'ಗಾಂಧಿ'ಎನ್ನುವ ಸರ್ ನೇಮ್, ಬಿಜೆಪಿಯ ಫೈರ್ ಬ್ರ್ಯಾಂಡಿಗೆ ಮುಳುವಾಯಿತೇ?
ಅತ್ಯುತ್ತಮ ವಾಗ್ಮಿಯಾಗಿದ್ದರೂ, ಪ್ರಭಲವಾದ ರಾಜಕೀಯ ಹಿನ್ನಲೆಯಿದ್ದರೂ, ಭಾರತದ ರಾಜಕಾರಣದಲ್ಲಿ ಆರಕ್ಕೇರದ, ಮೂರಕ್ಕೆ ಇಳಿಯದ ನಾಯಕರೆಂದರೆ, ಇಂದಿರಾ ಗಾಂಧಿ ಕುಟುಂಬದ, ಸಂಜಯ್ ಗಾಂಧಿ ಪತ್ನಿ ಮನೇಕಾ ಗಾಂಧಿ ಮತ್ತು ಅವರ ಪುತ್ರ ವರುಣ್ ಗಾಂಧಿ.
ತಮ್ಮ ಪ್ರಖರವಾದ ಭಾಷಣದಿಂದ ಒಂದು ಕಾಲದಲ್ಲಿ ಬಿಜೆಪಿಯ ಫೈರ್ ಬ್ರ್ಯಾಂಡ್ ಎಂದೇ ಹೆಸರಾಗಿದ್ದ ವರುಣ್ ಗಾಂಧಿ ಈಗ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬೇಡವಾದ ಶಿಶು. ಇದಕ್ಕೆ ಕಾರಣವೂ ಇಲ್ಲದಿಲ್ಲ.
ಗುರುವಾರ (ಅ 7) ಪ್ರಕಟಿಸಲಾದ ಎಂಬತ್ತು ಸದಸ್ಯರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಮನೇಕಾ ಗಾಂಧಿ ಮತ್ತು ವರುಣ್ ಗಾಂಧಿಯವರನ್ನು ಕೈಬಿಡಲಾಗಿದೆ. ಕೇಂದ್ರ ಸರಕಾರದ ಕಾರ್ಯವೈಖರಿಯ ವಿರುದ್ದ ವರುಣ್ ಗಾಂಧಿ ಮಾತನಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಕಮಿಟಿಯಿಂದ ತೆಗೆದುಹಾಕಲಾಗಿದೆ ಎನ್ನುವುದು ಒಂದು ಆಯಾಮದ ಸತ್ಯ.
2004ರಲ್ಲಿ ಬಿಜೆಪಿ ಸೇರುವ ಮೂಲಕ ಸಕ್ರಿಯ ರಾಜಕಾರಣ ಆರಂಭಿಸಿದ ವರುಣ್ ಗಾಂಧಿ, ಮೂರು ಬಾರಿಯ ಲೋಕಸಭಾ ಸದಸ್ಯರು. 2009ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ್ದ ವರುಣ್ ಗಾಂಧಿ, ಫಿಲಿಬಿಟ್ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಗೆಲುವು ಕಂಡಿದ್ದರು. ಇವರ ವಿರುದ್ದ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಆದರೆ, ಅಂದಿನಿಂದ ಇಂದಿನವರೆಗೂ, ಬಿಜೆಪಿ ವರಿಷ್ಠರು ಇವರನ್ನು ಅಯಕಟ್ಟಿನ ಸ್ಥಾನಕ್ಕೆ ಪರಿಗಣಿಸಲೇ ಇಲ್ಲ.

ಮನೇಕಾ ಗಾಂಧಿ ಸಚಿವರಾಗಿದ್ದರಿಂದ ವರುಣ್ ಗಾಂಧಿಗೆ ಮಂತ್ರಿ ಸ್ಥಾನ ದಕ್ಕಿರಲಿಲ್ಲ
ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ಎನ್ನುವ ನಿಯಮ ಬಿಜೆಪಿಯಲ್ಲಿ ಇರುವುದರಿಂದ, ಮನೇಕಾ ಗಾಂಧಿ ಸಚಿವರಾಗಿದ್ದರಿಂದ ವರುಣ್ ಗಾಂಧಿಗೆ ಮಂತ್ರಿ ಸ್ಥಾನ ದಕ್ಕಿರಲಿಲ್ಲ. ಕಳೆದ, ಮೋದಿ ಸರಕಾರದ ಸಂಪುಟ ವಿಸ್ತರಣೆಯ ವೇಳೆ ಮನೇಕಾ ಗಾಂಧಿಯವರಿಗೆ ಕೊಕ್ ನೀಡಲಾಗಿತ್ತು. ಹಾಗಾಗಿ, ವರುಣ್ ಗಾಂಧಿ ಕೇಂದ್ರ ಸಂಪುಟಕ್ಕೆ ಸೇರಲಿದ್ದಾರೆ ಎನ್ನುವ ಸುದ್ದಿ ಬಲವಾಗಿ ಕೇಳಿಬರುತ್ತಿತ್ತು. ಆದರೆ, ಸಂಪುಟ ಸೇರುವುದು ಹಾಗಿರಲಿ, ರಾಷ್ಟ್ರೀಯ ಕಾರ್ಯಕಾರಿಣಿಯಿಂದಲೇ ಅಮ್ಮ, ಮಗನಿಗೆ ಬಿಜೆಪಿ ಗೇಟ್ ಪಾಸ್ ನೀಡಿದೆ.

ನೆಹರೂ-ಗಾಂಧಿ ಕುಟುಂಬದ ಕುಡಿಯನ್ನು ದೂರಕ್ಕೆ ಇಟ್ಟಿರುವುದು ಸ್ಪಷ್ಟ
ದೇಶದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಉತ್ತರ ಪ್ರದೇಶದ ಜನಪ್ರಿಯ ನಾಯಕರಾಗಿರುವ ವರುಣ್ ಗಾಂಧಿಯವರ ಹೆಸರು ಒಂದು ಹಂತಕ್ಕೆ ಅಲ್ಲಿನ ಸಿಎಂ ಸ್ಥಾನಕ್ಕೂ ಕೇಳಿ ಬರುತ್ತಿತ್ತು. ಆದರೆ, ಬಿಜೆಪಿ ವರಿಷ್ಠರು ಯೋಗಿ ಆದಿತ್ಯನಾಥ್‌ಗೆ ಮಣೆ ಹಾಕಿದ್ದರು. ವರುಣ್ ಗಾಂಧಿಯವರ ಹೆಸರನ್ನೂ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲೂ ಸೇರಿಸದ ಹೈಕಮಾಂಡ್, ವ್ಯವಸ್ಥಿತವಾಗಿ ನೆಹರೂ-ಗಾಂಧಿ ಕುಟುಂಬದ ಕುಡಿಯನ್ನು ದೂರಕ್ಕೆ ಇಟ್ಟಿರುವುದು ಸ್ಪಷ್ಟ.
|
ಶಿಕ್ಷೆ ಆಗಲೇ ಬೇಕು ಎಂದು ವಿಡಿಯೋ ಸಮೇತ ಇವರು ಮಾಡಿರುವ ಟ್ವೀಟ್ ತುಂಬಾ ವೈರಲ್
ಕೇಂದ್ರ ಸರಕಾರದ ಕಾರ್ಯವೈಖರಿ, ಕೇಂದ್ರ ಸಚಿವರು, ಉತ್ತರ ಪ್ರದೇಶದ ಸರಕಾರದ ವಿರುದ್ದವೂ ಆಗಾಗ ಧ್ವನಿ ಎತ್ತುವ ವರುಣ್ ಗಾಂಧಿ, ರೈತರ ಹೋರಾಟದ ವಿಚಾರದಲ್ಲೂ ಕೇಂದ್ರ ಸರಕಾರದ ವಿರುದ್ದ ಮಾತನಾಡಿದ್ದರು. ಇದಲ್ಲದೇ, ಭಾರೀ ಆಕ್ರೋಶಕ್ಕೆ ಕಾರಣವಾಗಿರುವ ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ನಡೆದ ಘಟನೆಯ ವಿರುದ್ದವೂ ಧ್ವನಿ ಎತ್ತಿದ್ದರು. ಅಟ್ಟಹಾಸ ಮೆರೆದವರಿಗೆ ಶಿಕ್ಷೆ ಆಗಲೇ ಬೇಕು ಎಂದು ವಿಡಿಯೋ ಸಮೇತ ಇವರು ಮಾಡಿದ ಟ್ವೀಟ್ ತುಂಬಾ ವೈರಲ್ ಆಗಿತ್ತು.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾಧ್ರಾ ಈ ವಿಚಾರದಲ್ಲಿ ಉತ್ಸುಕರಾಗಿದ್ದಾರೆ
ಗಾಂಧಿ ಕುಟುಂಬಗಳ ನಡುವೆ (ರಾಜೀವ್ ಮತ್ತು ಸಂಜಯ್ ಗಾಂಧಿ) ಇರುವ ಮನಸ್ತಾಪಗಳನ್ನೆಲ್ಲಾ ಪಕ್ಕಕ್ಕೆ ಸರಿಸಿ, ಒಂದಾಗಿ, ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಎರಡೂ ಕುಟುಂಬದ ನಡುವೆ ಮಾತುಕತೆ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾಧ್ರಾ ಈ ವಿಚಾರದಲ್ಲಿ ಉತ್ಸುಕರಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಇದರ ಸುಳಿವನ್ನು ಅರಿತ ಬಿಜೆಪಿ ಹೈಕಮಾಂಡ್, ಮನೇಕಾ ಗಾಂಧಿ ಮತ್ತು ವರುಣ್ ಗಾಂಧಿಯವರನ್ನು ಮೂಲೆಗುಂಪು ಮಾಡುತ್ತಿದೆಯಾ ಎನ್ನುವ ಪ್ರಶ್ನೆಗೆ ಉತ್ತರ ಸದ್ಯದಲ್ಲೇ ಸಿಕ್ಕರೂ ಸಿಗಬಹುದು.












Click it and Unblock the Notifications