್ನ ಮನಸ್ಸಿನ ಭಾವನೆಗಳನ್ನು ಸೆರೆಹಿಡಿಯುವ ಹೆಗ್ಗಡೆಯವರು ಫೋಟೋಗ್ರಾಫಿಯಲ್ಲಿ ಅಧ್ಯಯನವನ್ನು ಇನ್ನೂ ಮಾಡುತ್ತಿದ್ದಾರೆ. ತನ್ನ ಮನಸ್ಸಿನ ಖುಷಿಗಾಗಿ ಫೋಟೋ ಕ್ಲಿಕ್ಕಿಸುವ ವೀರೇಂದ್ರ ಹೆಗ್ಗಡೆಯವರು ಅದನೆಂದೂ ಹೊರ ಜಗತ್ತಿನಲ್ಲಿ ಪ್ರದರ್ಶಿಸಿ ಮೆಚ್ಚುಗೆಯ ಮಾತು ಕೇಳಿ ಖುಷಿ ಪಡೆದುಕೊಂಡಿಲ್ಲ. ಹೆಗ್ಗಡೆಯವರ ಫೋಟೋ ಫ್ರೇಮ್ ಅದ್ಭುತವಾಗಿದ್ದರೂ ಇನ್ನು ಕಲಿಯುವ ಉತ್ಸಾಹ ವೀರೇಂದ್ರ ಹೆಗ್ಗಡೆಯವರದ್ದಾಗಿದೆ.

ತಲೆಮಾರಿನ ಕ್ಯಾಮೆರಾಗಳು ಹೆಗ್ಗಡೆಯವರ ಸಂಗ್ರಹಾಲಯದಲ್ಲಿವೆ
ವೀರೇಂದ್ರ ಹೆಗ್ಗಡೆಯವರು ಕೇವಲ ಫೋಟೋ ತೆಗೆಯೋದು ಮಾತ್ರವಲ್ಲ ಓರ್ವ ಸಂಗ್ರಹಕಾರರೂ ಹೌದು. ಅವರ ಬಳಿ 250 ಕ್ಯಾಮೆರಾಗಳಿವೆ. ಫೋಟೋ ಬೆಳೆದು ಬಂದ ಹಾದಿಯೇ ವೀರೇಂದ್ರ ಹೆಗ್ಗಡೆಯವರ ಸಂಗ್ರಹಾಲಯದಲ್ಲಿದೆ. ಕ್ಯಾಮೆರಾಗಳನ್ನು ಸಂಗ್ರಹ ಮಾಡುವುದು ಕೂಡಾ ಹೆಗ್ಗಡೆಯ ಹವ್ಯಾಸಗಳಲ್ಲಿ ಒಂದಾಗಿದೆ. ಅತ್ಯಂತ ಹಳೆಯ ಸ್ಪೈ ಕ್ಯಾಮೆರಾ, ಇನ್ ಹೋಲ್ ಕ್ಯಾಮೆರಾ, ಫೀಲ್ಡ್ ಕ್ಯಾಮೆರಾ, ಅತೀ ಚಿಕ್ಕ ಎಸ್‌ಎಲ್‌ಆರ್ ಕ್ಯಾಮೆರಾ ಸೇರಿದಂತೆ ತಲೆಮಾರಿನ ಹಿಂದಿನ ಕ್ಯಾಮೆರಾಗಳು ಹೆಗ್ಗಡೆಯವರ ಸಂಗ್ರಹಾಲಯದಲ್ಲಿದೆ. ಅವುಗಳೆಲ್ಲವೂ ಅತೀ ಸುರಕ್ಷಿತವಾಗಿ ಮುಂದಿನ ಪೀಳಿಗೆ ಕಾಣಲು ಯೋಗ್ಯವಾಗುವಂತೆ ವೀರೇಂದ್ರ ಹೆಗ್ಗಡೆ ಸಂಗ್ರಹಿಸಿದ್ದಾರೆ.
ನಿಮಗೆ ಆಶ್ಚರ್ಯವಾಗಬಹುವುದು, ವೀರೇಂದ್ರ ಹೆಗ್ಗಡೆಯವರ ಸಂಗ್ರಹಾಲಯದಲ್ಲಿ 250 ಕ್ಯಾಮೆರಾಗಳ ಪೈಕಿ ಶೇ.90 ಕ್ಯಾಮೆರಾಗಳು ಇಂದಿಗೂ ಬಳಕೆಗೆ ಯೋಗ್ಯವಾಗಿದೆ. ಅತೀ ಅಪರೂಪವಾದ ಕ್ಯಾಮೆರಾಗಳನ್ನು ಪ್ರದರ್ಶನಗಳಿಂದ ಸಂಗ್ರಹಿಸುವ ವೀರೇಂದ್ರ ಹೆಗ್ಗಡೆಯವರು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ.

ಗಣ್ಯ ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ನೀಡುತ್ತಾರೆ
ವೀರೇಂದ್ರ ಹೆಗ್ಗಡೆಯವರು ಫೋಟೋ ತೆಗೆಯಲು ಏಳು ಕ್ಯಾಮೆರಾಗಳನ್ನು ಬಳಸುತ್ತಿದ್ದಾರೆ. ಉಳಿದ ಎಲ್ಲಾ ಕ್ಯಾಮೆರಾಗಳನ್ನು ಹೆಗ್ಗಡೆಯವರ ಸಂಗ್ರಹಾಲಯದಲ್ಲಿ ಕಾಣಸಿಗುತ್ತದೆ. ವೀರೇಂದ್ರ ಹೆಗ್ಗಡೆಯವರು ಪ್ರೋಫೆಶನಲ್ ಫೋಟೋಗ್ರಾಫರ್‌ಗಳಿಗಿಂತ ಕಡಿಮೆ ಇಲ್ಲದಿದ್ದರೂ ತಾನು ತೆಗೆದ ಫೋಟೋಗಳ ಬಗ್ಗೆ ಅನುಭವಿ ಫೋಟೋಗ್ರಾಫರ್‌ಗಳಲ್ಲಿ ಚರ್ಚೆ ನಡೆಸುತ್ತಾರೆ. ತಾನು ತೆಗೆದ ಫೋಟೋಗಳ ಲೈಟಿಂಗ್ ಮತ್ತು ಸಬ್ಜೆಕ್ಟ್ ಆಯ್ಕೆಯ ಬಗ್ಗೆ ಚರ್ಚೆ ನೆಡೆಸುತ್ತಾರೆ. ತಾನು ಮುಂದೆ ಯಾವ ರೀತಿಯಾಗಿ ಉತ್ತಮ ಫೋಟೋ ತೆಗೆಯಬಹುದೆಂದು ಅಭಿಪ್ರಾಯಗಳನ್ನು ಹೆಗ್ಗಡೆಯವರು ಕೇಳುತ್ತಾರೆ. ಹೀಗೆ ಸದಾ ಕಲಿಕೆಯಲ್ಲಿರುವ ವೀರೇಂದ್ರ ಹೆಗ್ಗಡೆಯವರು ತಾನು ತೆಗೆದ ಉತ್ತಮ ಫೋಟೋಗಳನ್ನು ಫ್ರೇಮ್ ಹಾಕಿ ಆಗಮಿಸಿದ ಗಣ್ಯ ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ನೀಡುತ್ತಾರೆ.
ಕ್ಯಾಂಡಿಡ್ ಫೋಟೋಗ್ರಾಫಿಯನ್ನು ಜಾಸ್ತಿ ಇಷ್ಟಪಡುವ ವೀರೇಂದ್ರ ಹೆಗ್ಗಡೆಯವರು ಜನರ ಸಹಜ ಹಾವ- ಭಾವಗಳನ್ನು ಸೆರೆಹಿಡಿಯುವುದರಲ್ಲಿ ನಿಸ್ಸೀಮರಾಗಿದ್ದಾರೆ. ಆಧುನಿಕ ಯುಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳು ಬಳಕೆಯಲ್ಲಿದ್ದರೂ, ಹೆಗ್ಗಡೆಯವರಷ್ಟು ಪಳಗಿದ ಮತ್ತೊಬ್ಬ ಫೋಟೋಗ್ರಾಫರ್‌ಗಳಿಲ್ಲ ಅನ್ನುವುದು ಕೂಡಾ ಸಿಹಿ ಸತ್ಯವಾಗಿದೆ.












Click it and Unblock the Notifications