ಒಂದೂವರೆ ವರ್ಷದಲ್ಲಿ 12 ರಾಜ್ಯಗಳಲ್ಲಿ ಚುನಾವಣೆ; ಬಿಜೆಪಿ ಆಡಳಿತದ ರಾಜ್ಯಗಳ ಸಂಖ್ಯೆ ಹೆಚ್ಚುತ್ತಾ?
ಈ ವರ್ಷ ಉತ್ತರ ಪ್ರದೇಶ ಸೇರಿ ಪಂಚರಾಜ್ಯಗಳ ಚುನಾವಣೆ ಬಹಳ ಸದ್ದು ಮಾಡಿತು, ಗಮನ ಸೆಳೆಯಿತು. ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಕಾಂಗ್ರೆಸ್ ಸ್ವತಂತ್ರ ಅಧಿಕಾರದ ಒಂದು ರಾಜ್ಯವನ್ನು ಕಳೆದುಕೊಂಡಿತು. ಈ ವರ್ಷ ಇನ್ನೂ 2-3 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.
ಇನ್ನೊಂದೂವರೆ ವರ್ಷದಲ್ಲಿ ಒಂದೂವರೆ ಡಜನ್ ರಾಜ್ಯಗಳಲ್ಲಿ ಚುನಾವಣೆ ನಡೆಯುವುದು ಬಾಕಿ ಇದೆ. 2024ರಲ್ಲಿ ಲೋಕಸಭಾ ಚುನಾವಣೆ ಇದ್ದು ಆ ವರ್ಷವೂ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಇವೆ. ಇನ್ನೆರಡು ವರ್ಷದಲ್ಲಿ ಭಾರತದ ಬಹುತೇಕ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ.
ಕಾಂಗ್ರೆಸ್ ಸ್ವತಂತ್ರವಾಗಿ ಆಡಳಿತದಲ್ಲಿರುವುದು ಎರಡೇ ರಾಜ್ಯಗಳಲ್ಲಿ ಮಾತ್ರ. ಆ ರಾಜ್ಯಗಳ ಚುನಾವಣೆಗಳೂ ಇದೇ ಅವಧಿಯಲ್ಲಿ ನಡೆಯಲಿವೆ. ಕಾಂಗ್ರೆಸ್ ಪಕ್ಷ ಆ ರಾಜ್ಯಗಳಲ್ಲಿ ಸೋತರೆ ಹಿಂದೆ ಅಮಿತ್ ಶಾ ಮತ್ತು ನರೇಂದ್ರ ಮೋದಿ ಮಾಡಿದ ಕಾಂಗ್ರೆಸ್ ನಿರ್ನಾಮದ ಶಪಥ ಈಡೇರಿದಂತಾಗುತ್ತದೆ.
ಆದರೆ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆಡಳಿತವಿರೋಧಿ ಅಲೆ ಎದ್ದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಮೈ ಕೊಡವಿ ಏಳುವುದು ನಿಶ್ಚಿತ. ಕರ್ನಾಟಕ, ಮಧ್ಯಪ್ರದೇಶ, ಹರ್ಯಾಣ ಮತ್ತು ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಕಾಂಗ್ರೆಸ್ ಮರಳಿ ಅಧಿಕಾರ ಪಡೆಯುವ ಸಾಧ್ಯತೆಗಳೂ ಉಂಟು.

2022ರಲ್ಲಿ ನಡೆಯಲಿರುವ ಚುನಾವಣೆಗಳು
ಗುಜರಾತ್ ಮತ್ತು ಹಿಮಾಚಲಪ್ರದೇಶದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೂ ಈ ವರ್ಷವೇ ಚುನಾವಣೆ ನಡೆಯಬಹುದು ಎಂಬ ಸುದ್ದಿ ಇದೆ. ಅಲ್ಲಿನ ಭದ್ರತಾ ಪರಿಸ್ಥಿತಿ ಮತ್ತು ಜನರ ಇಂಗಿತ ನೋಡಿಕೊಂಡು ಚುನಾವಣೆಯ ಸಮಯ ನಿಗದಿ ಮಾಡುವ ಸಾಧ್ಯತೆ ಇದೆ. ಕಣಿವೆ ರಾಜ್ಯದಲ್ಲಿ ಸದ್ಯಕ್ಕೆ ರಾಷ್ಟ್ರಪತಿ ಆಳ್ವಿಕೆ ಇದೆ.
ಇನ್ನು, ಹಿಮಾಚಲಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈ ರಾಜ್ಯಗಳಿಗೆ ಚುನಾವಣೆಯ ದಿನಾಂಕಗಳನ್ನು ಆಯೋಗ ಇನ್ನೂ ಘೋಷಣೆ ಮಾಡಿಲ್ಲ.

2023ರಲ್ಲಿ ನಡೆಯಲಿರುವ ಚುನಾವಣೆಗಳು
1) ತ್ರಿಪುರಾ
2) ಮೇಘಾಲಯ
3) ನಾಗಾಲ್ಯಾಂಡ್
4) ಕರ್ನಾಟಕ
5) ಛತ್ತೀಸ್‌ಗಡ
6) ಮಧ್ಯಪ್ರದೇಶ
7) ಮಿಜೋರಾಂ
8) ರಾಜಸ್ಥಾನ
9) ತೆಲಂಗಾಣ
ಮುಂದಿನ ವರ್ಷಾರಂಭದಲ್ಲಿ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಚುನಾವಣೆ ನಡೆದರೆ, ಕೊನೆಯಲ್ಲಿ ಛತ್ತೀಸ್‌ಗಡ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ಚುನಾವಣೆಗಳು ನಡೆಯುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ವರ್ಷದ ಮಧ್ಯ ಭಾಗದಲ್ಲಿ ಚುನಾವಣೆ ನಡೆಯಬಹುದು.
ಮುಂದಿನ ವರ್ಷ ಚುನಾವಣೆ ಎದುರಿಸುತ್ತಿರುವ ಈ ಒಂಬತ್ತು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಐದು ರಾಜ್ಯಗಳಲ್ಲಿ. ಕಾಂಗ್ರೆಸ್ ಎರಡು ರಾಜ್ಯಗಳಲ್ಲಿ ಅಧಿಕಾರ ಹೊಂದಿದೆ.

2024ರಲ್ಲಿ
1) ಆಂಧ್ರಪ್ರದೇಶ
2) ಅರುಣಾಚಲಪ್ರದೇಶ
3) ಒಡಿಶಾ
4) ಸಿಕ್ಕಿಂ
5) ಹರ್ಯಾಣ
6) ಮಹಾರಾಷ್ಟ್ರ
7) ಜಾರ್ಖಂಡ್
ಈ ವರ್ಷದಂದು ಲೋಕಸಭಾ ಚುನಾವಣೆ ನಡೆಯುವುದಿದೆ. ಆ ಚುನಾವಣೆ ಜೊತೆಗೆ ಏಳು ರಾಜ್ಯಗಳ ವಿಧಾನಸಭಾ ಚುನಾವಣೆಗಳೂ ಒಟ್ಟಿಗೆ ನಡೆದರೂ ನಡೆಯಬಹುದು. ಈ ಏಳು ರಾಜ್ಯಗಳಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಅರುಣಾಚಲ ಪ್ರದೇಶ, ಹರ್ಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಜೆಪಿ ಆಳ್ವಿಕೆ ಇದೆ. ಜಾರ್ಖಂಡ್ ರಾಜ್ಯದಲ್ಲಿ ಜೆಎಂಎಂ ಜೊತೆ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ.
2024ರೊಳಗೆ ಚುನಾವಣೆ ನಡೆಯಲಿರುವ ಒಟ್ಟು 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇರುವುದು 10 ರಾಜ್ಯಗಳಲ್ಲಿ. ಜಾರ್ಖಂಡ್, ಛತ್ತೀಸ್‌ಗಡ, ರಾಜಸ್ಥಾನ, ಮಿಜೋರಾಂ ರಾಜ್ಯಗಳನ್ನು ಮತ್ತೆ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಗುರಿಯಲ್ಲಿ ಬಿಜೆಪಿ ಇದೆ. ಕಾಂಗ್ರೆಸ್ ಪಕ್ಷಕ್ಕೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಚಿಂತೆ ಇದೆ.

ಬಿಜೆಪಿ, ಕಾಂಗ್ರೆಸ್ ಅಧಿಕಾರದಲ್ಲಿರುವುದೆಷ್ಟು?
ದೇಶದಲ್ಲಿ ಒಟ್ಟು 31 ರಾಜ್ಯಗಳ ವಿಧಾನಸಭೆ ಇದೆ. ಇದರಲ್ಲಿ ಬಿಜೆಪಿ ಸ್ವತಂತ್ರವಾಗಿ 12 ರಾಜ್ಯಗಳಲ್ಲಿ ಅಧಿಕಾರ ಹೊಂದಿದೆ. ಮೈತ್ರಿಕೂಟದ ಭಾಗವಾಗಿ ಬಿಜೆಪಿ ಇನ್ನೂ ಆರು ರಾಜ್ಯಗಳಲ್ಲಿ ಆಳ್ವಿಕೆ ನಡೆಸುತ್ತಿದೆ.
ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಸ್ವತಂತ್ರವಾಗಿ ಆಡಳಿತ ನಡೆಸುತ್ತಿರುವ ರಾಜ್ಯಗಳು ಎರಡು ಮಾತ್ರ. ರಾಜಸ್ಥಾನ ಮತ್ತು ಛತ್ತೀಸ್‌ಗಡದಲ್ಲಿ ಮಾತ್ರ ಕಾಂಗ್ರೆಸ್ ಸ್ವಂತ ಬಲದಲ್ಲಿ ಅಧಿಕಾರ ಹೊಂದಿದೆ. ತಮಿಳುನಾಡು ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಮೈತ್ರಿಕೂಟದ ಭಾಗವಾಗಿ ಇದೆ.
ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಆಡಳಿತ ಇರುವ ಪಕ್ಷಗಳು ಕೇವಲ ಮೂರು ಮಾತ್ರ. ಬಿಜೆಪಿ, ಕಾಂಗ್ರೆಸ್ ಬಿಟ್ಟರೆ ಆಮ್ ಆದ್ಮಿ ಮಾತ್ರ ಈ ಹಂತಕ್ಕೆ ಬೆಳೆದಿದೆ. ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಎಎಪಿ ಸ್ವಂತವಾಗಿ ಆಡಳಿತ ನಡೆಸಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications