ಪ್ರಚಂಡ ಗೆಲುವು ಪಡೆದ ಸೆಲೆಬ್ರೆಟಿ ಅನ್ಮೋಲ್ ಗಗನ್ ಮಾನ್ ಯಾರು?
ಚಂಡೀಗಢ, ಮಾರ್ಚ್ 11: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಭರ್ಜರಿ ಬಹುಮತವನ್ನು ಗಳಿಸಿ ಸರ್ಕಾರ ರಚನೆ ಮಾಡಲು ಸಿದ್ಧವಾಗಿದೆ. ಈ ನಡುವೆ ಪ್ರಚಂಡ ಬಹುಮತದಿಂದ ಗೆದ್ದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅನ್ಮೋಲ್ ಗಗನ್ ಮಾನ್ ಭಾರೀ ಸುದ್ದಿ ಆಗುತ್ತಿದ್ದಾರೆ.
ಖರಾರ್‌ನಿಂದ ಸ್ಪರ್ಧಿಸಿದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅನ್ಮೋಲ್ ಗಗನ್ ಮಾನ್ ಪಂಜಾಬ್‌ನ ಪ್ರಸಿದ್ಧ ಗಾಯಕಿ ಕೂಡಾ ಹೌದು. 2022 ರ ವಿಧಾನಸಭಾ ಚುನಾವಣೆಯ ಕಣಕ್ಕೆ ಇಳಿಯುವ ಮೂಲಕ ಪಂಜಾಬ್‌ನ ಪ್ರಸಿದ್ಧ ಗಾಯಕಿ ಅನ್ಮೋಲ್ ಗಗನ್ ಮಾನ್ ರಾಜಕೀಯ ಆಟದ ಮೈದಾನಕ್ಕೆ ಪ್ರವೇಶ ಮಾಡಿದ್ದಾರೆ.
ಗಮನಾರ್ಹವಾಗಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅನ್ಮೋಲ್ ಗಗನ್ ಮಾನ್ ತನ್ನ ರಾಜಕೀಯ ಜೀವನದ ಚೊಚ್ಚಲ ಚುನಾವಣೆಯಲ್ಲೇ ಪ್ರಭಾವಶಾಲಿ ಪ್ರದರ್ಶನವನ್ನು ನೀಡಿದ್ದಾರೆ. ಖಾರಾರ್ ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಅನ್ಮೋಲ್ ಗಗನ್ ಮಾನ್ ಈಗಾಗಲೇ ಸುಮಾರು ಶೇಕಡ 40ಕ್ಕಿಂತ ಅಧಿಕ ಮತಗಳನ್ನು ಗಳಿಸಿದ್ದು, ಕ್ಷೇತ್ರದಲ್ಲಿ ವಿರೋಧ ಪಕ್ಷದ ಅಭ್ಯರ್ಥಿ ವಿರುದ್ಧ 36,000 ಕ್ಕೂ ಹೆಚ್ಚು ಮತಗಳನ್ನು ಗಳಿಸಿ ವಿಜಯಪತಾಕೆ ಹಾರಿಸಿದ್ದಾರೆ. ಹಾಗಾದರೆ ಈ ಅನ್ಮೋಲ್ ಗಗನ್ ಮಾನ್ ಯಾರು ಎಂಬ ಬಗ್ಗೆ ನಾವು ತಿಳಿಯೋಣ ಮುಂದೆ ಓದಿ...

ಯಾರಿದು ಎಎಪಿ ಅಭ್ಯರ್ಥಿ ಅನ್ಮೋಲ್ ಗಗನ್ ಮಾನ್?
ಗಗನ್‌ದೀಪ್ ಕೌರ್ ಮಾನ್ ಎಂದೂ ಕರೆಯಲ್ಪಡುವ ಅನ್ಮೋಲ್ ಗಗನ್ ಮಾನ್ ಪಂಜಾಬ್‌ನ ಜನಪ್ರಿಯ ಗಾಯಕಿ ಆಗಿದ್ದಾರೆ. ಹಾಗೆಯೇ ಗೀತರಚನೆ ಮತ್ತು ಸಂಗೀತ ಸಂಯೋಜನೆಯನ್ನು ಕೂಡಾ ಅನ್ಮೋಲ್ ಗಗನ್ ಮಾನ್ ಮಾಡುತ್ತಾರೆ. 32 ವರ್ಷದ ಎಎಪಿ ಅಭ್ಯರ್ಥಿ ಅನ್ಮೋಲ್ ಗಗನ್ ಮಾನ್ ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಜನಿಸಿದ್ದು, ಮಾನ್‌ರ ತವರೂರು ಮೊಹಾಲಿ ಆಗಿದೆ.
ಅನ್ಮೋಲ್ ಗಗನ್ ಮಾನ್ ತನ್ನ ಸಣ್ಣ ವಯಸ್ಸಿನಲ್ಲಿಯೇ ಸಂಗೀತ ಹಾಗೂ ನೃತ್ಯದತ್ತ ಒಲವು ತೋರಿದ್ದು, 2014 ರಲ್ಲಿ ಇಂಗ್ಲೆಂಡ್‌ಗೆ ಪ್ರಯಾಣ ಮಾಡಿದರು. ಹಾಗೆಯೇ ಬಳಿಕ ವರ್ಷದ ವಿಶ್ವ ಜಾನಪದ ನೃತ್ಯ ಸ್ಪರ್ಧೆಯ ವಿಜೇತರಾಗಿ ಆಯ್ಕೆಯಾದರು. ಚಂಡೀಗಢದ ಎಂಸಿಎಂ ಡಿಎವಿ ಕಾಲೇಜಿನಲ್ಲಿ ಮನೋವಿಜ್ಞಾನ ಮತ್ತು ಸಂಗೀತ ವಿಚಾರದಲ್ಲಿ ಪದವೀಧರರಾಗಿರುವ ಅನ್ಮೋಲ್ ಗಗನ್ ಮಾನ್ 2013 ರಲ್ಲಿ ಮಿಸ್ ವರ್ಲ್ಡ್ ಪಂಜಾಬಿಯನ್‌ನಲ್ಲಿ ಮಿಸ್ ಮೊಹಾಲಿ ಪಂಜಾಬಿಯನ್ ಕಿರೀಟವನ್ನು ಮುಡಿಗೇರಿಸಿದರು.
ಅನ್ಮೋಲ್ ಗಗನ್ ಮಾನ್ ಶೆರ್ನಿ, ಪಟಿಯಾಲ ಮತ್ತು ಗಲ್ ಚಕ್ವಿಯಂತಹ ಹಾಡುಗಳನ್ನು ಹಾಡಿದ್ದಾರೆ. ಹೌ ಟು ಬಿ ರಿಯಲ್ ಹ್ಯೂಮನ್ ಎಂಬ ಪ್ರೇರಕ ಪುಸ್ತಕವನ್ನೂ ಬರೆದಿದ್ದಾರೆ. ಶೆರ್ನಿ ಗಾಯಕಿ ಖರಾರ್ ಕ್ಷೇತ್ರದಿಂದ 37,885 ಮತಗಳ ಅಂತರದಿಂದ ಗೆದ್ದಿದ್ದಾರೆ.
ಗೆದ್ದ, ಸೋತ ಸೆಲೆಬ್ರೆಟಿಗಳು ಯಾರು?
ಪಂಜಾಬ್‌ನ ಗೆಲವು ಸಾಧಿಸಿದ ಸೆಲೆಬ್ರೆಟಿಗಳ ಪೈಕಿ ಮೊದಲ ಸ್ಥಾನದಲ್ಲಿ ನಿಲ್ಲುವವರು ಭಗವಂತ್ ಮಾನ್. ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಆಗಿರುವ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಭಗವಂತ್ ಮಾನ್ ಭರ್ಜರಿ ಜಯವನ್ನು ಸಾಧಿಸಿದ್ದಾರೆ. ಯುವಜನೋತ್ಸವಗಳು ಮತ್ತು ಅಂತರ ಕಾಲೇಜು ಸ್ಪರ್ಧೆಯ ಮೂಲಕ ತನ್ನ ಹಾಸ್ಯ ವೃತ್ತಿಜೀವನವನ್ನು ಪ್ರಾರಂಭಿಸಿದ ಭಗವಂತ್ ಮಾನ್, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ ಪ್ರಸಿದ್ಧರಾಗಿದ್ದಾರೆ. ಧುರಿ ಕ್ಷೇತ್ರದಲ್ಲಿ ಸುಮಾರು 58,206 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದ ಗಾಯಕ ಸಿದ್ದು ಮೂಸೆವಾಲಾ ಎಎಪಿ ಎದುರಾಳಿ ಡಾ ವಿಜಯ್ ಸಿಂಗ್ಲಾ ವಿರುದ್ಧ ಸೋಲನ್ನು ಒಪ್ಪಿಕೊಂಡಿದ್ದಾರೆ. ಬಂದೂಕುಗಳು ಮತ್ತು ಹಿಂಸಾಚಾರವನ್ನು ಒಳಗೊಂಡಿರುವ ಅವರ ಹಾಡುಗಳಿಂದಲೇ ಕುಖ್ಯಾತಿ, ಖ್ಯಾತಿ ಪಡೆದ ಗಾಯಕ ಸಿದ್ದು ಮೂಸೆವಾಲಾ ಕಳೆದ ತರ್ಷ ಒಂದೇ ಆಲ್ಬಂನಲ್ಲಿ 30 ಹಾಡುಗಳನ್ನು ಬಿಡುಗಡೆ ಮಾಡಿದ್ದರು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications