ವರ್ಷದ ವಿಶೇಷ; ಕೋವಿಡ್, ಮಹಾಮಳೆಯಲ್ಲಿ ಕೊಚ್ಚಿ ಹೋದ ಕೊಡಗಿನ ನೆಮ್ಮದಿ
ಕೊಡಗು ಜಿಲ್ಲೆಯ ಜನರಿಗೆ 2020 ಗಾಯದ ಮೇಲೆ ಬರೆ ಎಳೆದ ವರ್ಷ ಎಂದೇ ಹೇಳಬಹುದು. ಪ್ರತಿ ಮಳೆಗಾಲವನ್ನು ಇಲ್ಲಿನ ಮಂದಿ ಒಂದಷ್ಟು ಸಿದ್ಧತೆಗಳೊಂದಿಗೆ ಸ್ವಾಗತಿಸುತ್ತಿದ್ದರು. ಆದರೆ, ಕೋವಿಡ್ ಹೊಡೆತದ ಜೊತೆಗೆ ಮಹಾಮಳೆ ಎರಡು ಸೇರಿ ಜನರನ್ನು ಹಿಂಡಿ ಹಿಪ್ಪೆ ಮಾಡಿತು. ಈ ಹೊಡೆತಗಳಿಂದ ಚೇತರಿಸಿಕೊಂಡು ಬದುಕು ಕಟ್ಟಿಕೊಳ್ಳುವುದೇ ಜನರಿಗೆ ಸವಾಲು ಆಗಿದೆ.
ಹಿಂದೆ ಮಳೆಗಾಲ ಎನ್ನುವುದು ಕೊಡಗಿಗೆ ವರವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಳೆಗಾಲ ಶುರುವಾಯಿ ಎಂದರೆ ಸಾಕು ಜನಕ್ಕೆ ನಡುಕ ಶುರುವಾಗಿ ಬಿಡುತ್ತದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಎರಡು ವರ್ಷಗಳ ಹಿಂದಿನ ಆ ಭಯಾನಕ ಮಳೆಗಾಲ ನೆನಪಾಗುತ್ತದೆ.
ಅಲ್ಲಿ ತನಕ ಮಳೆಗಾಲದ ಕರಾಳ ದಿನಗಳನ್ನು ನೋಡದವರಿಗೆ ಅದು ಹೊಸ ಅನುಭವ ಮತ್ತು ಸಂಕಷ್ಟವನ್ನು ತಂದೊಡ್ಡಿತು. 2018ರ ಮಳೆಗಾಲದ ಆರಂಭದ ತನಕ ಕೊಡಗು ಸುಭೀಕ್ಷೆಯಿಂದ ಇತ್ತು. ಪ್ರವಾಸೋದ್ಯಮ ಗರಿಗೆದರಿತ್ತು. ದೂರದ ಊರುಗಳಿಂದ ಪ್ರವಾಸಿಗರು ಜಿಲ್ಲೆಯತ್ತ ತಂಡೋಪ ತಂಡವಾಗಿ ಬರುತ್ತಿದ್ದರು.
ಇದರಿಂದಾಗಿ ವ್ಯಾಪಾರ-ವಹಿವಾಟು ಉತ್ತಮವಾಗಿ ನಡೆಯುತ್ತಿದ್ದವು. ಹೋಂ ಸ್ಟೇ, ರೆಸಾರ್ಟ್, ಹೋಟೆಲ್‍ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ಜನ ಜೀವನ ಇದೇ ರೀತಿ ನಡೆಯುತ್ತಾ ಸಾಗುತ್ತದೆ. ಪ್ರವಾಸಿಗರು ಜಿಲ್ಲೆಗೆ ಇದೇ ರೀತಿ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಹಲವರು ಬಂಡವಾಳ ಸುರಿದು ವ್ಯಾಪಾರ ವಹಿವಾಟು ಆರಂಭಿಸಿದ್ದರು. ಇದಕ್ಕಾಗಿ ಮಾಡಿದ ಸಾಲವನ್ನು ಮುಂದಿನ ದಿನಗಳಲ್ಲಿ ತೀರಿಸಿದರಾಯಿತು ಎಂಬ ಧೈರ್ಯದಲ್ಲಿದ್ದರು.

ಸ್ವರ್ಗವಾಗಿದ್ದ ಕೊಡಗು ನರಕವಾಯಿತು
ಜಿಲ್ಲೆಯ ಜನರ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗು ಮಾಡಿದ್ದು 2018ರ ಮಳೆಗಾಲ. ಆಗಸ್ಟ್ ತಿಂಗಳಲ್ಲಿ ಸುರಿದ ಮಹಾಮಳೆ ಕೊಡಗಿನಲ್ಲಿ ನಡುಕ ಹುಟ್ಟಿಸಿತ್ತು. ಇದ್ದಕ್ಕಿದ್ದಂತೆ ಮಡಿಕೇರಿ ಮತ್ತು ಸೋಮವಾರಪೇಟೆಯ ಹಲವು ಭಾಗಗಳಲ್ಲಿ ಭೂಕುಸಿತ ಆರಂಭವಾಯಿತು. ನೋಡ ನೋಡುತ್ತಿದ್ದಂತೆಯೇ ಗುಡ್ಡಗಳು ಕುಸಿಯಲಾರಂಭಿಸಿದವು. ಪ್ರಾಣ ಹಾನಿಯೊಂದಿಗೆ ಮನೆ, ತೋಟಗಳೆಲ್ಲವೂ ಮಣ್ಣುಪಾಲಾದವು. ರಸ್ತೆ ಸಂಪರ್ಕವೇ ಇಲ್ಲದಾಯಿತು. ಪರಿಣಾಮ ಸ್ವರ್ಗವಾಗಿದ್ದ ಕೊಡಗು ಅರ್ಥಾತ್ ನರಕವಾಗಿ ಹೋಯಿತು. ಕೊಡಗಿನಲ್ಲಿ ಸಂಭವಿಸಿದ ಭೂಕುಸಿತ ಭಾರೀ ಸುದ್ದಿಯಾಗಿ ಪ್ರವಾಸಿಗರು ಇತ್ತ ಬರಲು ಭಯಪಡಲಾರಂಭಿಸಿದರು.

ಕೊಡಗಿನತ್ತ ಮುಖ ಮಾಡಲಿಲ್ಲ
ಕ್ರಮೇಣ ರಸ್ತೆ ಸಂಪರ್ಕ ಸುಧಾರಿಸಿತ್ತಾದರೂ ಪ್ರವಾಸಿಗರು ಮಾತ್ರ ಇತ್ತ ಸುಳಿಯಲೇ ಇಲ್ಲ. ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಡಳಿತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಹೆಚ್ಚಿನ ಪ್ರಯೋಜನವಾಗಲಿಲ್ಲ. 2018ರ ಮಳೆಗಾಲದ ಹೊಡೆತದಿಂದ ತತ್ತರಿಸಿದ ಜನಕ್ಕೆ 2019 ಆಶಾದಾಯಕವಾಗಲೇ ಇಲ್ಲ. ಬೇಸಿಗೆಯಲ್ಲಿ ನಡೆಯುತ್ತಿದ್ದ ಕ್ರೀಡಾಕೂಟಗಳು ಇನ್ನಿತರೆ ಸಮಾರಂಭಗಳು ನಡೆಯಲಿಲ್ಲ. ಆ ವರ್ಷದ ಮಳೆಗಾಲವನ್ನು ಭಯದಿಂದಲೇ ಎದುರು ನೋಡುತ್ತಿರುವಾಗಲೇ ವೀರಾಜಪೇಟೆ ತಾಲೂಕಿನ ತೋರದಲ್ಲಿ ಭೂಕುಸಿತ ಸಂಭವಿಸಿ ಪ್ರಾಣ ಕಳೆದುಕೊಳ್ಳುವಂತಾಯಿತು.

ಹೊಸವರ್ಷ ಸ್ವಾಗತಿಸಿದವರಿಗೆ ನಿರಾಸೆ
ಎಲ್ಲಾ ಕಷ್ಟ-ನಷ್ಟಗಳ ನಡುವೆಯೂ 2020ರ ಹೊಸವರ್ಷವನ್ನು ಇಲ್ಲಿನ ಜನ ಖುಷಿಯಿಂದಲೇ ಸ್ವಾಗತಿಸಿದ್ದರು. ಸಾಮಾನ್ಯವಾಗಿ ಹೊಸವರ್ಷವನ್ನು ಹೆಚ್ಚಿನ ಜನ ಕೊಡಗಿನಲ್ಲಿ ಆಚರಿಸಲು ಇಷ್ಟಪಡುತ್ತಾರೆ. ಆದರೆ, ವರ್ಷದ ಆರಂಭದಲ್ಲಿ ಹೆಚ್ಚಿನ ಪ್ರವಾಸಿಗರು ಕೊಡಗಿನತ್ತ ಬಂದಿರಲಿಲ್ಲ. ಒಂದಷ್ಟು ಪ್ರವಾಸಿಗರು ಹೋಂ ಸ್ಟೇ, ರೆಸಾರ್ಟ್‍ಗಳಲ್ಲಿ ವಾಸ್ತವ್ಯ ಹೂಡಿ ವರ್ಷಾಚರಣೆ ಮಾಡಿದರು. ಬಳಿಕ ನಿಧಾನವಾಗಿ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದೆ ಎನ್ನುವಾಗಲೇ ಕೋವಿಡ್ ಹೊಡೆತ ಬಿತ್ತು.

ಐವರನ್ನು ಬಲಿ ಪಡೆದ ಮಹಾಮಳೆ
ಬೇಸಿಗೆಯನ್ನು ಕೋವಿಡ್ ಭೀತಿಯಲ್ಲಿ ಕಳೆದ ಜನಕ್ಕೆ ಜೂನ್ ಆರಂಭವಾಗುತ್ತಿದ್ದಂತೆಯೇ ಮತ್ತೆ ಮಳೆಗಾಲದ ಭಯ ಶುರುವಾಯಿತು. ಆದರೆ, ಆಗಸ್ಟ್ ವೇಳೆಗೆ ಮಳೆ ಮತ್ತೆ ರಭಸದಿಂದ ಸುರಿಯಲಾರಂಭಿಸಿತು. ಒಂದು ತಿಂಗಳ ಅವಧಿಯಲ್ಲಿ ಸುರಿಯ ಬೇಕಾದ ಮಳೆ ಒಂದೇ ದಿನದಲ್ಲಿ ಸುರಿಯಿತು.
ಆಗಸ್ಟ್ 5 ರಿಂದ 6ರೊಳಗೆ ಒಂದೇ ದಿನ ಭಾಗಮಂಡಲ ವ್ಯಾಪ್ತಿಯಲ್ಲಿ ದಾಖಲೆಯ 486 ಮಿ. ಮೀ. ಮಳೆ ಸುರಿಯಿತು. ಪರಿಣಾಮ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿರುವ ಗಿರಿಬೆಟ್ಟ ಕಿ. ಮೀ. ಗಟ್ಟಲೆ ಕುಸಿಯಿತು. ತಲಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣಚಾರ್ ಮತ್ತು ಅವರ ಪತ್ನಿ ಶಾಂತ, ಸಹೋದರ ಆನಂದ ತೀರ್ಥ, ಸಹಾಯಕ ಅರ್ಚಕರಾದ ಶ್ರೀನಿವಾಸ್ ಪಡ್ಡಿಲಾಯ ಮತ್ತು ರವಿಕಿರಣ್ ಎಂಬುವರು ಭೂಸಮಾಧಿಯಾದರಲ್ಲದೆ, ದನಕರುಗಳು ಕೂಡ ಪ್ರಾಣ ಕಳೆದುಕೊಂಡವು.

ಪೂಜಾ ಕಾರ್ಯ ಸ್ಥಗಿತ
ನಿರಂತರ ಕಾರ್ಯಾಚರಣೆಯಿಂದ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ಟಿ. ಎಸ್. ನಾರಾಯಣಾಚಾರ್ ಅವರ ಹಿರಿಯ ಸೋದರ ಆನಂದ ತೀರ್ಥ ಸ್ವಾಮೀಜಿ, ಸಹಾಯಕ ಅರ್ಚಕ ರವಿಕಿರಣ್ ಅವರುಗಳ ಮೃತ ಶರೀರ ಲಭಿಸಿತ್ತು. ಉಳಿದಂತೆ ಶಾಂತಾ ಆಚಾರ್ ಹಾಗೂ ಶ್ರೀನಿವಾಸ್ ಪಡ್ಡಿಲಾಯ ಅವರ ಶವಕ್ಕಾಗಿ ಸುಮಾರು ಹದಿನೈದು ದಿನಗಳ ಕಾಲ ಶೋಧ ನಡೆಸಿದರೂ ಫಲಕಾರಿಯಾಗದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಈ ಘಟನೆಯಿಂದಾಗಿ ಸುಮಾರು ಒಂದು ವಾರಗಳ ಕಾಲ ತಲಕಾವೇರಿಯಲ್ಲಿ ಪೂಜಾ ಕೈಂಕರ್ಯ ಸ್ಥಗಿತಗೊಂಡಿತ್ತು. ಬಳಿಕ ತಲಕಾವೇರಿ ದೇವಾಲಯದಲ್ಲಿ ಕ್ಷೇತ್ರದ ತಂತ್ರಿಯವರಾದ ಎಚ್ಚಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಮತ್ತು ತಂಡದಿಂದ ಮತ್ತೆ ಪೂಜೆ ಆರಂಭಿಸಲಾಯಿತು.

304 ಮನೆಗಳಿಗೆ ಹಾನಿ
ಇನ್ನು ಈ ಬಾರಿಯ ಮಳೆಯಿಂದಾಗಿ ಕೊಡಗಿನಲ್ಲಿ ಮನೆ, ತೋಟ, ಗದ್ದೆಗಳಿಗೆ ಸಾಕಷ್ಟು ಹಾನಿಯಾಗಿದೆ. ಬಹಳಷ್ಟು ಅನಾಹುತಗಳು ಸಂಭವಿಸಿವೆ. ಮೂವರು ಪ್ರಾಣ ಕಳೆದುಕೊಂಡಿದ್ದಾರೆ. 16 ಜಾನುವಾರು ಮೃತಪಟ್ಟಿವೆ. ಕೃಷಿ ಬೆಳೆ 3200 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದ್ದರೆ, ತೋಟಗಾರಿಕೆ ಬೆಳೆ ಹಾನಿ ವಿಸ್ತೀರ್ಣ 32500 ಹೆಕ್ಟೇರ್ ಆಗಿದೆ. ಇದಲ್ಲದೆ, ಮಳೆ ಸುರಿದು ಪ್ರವಾಹ ಬಂದು ಮಡಿಕೇರಿ 65, ಸೋಮವಾರಪೇಟೆ 133, ವಿರಾಜಪೇಟೆ 106 ಹೀಗೆ ಒಟ್ಟು 304 ಮನೆಗಳಿಗೆ ಹಾನಿಯಾಗಿತ್ತು.
ರಾಜ್ಯ ಹೆದ್ದಾರಿ 35.80 ಕಿ. ಮೀ, ಜಿಲ್ಲಾ ಮುಖ್ಯ ರಸ್ತೆಗಳು 26.78 ಕಿ. ಮೀ, ಗ್ರಾಮೀಣ ರಸ್ತೆಗಳು 260.37 ಕಿ. ಮೀ., ನಗರ ಪ್ರದೇಶದ ರಸ್ತೆಗಳು 47 ಕಿ. ಮೀ., ಸೇತುವೆ, ಕಲ್ವರ್ಟ್ ಗಳು 20, ವಿದ್ಯುತ್ ಕಂಬಗಳು 2012, ವಿದ್ಯುತ್ ಪೂರೈಕೆ ಲೈನ್ 25650 ಕಿ. ಮೀ. ಟ್ರಾನ್ಸ್ ಫಾರ್ಮರ್ ಗಳು 75, ಶಾಲಾ ಕಟ್ಟಡಗಳು 74, ಅಂಗನವಾಡಿಗಳು 13, ಸಮುದಾಯ ಭವನಗಳು 1, ಸಣ್ಣ ನೀರಾವರಿ ಕೆರೆಗಳು 32, ನೀರು ಪೂರೈಕೆ ಮತ್ತು ನೈರ್ಮಲ್ಯ ರಚನೆಗಳು 48, ತಡೆಗೋಡೆಗಳು 18 ಹಾಗೂ 1 ಸರ್ಕಾರಿ ಕಟ್ಟಡಕ್ಕೆ ಹಾನಿಯಾಗಿದೆ. ಮಳೆಯಿಂದ ಜಿಲ್ಲೆಯ 60 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜಿಲ್ಲೆಯ 12 ಕಡೆಗಳಲ್ಲಿ ಭೂಕುಸಿತ
ಮಡಿಕೇರಿ ತಾಲ್ಲೂಕಿನ ಬ್ರಹ್ಮಗಿರಿ (ತಲಕಾವೇರಿ), ಕೋರಂಗಾಲ, ಬೊಟ್ಲಪ್ಪ ಪೈಸಾರಿ (ಕಡಗದಾಳು), ಜೋಡುಪಾಲ, ನೀರುಕೊಲ್ಲಿ, 2ನೇ ಮೊಣ್ಣಂಗೇರಿ, ಕೊಯನಾಡು, ಪೆರಾಜೆ, ನಗರಸಭೆ ಮಡಿಕೇರಿ ದೇಚೂರು, ವಿರಾಜಪೇಟೆ ತಾಲೂಕಯ ಮಗ್ಗುಲ (ಅಯ್ಯಪ್ಪಬೆಟ್ಟ) ಒಟ್ಟು 12 ಕಡೆಗಳಲ್ಲಿ ಭೂಕುಸಿತವಾಗಿತ್ತು. ಜಿಲ್ಲೆಯ ಭೂಕುಸಿತ, ಪ್ರವಾಹ ಹೀಗೆ ಮಳೆಯಿಂದ ಆದ ಅನಾಹುತದಿಂದ ಸುಮಾರು 506 ಜನ ಸಂತ್ರಸ್ತರಾಗಿದ್ದರಲ್ಲದೆ ಅವರಿಗೆ ವಿವಿಧೆಡೆ ಆಶ್ರಯ ನೀಡಲಾಗಿತ್ತು. ಮಳೆಗಾಲದ ಬಳಿಕ ನಿಧಾನವಾಗಿ ಜನಜೀವನ ಯಥಾ ಸ್ಥಿತಿಗೆ ಬಂದಿದ್ದರಿಂದ ತಮ್ಮ ಬದುಕನ್ನು ಕಟ್ಟಿಕೊಳ್ಳತೊಡಗಿದ್ದಾರೆ.

ಪ್ರವಾಸೋದ್ಯಮಕ್ಕೆ ಭಾರೀ ನಷ್ಟ
ಸದಾ ವಿವಿಧ ಕ್ರೀಡಾಕೂಟ ನಡೆಯುತ್ತಿದ್ದ ಜಿಲ್ಲೆಯಲ್ಲಿ ಕ್ರೀಡಾಕೂಟಗಳು ನಡೆಯಲಿಲ್ಲ. ಮಡಿಕೇರಿ ದಸರಾ ಸಂಪ್ರದಾಯದಂತೆ ನಡೆಯಿತು. ತಲಕಾವೇರಿಯಲ್ಲಿ ತೀಥೋದ್ಭವಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಯಿತು. ಕೋವಿಡ್ ಕಾರಣದಿಂದ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದೆ. ಪ್ರತಿವರ್ಷಾಂತ್ಯದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಕೊಡಗಿನಲ್ಲಿ ಪ್ರವಾಸಿಗರಿಲ್ಲ. ಅವರನ್ನು ನಂಬಿಕೊಂಡ ವ್ಯಾಪಾರಸ್ಥರು ಮಂಕಾಗಿದ್ದಾರೆ.












Click it and Unblock the Notifications