• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ವಿದುರಾಶ್ವತ್ಧದಲ್ಲಿ ಬ್ರಿಟಿಷರಿಂದ ನರಮೇಧ; ಘೋರ ಘಟನೆಯ ಒಂದು ನೆನಪು

|
Google Oneindia Kannada News

ಜಲಿಯನ್‌ವಾಲಾ ಬಾಗ್ ಹೆಸರು ಕೇಳಿರಬಹುದು. ಪಂಜಾಬ್‌ನ ಅಮೃತಸರದ ಈ ಪ್ರದೇಶದಲ್ಲಿ 1919, ಏಪ್ರಿಲ್ 13ರಂದು ನಿಶಸ್ತ್ರಧಾರಿ ನಾಗರಿಕರ ಮೇಲೆ ಬ್ರಿಟಿಷರು ಮನಬಂದಂತೆ ಗುಂಡಿನ ದಾಳಿ ನಡೆಸಿ ಹಲವರನ್ನು ಸಾವಿರಕ್ಕೂ ಹೆಚ್ಚು ಜನರನ್ನು ಕೊಂದುಹಾಕಿದ ಘೋರ ಘಟನೆ ಅದು.

ದೇಶದ ಇನ್ನೂ ಕೆಲ ಭಾಗಗಳಲ್ಲೂ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಬ್ರಿಟಿಷ್ ಸರಕಾರ ಇದೇ ರೀತಿಯ ದೌರ್ಜನ್ಯ, ಹಿಂಸೆ, ಕೊಲೆ ಎಸಗಿತ್ತು. ಅಂಥ ಪ್ರದೇಶಗಳಲ್ಲಿ ನಮ್ಮ ವಿದುರಾಶ್ವತ್ಥ ಕೂಡ ಒಂದು.

ಸ್ವಾತಂತ್ರ್ಯ ಸಂಗ್ರಾಮ: ಅರುಣಾ ಅಸಫ್ ಅಲಿ ಕೊಡುಗೆ ಸ್ಮರಣಾರ್ಹಸ್ವಾತಂತ್ರ್ಯ ಸಂಗ್ರಾಮ: ಅರುಣಾ ಅಸಫ್ ಅಲಿ ಕೊಡುಗೆ ಸ್ಮರಣಾರ್ಹ

ಚಿಕ್ಕಬಳ್ಳಾಪುರದಲ್ಲಿರುವ ವಿದುರಾಶ್ವತ್ಥದಲ್ಲಿ ಭಾರತದ ರಾಷ್ಟ್ರೀಯ ಧ್ವಜವನ್ನು ಆರಿಸಲು ಸೇರಿದ್ದ ಜನಸಾಮಾನ್ಯರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಆ ಘೋರ ಘಟನೆಯಲ್ಲಿ 32 ಜನರು ಸಾವನ್ನಪ್ಪಿದ್ದರು. ಪೊಲೀಸರು 90 ಸುತ್ತುಗಳ ಗುಂಡಿನ ದಾಳಿ ಎಸಗಿದ ಪರಿಣಾಮವಾಗಿ ನೂರಕ್ಕೂ ಹೆಚ್ಚು ಮಂದಿಗೆ ಗಾಯವೂ ಆಗಿತ್ತು.

ವಿದುರಾಶ್ವತ್ಧದ ನರಮೇಧ ಘಟನೆ ಆಗಿ 84 ವರ್ಷಗಳು ಕಳೆದಿವೆ. ಕ್ರೂರ ಘಟನೆ ಕಂಡ ವಿದುರಾಶ್ವತ್ಥ ಈಗ ಬಹಳಷ್ಟು ಬದಲಾಗಿ ಹೋಗಿದೆ. ಆದರೆ, ಸ್ವಾತಂತ್ರ್ಯ ಹೋರಾಟದ ವೇಳೆ ಇದ್ದ ಜನರಿಗೆ ಈ ಘಟನೆ ಇನ್ನೂ ಜೀವಂತವೆಂಬಂತೆ ಉಳಿದಿದೆ. ಈಗ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ವಿದುರಾಶ್ವತ್ಥದ ಬಗ್ಗೆ ಒಂದು ಸ್ಮರಣೆ.

ಧ್ವಜ ಹಾರಾಟ ಮತ್ತು ತಿಕ್ಕಾಟ

ಧ್ವಜ ಹಾರಾಟ ಮತ್ತು ತಿಕ್ಕಾಟ

ಸ್ವಾತಂತ್ರ್ಯ ಹೋರಾಟಗಾರರು ಆಗ ತ್ರಿವರ್ಣ ಧ್ವಜವನ್ನು ರೂಪಿಸಿದ್ದರು. ಅದು ಸ್ವರಾಜ್ಯ ಬಾವುಟವಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಕೈಯಲ್ಲಿ ಇದೇ ಝಂಡಾ ಶಸ್ತ್ರವಾಗಿ ಪರಿಣಮಿಸಿತ್ತು. ಬ್ರಿಟಿಷರು ಬಾವುಟ ಹಾರಿಸುವುದಕ್ಕೆ ಅವಕಾಶ ನೀಡಲಿಲ್ಲ. 1930ರಲ್ಲಿ ಮೈಸೂರು ಪ್ರಾಂತ್ಯದಲ್ಲಿ ಧ್ವಜ ಹಾರಿಸಲು ಕಾಂಗ್ರೆಸ್ ನಿರ್ಧರಿಸಿತು.

ಶಿವಪುರದಲ್ಲಿ 1930ರಲ್ಲಿ ಮೈಸೂರು ಕಾಂಗ್ರೆಸ್‌ನ ಅಧಿವೇಶನದ ವೇಳೆ ತಿರಂಗ ಬಾವುಟ ಹಾರಿಸಲು ಕಾಂಗ್ರೆಸ್ ನಾಯಕರು ಯತ್ನಿಸಿದರು. ಆದರೆ, ಸರಕಾರದ ಆದೇಶಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಪೊಲೀಸರು ಕಾಂಗ್ರೆಸ್ ನಾಯಕರನ್ನು ಬಂಧಿಸಿದರು.

ವಿದುರಾಶ್ವತ್ಧದಲ್ಲಿ ಮಹಾ ಪ್ಲಾನ್

ವಿದುರಾಶ್ವತ್ಧದಲ್ಲಿ ಮಹಾ ಪ್ಲಾನ್

ಶಿವಪುರದಲ್ಲಿ ಧ್ವಜಾರೋಹಣಕ್ಕೆ ಪೊಲೀಸರು ಅವಕಾಶ ಕೊಡದೇ ಹೋದಾಗ, ಮೈಸೂರು ಪ್ರಾಂತ್ಯದಾದ್ಯಂತ ಧ್ವಜ ಸತ್ಯಾಗ್ರಹ ನಡೆಸಲು ಕಾಂಗ್ರೆಸ್ ನಿರ್ಧರಿಸಿತು. ಆದರೆ, ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಹೇಗಾದರೂ ಮಾಡಿ ಧ್ವಜ ಹಾರಾಡಿಸಲೇಬೇಕೆಂದು ಕಾಂಗ್ರೆಸ್ಸಿಗರು ನಿರ್ಧರಿಸಿದ್ದರು. ಪೊಲೀಸರು ತಡೆಯುವುದನ್ನು ತಪ್ಪಿಸಲು ಏಪ್ರಿಲ್ 23 ಮತ್ತು 24ರಂದು ಧ್ವಜ ಹಾರಾಟಕ್ಕೆ ಯತ್ನಿಸುವುದಿಲ್ಲ, ದೊಡ್ಡ ಗುಂಪುಗಳೂ ಸೇರುವುದಿಲ್ಲ. ಪೊಲೀಸರ ಗಮನ ಕಡಿಮೆ ಆಗುತ್ತಿದ್ದಂತೆಯೇ ಬಾವುಟ ಹಾರಾಟಕ್ಕೆ ದೇಶಭಕ್ತರು ಕಾಯುತ್ತಾ ಇದ್ದರು.

ಏಪ್ರಿಲ್ ೨೫ ಬೆಳಗ್ಗೆ ಚಿಕ್ಕಬಳ್ಳಾಪುರದ ವಿದುರಾಶ್ವತ್ಥ ಎಂಬ ಗ್ರಾಮದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರತೊಡಗಿದರು. ಅದು ಮೈಸೂರು ಮತ್ತು ಹೈದರಾಬಾದ್ ಪ್ರಾಂತ್ಯದ ಗಡಿಭಾಗದ ಊರು. ಎರಡೂ ಪ್ರಾಂತ್ಯದ ಮಧ್ಯೆ ಅಡ್ಡವಾಗಿ ಒಂದು ಹೊಳೆ. ಒಂದು ವೇಳೆ ಪೊಲೀಸರು ಲಾಠಿ ಪ್ರಹಾರಕ್ಕೆ ಮುಂದಾದರೆ ಹೊಳೆಗೆ ಹಾರಿ ಈಜಿ ಹೈದರಾಬಾದ್ ಗಡಿ ಸೇರಿಕೊಳ್ಳುವುದು ಹೋರಾಟಗಾರರ ಯೋಜನೆಯಾಗಿತ್ತು.

ಇಲ್ಲಿನ ಪೊಲೀಸರ ವ್ಯಾಪ್ತಿಗೆ ಹೈದರಾಬಾದ್ ಇರಲಿಲ್ಲ. ಹೀಗಾಗಿ, ಸ್ವಾತಂತ್ರ್ಯ ಹೋರಾಟಗಾರರು ಧ್ವಜಾರೋಹಣಕ್ಕೆ ವಿಧುರಾಶ್ವತ್ಥವನ್ನು ಆಯ್ದುಕೊಂಡಿದ್ದರು.

ದುರಂತ ಆಗಿದ್ದು ಹೀಗೆ

ದುರಂತ ಆಗಿದ್ದು ಹೀಗೆ

ಹೋರಾಟಗಾರರು ಎಲ್ಲವನ್ನೂ ಅಂದಾಜು ಮಾಡಿ ವಿದುರಾಶ್ವತ್ಥವನ್ನು ಆಯ್ದುಕೊಂಡರಾದರೂ ವಿಧಿ ಬರಹವೇ ಬೇರೆ ಇತ್ತು. ವಿದುರಾಶ್ವತ್ಥದಲ್ಲಿ ಬೆಳಗ್ಗೆ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮಧ್ಯಾಹ್ನದಷ್ಟರಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ತುಸು ಸಂಘರ್ಷ ಉಂಟಾಯಿತು.

ನೋಡನೋಡುತ್ತಲೇ ಪೊಲೀಸರು ಫೈರಿಂಗ್ ಮಾಡಲು ಆರಂಭಿಸಿದರು. ಅಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ ಪೊಲೀಸರು 96ಕ್ಕೂ ಹೆಚ್ಚು ಸುತ್ತುಗಳ ಗೋಲಿಬಾರ್ ಮಾಡಿದರು. 32 ಮಂದಿ ಸಾವನ್ನಪ್ಪಿದರೆನ್ನಲಾಗಿದೆ.

ಈ ಘಟನೆಯನ್ನು ಆಧಾರವಾಗಿಟ್ಟುಕೊಂಡು ಗಂಗಾಧರ್ ಮೂರ್ತಿ ಎಂಬುವವರು ಪುಸ್ತಕ ಬರೆದಿದ್ದಾರೆ. ಅದರಲ್ಲಿ ಈ ಘಟನೆಯನ್ನು ವಿವರವಾಗಿ ನೀಡಿದ್ದಾರೆ. ಅವರ ಪ್ರಕಾರ ಬೆಂಗಳೂರಿನಿಂದ ಆಗಷ್ಟೇ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆಯಾಗಿದ್ದ ಎಸ್‌ಐವೊಬ್ಬರು ಮೊದಲು ಫೈರಿಂಗ್ ಮಾಡಿ ಒಬ್ಬನನ್ನು ಕೊಂದುಹಾಕಿದರು. ಅದಾದ ಬಳಿಕ ಇತರ ಪೊಲೀಸರು ಯಾವುದೇ ದೆವ್ವ ಮೆಟ್ಟಿದವರಂತೆ ಪ್ರತಿಭಟನಾಕಾರರ ಗುಂಪಿನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದರಂತೆ.

ಮಹಾತ್ಮ ಗಾಂಧಿ ಆಕ್ರೋಶ

ಮಹಾತ್ಮ ಗಾಂಧಿ ಆಕ್ರೋಶ

ವಿದುರಾಶ್ವತ್ಥದ ಘಟನೆ ಬಗ್ಗೆ ಮಹಾತ್ಮ ಗಾಂಧಿ ಮತ್ತಿತರ ಕಾಂಗ್ರೆಸ್ ನಾಯಕರು ಬಹಳ ಆಕ್ರೋಶ ವ್ಯಕ್ತಪಡಿಸುತ್ತಾರೆ. 1930, ಏಪ್ರಿಲ್ 29ರಂದು ಹೇಳಿಕೆ ಬಿಡುಗಡೆ ಮಾಡಿ ಘಟನೆಯನ್ನು ಖಂಡಿಸುತ್ತಾರೆ. ವಿದುರಾಶ್ವತ್ಧದಲ್ಲಿ ಅಹಿಂಸಾತ್ಮಕವಾಗಿ ಸ್ವಾತಂತ್ರ್ಯ ಪಡೆಯಲು ಯತ್ನಿಸಿ 32 ಜನರು ಮಾಡಿದ ಬಲಿದಾನ ವ್ಯರ್ಥ ಆಗುವುದಿಲ್ಲ ಎಂದು ಗಾಂಧೀಜಿ ಶಪಥ ಮಾಡುತ್ತಾರೆ.

ವಿದುರಾಶ್ವತ್ಧದಲ್ಲಿ ಪೊಲೀಸರ ಫೈರಿಂಗ್‌ನಲ್ಲಿ 32 ಮಂದಿ ಬಲಿಯಾದರೂ ಸರಕಾರ ಕೇವಲ 10 ಮಂದಿ ಸತ್ತಿದ್ದು ಎಂದು ಲೆಕ್ಕ ಮುಂದಿಟ್ಟಿತು. ಇದರಿಂದ ಮೈಸೂರು ಪ್ರಾಂತ್ಯದ ಹಲವೆಡೆ ಪ್ರತಿಭಟನೆಗಳು ನಡೆದವು. ಪರಿಸ್ಥಿತಿ ಅವಲೋಕಿಸಲು ಸರ್ದಾರ್ ವಲ್ಲಭಭಾಯ್ ಪಟೇಲ್, ಆಚಾರ್ಯ ಕೃಪಲಾನಿ ಅವರನ್ನು ಗಾಂಧೀಜಿ ಕಳುಹಿಸಿದರು. ವಿದುರಾಶ್ವತ್ಧದ ಸುತ್ತಮುತ್ತಲಿನ ಪ್ರದೇಶಗಳನ್ನು ಭೇಟಿ ಮಾಡಿದ ಈ ನಾಯಕರು ಅಂತಿಮವಾಗಿ 32 ಜನರು ಬಲಿಯಾಗಿದ್ದು ನಿಜ ಎಂದು ತೀರ್ಮಾನಿಸಿದರು.

ಆಗ ಮೈಸೂರು ದಿವಾನ ಮಿರ್ಜಾ ಮತ್ತು ಸರ್ದಾರ್ ಪಟೇಲ್ ಮಧ್ಯೆ ಒಪ್ಪಂದವಾಯಿತು. ಅದರ ಪ್ರಕಾರ ಆಡಳಿತದಲ್ಲಿ ಕಾಂಗ್ರೆಸ್ ನಾಯಕರನ್ನೂ ಒಳಗೊಳ್ಳಬೇಕೆಂದಾಯಿತು.

ಪೌರಾಣಿಕ ಸ್ಥಳ

ಪೌರಾಣಿಕ ಸ್ಥಳ

ವಿದುರಾಶ್ವತ್ಥ ಐತಿಹಾಸಿಕವಾಗಿ ಗುರುತಾದ ಪ್ರದೇಶ ಮಾತ್ರವಲ್ಲ, ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ. ಮಹಾಭಾರತದ ವಿದುರ ಇಲ್ಲಿ ಅಶ್ವತ್ಥ ಮರವನ್ನು ನೆಟ್ಟಿದ್ದನಂತೆ. ಆ ಮರದ ಕಾರಣಕ್ಕೆ ವಿದುರಾಶ್ವತ್ಥ ಎಂದು ಈ ಊರಿಗೆ ಹೆಸರು ಬಂದಿತು. ಆ ಅಶ್ವತ್ಥ ವೃಕ್ಷ 2001ರಲ್ಲಿ ಧರೆಗುರುಳಿದೆ. ಆ ಜಾಗದಲ್ಲಿ ಈಗ ಒಂದು ಕಟ್ಟೆ ನಿರ್ಮಸಲಾಗಿದ್ದು, ಅದರಲ್ಲಿ ನಾಗರ ಕಲ್ಲುಗಳನ್ನು ಇಡಲಾಗಿದೆ. ಒಂದು ಸ್ಮಾರಕ ನಿರ್ಮಿಸಲಾಗಿದೆ.

ಇದೇ ವೇಳೆ, ವಿದುರಾಶ್ವತ್ಥ ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಒಂದು ಪ್ರಮುಖ ಸ್ಥಳವೆಂದು ಇತಿಹಾಸದ ಪುಟದಲ್ಲಿ ಇನ್ನೂ ಗುರುತಾಗಿಲ್ಲ. ಮುಂದಿನ ತಲೆಮಾರುಗಳ ಜನರಿಗೆ ಈ ಸ್ಥಳದ ಬಗ್ಗೆ ಅರಿವಿರುವಂತೆ ಮಾಡಬೇಕು. ಅದಕ್ಕಾಗಿ ಪ್ರತೀ ವರ್ಷವೂ ವಿದುರಾಶ್ವತ್ಥದ ನರಮೇಧ ಘಟನೆ ಬಗ್ಗೆ ಜನರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದು ಇದರ ಪುಸ್ತಕ ಬರೆದ ಗಂಗಾಧರ ಮೂರ್ತಿ ಹೇಳುತ್ತಾರೆ.

(ಒನ್ಇಂಡಿಯಾ ಸುದ್ದಿ)

English summary
Vidurashwatha has found its place in the map of India's freedom struggle. It is known as Jalianwalabag of Karnataka, as British police massaccred 32 people in this place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X