ಯುಪಿ ಚುನಾವಣೆ: ಹಿಂದುಳಿದ ವರ್ಗದ ಮುಸ್ಲಿಮರ ಮತಕ್ಕೆ ಬಿಜೆಪಿ ಬಲೆ
ಲಕ್ನೋ, ನವೆಂಬರ್ 25: ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಚುನಾವಣೆಯು ಈಗಲೇ ಭಾರಿ ಕುತೂಹಲವನ್ನು ಉಂಟು ಮಾಡಿದೆ. ಸಮಾಜವಾದಿ ಪಕ್ಷ (ಎಸ್‌ಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಕಾಂಗ್ರೆಸ್ ಅಥವಾ ಎಐಎಂಐಎಂ ಪ್ರಚಾರ ನಡೆಸುತ್ತಿರುವ ನಡುವೆ, ಬಿಜೆಪಿ ಮಾತ್ರ ಬೇರೆಯೇ ತಂತ್ರಗಾರಿಕೆಯನ್ನು ನಡೆಸುತ್ತಿದೆ. ಬಿಜೆಪಿ ರಾಮ ಮಂದಿರದ ವಿಚಾರದಲ್ಲಿ ಹಿಂದೂಗಳ ಮತವು ದೊರಕುತ್ತದೆ ಎಂಬ ಭರವಸೆ ಹೊಂದಿದೆ. ಈ ಹಿನ್ನೆಲೆಯಿಂದಾಗಿ ಈಗ ಹಿಂದುಳಿದ ವರ್ಗದ ಮುಸ್ಲಿಮರ (ಪಸ್‌ಮಂದ ಮುಸ್ಲಿಮ್) ಮೇಲೆ ತಮ್ಮ ಚಿತ್ತವನ್ನು ನೆಟ್ಟಿದೆ.
ಬಿಜೆಪಿಯು ಈಗ ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಮತಕ್ಕಾಗಿ ಬಲೆ ಬೀಸುತ್ತಿದೆ. ನಿರಂತರವಾಗಿ ಬಹುಸಂಖ್ಯಾತರ ಧಾರ್ಮಿಕ ವಿಚಾರವನ್ನು ಮುಂದಿಟ್ಟುಕೊಂಡು ಪಕ್ಷವನ್ನು ಕಟ್ಟುತ್ತಾ ಬಂದಿರುವ ಬಿಜೆಪಿಯು ಕಾಲಕ್ಕೆ ತಕ್ಕೆ ಬದಲಾಗಲು ಮುಂದಾದಂತೆ ಕಾಣುತ್ತಿದೆ. ಬಿಜೆಪಿ ಸರ್ಕಾರವು ಮುಸ್ಲಿಮರಿಗಾಗಿ "ಕೌಶಲ್ಯಯುತ ಕೈ" (ಹೋನರ್ ಹಾತ್) ಎಂಬ ಕಲಾತ್ಮಕ ಶಿಬಿರವನ್ನು ಆಯೋಜನೆ ಮಾಡಿದೆ. ಮುಖ್ಯವಾಗಿ ಹಿಂದುಳಿದ ವರ್ಗದ ಮುಸ್ಲಿಮರು ಇರುವ ಪ್ರದೇಶವಾದ ಗೋರಾಕ್‌ಪುರ ಹಾಗೂ ಅಲಹಾಬಾದ್‌ನಲ್ಲಿ ಈ ಶಿಬಿರವನ್ನು ಆಯೋಜನೆ ಮಾಡಲಾಗಿದೆ.
ಇನ್ನು ಈ ರೀತಿಯಾಗಿ ಮುಸ್ಲಿಮರಿಗಾಗಿ ಮೇಳಗಳನ್ನು ನಡೆಸಿ ಅಲ್ಲಿ ಕುಶಲಕರ್ಮಿಗಳಿಗೆ ಉಚಿತವಾಗಿ ಮಳಿಗೆಗಳನ್ನು ಹಾಕಲು ಅವಕಾಶ ನೀಡಲಾಗುತ್ತಿದೆ. ಹಾಗೆಯೇ 1500 ರೂಪಾಯಿಗಳ ಆರ್ಥಿಕ ಸಹಾಯವನ್ನು ಕೂಡಾ ನೀಡಲಾಗುತ್ತಿದೆ. ಉತ್ತರ ಪ್ರದೇಶ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇದನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ಕನಿಷ್ಠ ನಾಲ್ಕು ಮಂದಿ ಹಿಂದುಳಿದ ವರ್ಗದ ಮುಸ್ಲಿಮರನ್ನಾದರೂ ರಾಜ್ಯ ಅಥವಾ ಕೇಂದ್ರ ಆಡಳಿತ ಮಂಡಳಿಗೆ ಅಥವಾ ಕಾರ್ಪೋರೇಷನ್‌ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಮದರಸಾ ಮಂಡಳಿಯ ಅಧ್ಯಕ್ಷರಾಗಿ ಡಾ ಇಫ್ತೆಕರ್ ಅಹ್ಮದ್ ಜಾವೇದ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಅಶ್ರಫ್ ಸೈಫಿ ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಅತೀಫ್ ರಶೀದ್‌ರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಮೂವರು ಹಿರಿಯ ಬಿಜೆಪಿ ನಾಯಕರುಗಳಾದ ಶಾನವಾಜ್ ಹುಸೇನ್, ದೇವೇಂದ್ರ ಪ್ರಧಾನ್ ಮತ್ತು ಅರ್ಜುನ್ ರಾಮ್ ಮೇಘವಾಲ್ ಈ ಹಿಂದುಳಿದ ವರ್ಗದ ಮುಸ್ಲಿಮರ ಬೆಂಬಲವನ್ನು ಪಡೆಯುವ ನಿಟ್ಟಿನಲ್ಲಿ ಯುಪಿಯ ಗ್ರಾಮೀಣ ಪ್ರದೇಶಗಳಿಗೆ ತೆರಳುತ್ತಿದ್ದಾರೆ.

ದೇಶದಲ್ಲಿ ಶೇಕಡ 80 ರಷ್ಟು ಪಸ್‌ಮಂದ ಮುಸ್ಲಿಮರು
1998 ರಲ್ಲಿ ಮಾಜಿ ಜನತಾ ದಳ (ಯುನೈಟೆಡ್) ನಾಯಕ ಅಲಿ ಅನ್ವಾರ್ ಅನ್ಸಾರಿ ಆಲ್ ಇಂಡಿಯಾ ಪಸ್‌ಮಂದ ಮುಸ್ಲಿಂ ಮಹಾಜ್ ಎಂಬುವುದನ್ನು ಸ್ಥಾಪನೆ ಮಾಡುವವರೆಗೂ ಈ ಪಸ್ಮಂಡ (ಹಿಂದುಳಿದ ವರ್ಗ) ಎಂಬುವುದು ರಾಜಕೀಯಕ್ಕೆ ಪರಿಚಯವಾಗಿರಲಿಲ್ಲ. ಪಸ್‌ಮಂದ ಮುಸ್ಲಿಂ ಎಂಬುವುದು ಮುಸ್ಲಿಮರಲ್ಲಿ ಹಿಂದುಳಿದ ವರ್ಗ ಆಗಿದೆ. 2005 ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್‌ರ ಜೆಡಿ (ಯು) ಗೆ ಬೆಂಬಲ ನೀಡಲು ಮುಂದಾದ ಪಸ್‌ಮಂದ ವಿಭಾಗವು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ತೊರೆಯಿತು. ಇದರಿಂದಾಗಿ ಲಾಲು ಪ್ರಸಾದ್ ಯಾದವ್ ಚುನಾವಣೆಯಲ್ಲಿ ಸೋಲು ಕಂಡರು. ಆದರೆ ಮುಸ್ಲಿಂ-ಯಾದವ್ (ಎಂವೈ) ನಲ್ಲಿ ಇರುವ ಬಿರುಕು ಈಗಲೂ ಇದೆ. ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ದೇಶದಲ್ಲಿ ಇರುವ ಮುಸ್ಲಿಮರ ಪೈಕಿ ಶೇಕಡ 80 ರಷ್ಟು ಪಸ್‌ಮಂದ ಮುಸ್ಲಿ ವಿಭಾಗವೇ ಆಗಿದೆ, ಅಂದರೆ ಹಿಂದುಳಿದ ವರ್ಗದ ಮುಸ್ಲಿಮರೇ ಆಗಿದ್ದಾರೆ. ಮುಖ್ಯವಾಗಿ ಮರದ ಕೆಲಸ, ಬಟ್ಟೆ ನೇಯ್ಗೆ, ಸ್ವಚ್ಛತೆಯ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಹಿಂದುಳಿದ ವರ್ಗದ ಮುಸ್ಲಿಮರ ಪ್ರಾಮುಖ್ಯತೆ
ಮುಸ್ಲಿಮರಲ್ಲಿ ನಾಯಕತ್ವದಲ್ಲಿ ಪ್ರಸ್ತುತ ಹೆಚ್ಚಾಗಿ ಸಯ್ಯದ್, ಶೇಖ್, ಪಠಾಣ್, ಮಿರ್ಜಾ ಎಂಬ ಉಪನಾಮಗಳ ಜನರು ಇದ್ದಾರೆ. ಆದರೆ ಈ ಪಸ್‌ಮಂದ್‌ಗಳು ನಿಧಾನವಾಗಿ ತಮ್ಮ ಸ್ಥಾನವನ್ನು ಪಡೆದುಕೊಳ್ಳುವ ಯತ್ನವನ್ನು ಮಾಡುತ್ತಿದ್ದಾರೆ. ಈ ನಡುವೆ ಗೋರಾಕ್‌ಪುರ, ವಾರಾಣಾಸಿಯಲ್ಲಿ ಪಸ್‌ಮಂದಾಸ್‌ಗಳ ಸಭೆಯನ್ನು ಆಯೋಜನೆ ಮಾಡಲಾಗುತ್ತಿದೆ. ಪಸ್‌ಮಂದಾಸ್‌ಗಳ ರಾಜಕೀಯ ಬೇಡಿಕೆಗಳ ಬಗ್ಗೆ ಮಾತನಾಡಲಾಗುತ್ತಿದೆ. ಇನ್ನು ಕೇಂದ್ರ ಸರ್ಕಾರವು ಜಾತಿ ಗಣತಿ ವಿಚಾರದಲ್ಲಿ ಮತ್ತೆ ಚಿಂತನೆ ಮಾಡಬೇಕು ಎಂದು ಈ ಸಭೆಯಲ್ಲಿ ಆಗ್ರಹ ಮಾಡಲಾಗಿದೆ. ಹಾಗೆಯೇ ಪಸ್‌ಮಂದಾಸ್ ಅನ್ನು ಒಂದು ವರ್ಗವಾಗಿ ನೋಡಬೇಕು ಹಾಗೂ ಪಸ್‌ಮಂದ ಕಲ್ಯಾಣ ಪ್ರಾಧಿಕಾರವನ್ನು ಸ್ಥಾಪನೆ ಮಾಡಬೇಕು ಎಂದು ಕೂಡಾ ಆಗ್ರಹ ಮಾಡಲಾಗಿದೆ. ಈ ನಡುವೆ ಪಸ್‌ಮಂದ್ ಐತಿಹಾಸಿಕ ಪ್ರತಿಮೆಗಳ ಕಲಾತ್ಮಕ ಕಾರ್ಯ ನಿರ್ವಹಣೆ ಮಾಡುತ್ತಿದೆ. ಪಸ್‌ಮಂದ್‌ಗಳ ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಕಾವ್ಯವನ್ನು ಬರೆಯಲಾಗಿದೆ. ಯುಪಿಯಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಪಸ್‌ಮಂದ ಸಮುದಾಯದಲ್ಲಿ ಬದಲಾವಣೆ ಆಗಲಿದೆಯೇ ಎಂಬುವುದನ್ನು ನಾವು ಕಾದು ನೋಡಬೇಕಾಗಿದೆ.

ರಾಜಕೀಯ ಟ್ರೆಂಡ್ ಬದಲಾವಣೆ
ಕಠೋರವಾದ ಹಿಂದುತ್ವವನ್ನು ಪಾಲನೆ ಮಾಡುತ್ತಿರುವ ಬಿಜೆಪಿಯು ಈ ಚುನಾವಣೆಗೂ ಮುನ್ನ ಕೊಂಚ ಮೃದು ಹಿಂದುತ್ವದತ್ತ ವಾಲಿದೆ. ರಾಜಕೀಯ ಟ್ರೆಂಡ್ ಈಗ ಬದಲಾಗಿದೆ. ಕೇಸರಿ ಪಕ್ಷದ ಕಾರ್ಯತಂತ್ರವು ಬದಲಾಗುತ್ತಿದೆ. ಬಿಜೆಪಿಯು ಈ ವರ್ಷ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ನಡೆದ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಒಂಬತ್ತು ಹಾಗೂ ಅಸ್ಸಾಂನಲ್ಲಿ ಎಂಟು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೇರಳದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಎಂಟು ಮಂದಿಗೆ ಬಿಜೆಪಿಯು ಟಿಕೆಟ್ ಅನ್ನು ನೀಡಿತ್ತು. ಆರು ಮಂದಿ ಕ್ರೈಸ್ತರು ಆಗಿದ್ದರೆ, ಇಬ್ಬರು ಮುಸ್ಲಿಮರು ಆಗಿದ್ದಾರೆ. ಹಿಂದೂಗಳೇ ಮೊದಲು ಎಂಬ ತಮ್ಮ ಸಿದ್ಧಾಂತವನ್ನು ಚುನಾವಣೆ ವಿಚಾರಕ್ಕೆ ಬಂದಾಗ ಕೊಂಚ ಬದಿಗೆ ಸರಿಸುತ್ತಿರುವ ಬಿಜೆಪಿ ಅಲ್ಪಸಂಖ್ಯಾತರನ್ನು ಕಣಕ್ಕೆ ಇಳಿಸಿದರೆ ಎಲ್ಲಿ ಗೆಲವು ಸಾಧಿಸಲು ಸಾಧ್ಯವೋ ಅಲ್ಲಿ ಅಲ್ಪಸಂಖ್ಯಾತರನ್ನೇ ಸ್ಪರ್ಧೆಗೆ ಇಳಿಸುವ ಕಾರ್ಯತಂತ್ರ ಮಾಡುತ್ತಿದೆ.

ಆದರೆ ಬಿಜೆಪಿ ಮಾಡುತ್ತಿರುವ ತಪ್ಪೇನು?
ಉತ್ತರ ಪ್ರದೇಶದಲ್ಲಿ ಅಂದಾಜು 18-20 ಪ್ರತಿಶತದಷ್ಟು ಮುಸ್ಲಿಂ ಜನಸಂಖ್ಯೆಯು ಪಸ್‌ಮಂದ ಸಮುದಾಯದವರು ಆಗಿದ್ದಾರೆ. ದಾದ್ರಿಯ ಅಖ್ಲಾಕ್ ಖಾನ್‌ನಿಂದ ಹಿಡಿದು ಅಲ್ವಾರ್‌ನಲ್ಲಿ ಪೆಹ್ಲು ಖಾನ್ ಮತ್ತು ರಾಂಚಿಯ ತಬ್ರೇಜ್ ಅನ್ಸಾರಿ, ತೀವ್ರಗಾಮಿ ಬಲಪಂಥೀಯ ಗುಂಪುಗಳ ಕೈಯಿಂದ ಗುಂಪು ಹತ್ಯೆಗೆ ಬಲಿಯಾದವರೆಲ್ಲರೂ ಪಸ್‌ಮಂದ್ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ. ಇನ್ನು ಲವ್ ಜಿಹಾದ್ ಹೆಸರಿನಲ್ಲಿಯೂ ಪಸ್‌ಮಂದಸ್ ಸಮುದಾಯದ ಜನರನ್ನು ಈಗಾಗಲೇ ಬಿಜೆಪಿ ಗುರಿಯಾಗಿಸಿಕೊಂಡಿದೆ. ಘರ್ ವಾಪಸಿ, ಗುರು ರಕ್ಷಾ ಹೆಸರಿನಲ್ಲಿ ಬಿಜೆಪಿಯು ಮುಸ್ಲಿ ಸಮುದಾಯವನ್ನು ಗುರಿಯಾಗಿಸುವ ಸಂದರ್ಭದಲ್ಲಿ ಪಸ್‌ಮಂದಸ್ ಸಮುದಾಯದ ಮೇಲೆ ದಾಳಿ ನಡೆಸಿದೆ. ಆದರಿಂದಾಗಿ ಮುಂದಿನ ಚುನಾವಣೆಯಲ್ಲಿ ಪಸ್‌ಮಂದ ಸಮುದಾಯದ ಜನರಿಗೆ ಬಿಜೆಪಿಯು ಸಹಜವಾದ ಆಯ್ಕೆ ಆಗಲಾರದು.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications