Horse: ಸೃಷ್ಠಿಯ ಸುಂದರ, ಸೂಕ್ಷ್ಮ ಹೃದಯದ ಪ್ರಾಣಿ ಕುದುರೆ: ಯಾಕೆ ಗೊತ್ತಾ?
ಮೈಸೂರು, ಸೆಪ್ಟೆಂಬರ್ 26: ಮೈಸೂರಿಗೂ ಕುದುರೆಗೂ ವಿಶೇಷ ನಂಟಿದೆ. ಹೀಗಾಗಿ ನಗರದಲ್ಲಿ ಅಡ್ಡಾಡುವ ಟಾಂಗಾ ಗಾಡಿಗಳಿಂದ ಆರಂಭವಾಗಿ ಅಶ್ವರೋಹಿ ದಳದವರೆಗೆ ಕುದುರೆಗಳು ಕಾಣಿಸುತ್ತವೆ. ಈ ಕುದುರೆಗಳು ಆಕರ್ಷಕವಾಗಿದ್ದು ಗಮನಸೆಳೆಯುತ್ತವೆ. ಈ ಕುದುರೆಗಳು ಹಲವು ವಿಶೇಷತೆಗಳಿದ್ದು ಅವುಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ ಎನ್ನಬೇಕು. ಹಿಂದಿನ ಕಾಲದಲ್ಲಿ ಇವುಗಳ ಸಹಾಯದಿಂದಲೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳುತ್ತಿದ್ದರು. ಅಷ್ಟೇ ಅಲ್ಲದೆ ಸೈನ್ಯದಲ್ಲಿ ಇವುಗಳನ್ನು ಅತಿ ಹೆಚ್ಚಾಗಿ ಬಳಕೆ ಮಾಡಿಕೊಳ್ಳಲಾಗುತ್ತಿತ್ತು.
ಕುದುರೆಗಳ ಬಗ್ಗೆ ಹೇಳಬೇಕೆಂದರೆ ಇವು ಸೃಷ್ಠಿಯ ಅತಿ ಸುಂದರ ಮತ್ತು ವಿಶೇಷ ಪ್ರಾಣಿ ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೆ ಇವುಗಳ ನಿರ್ವಹಣೆ ತುಸು ತುಟ್ಟಿಯೇ ಹೀಗಾಗಿ ಇವುಗಳನ್ನು ಶ್ರೀಮಂತರಷ್ಟೇ ಸಾಕುತ್ತಿದ್ದರು, ಹೀಗಾಗಿ ಇದು ರಾಯಲ್ ಪ್ರಾಣಿ ಎಂದರೂ ತಪ್ಪಾಗುವುದಿಲ್ಲ. ತುಸು ಅಂಜಿಕೆಯ ಪ್ರಾಣಿಯಾಗಿದ್ದು, ಇದು ಕಾಡಿನಲ್ಲಿ ಓಡುತ್ತಾ, ಓಡುತ್ತಾ ಮತ್ತು ಪ್ರಾಣ ಉಳಿಸಿಕೊಂಡು ಬದುಕಿದ ಅತಿ ಸೂಕ್ಷ್ಮ ಹೃದಯದ ಪ್ರಾಣಿ ಎಂದೂ ಹೇಳಲಾಗುತ್ತದೆ.

ಮನುಷ್ಯ ಇದರ ಒಡನಾಟಕ್ಕೆ ಬಂದಲ್ಲಿಂದ ಇಲ್ಲಿವರೆಗೆ ಹಲವು ರೀತಿಯಲ್ಲಿ ಮನುಷ್ಯನಿಗೆ ಉಪಕಾರಿ ಪ್ರಾಣಿಯಾಗಿ ಉಳಿದು ಬಂದಿದೆ. ಇವತ್ತಿಗೂ ಇದು ಮನುಷ್ಯನನ್ನು ಹೊತ್ತು ತಿರುಗುತ್ತಲೇ ಇದೆ. ಪುರಾಣದಲ್ಲಿ ಕುದುರೆಯ ಉಲ್ಲೇಖಗಳು ಹೆಚ್ಚಾಗಿ ಕಂಡು ಬರುತ್ತವೆ. ಯುದ್ಧದಲ್ಲಿ ಹೆಚ್ಚು ಬಳಕೆಯಾಗುತ್ತಿತ್ತು. ಅಶ್ವಮೇದ ಯಾಗ ಎಂಬ ಪದದಲ್ಲಿಯೇ ಕುದುರೆಯ ಮಹತ್ವ ಅಡಗಿದೆ. ಪುರಾಣದಲ್ಲಿ ಈ ಪ್ರಾಣಿಯ ಬಗ್ಗೆ ಅತಿ ಕುತೂಹಲದಿಂದ ಅಶ್ವ ವಿಜ್ಞಾನವನ್ನೇ ಅಭಿವೃದ್ದಿ ಪಡಿಸಲಾಗಿದೆ.
ಕುದುರೆಯನ್ನು ಅರಿತಿದ್ದವರು ನಳ, ನಕುಲ
ಈ ಕುದುರೆಗಳ ಬಗ್ಗೆ ಅತ್ಯಂತ ಅಧಿಕಾರಯುತವಾಗಿ ಮಾತನಾಡಬಲ್ಲಂತಹವರು ಪುರಾಣದಲ್ಲಿ ಸಿಗುತ್ತಾರೆ. ಅವರಲ್ಲಿ ಒಬ್ಬರು ನಳ ಮಹಾರಾಜ, ಮತ್ತೊಬ್ಬ ಪಂಚಪಾಂಡವರಲ್ಲಿ ಒಬ್ಬನಾದ ನಕುಲ. ಅವರು 'ಅಶ್ವಹೃದಯ' ವನ್ನು ಅರ್ಥ ಮಾಡಿಕೊಳ್ಳುತ್ತಿದ್ದರು ಎಂಬುದು ವಿಸ್ಮಯಕಾರಿ ಸಂಗತಿಯೂ ಇದೆ. ಈಗ ಅಶ್ವ ವಿಜ್ಞಾನ ಎಂದು ಪ್ರಸಿದ್ಧಿ. ಅದರ ಪ್ರಕಾರ ಕುದುರೆಗಳ ನೆನಪಿನ ಶಕ್ತಿ ಅಗಾಧವಾದದ್ದು. ತನ್ನ ಸವಾರನನ್ನು ಎಂದಿಗೂ ಮರೆಯಲ್ಲ. ಅದು ತುಂಬಾ ಬೆವರುವ ಪ್ರಾಣಿ. ಅಷ್ಟೇ ಹೆದರಿಕೆಯುಳ್ಳದು. ನಾಗಾಲೋಟದಲ್ಲಿ ಓಡುವ ಏಕೈಕ ಪ್ರಾಣಿ ಎಂದು ಹೇಳಲಾಗಿದೆ.

ಈ ಕುದುರೆಗಳಲ್ಲಿ 150 ರಿಂದ 170 ಥರ ತಳಿಗಳಿವೆ. ಅದರಲ್ಲಿ ಅತಿ ಹೆಚ್ಚು ಪ್ರಸಿದ್ಧಿಯಾದುದು ಗುಜರಾತ್ ನ ಕಾಥೇವಾರಿ ಮತ್ತು ಮಾರವಾರಿ ತಳಿಯದ್ದು. ಇನ್ನು ರೇಸ್‌ಗಳಿಗೆ ಥರೋಬರೆಡ್ ತಳಿ ಪ್ರಸಿದ್ಧಿ ಪಡೆದಿವೆ. ಕುದುರೆ ಅತಿ ಜವಾಬ್ದಾರಿಯ ಪ್ರಾಣಿ. ಹಾಗೆಯೇ ತುಂಬಾ ಸ್ವಚ್ಛವಾದದ್ದು. ಎಂದಿಗೂ ಮೈಗಳ್ಳತನ ಮಾಡಲ್ಲ. ಅಷ್ಟೇ ಶಾಂತವಾದ ಪ್ರಾಣಿ. ಸವಾರನಿಗೆ ತುಂಬಾ ನಿಷ್ಠವಾದದ್ದು. ಒಂದು ಸಣ್ಣ ಮಗು ಕುಳಿತರೂ ಅದನ್ನು ಸುರಕ್ಷಿತವಾಗಿ ತಲುಪಿಸುವಂತ ಗುಣ ಇವುಗಳಲ್ಲಿದೆ.
ಕುದುರೆಯ ಆಯುಷ್ಯ ಎಷ್ಟು ಗೊತ್ತಾ?
ಕುದುರೆಯು 20 ರಿಂದ 25 ವರ್ಷ ಬದುಕಬಲ್ಲದು ಎಂದು ಹೇಳಲಾಗುತ್ತದೆ. ಕುದುರೆಗಳ ಸಂತಾನೋತ್ಪತ್ತಿ ಅವಧಿ 14ತಿಂಗಳಾಗಿದ್ದು, ಕುದುರೆಯ ಉಪಯೋಗ ನೋಡುವುದಾದರೆ ಇದರ ಕುದುರೆಯ ರಕ್ತದಲ್ಲಿ ಔಷಧಿ ಗುಣ ಮತ್ತು ಅಂಟಿಬಯಾಟಿಕ್ ಗುಣ ಹೆಚ್ಚಿದೆಯಂತೆ. ಅದನ್ನು ಬಳಸಿಕೊಂಡೇ ಹಾವಿನ ಕಡಿತದ ವಿಷಕ್ಕೆ ಔಷಧಿ ರಕ್ತಸಾರ (ಸಿರಮ್) ತಯಾರಿಸಲಾಗುತ್ತದೆ. ಇಂತಹ ಘಟಕಗಳು ಹೈದರಾಬಾದ್ ಊಟಿಗಳಲ್ಲಿದೆ. ಅರಸರ ಕಾಲದಿಂದಲೂ ಕುದುರೆಗಳು ಕ್ರೀಡೆಗೆ ಬಳಸಲಾಗುತ್ತದೆ.
ಇದರಲ್ಲಿ ವೈವಿಧ್ಯಮಯ ಆಟಗಳು. ಬೇರೆ ಬೇರೆ ರಿಲೇಗಳು. ಶೋ ಜಂಪಿಂಗ್ ಮುಖ್ಯವಾದವು. ಇನ್ನು ಕುದುರೆ ಸಾಮರ್ಥ್ಯವನ್ನು ಪರೀಕ್ಷೆ ಮಾಡುವ ಓಟ ಅಂದರೆ ಒಂದು ಕುದುರೆ 60ರಿಂದ70 ಮೈಲಿ ಓಡಬೇಕು. ಹಲವು ವೇಳೆ ಈ ರೀತಿ ಪರೀಕ್ಷೆ ಮಾಡುವ ಸಂದರ್ಭ ಕುದುರೆಗಳು ದಾರಿ ಮಧ್ಯೆ ಪ್ರಾಣ ಬಿಟ್ಟಿರುವ ಪ್ರಸಂಗಗಳು ನಡೆದಿವೆ. ಒಂದು ಕುದುರೆ ಒಬ್ಬ ಸವಾರನಿಗೆ ಒಗ್ಗಿಕೊಂಡಿತು ಎಂದರೆ ಮತ್ತೆ ಅದು ಬೇರೆಯವರಿಗೆ ಒಗ್ಗುವುದು ಕಷ್ಟ.
ಎಲ್ಲ ಆಟದಲ್ಲೂ ಕುದುರೆಗಳು ನಿಪುಣ
ಒಂದು ಕುದುರೆ ಸವಾರಿಗೆ ತರಬೇತಿಯಾಗಬೇಕೆಂದರೆ ಅದಕ್ಕೆ ಕನಿಷ್ಠವೆಂದರೂ ಒಂದೂವರೆ ತಿಂಗಳಾದರೂ ಬೇಕು. ಆದರೆ ಪೂರ್ಣ ತರಬೇತಿಯಾಗಬೇಕೆಂದರೆ ಎರಡು ವರ್ಷ ಬೇಕಾಗುತ್ತದೆಯಂತೆ. ಕುದುರೆಗಳಿಗೆ ಎಲ್ಲ ರೀತಿಯ ಆಟವೂ ಇಷ್ಟ. ಕುದುರೆ ಮತ್ತು ಸವಾರ ಇಬ್ಬರಿಗೂ ಕಷ್ಟ ಎಂದರೆ ಅದು ಡ್ರೆಸೆಜ್ ಗೇಮ್. ಇದು ನೃತ್ಯ ಮಾಡುವಂತಹ ಶೈಲಿಯಲ್ಲಿರುವ ಕಠಿಣ ವ್ಯಾಯಾಮ. ಅದು ಮಾಡಿದರೆ ಕುದುರೆ ಉತ್ತಮ ಕುದುರೆಯಾಗಿ ಹೊರಹೊಮ್ಮುತ್ತದೆ. ಕುದುರೆ ಬಗ್ಗೆ ತಿಳಿಯುತ್ತಾ ಹೋದಂತೆಲ್ಲ ಹತ್ತಾರು ವಿಚಾರಗಳು ಹೊರ ಬರುತ್ತಲೇ ಇರುತ್ತದೆ.












Click it and Unblock the Notifications