ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ; ದೊಡ್ಡಬಳ್ಳಾಪುರದ ಸ್ವಾಭಿಮಾನಿ ಆಟೋ ಚಾಲಕಿ
ಚಿಕ್ಕಬಳ್ಳಾಪುರ, ಮಾರ್ಚ್ 8: 'ಉದ್ಯೋಗಂ ಪುರುಷ ಲಕ್ಷಣಂ' ಅನ್ನುವ ಹಳೆಯ ಗಾದೆ ಮಾತು ಈಗ ಅಕ್ಷರಶಃ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಆಟೋ, ಬಸ್, ಲಾರಿಗಳ ಚಾಲನೆಯಲ್ಲಿ ಪುರುಷರದ್ದೇ ಪ್ರಾಬಲ್ಯ. ಅಂಥದರಲ್ಲಿ ಓರ್ವ ದಿಟ್ಟ ಮಹಿಳೆ ತನ್ನ ಮಕ್ಕಳ ಭವಿಷ್ಯ, ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆಗೆ ಆಟೋ ಓಡಿಸುವ ಮೂಲಕ ಪತಿಯೊಂದಿಗೆ ಸುಖ ಸಂಸಾರದ ನೌಕೆಯನ್ನು ಸಾಗಿಸುತ್ತ ಬದುಕನ್ನು ಕಟ್ಟಿಕೊಂಡಿದ್ದಾರೆ.
ಆ ದಿಟ್ಟ ಮಹಿಳೆಯೇ ಸುಪ್ರಿಯಾ. ಚಿಕ್ಕಬಳ್ಳಾಪುರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ಕಸವನಹಳ್ಳಿ ಗ್ರಾಮದಲ್ಲಿ ಸುಪ್ರಿಯಾ ಕುಟುಂಬ ನೆಲೆಸಿದೆ.
ಕುಟುಂಬ ನಿರ್ವಹಣೆಗೆ ಆಟೋ ಸಾರಥಿಯಾದ ಸುಪ್ರಿಯಾ
ಕೋವಿಡ್ ಸಂಕಷ್ಟ ಕಾಲಕ್ಕೂ ಮುನ್ನ ಬಾಶೆಟ್ಟಿಹಳ್ಳಿಯಲ್ಲಿರುವ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸುಪ್ರಿಯಾ, ಪತಿಯೊಂದಿಗೆ ಕುಟುಂಬ ನಿರ್ವಹಣೆಗೆ ಸಾಥ್ ನೀಡುತ್ತಿದ್ದರು. ಪತಿ ಸತೀಶ್ ಕಾರು ಚಾಲಕರಾಗಿ ಬದುಕು ಕಟ್ಟಿಕೊಂಡಿದ್ದರು. ಆದರೆ ಮಹಾಮಾರಿ ಕೊರೊನಾ ಹೊಡೆತಕ್ಕೆ ಸುಪ್ರಿಯಾ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ ನೆಲಕಚ್ಚಿ ಆಕೆಯೂ ಕೆಲಸ ಕಳೆದುಕೊಂಡಳು. ಇತ್ತ ಕಾರು ಚಾಲಕರಾಗಿದ್ದ ಸತೀಶ್ ಅವರಿಗೂ ಕೊರೊನಾ ಸಂಕಷ್ಟದಿಂದ ಚಾಲಕ ವೃತ್ತಿಗೂ ಕಂಟಕ ಎದುರಾಗಿ ಕೆಲಸವಿಲ್ಲದಂತಾಗಿತ್ತು. ಪತಿ ಸತೀಶ್ ಅವರಿಗೆ ಧೈರ್ಯ ತುಂಬಿ, ಆಟೋ ಚಾಲನೆಯನ್ನು ಪತಿಯಿಂದಲೇ ಕಲಿತು ಆಟೋ ಚಾಲಕಿಯಾಗಿ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದು, ಕುಟುಂಬ ನಿರ್ವಹಣೆಗೆ ಸಾಥ್ ನೀಡಿದ್ದಾರೆ.

ಕಸವನಹಳ್ಳಿಗಿಲ್ಲ ಬಸ್ ಸೌಲಭ್ಯ
ಸುಪ್ರಿಯಾ ತನ್ನ ಒಂಬತ್ತು ವರ್ಷದ ಮಗಳು ಶ್ರೇಯಾಳನ್ನು ದಿನನಿತ್ಯ ಶಾಲೆಗೆ ಕಳುಹಿಸಲು ಹಾಗೂ ಕರೆತರಲು ಕಸವನಹಳ್ಳಿ ಗ್ರಾಮದಿಂದ ನಗರಕ್ಕೆ ಬಸ್ ಸೌಲಭ್ಯ ಕೂಡ ಇಲ್ಲ. ಇದರಿಂದಾಗಿ ಆಟೋ ಖರೀದಿ ಮಾಡಿದರೆ ಮಗಳನ್ನು ಶಾಲೆಗೆ ಬಿಡುವ ಸಮಯಕ್ಕೆ ಕೆಲಸಕ್ಕೆ ಹಾಜರಾಗಿ ಶಾಲೆ ಮುಗಿಯುವ ಸಮಯಕ್ಕೆ ಅಂದರೆ ಸಂಜೆ 5 ಗಂಟೆವರೆಗೆ ಆಟೋ ಓಡಿಸುವ ಮುಖಾಂತರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರವಾಸಿ ಮಂದಿರ ವೃತ್ತದಲ್ಲಿ ಆಟೋ ಸ್ಟ್ಯಾಂಡ್:
ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಆಟೋ ಓಡಿಸುವ ಮೂಲಕ ದುಡಿದ ಹಣದಲ್ಲಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರ ಸರ್ಕಲ್‌ನ ಆಟೋ ಸ್ಟ್ಯಾಂಡ್‌ನಲ್ಲಿ ಆಟೋ ನಿಲ್ಲಿಸುವ ಸುಪ್ರಿಯಾಗೆ ಬೇರೆ ಆಟೋ ಚಾಲಕರು ಸಹಕಾರ ನೀಡುತ್ತಿದ್ದಾರೆ. ಮೊದಲು ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡಿಕೊಂಡಿದ್ದ ಸುಪ್ರಿಯಾ, ಮಕ್ಕಳನ್ನು ಸಾಕುವುದಕ್ಕೆ ಕಷ್ಟ ಆಗುತ್ತಿತ್ತು. ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಅಡುಗೆ ಮಾಡಿ ಊಟ ಮಾಡಿಸುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಇದೀಗ ಆಟೋ ಚಾಲನೆಯಿಂದ ಬದುಕು ಕಟ್ಟಿಕೊಂಡಿದ್ದಾರೆ.
ಸಹಾಯದ ನಿರೀಕ್ಷೆಯಲ್ಲಿ ಚಾಲಕಿ
ಆಟೋರಿಕ್ಷಾ ಓಡಿಸುವ ಧೈರ್ಯದಿಂದ ಕಷ್ಟ ಕಾಲದಲ್ಲಿ ಸೆಕೆಂಡ್ ಹ್ಯಾಂಡ್ ಆಟೋವನ್ನು ಖರೀದಿ ಮಾಡಿ ಚಾಲನೆ ಮಾಡುತ್ತಿದ್ದಾರೆ. ಆದರೆ ಆಟೋ ಎರಡ್ಮೂರು ದಿನಕ್ಕೊಮ್ಮೆ ಕೆಟ್ಟು ನಿಲ್ಲುತ್ತಿದೆ. ಮೊನ್ನೆಯಷ್ಟೆ 8 ಸಾವಿರ ಖರ್ಚು ಮಾಡಿ ರಿಪೇರಿ ಮಾಡಿಸಿದ್ದೆ. ಮತ್ತೆ ಮತ್ತೆ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ ದುಡಿದ ಹಣವನ್ನೆಲ್ಲಾ ಆಟೋ ರಿಪೇರಿಗೆ ವ್ಯಯವಾಗುತ್ತಿದೆ. ಹೀಗಾಗಿ ಸುಪ್ರಿಯಾ ಹೊಸ ಆಟೋ ಖರೀದಿಗೆ ದಾನಿಗಳ ನಿರೀಕ್ಷೆಯಲ್ಲಿದ್ದಾರೆ.
ಕಡು ಕಷ್ಟದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದ ಸುಪ್ರಿಯಾ ದಿಟ್ಟತನದಿಂದ ಬದುಕನ್ನು ಎದುರಿಸುತ್ತಿದ್ದಾರೆ. ಭಯ, ಅಂಜಿಕೆ, ಅಳುಕು, ಯಾರ ಮುಲಾಜು ಇಲ್ಲದೇ ಆಟೋ ಚಲಾಯಿಸಿ, ಜೀವನ ನೌಕೆ ಸಾಗಿಸುತ್ತಿರುವ ಸುಪ್ರಿಯಾ ಬದುಕು ಇತರೆ ಅಬಲೆಯರು, ಸ್ವಾಭಿಮಾನಿ ಮಹಿಳೆಯರಿಗೆ ಮಹಿಳಾ ದಿನಾಚರಣೆ ಅಂಗವಾಗಿ ಇತರೆ ಮಹಿಳೆಯರಿಗೆ ಸ್ಫೂರ್ತಿಯಾಗಲಿದೆ.












Click it and Unblock the Notifications