• search

ವಾರಾಂತ್ಯ ಲೇಖನ: ತಡಿಯಂಡಮೋಳ್ ಬೆಟ್ಟದ ಮಿಂಚು ನೀಲಕಂಡಿ ಜಲಧಾರೆ!

By ಬಿ.ಎಂ.ಲವಕುಮಾರ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಕೊಡಗಿನ ಬೆಟ್ಟಗುಡ್ಡಗಳ, ಕಾಫಿ ಏಲಕ್ಕಿ ತೋಟಗಳ ನಡುವೆ ಹಲವಾರು ಜಲಧಾರೆಗಳು ಹುದುಗಿವೆ. ಇವು ಬೇಸಿಗೆಯಲ್ಲಿ ಅದೃಶ್ಯವಾಗಿ, ಮಳೆಗಾಲದಲ್ಲಿ ಮೈ-ಕೈ ತುಂಬಿಕೊಂಡು ಭೋರ್ಗರೆಯುತ್ತವೆ. ಬಹಳಷ್ಟು ಜಲಧಾರೆಗಳು ಬೆಟ್ಟಗುಡ್ಡಗಳಲ್ಲಿ ನಿರ್ಮಿತ ಆಗಿರುವುದರಿಂದಾಗಿ ಇವುಗಳತ್ತ ಹೋಗಲು ಸೂಕ್ತ ರಸ್ತೆಗಳಿಲ್ಲ. ಹೀಗಾಗಿ ನಡೆಯುವುದು ಅನಿವಾರ್ಯ.

  ಇನ್ನು ಈ ಜಲಧಾರೆಗಳನ್ನು ನೋಡಬೇಕೆಂದರೆ ಒಂದು ದಿನವನ್ನು ಮೀಸಲಿಡಬೇಕು. ಬೆಟ್ಟಗುಡ್ಡ ಹತ್ತಬೇಕು. ಜಿಗಣೆಗಳಿಂದ ತಪ್ಪಿಸಿಕೊಂಡು ನಡೆಯುವ ಜಾಣ್ಮೆ ತೋರಬೇಕು. ಏಕೆಂದರೆ ಸ್ವಲ್ಪ ಮೈ ಮರೆತರೂ ಜಿಗಣೆಗಳು ನಮ್ಮ ಮೇಲೆ ದಾಳಿ ಮಾಡುತ್ತವೆ. ಆದರೂ ಇವುಗಳನ್ನೆಲ್ಲ ಎದುರಿಸಿ ಜಲಧಾರೆಗಳನ್ನು ನೋಡಲು ಹೊರಡುವವರಿಗೆ ಪ್ರಕೃತಿ ಮಾತೆ ಮನವೊಲ್ಲಾಸ ನೀಡುವುದಂತೂ ಖಚಿತ.

  ರುದ್ರ ರಮಣೀಯ ಕೊಡಗಿನ ಜಲಪಾತಗಳು, ಪ್ರವಾಸಕ್ಕೆ ತೆರಳುವ ಮುನ್ನ ಹುಷಾರು!

  ಸುತ್ತಲ ಹಸಿರು, ಗಿರಿ- ಕಂದರ, ಬಂಡೆಕಲ್ಲು, ಕಂದಕಗಳ ನಡುವೆ ಚಿಮ್ಮುವ ಜಲ, ಚಿಲಿಪಿಲಿಗುಟ್ಟುವ ಹಕ್ಕಿಗಳು, ನಿಸರ್ಗದ ಸೊಬಗು ಸವಿಯುತ್ತಾ ಹೆಜ್ಜೆ ಹಾಕವುದೇ ಮರೆಯಲಾರದ ಅನುಭವ. ಪೇಟೆ- ಪಟ್ಟಣಗಳ ಗೌಜು ಗದ್ದಲದಲ್ಲಿ ಇದ್ದವರಿಗಂತೂ ಪ್ರಶಾಂತ ವಾತಾವರಣ ಮನ ತಣಿಸುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಛತ್ರಿ ಹಿಡಿದು ಸುರಿಯುವ ಮಳೆಗೆ ಮೈಯೊಡ್ಡಿ ನಡೆಯುವುದು ನಿಜಕ್ಕೂ ಹೊಸ ಅನುಭವವನ್ನು ನೀಡುತ್ತದೆ.

  ಈ ಜಲಧಾರೆ ಬಳಿ ಹೋಗುವವರು ವಿರಳ

  ಈ ಜಲಧಾರೆ ಬಳಿ ಹೋಗುವವರು ವಿರಳ

  ಜಲಧಾರೆಗಳೆಲ್ಲವೂ ಗುಡ್ಡಗಳಲ್ಲಿರುವ ಕಾರಣ ಏರು ಹಾದಿಯಲ್ಲಿ ನಡೆಯುವ ಸಾಮರ್ಥ್ಯ ನಮ್ಮಲ್ಲಿರಬೇಕಷ್ಟೆ. ಈಗ ಹೇಳಲು ಹೊರಟಿರುವುದು ನೀಲಕಂಡಿ ಜಲಧಾರೆಯ ಬಗ್ಗೆ. ಈ ಜಲಧಾರೆಯ ಬಳಿಗೆ ಹೋಗುವವರ ಸಂಖ್ಯೆ ವಿರಳವೇ. ಏಕೆಂದರೆ ಈ ಜಲಧಾರೆ ತಡಿಯಂಡಮೋಳ್ ಬೆಟ್ಟ ಶ್ರೇಣಿಯಲ್ಲಿದ್ದು, ಧುಮುಕುವ ನೀರು ಕೇರಳದ ಕಡೆಗೆ ಹರಿದು ಹೋಗುತ್ತದೆ. ನೀಲಕಂಡಿ ಜಲಧಾರೆಯನ್ನು ನೋಡಬೇಕಾದರೆ ಒಂದಷ್ಟು ಕಷ್ಟಪಡಲೇಬೇಕು. ಏರು ಹಾದಿಯಲ್ಲಿ ಉಸಿರು ಬಿಗಿ ಹಿಡಿದು ಹತ್ತಬೇಕು. ಬೆಟ್ಟಗುಡ್ಡಗಳ ಕಡಿದಾದ ಕಾಲು ದಾರಿಯಲ್ಲಿ ಎಚ್ಚರಿಕೆ ಹೆಜ್ಜೆಯನ್ನಿಡಬೇಕು. ಹೀಗೆ ನಡೆಯುವಾಗ ತಡಿಯಂಡಮೋಳ್ ಬೆಟ್ಟಶ್ರೇಣಿಯ ವಿಹಂಗಮ ನೋಟ ಕಣ್ಮನ ಸೆಳೆಯುತ್ತದೆ.

  150 ಅಡಿಗಿಂತಲೂ ಹೆಚ್ಚು ಎತ್ತರದಿಂದ ಧುಮುಕುವ ಜಲಧಾರೆ

  150 ಅಡಿಗಿಂತಲೂ ಹೆಚ್ಚು ಎತ್ತರದಿಂದ ಧುಮುಕುವ ಜಲಧಾರೆ

  ಒಂದೆಡೆ ಮುಗಿಲೆತ್ತರಕ್ಕೇರಿ ನಿಂತ ಪರ್ವತ ಶ್ರೇಣಿಗಳು, ಮತ್ತೊಂದೆಡೆ ಕಣ್ಣು ಎಟುಕದಷ್ಟು ಆಳದ ಕಂದಕ. ಅದರ ನಡುವೆ ಬೆಳೆದು ನಿಂತ ವೃಕ್ಷ ಸಂಕುಲಗಳ ನಡುವೆ ಭೋರ್ಗರೆದು ಹರಿಯುವ ಪಾತಿ ನದಿ ರೋಮಾಂಚನವನ್ನು ಉಂಟು ಮಾಡುತ್ತದೆ. ಇವೆಲ್ಲವನ್ನೂ ಆಸ್ವಾದಿಸುತ್ತಾ ಮುನ್ನಡೆದಾಗ ದೂರದ ಬೆಟ್ಟದಲ್ಲಿ ಕರಿ ಹೆಬ್ಬಂಡೆಗಳ ಮೇಲೆ ಬೆಳ್ಳಿ ಸುರಿದಂತೆ ಜಲಧಾರೆಯೊಂದು ಕಾಣಸಿಗುತ್ತದೆ. ಇದೇ ನೀಲಕಂಡಿ ಜಲಧಾರೆ. ಈ ಜಲಧಾರೆ 150 ಅಡಿಗಿಂತಲೂ ಹೆಚ್ಚು ಎತ್ತರದಿಂದ ವಿವಿಧ ಹಂತದಲ್ಲಿ ಧುಮುಕುತ್ತಾ ನೋಡುಗರ ಕಣ್ಮನ ಸೆಳೆಯುತ್ತದೆ. ನೀಲಕಂಡಿ ಜಲಧಾರೆ ಎಂಬುದು ಸ್ಥಳೀಯರು ಇಟ್ಟ ಹೆಸರಾಗಿದೆ. ಇದಕ್ಕೆ ಕಾರಣವೂ ಇದೆ.

  ಕುರುಂಜಿ ಗಿಡದಿಂದ ಬಂದ ಹೆಸರು

  ಕುರುಂಜಿ ಗಿಡದಿಂದ ಬಂದ ಹೆಸರು

  ಅದೇನೆಂದರೆ, ಜಲಧಾರೆಯಿರುವ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಕುರುಂಜಿ ಗಿಡಗಳು ಬೆಳೆದಿದ್ದು, ಇವುಗಳು ಹತ್ತೋ- ಹನ್ನೆರಡೋ ವರ್ಷಗಳಿಗೊಮ್ಮೆ ಹೂ ಬಿಡುತ್ತವೆ. ಹೀಗೆ ಹೂ ಬಿಟ್ಟಾಗ ಇಡೀ ಬೆಟ್ಟ ನೀಲಿಯಾಗಿ ಗೋಚರಿಸುತ್ತದೆ. ನೀಲಿ ಬೆಟ್ಟದ ನಡುವೆ ಕಿಂಡಿಯಂತಹ ಕಂದಕದ ಹೆಬ್ಬಂಡೆಯ ಮೇಲೆ ಬೆಳ್ಳಿ ಸುರಿದಂತೆ ಜಲಧಾರೆ ಗೋಚರಿಸುವುದರಿಂದ ನೀಲಕಂಡಿ ಜಲಧಾರೆ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಇನ್ನು ಈ ನೀಲಕಂಡಿ ಜಲಧಾರೆಯನ್ನು ನೋಡಲು ಹೋಗುವುದು ಅಷ್ಟು ಸುಲಭವಲ್ಲ. ಒಂದು ಸಾಹಸವೇ ಸರಿ. ಹೋಗಲೇ ಬೇಕೆಂದು ಬಯಸುವವರಿಗೆ ಇಲ್ಲಿದೆ ಮಾಹಿತಿ.

  ಜಲಪಾತವನ್ನು ತಲುಪುವುದು ಹೀಗೆ

  ಜಲಪಾತವನ್ನು ತಲುಪುವುದು ಹೀಗೆ

  ಮಡಿಕೇರಿಯಿಂದ ಸುಮಾರು 23 ಕಿ.ಮೀ. ದೂರದಲ್ಲಿರುವ ನಾಪೋಕ್ಲಿಗೆ ತೆರಳಿ, ಬಳಿಕ ಕಕ್ಕಬ್ಬೆಯ ಕಬ್ಬಿನಕಾಡಿಗೆ ಹೋಗಿ, ಅಲ್ಲಿಂದ ಬಲಕ್ಕೆ ಮಣ್ಣಿನ ರಸ್ತೆಯಲ್ಲಿ ಸುಮಾರು ಮೂರು ಕಿ.ಮೀ. ಸಾಗಬೇಕು. ಏರುರಸ್ತೆಯಲ್ಲಿ ಸಾಗುವುದು ವಿಶಿಷ್ಟ ಅನುಭವ. ಫೋರ್‍ ವ್ಹೀಲ್ ಡ್ರೈವ್ ವಾಹನ ಹೊರತುಪಡಿಸಿ ಬೇರೆ ವಾಹನಗಳಲ್ಲಿ ಸಾಗುವುದು ಸ್ವಲ್ಪ ಕಷ್ಟವೇ. ಆದರೂ ಕಷ್ಟಪಟ್ಟು ಸಾಗಿದರೆ ಹನಿವ್ಯಾಲಿ ಎಂಬ ಎಸ್ಟೇಟ್ ಸಿಗುತ್ತದೆ. ಅಲ್ಲಿಂದ ಮತ್ತೆ ಏರು ಹಾದಿಯಲ್ಲಿ ಸುಮಾರು ಮೂರು ಕಿ.ಮೀ.ನಷ್ಟು ಸಾಗಿದರೆ ಸುಮಾರು ಒಂದೂವರೆ ಕಿ.ಮೀ.ದೂರದಿಂದಲೇ ನೀಲಕಂಡಿ ಜಲಧಾರೆಯ ದರ್ಶನವಾಗುತ್ತದೆ. ಬೆಟ್ಟದಂಚಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ ಪ್ರಪಾತದಲ್ಲಿ ಸದ್ದು ಮಾಡುತ್ತಾ ಹರಿಯುವ ನದಿ. ಸುತ್ತಲೂ ಬೆಳೆದ ಗಿರಿ-ಶಿಖರಗಳು. ಹಿತವಾಗಿ ಬೀಸುವ ತಂಗಾಳಿ ಹೊಸ ಅನುಭವ ನೀಡುತ್ತದೆ. ಜಲಧಾರೆ ಹತ್ತಿರವಾದಂತೆಲ್ಲ ಅದರ ರುದ್ರರಮಣೀಯತೆ ಮೈಮನವನ್ನು ಪುಳಕಗೊಳಿಸಿ, ಉಲ್ಲಾಸ ನೀಡುತ್ತದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Neelakandi- Beautiful water falls in Tadiandamol region of Kodagu district. How to reach that place and other details are explained in this article.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more