• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶೇಷ ವರದಿ: ಕೆ.ಗುಡಿಯಲ್ಲಿ ಪ್ರವಾಸಿಗರನ್ನು ಸೆಳೆಯುವ ವನ್ಯಪ್ರಾಣಿ ಚಿತ್ರಗಳು!

|
Google Oneindia Kannada News

ಚಾಮರಾಜನಗರ, ನವೆಂಬರ್ 13: ಅರಣ್ಯ ಅಂದ ಮೇಲೆ ಅದು ವನ್ಯಪ್ರಾಣಿ ಮತ್ತು ಪಕ್ಷಿಗಳ ಆವಾಸ ಸ್ಥಾನವಾಗಿರುತ್ತದೆ. ಹೀಗಾಗಿ ಅರಣ್ಯ ವಿಹಾರಕ್ಕೆ ತೆರಳುವ ಪ್ರತಿಯೊಬ್ಬ ಪ್ರವಾಸಿಗನೂ ಕಾಡು ಮತ್ತು ಅಲ್ಲಿ ವಾಸವಾಗಿರುವ ಪ್ರಾಣಿ, ಪಕ್ಷಿ ಇನ್ನಿತರ ಜಂತುಗಳನ್ನು ನೋಡಿ ಖುಷಿಪಡುತ್ತಾನೆ. ಇದರ ಜತೆಗೆ ಅರಣ್ಯ ತುಂಬಾ ಎಲ್ಲೆಂದರಲ್ಲಿ ವನ್ಯಪ್ರಾಣಿಗಳ ಚಿತ್ರಗಳಿದ್ದರಂತೂ ಅದರ ಮಜಾನೇ ಬೇರೆಯಾಗಿರುತ್ತದೆ.

ಕೆಲವೊಮ್ಮೆ ಅರಣ್ಯ ಸಫಾರಿಗೆ ತೆರಳಿದರೂ ಎಲ್ಲ ಪ್ರಾಣಿಗಳು ಸಿಗದೆ ಹೋಗಬಹುದು. ಆದರೂ ಕಾಡಿನಲ್ಲೊಂದು ಸುತ್ತು ಹೊಡೆದು ಬರುವುದರಲ್ಲಿ ಸಿಗುವ ಖುಷಿ, ನೆಮ್ಮದಿ ಬೇರೆಲ್ಲೂ ಸಿಗುವುದಿಲ್ಲ. ಬಹಳಷ್ಟು ಜನಕ್ಕೆ ಸಫಾರಿಗೆ ಹೋಗುವುದೆಂದರೆ ವನ್ಯಪ್ರಾಣಿಗಳನ್ನು ವೀಕ್ಷಿಸುವುದು ಎಂಬ ತಪ್ಪು ಕಲ್ಪನೆಯಿದೆ. ಪ್ರಾಣಿಗಳನ್ನು ಮೃಗಾಲಯದಲ್ಲಿ ಕೂಡ ನೋಡಬಹುದು. ಆದರೆ ಕಾಡಿನ ನಡುವಿನ ಸುಂದರ ವಾತಾವರಣದಲ್ಲಿ ರಾಜಾರೋಷವಾಗಿ ಓಡಾಡುವ ಪ್ರಾಣಿಗಳನ್ನು ನೋಡುವ ಆನಂದ ಅನುಭವಿಸಿದಾಗ ಮಾತ್ರ ಗೊತ್ತಾಗುತ್ತದೆ.

 ಅರಣ್ಯಮಯದ ಸುಂದರ ಲೋಕ

ಅರಣ್ಯಮಯದ ಸುಂದರ ಲೋಕ

ಇವತ್ತಿನ ಜಂಜಾಟದ ಬದುಕಿನಲ್ಲಿ ಒಂದಷ್ಟು ನೆಮ್ಮದಿ ಸಿಗುವ ಸ್ಥಳವೆಂದರೆ ಅದು ಅರಣ್ಯ ಮಾತ್ರ. ತಂಪಾದ ಸ್ವಚ್ಛಂದ ಗಾಳಿಯ ಪ್ರಶಾಂತ ವಾತಾವರಣದಲ್ಲಿ ಹಸಿರನ್ನು ಕಣ್ತುಂಬಿಸಿಕೊಂಡು ಅದರ ನಡುವೆ ಸುಂದರ ಕ್ಷಣಗಳನ್ನು ಸವಿಯುವುದು ಮರೆಯಲಾರದ ಅನುಭವ ಇಂತಹ ಅನುಭವಗಳಿಗೆ ಇನ್ನಷ್ಟು ರಂಗು ತುಂಬುವ ಕೆಲಸವನ್ನು ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ಮಾಡಲಾಗಿದೆ. ಹಾಗಾದರೆ ಅಂತಹದ್ದೇನು ವಿಶೇಷ ಅಲ್ಲಿದೆ ಎಂಬುದನ್ನು ನೋಡುವುದಾದರೆ, ನೈಜ ಪ್ರಾಣಿಗಳೇ ಬೆಚ್ಚಿ ಬೆರಗಾಗುವಂತೆ ಕಟ್ಟಡ, ನಾಮಫಲಕ, ಗೋಡೆ ಹೀಗೆ ಎಲ್ಲೆಂದರಲ್ಲಿ ಪ್ರಾಣಿ ಪಕ್ಷಿಗಳ ಚಿತ್ರಗಳನ್ನು ಬರೆದು ಸಂಪೂರ್ಣ ಅರಣ್ಯಮಯದ ಸುಂದರ ಲೋಕವನ್ನು ತೆರೆದಿಟ್ಟಿರುವುದು ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವಂತೆ ಮಾಡಿದೆ.

 ಎಲ್ಲೆಂದರಲ್ಲಿ ಕಣ್ಮನ ಸೆಳೆಯುವ ಚಿತ್ರಗಳು

ಎಲ್ಲೆಂದರಲ್ಲಿ ಕಣ್ಮನ ಸೆಳೆಯುವ ಚಿತ್ರಗಳು

ಚಾಮರಾಜನಗರ ಜಿಲ್ಲೆಯ ಕೆ.ಗುಡಿಗೆ ಸಫಾರಿಗೆ ಬರುವ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುವ ಸಲುವಾಗಿ ಮತ್ತು ಮಕ್ಕಳಲ್ಲಿ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅರಣ್ಯ ಇಲಾಖೆ ವಿವಿಧ ಪ್ರಾಣಿಗಳ ಚಿತ್ರಗಳನ್ನು ಗೋಡೆಗಳಲ್ಲಿ ಬಿಡಿಸಿ ಗಮನಸೆಳೆದಿದೆ. ಇದೀಗ ಕೆ.ಗುಡಿಯಲ್ಲಿರುವ ಸಫಾರಿ ಕೌಂಟರ್ ಕಟ್ಟಡ, ವಿವಿಧ ಗೋಡೆಗಳು, ದಾರಿ ಮಧ್ಯೆ ಸಿಗುವ ಫಲಕಗಳಲ್ಲಿ ಬಿಆರ್‌ಟಿ ವ್ಯಾಪ್ತಿಯಲ್ಲಿ ಕಂಡು ಬರುವ ಹುಲಿ, ಆನೆ, ಚಿರತೆ, ಕಾಡೆಮ್ಮೆ ಸೇರಿದಂತೆ ವಿವಿಧ ಪ್ರಾಣಿಗಳ ಚಿತ್ರಗಳಲ್ಲದೆ, ಬಿಆರ್‌ಟಿಯಲ್ಲಿ ಹಾದು ಹೋಗುವ ರಸ್ತೆಯಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಗಳನ್ನು ಬರೆದಿರುವುದು ವಿಶೇಷವಾಗಿದೆ.

 ಕಲಾವಿದ ನಾಗರಾಜು ಕುಂಚದಲ್ಲರಳಿದ ಚಿತ್ರಗಳು

ಕಲಾವಿದ ನಾಗರಾಜು ಕುಂಚದಲ್ಲರಳಿದ ಚಿತ್ರಗಳು

ಇನ್ನು ಇಲ್ಲಿ ಬರೆಯಲಾಗಿರುವ ಚಿತ್ರಗಳು ತೈಲ ವರ್ಣದ್ದಾಗಿದ್ದು, ನೈಜ ಪ್ರಾಣಿಗಳೇ ನಮ್ಮೆದುರು ನಿಂತಂತೆ ಗೋಚರಿಸುತ್ತದೆ. ಇಂತಹ ಸುಂದರ ಚಿತ್ರಗಳನ್ನು ತಮ್ಮ ಕುಂಚದಿಂದ ಬರೆದ ಹೆಮ್ಮೆ ಚಿತ್ರದುರ್ಗದ ಕಲಾವಿದ ನಾಗರಾಜುಗೆ ಸೇರುತ್ತದೆ. ಅವರು ಬರೀ ಪ್ರಾಣಿ ಪಕ್ಷಿಗಳ ಚಿತ್ರವನ್ನಷ್ಟೆ ಬಿಡಿಸಿಲ್ಲ. ಅದಕ್ಕೊಂದು ಜೀವ ತುಂಬುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇದೀಗ ಕೆ.ಗುಡಿಗೆ ಬರುವ ಪ್ರವಾಸಿಗರು ಗೋಡೆಗಳಲ್ಲಿ ಕಂಡು ಬರುವ ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ನೋಡಿ ಮೂಕಸ್ಮಿತರಾಗುತ್ತಿದ್ದಾರೆ.

 ಚೇತರಿಕೆಯಾಗುತ್ತಾ ಪ್ರವಾಸೋದ್ಯಮ

ಚೇತರಿಕೆಯಾಗುತ್ತಾ ಪ್ರವಾಸೋದ್ಯಮ

ಈ ಕುರಿತಂತೆ ಮಾಹಿತಿ ನೀಡಿರುವ ವಲಯ ಅರಣ್ಯ ಅಧಿಕಾರಿ ಶಾಂತಪ್ಪ ಪೂಜಾರ, ಕೊರೊನಾ ಬಳಿಕ ಬಿಆರ್‌ಟಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಬಿಆರ್‌ಟಿ ವ್ಯಾಪ್ತಿಯಲ್ಲಿರುವ ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಗೋಡೆಗಳ ಮೇಲೆ ಬಿಡಿಸಿ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ. ಹೀಗಾಗಿ ಕೆ.ಗುಡಿಯಲ್ಲಿರುವ ಸಫಾರಿ ಮಾಹಿತಿ ಕೇಂದ್ರದ ಕಟ್ಟಡ, ಚೆಕ್‌ಪೋಸ್ಟ್ ಹಾಗೂ ರಸ್ತೆ ಮಧ್ಯದ ಕೆಲವು ಕಡೆಗಳಲ್ಲಿ ಚಿತ್ರಗಳನ್ನು ಬಿಡಿಸಲಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಇವುಗಳ ನಡುವೆ ಕರಡಿ, ಚಿರತೆ, ಕಾಡಾನೆ. ಕಾಡೆಮ್ಮೆಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ವನ್ಯ ಪ್ರಾಣಿಗಳನ್ನು ನೋಡುವ ಸಲುವಾಗಿ ಜತೆಗೆ ಒಂದಷ್ಟು ಸಮಯವನ್ನು ಅರಣ್ಯದ ನಡುವೆ ಕಳೆಯಲು ಪ್ರವಾಸಿಗರು ಬರುತ್ತಿದ್ದಾರೆ. ಎಲ್ಲವೂ ಸರಿ ಹೋದರೆ ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಇನ್ನಷ್ಟು ಚೇತರಿಕೆಯಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಬಹುದೇನೋ?

English summary
Wildlife photos have been painted to attract tourists in K Gudi, a BRT tiger reserve in Chamarajanagar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X