Valentine's Day Special: ಇವತ್ತಿನ ಪ್ರೀತಿ ನಾಳಿನ ಸುಖ ದಾಂಪತ್ಯಕ್ಕೆ ಮುನ್ನುಡಿಯಾಗಲಿ
ಆಕರ್ಷಣೆಯೇ ಪ್ರೀತಿ ಎನ್ನುವ ಭ್ರಮೆ, ಪ್ರೀತಿಯ ಹೆಸರಲ್ಲಿ ವಂಚನೆ, ಇವತ್ತು ಇವಳು, ನಾಳೆ ಅವಳು ಎನ್ನುವ ಮನೋಭಾವ.. ಹೀಗೆ ಹತ್ತಾರು ಕಾರಣಗಳಿಂದಾಗಿ ಇವತ್ತು ಪ್ರೀತಿ ಅರಳುವ ಮುನ್ನವೇ ಬಾಡಿ ಹೋಗುತ್ತಿದೆ. ಅದಕ್ಕಿಂತ ಹೆಚ್ಚಾಗಿ ಪ್ರೀತಿ ಹೆಸರಲ್ಲಿ ನಡೆಯುತ್ತಿರುವ ಅನಾಚಾರಗಳು ಯುವ ಜನತೆಯ ಬದುಕನ್ನು ಹಾಳು ಮಾಡುತ್ತಿವೆ. ಬದುಕು ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಪ್ರೀತಿ, ಪ್ರೇಮ, ಮದುವೆ ಎಂದು ಹೀಗೆ ತಲೆಕೆಡಿಸಿಕೊಂಡು ಸುಂದರ ಜೀವನವನ್ನು ತಮ್ಮ ಕೈಯ್ಯಾರೆ ಹಾಳು ಮಾಡಿಕೊಳ್ಳುತ್ತಿರುವುದು ಈಗೀಗ ಹೆಚ್ಚು, ಹೆಚ್ಚಾಗಿ ಕಾಣಸಿಗುತ್ತಿವೆ.
ಪ್ರೀತಿ ಎನ್ನುವುದು ಬದುಕನ್ನು ಅರಳಿಸಬೇಕೇ ಹೊರತು ಬಾಡಿಸಬಾರದು. ನಮ್ಮ ಬದುಕು ಎನ್ನುವುದು ಸಿನಿಮಾದಂತೆ ಎರಡೂವರೆ ಗಂಟೆಗಳ ಕಾಲದಲ್ಲಿ ಮುಗಿದುಹೋಗುವುದಲ್ಲ. ಇಲ್ಲಿ ಪ್ರೀತಿ ಎನ್ನುವುದು ಟೈಂಪಾಸ್ ಆಗಬಾರದು. ಅಯ್ಯೋ ಒಂದಷ್ಟು ದಿನ ಅವನ(ಳ) ಜತೆ ಓಡಾಡಿಕೊಂಡಿದ್ದು, ಜಾಲಿಯಾಗಿ ದಿನ ಕಳೆದು ಬಿಡೋಣ ಆಮೇಲೆ ನೋಡಿದರಾಯಿತು ಎನ್ನುವ ಮನೋಭಾವದಿಂದ ಪ್ರೀತಿ ಪಾವಿತ್ರ್ಯತೆ ಕಳೆದುಕೊಳ್ಳುತ್ತಿದೆ. ಇಂತಹ ವಂಚಕರಲ್ಲಿ ನಾಳಿನ ಗುರಿ ಇರುವುದಿಲ್ಲ. ಜತೆಯಲ್ಲಿ ಓಡಾಡುವುದಕ್ಕೆ ಜಾಲಿ ಮಾಡುವುದಕ್ಕೆ ಜತೆಗೊಂದು ಜೀವ ಬೇಕಷ್ಟೆ. ಇಂತಹ ವಂಚಕ ಪ್ರೀತಿ ಇಬ್ಬರನ್ನು ಸುಖವಾಗಿಡುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ವಂಚನೆಯನ್ನು ಅರಿಯದ ಜೀವಕ್ಕೆ ಸಂಕಷ್ಟ ತಪ್ಪಿದಲ್ಲ.

ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದ ಅಹಂ ಇವತ್ತಿಗೂ ಕೆಲವು ಯುವಕರನ್ನು ಬಿಟ್ಟಿಲ್ಲ. ಅದು ದುಡ್ಡಿದ್ದರೆ ಹುಡ್ಗೀರು ಬೀಳ್ತಾರೆ ಎನ್ನುವುದು. ಅದನ್ನು ಕೆಲವರು ಬಹಿರಂಗವಾಗಿಯೇ ಹೇಳಿಕೊಂಡು ಓಡಾಡುತ್ತಾರೆ. ಹೆತ್ತವರು ಕೂಡ ನಮ್ಮ ಹುಡ್ಗನಿಗೆ ಹೆಣ್ಣು ಕೊಡೋಕೆ ಸಾಲಾಗಿ ನಿಂತಿದ್ದಾರೆ ಎಂಬ ಅಹಂನ ಮಾತಗಳನ್ನಾಡುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಇವತ್ತು ಕಾಲ ಬದಲಾಗಿದೆ. ಮದುವೆಯಾಗಲು ಹೆಣ್ಣು ಸಿಗದೆ ನಲ್ವತ್ತಾದರೂ ಮದುವೆಯಾಗದೆ ಉಳಿದು ಹೋದ ಅದೆಷ್ಟೋ ಹುಡುಗರಿದ್ದಾರೆ ಎನ್ನುವುದು ಅಷ್ಟೇ ಸತ್ಯ. ಇವತ್ತಿನ ಫ್ಯಾಷನ್ ಬದುಕಿನಲ್ಲಿ ವಂಚಕರನ್ನು ನಂಬುವಷ್ಟು ಬೇಗ ಪ್ರಾಮಾಣಿಕರನ್ನು ನಂಬುತ್ತಿಲ್ಲ. ಹೀಗಾಗಿಯೇ ಪ್ರೀತಿ ಹೆಸರಲ್ಲಿ ದೋಖಾಗಳು ಜಾಸ್ತಿ ಆಗುತ್ತಿವೆ.
ಪ್ರೀತಿಯಲ್ಲಿ ಗೆದ್ದವರು ದಾಂಪತ್ಯದಲ್ಲಿ ಸೋಲುವುದೇಕೆ?
ಕಾಲ ಚಕ್ರವೇ ಹಾಗೆ ಅದು ಸುತ್ತುತ್ತಲೇ ಇರುತ್ತದೆ. ಅದರ ಸುಳಿಯಲ್ಲಿ ಒಂದಷ್ಟು ಬದಲಾವಣೆಗಳಾಗುತ್ತಿವೆ. ಇವತ್ತು ಹೆಣ್ಣು ಮಕ್ಕಳು ಓದಿದ್ದಾರೆ. ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ. ಆದರೂ ಪ್ರೀತಿ ಮತ್ತು ಮದುವೆ ವಿಚಾರಕ್ಕೆ ಬಂದಾಗ ತುಂಬಾ ಹೆಣ್ಣುಮಕ್ಕಳು ಎಡವುತ್ತಿರುವುದು ಎದ್ದು ಕಾಣಿಸುತ್ತಿದೆ. ಪ್ರೀತಿಸಿ ಮದುವೆಯಾದರೂ ಒಂದೆರಡು ವರ್ಷದಲ್ಲಿ ಕಿತ್ತಾಡಿಕೊಂಡು ವಿಚ್ಚೇದನೆಗೆ ಅರ್ಜಿ ಹಾಕಿಕೊಂಡು ಪೊಲೀಸ್ ಸ್ಟೇಷನ್. ಕೋರ್ಟ್ ಗೆ ಅಲೆದಾಡಿಕೊಂಡು ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣಗಳು ಅನೇಕ ಇರಬಹುದು. ಆದರೆ ಪ್ರೀತಿಯಲ್ಲಿ ಮಾಡಿಕೊಂಡ ಎಡವಟ್ಟು ಕೂಡ ಇಲ್ಲಿ ಕಂದಾಯ ಕೇಳಿರುತ್ತದೆ.

ಒಂದು ಸುಂದರ ಬದುಕು ನಮ್ಮದಾಗ ಬೇಕಾದರೆ ಅಲ್ಲಿ ಪ್ರೀತಿ ಇರಬೇಕು ಮತ್ತು ಆ ಪ್ರೀತಿಗೆ ನಿಷ್ಠೆಯೂ ಬೇಕಾಗುತ್ತದೆ. ನಿಷ್ಠೆ ಇಲ್ಲದೆ ಹೋದರೆ ಪ್ರೀತಿ ಬಲಹೀನವಾಗಿ ಬಿಡುತ್ತದೆ. ನಿನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎನ್ನುತ್ತಲೇ ಪ್ರೀತಿಯ ನಾಟಕವಾಡಿ ಪಡೆಯಬೇಕಾಗಿದ್ದೆಲ್ಲವನ್ನು ಪಡೆದು ಮದುವೆಯ ವಿಚಾರ ಬಂದಾಗ ಕೊಲೆ ಮಾಡಿ ಎಸ್ಕೇಪ್ ಆದ ಪ್ರಕರಣಗಳು ಬೇಕಾದಷ್ಟಿವೆ. ಪ್ರೀತಿ ಹೆಸರಲ್ಲಿ ನಡೆಯುತ್ತಿರುವ ವಂಚನೆಗಳು ಇಂದಿನ ಸಮಾಜದಲ್ಲಿ ಪ್ರೀತಿ, ಪ್ರೇಮ ಎಂದ ತಕ್ಷಣ ಹೆತ್ತವರು ಬೆಚ್ಚಿ ಬೀಳುವಂತೆ ಮಾಡಿದೆ. ಪ್ರೀತಿ ಎನ್ನುವುದು ನಾಳಿನ ದಾಂಪತ್ಯದ ಬದುಕಿಗೆ ಅಚ್ಚುಕಟ್ಟಾದ ಮುನ್ನುಡಿಯಾಗಬೇಕು. ಆದರೆ ಅದು ಸಾಧ್ಯವಾಗದ ಕಾರಣದಿಂದಲೇ ಸುಖ ದಾಂಪತ್ಯ ಮರೀಚಿಕೆಯಾಗುತ್ತಿದೆ.
ಪ್ರೀತಿ ಸದಾ ಆಸರೆಯ ಕೊಡೆಯಾಗಬೇಕು
ಪ್ರೀತಿಯಲ್ಲಿದ್ದಷ್ಟು ದಿನವೂ ಒಬ್ಬರನೊಬ್ಬರು ಅರಿಯುವ, ನಂಬಿಕೆ, ಪ್ರಾಮಾಣಿಕತೆ ಗಟ್ಟಿಗೊಳಿಸುವ, ಕೊಟ್ಟು ತೆಗೆದುಕೊಳ್ಳುವ ಉಡುಗೊರೆಗಳಿಗಿಂತ ತಾವೇ ತಮ್ಮ ಬದುಕಿಗೆ ಉಡುಗೊರೆಯಾಗಿ ಉಳಿಯುವ, ನಾಳಿನ ದಾಂಪತ್ಯ ಜೀವನ ಸಾಗಿಸುವ ಬಾಳಿನ ಬಂಡಿಯಾಗಬೇಕು. ಅಷ್ಟೇ ಅಲ್ಲದೆ ತಮ್ಮಲ್ಲಿರುವ ದೌರ್ಬಲ್ಯಗಳನ್ನು ಗುರುತಿಸಿಕೊಂಡು ಅದನ್ನು ಹೊಸಕಿ ಹಾಕಿ ಮುಂದೆ ಸಾಗುವ ಬಾಳಿನ ಬಂಡಿಯ ಚಕ್ರಗಳಾಗಬೇಕು. ಆಗ ಮಾತ್ರ ಪ್ರೀತಿಸಿದಕ್ಕೆ ಸಾರ್ಥಕ್ಯ ಸಿಗುತ್ತದೆ. ದಾಂಪತ್ಯದ ಬದುಕಿಗೂ ಅರ್ಥ ಬರುತ್ತದೆ. ಅದು ಏನೇ ಇರಲಿ ಎಲ್ಲರ ಪ್ರೀತಿಯೂ ಆಸರೆಯ ಕೊಡೆಯಾಗಬೇಕೇ ವಿನಃ ಮಳೆ ಬಂದಾಗ ಹುಟ್ಟಿ ಸಾಯುವ ನಾಯಿಕೊಡೆಯಾಗ ಬಾರದಷ್ಟೆ.












Click it and Unblock the Notifications