ಉಡುಪಿ; ಕಸ ಸಂಗ್ರಹ ಶುಲ್ಕ ಪಾವತಿಗೂ ಕ್ಯೂ ಆರ್ ಕೋಡ್
ಉಡುಪಿ, ಆಗಸ್ಟ್ 08; ಡಿಜಿಟಲ್ ಇಂಡಿಯಾದ ಪ್ರಭಾವದಿಂದ ನಗದು ರಹಿತ ವ್ಯವಸ್ಥೆ ಎಲ್ಲಾ ಕಡೆ ಜನಪ್ರಿಯವಾಗಿದೆ. ಹಲವಾರು ವಸ್ತುಗಳ ಖರೀದಿ, ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಕ್ಯು ಆರ್ ಕೋಡ್ ಮೂಲಕ ದೈನಂದಿನ ಹಲವು ವಹಿವಾಟುಗಳನ್ನು ನಗದುರಹಿತವಾಗಿ ನಿರ್ವಹಣೆ ಮಾಡಬಹುದು.
ಉಡುಪಿಯಲ್ಲಿ ಈಗ ಮನೆ ಮನೆಯಿಂದ ಕಸ ಸಂಗ್ರಹ ಶುಲ್ಕವನ್ನೂ ಸಹ ಕ್ಯೂಆರ್ ಕೋಡ್ ಮೂಲಕ ಪಾವತಿಸುವ ಸೌಲಭ್ಯವನ್ನು ಪರಿಚಯಿಸಲಾಗಿದೆ. ಉಡುಪಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಡೂರು-ನಡೂರು ಗ್ರಾಮ ಪಂಚಾಯತ್‌ನಲ್ಲಿ ತ್ಯಾಜ್ಯ ನಿರ್ವಹಣಾ ಶುಲ್ಕ ಪಾವತಿಯನ್ನು ನಗದು ರಹಿತವಾಗಿ ಪಾವತಿ ಮಾಡುವ ವ್ಯವಸ್ಥೆ ಆರಂಭಿಸಲಾಗಿದೆ.

'ತ್ಯಾಜ್ಯವೆಲ್ಲ ಸಂಪನ್ಮೂಲ' ಎಂಬ ಪರಿಕಲ್ಪನೆಯೊಂದಿಗೆ ಕಾಡೂರು-ನಡೂರಿನಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿಗೊಂಡು 5 ವರ್ಷಗಳಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಗಳಿಂದ ಪ್ರತಿದಿನ ಸಂಗ್ರಹಿಸುವ ಘನ ಸಂಪನ್ಮೂಲ ನಿರ್ವಹಣಾ ಘಟಕದ ಶುಲ್ಕವನ್ನು ಪಾವತಿಸಲು ಕ್ಯೂ ಆರ್ ಕೋಡ್ ಮತ್ತು ಸ್ಕಾನರ್ ಅಳವಡಿಸಿ, ನಗದುರಹಿತ ಶುಲ್ಕ ಪಾವತಿಯು ವಿನೂತನ ಪ್ರಯೋಗ ಮಾಡಲಾಗಿದೆ.
ಸಿಬ್ಬಂದಿಗಳ ಕೊರತೆ; ಕಾಡೂರು-ನಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಗಳು ಒಂದಕ್ಕೊoದು ಬಹಳ ದೂರದಲ್ಲಿದ್ದು ,ಪ್ರತಿದಿನ ಕಸ ಸಂಗ್ರಹ ವ್ಯವಸ್ಥೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ಆದರೆ ಕಸ ಸಂಗ್ರಹಣೆಯ ಶುಲ್ಕ ಪಾವತಿ ಸಮಯದಲ್ಲಿ ಮನೆಗಳಿಗೆ ಭೇಟಿ ನೀಡಲು ತುಂಬಾ ಕಷ್ಟಕರವಾಗಿತ್ತು.
ಅಲ್ಲದೇ ಶುಲ್ಕ ಸಂಗ್ರಹಣೆಗೆ ತೆರಳಿದ ದಿನ , ಇವತ್ತು ಹಣ ಇಲ್ಲ , ನಾಳೆ ಅಥವಾ ಮತ್ತೊಮ್ಮೆ ಬನ್ನಿ ಎಂದರೆ ಪುನ: ಆ ಮನೆಗಳಿಗೆ ಸಕಾಲದಲ್ಲಿ ತೆರಳುವುದು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ಶುಲ್ಕ ಸಂಗ್ರಹಣೆಗೆ ಸಿಬ್ಬಂದಿಗಳ ಕೊರತೆ ಸಹ ಇತ್ತು.
ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಆಲೋಚನೆಯಲ್ಲಿ ಕ್ಯೂ ಆರ್ ಕೋಡ್ ಮತ್ತು ಸ್ಕಾನರ್ ವ್ಯವಸ್ಥೆ ಮೂಲಕ ಶುಲ್ಕ ಪಾವತಿ ಮಾಡುವ ಕುರಿತಂತೆ ಪಂಚಾಯತಿಯ ಎಲ್ಲ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡು, ಗ್ರಾಮಸ್ಥರ ಮನ ಒಲಿಸಿದ ಪರಿಣಾಮ ಈ ಯೋಜನೆ ಯಶಸ್ವಿಯಾಗಿ ಜಾರಿಗೊಂಡು, ನಗದು ರಹಿತ ಶುಲ್ಕ ವ್ಯವಸ್ಥೆ ಜಾರಿಗೆ ಬಂದಿದೆ.
ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ ಹೆಚ್. ಮಾತನಾಡಿ, "ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಶುಲ್ಕ ಸಂಗ್ರಹವನ್ನು ವ್ಯವಸ್ಥಿತವಾಗಿ ಜರುಗಿಸುವಂತೆ ನಿರ್ದೇಶನಗಳನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಕಾಡೂರು-ನಡೂರು ಗ್ರಾಮ ಪಂಚಾಯತ್ ಕೈಗೊಂಡಿರುವ ವಿನೂತನ ಪ್ರಯತ್ನ ಮಾದರಿಯಾದುದು. ಇದರಿಂದ ಪಾರದರ್ಶಕ ನಿರ್ವಹಣೆಯ ಜೊತೆಗೆ ನಾಗರೀಕರಿಗೆ ಪಾವತಿಗೂ ಅನುಕೂಲವಾಗಲಿದೆ" ಎಂದು ಹೇಳಿದ್ದಾರೆ.
ಈ ಯೋಜನೆ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯತಿಯ ಎಲ್ಲಾ ವಾರ್ಡ್‌ವಾರು ಎಲ್ಲಾ ಮನೆಗಳ ಮೊಬೈಲ್ ಸಂಖ್ಯೆಗಳ ವಾಟ್ಸಪ್ ಗ್ರೂಪ್ ರಚಿಸಲಾಗಿದ್ದು, ಸಂಬಂಧಿಸಿದ ವಾರ್ಡ್ ಸದಸ್ಯರು ಸಹ ಇದರಲ್ಲಿ ಇದ್ದಾರೆ. ಪ್ರತಿ ತಿಂಗಳ ಶುಲ್ಕದ ವಿವರಗಳನ್ನು ಕ್ಯೂ ಆರ್ ಕೋಡ್ ಮತ್ತು ಸ್ಕ್ಯಾನರ್ ಮೂಲಕ ವಾಟ್ಸಾಪ್ ಗ್ರೂಪ್‌ಗಳಿಗೆ ಕಳುಹಿಸಲಾಗುತ್ತಿದ್ದು, ಗ್ರಾಮಸ್ಥರೂ ಸಹ ಈ ವ್ಯವಸ್ಥೆಗೆ ಉತ್ತಮ ಸ್ಪಂದನೆ ತೋರಿದ್ದಾರೆ. ಗ್ರಾಮದ ಹಲವು ಮನೆಗಳಲ್ಲಿ ದುಡಿಯುವ ವ್ಯಕ್ತಿ ಬೇರೆ ಊರಿನಲ್ಲಿ ಇದ್ದು ಅವರು ಅಲ್ಲಿಂದಲೇ ತಮ್ಮ ಮನೆಯ ಶುಲ್ಕವನ್ನು ಪಾವತಿ ಮಾಡುತ್ತಿದ್ದಾರೆ.
ಕಾಡೂರು ಮತ್ತು ನಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 5000 ಜನಸಂಖ್ಯೆಯಿದ್ದು, 1106 ಕುಟುಂಬಗಳು, 36 ಅಂಗಡಿ/ ವಾಣಿಜ್ಯ ಸಂಕೀರ್ಣಗಳಿದ್ದು ಪ್ರತಿ ತಿಂಗಳು 12 ರಿಂದ 16 ಟನ್ ಒಣ ತ್ಯಾಜ್ಯ ನಿರ್ವಹಣೆ ನಡೆಯುತ್ತಿದೆ. ಗ್ರಾಮ ಪಂಚಾಯತ್‌ನ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು , ಪಂಚಾಯತ್ ಅಭಿವೃದ್ದಿ ಅಧಿಕಾರಿ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಕ್ರಮಗಳಗೆ ಆದ್ಯತೆ ನೀಡಿದ್ದಾರೆ. ಗ್ರಾಮಸ್ಥರಿಗೆ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸುವಲ್ಲಿ ತ್ಯಾಜ್ಯ ನಿರ್ವಹಣಾ ಘಟಕದ ಮೇಲ್ವಿಚಾರಕರ ಪಾತ್ರವೂ ಮಹತ್ವದ್ದಾಗಿದೆ.
ಗ್ರಾಮ ಪಂಚಾಯತಿಯಲ್ಲಿ ದೊರೆಯುವ ಮಾಸಿಕ ಸಂಭಾವನೆಯನ್ನು ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಹಸ್ತಾಂತರಿಸುವ ಸದಸ್ಯರಿರುವುದು ಈ ಗ್ರಾಮಗಳ ಸ್ವಚ್ಛತಾ ಜಾಗೃತಿಗೆ ಸಾಕ್ಷಿಯಾಗಿದೆ. ಈಗಾಗಲೇ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿ ಜಿಲ್ಲೆಯಲ್ಲಿ ಮಾದರಿ ಗ್ರಾಮ ಪಂಚಾಯತ್ ಆಗಿ ಗುರುತಿಸಿಕೊಂಡಿರುವ ಈ ಪಂಚಾಯತ್ ಹಲವು ಜಿಲ್ಲೆಗಳ ವಿಷಯಾಸಕ್ತ ಅಧಿಕಾರಿಗಳಿಗೆ ಅಧ್ಯಯನ ಕೇಂದ್ರವಾಗಿಯೂ ರೂಪುಗೊಂಡಿದೆ.












Click it and Unblock the Notifications