Get Updates
Get notified of breaking news, exclusive insights, and must-see stories!

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎತ್ತಿನ ಗಾಣಗಳ ಯುಗಾಂತ್ಯ!

ಓಡಾಡುವಾಗ ಎಲ್ಲೋ ಒಂದು ಕಡೆ ಎತ್ತಿನ ಗಾಣದಿಂದಲೇ ತೆಗೆದ ಶುದ್ಧ ಎಣ್ಣೆ ಎಂಬ ಫಲಕಗಳು ಎಲ್ಲರ ಗಮನಸೆಳೆದಿರುತ್ತದೆ. ಈಗಲೂ ಕೆಲವು ಕಡೆ ಎತ್ತಿನ ಗಾಣಗಳು ಇರಬಹುದಾದರೂ ಬಹುತೇಕ ಕಡೆ ಅವು ನಾಶವಾಗಿ ಹೋಗಿವೆ. ಅದಕ್ಕೆ ಕಾರಣ ಆಧುನಿಕತೆ ಎಂದರೆ ತಪ್ಪಾಗಲಾರದು. ಅದಕ್ಕಿಂತ ಹೆಚ್ಚಾಗಿ ಎಲ್ಲವನ್ನೂ ಯಂತ್ರಗಳಿಂದಲೇ ಮಾಡುವ ಈ ಕಾಲದಲ್ಲಿ ಎತ್ತುಗಳನ್ನು ಸಾಕಿ ಸಲಹುತ್ತಾ ಅವುಗಳನ್ನು ಬಳಸಿ ಎಣ್ಣೆ ತೆಗೆಯವುದು ಸುಲಭದ ಕೆಲಸವಾಗಿ ಉಳಿದಿಲ್ಲ.

ಕೆಲವು ವರ್ಷಗಳ ಹಿಂದೆ ಎಣ್ಣೆ ತೆಗೆಯುವ ಗಾಣಗಳು ಅಲ್ಲಲ್ಲಿ ಕಂಡು ಬರುತ್ತಿದ್ದವು. ಅದರಲ್ಲೂ ಮೈಸೂರಿನ ಹೃದಯಭಾಗವಾಗಿದ್ದ ಶಾಂತಲಾ ಥಿಯೇಟರ್ ಬಳಿ ಎತ್ತಿನ ಗಾಣವೊಂದಿತ್ತು. ಅಲ್ಲಿ ಎತ್ತನ್ನು ಬಳಸಿ ಎಣ್ಣೆ ತೆಗೆಯುವ ದೃಶ್ಯವನ್ನು ಜನ ಅಚ್ಚರಿಯಿಂದ ನೋಡುತ್ತಿದ್ದರು. ಈಗ ಅದು ಮುಚ್ಚಿದೆ. ಆ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಾಣಗಳ ಯುಗಾಂತ್ಯವಾಗಿದೆ.

ಇಷ್ಟಕ್ಕೂ ಈ ವಿಷಯ ಏಕೆ ಪ್ರಸ್ತಾಪ ಮಾಡಿದೆ ಎಂದರೆ ಹಿಂದಿನ ಕಾಲದಲ್ಲಿ ಬೀದಿ ದೀಪಗಳಿಂದ ಹಿಡಿದು ಅರಮನೆವರೆಗೆ ಗಾಣದಿಂದ ತೆಗೆದ ಎಣ್ಣೆಗಳನ್ನೇ ಬಳಸಲಾಗುತ್ತಿತ್ತು. ಪೆಟ್ರೋಲ್ ಡೀಸೆಲ್ ಸೀಮೆಎಣ್ಣೆ ಇಲ್ಲದ ಕಾಲದಲ್ಲಿ ಗಾಣದಿಂದ ತೆಗೆದ ದೀಪಗಳೇ ಕತ್ತಲನ್ನು ಓಡಿಸಿ ಬೆಳಕು ನೀಡುತ್ತಿದ್ದವು. ರಾಜರ ಕಾಲದಲ್ಲಿ ಎಣ್ಣೆ ತೆಗೆಯುವ ವೃತ್ತಿ ಮಾಡುತ್ತಿದ್ದ ಗಾಣಿಗರಿಗೆ ಅವಕಾಶ ಮಾಡಿಕೊಡಲಾಗಿತ್ತು.

 ವಲಸಿಗರಿಂದ ಗಾಣ ನಿರ್ಮಾಣ

ವಲಸಿಗರಿಂದ ಗಾಣ ನಿರ್ಮಾಣ

ಹೀಗಾಗಿ ತಮಿಳುನಾಡಿನ ಈರೋಡ್ ಜಿಲ್ಲೆಯ ಚಿತ್ತೋಡ್‌ನಿಂದ ಸುಮಾರು 40 ಕುಟುಂಬಗಳು ಮೈಸೂರಿಗೆ ವಲಸೆ ಬಂದಿದ್ದು, ಹಾಗೆ ಬಂದ ಕುಟುಂಬಗಳು ನಗರದ ಅಗ್ರಹಾರ, ಸುಬ್ಬರಾಯನ ಕೆರೆ ಆಸುಪಾಸಿನಲ್ಲಿ ಗಾಣಗಳನ್ನು ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿದ್ದರು. ಜನ ತಾವು ಬೆಳೆದ ಎಳ್ಳು, ಹರಳು, ತೆಂಗಿನಕಾಯಿ ಮೊದಲಾದವುಗಳನ್ನು ಅವರಿಗೆ ನೀಡಿ ಎಣ್ಣೆ ತೆಗೆಸಿಕೊಳ್ಳುತ್ತಿದ್ದರು. ಅವರು ಗಾಣಗಳನ್ನು ಬಳಸಿ ಎಣ್ಣೆ ತೆಗೆಯುತ್ತಿದ್ದರು.

ಆ ಕಾಲದಲ್ಲಿ ಮೈಸೂರಿನ ಬೀದಿಗಳಲ್ಲಿ ಅಡ್ಡಾಡಿದರೆ ಎಲ್ಲೆಂದರಲ್ಲಿ ಗಾಣ ಹೊತ್ತು ತಿರುಗುವ ಎತ್ತುಗಳು.. ಎಣ್ಣೆ ತೆಗೆಯುವಲ್ಲಿ ನಿರತರಾದ ಹೆಂಗಸರು, ಗಂಡಸರು. ಹೀಗೆ ಎಣ್ಣೆ ತೆಗೆಯುವ ಗಾಣಗಳ ದೃಶ್ಯಗಳು ಕಂಡು ಬರುತ್ತಿದ್ದವು. ಬದಲಾದ ಕಾಲದಲ್ಲಿ ಗಾಣಗಳು ನೇಪಥ್ಯಕ್ಕೆ ಸರಿಯತೊಡಗಿದವು. ಆ ವೃತ್ತಿಯಲ್ಲಿ ತೊಡಗಿಕೊಂಡಿದ್ದ ಕೆಲವು ವೃತ್ತಿ ಬದಲಿಸಿದರು. ಹೀಗಾಗಿ ಗಾಣಗಳು ಮುಚ್ಚುತ್ತಾ ಹೋಗಿ ಪಳೆಯುಳಿಕೆ ಎಂಬಂತೆ ನಗರದ ಶಾಂತಲಾ ಚಿತ್ರಮಂದಿರ ಬಳಿ ಒಂದೇ ಒಂದು ಗಾಣ ಉಳಿದು ಕೊಂಡಿತ್ತು. ಏಳೆಂಟು ವರ್ಷದ ಹಿಂದೆ ಅದು ಕೂಡ ಮುಚ್ಚಿ ಹೋಯಿತು.

 ಮಿಲ್‌ಗಳ ಆವಿಷ್ಕಾರದಿಂದ ಗಾಣಗಳಿಗೆ ಹೊಡೆತ

ಮಿಲ್‌ಗಳ ಆವಿಷ್ಕಾರದಿಂದ ಗಾಣಗಳಿಗೆ ಹೊಡೆತ

ಇಷ್ಟಕ್ಕೂ ಗಾಣಗಳು ಮುಚ್ಚಲು ಯಂತ್ರದ ಯುಗವೇ ಕಾರಣವಾಯಿತು ಎನ್ನುವುದನ್ನು ತಳ್ಳಿಹಾಕಲಾಗದು. ನಗರದಲ್ಲಿ ಯಂತ್ರದ ಯುಗ ಆರಂಭವಾಗುತ್ತಿದ್ದಂತೆಯೇ ಆಯಿಲ್ ಮಿಲ್‌ಗಳ ಆವಿಷ್ಕಾರವಾಯಿತು. ಅವು ಎಲ್ಲೆಂದರಲ್ಲಿ ತಲೆ ಎತ್ತುತ್ತಿದ್ದಂತೆಯೇ ಗಾಣ ನಡೆಸುವವರ ಬದುಕು ಸಂಕಷ್ಟಕ್ಕೆ ಜಾರಿತು ಪರಿಣಾಮ ಅವರು ಗಾಣಗಳನ್ನು ಮುಚ್ಚುವುದು ಅನಿವಾರ್ಯವಾಯಿತು.

ಆದರೂ ಶಾಂತಲಾ ಸಿನಿಮಾ ಮಂದಿರದ ಬಳಿ ದಶಕಗಳ ಹಿಂದಿನ ತನಕವೂ ಪರಮೇಶ್ವರ ಎಂಬುವರು ನಡೆಸಿಕೊಂಡು ಹೋಗುತ್ತಿದ್ದರು. ಅಲ್ಲಿ ಹುಚ್ಚೆಳ್ಳು ಎಣ್ಣೆ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ, ಕಡಲೇಕಾಯಿ ಎಣ್ಣೆ ಯನ್ನು ತೆಗೆಯಲಾಗುತ್ತಿತ್ತು. ಆದರೆ ಅದರಿಂದ ಜೀವನ ನಡೆಸೋದು ಸಾಧ್ಯವಿಲ್ಲ ಎಂಬುದು ಅವರ ಅರಿವಿಗೆ ಬಂತಲ್ಲದೆ, ದನಗಳ ವೆಚ್ಚ, ಕೆಲಸ ಕಾರ್ಯ ಎಲ್ಲವನ್ನು ಗಮನಿಸಿದಾಗ ನಿರ್ವಹಣೆ ಕಷ್ಟಸಾಧ್ಯವಾಗಿತ್ತು. ಹಾಗಾಗಿ ಅದು ಮುಚ್ಚಿ ಹೋಯಿತು.

 ಎತ್ತಿನ ಗಾಣದಲ್ಲಿ ಶ್ರಮ ಜಾಸ್ತಿ ಲಾಭ ಕಡಿಮೆ

ಎತ್ತಿನ ಗಾಣದಲ್ಲಿ ಶ್ರಮ ಜಾಸ್ತಿ ಲಾಭ ಕಡಿಮೆ

ಗಾಣದ ಬಗ್ಗೆ ತಿಳಿಯಲು ಹೊರಟರೆ ಒಂದಷ್ಟು ಅಚ್ಚರಿಯ ಮಾಹಿತಿಗಳು ಲಭ್ಯವಾಗುತ್ತವೆ. ಅದೇನೆಂದರೆ, ಕೊಕ್ಕೆ, ಅರೆಗೋಲು, ಗೂಟ, ಹಲಗೆಗಳ ಸಾಧನದ ಜತೆಗೆ ಎರಡು ಎತ್ತುಗಳಿಂದ ಗಾಣ ನಿರ್ಮಾಣವಾಗುತ್ತದೆ. ಈ ಗಾಣದಲ್ಲಿ ಅರೆಗೋಲು ವಿಶೇಷ ಸಾಧನವಾಗಿದ್ದು, ಬೃಹತ್ ಅರೆಗೋಲನ್ನು ಹಳೆಯ ಕಾಡು ಬಾಗೇ ಮರದಿಂದ ನಿರ್ಮಾಣ ಮಾಡುತ್ತಾರೆ. ಎತ್ತುಗಳು ಸುತ್ತಿದಂತೆ ಅರೆಗೋಲು ಬೀಜಗಳನ್ನು ಅರೆಯುತ್ತಾ ಹೋಗುತ್ತದೆ. ಇವತ್ತಿನ ಮಟ್ಟಿಗೆ ಇದು ಕಷ್ಟದ ಕೆಲಸ ಎಂದರೆ ತಪ್ಪಾಗಲಾರದು. ಜತೆಗೆ ಇದರಲ್ಲಿ ಶ್ರಮ ಜಾಸ್ತಿ ಲಾಭ ಕಡಿಮೆ. ಅಷ್ಟೇ ಅಲ್ಲದೆ ಎತ್ತುಗಳನ್ನು ಸಾಕುವುದು ಕೂಡ ಸುಲಭವೇನಲ್ಲ. ಇದೆಲ್ಲವನ್ನು ಗಮನಿಸಿ ಗಾಣದ ಕೆಲಸಕ್ಕೆ ಗುಡ್ ಬೈ ಹೇಳಿದ್ದಾರೆ. ಕೆಲವರು ಯಂತ್ರಗಳನ್ನಿಟ್ಟುಕೊಂಡು ಎಣ್ಣೆ ತೆಗೆಯುತ್ತಿದ್ದಾರೆ.

 ಗಾಣದ ಸಾಧನವನ್ನು ಸಂರಕ್ಷಿಸುವ ಅಗತ್ಯವಿದೆ

ಗಾಣದ ಸಾಧನವನ್ನು ಸಂರಕ್ಷಿಸುವ ಅಗತ್ಯವಿದೆ

ಒಟ್ಟಾರೆ ಮೈಸೂರಿನ ಗಾಣದ ಪಳೆಯುಳಿಕೆಯಾಗಿ ಉಳಿದುಕೊಂಡಿದ್ದ ಅದೊಂದು ಗಾಣ ಮೈಸೂರಿನಿಂದ ಕಣ್ಮರೆಯಾಗಿ ಹಲವು ವರ್ಷಗಳೇ ಕಳೆದಿವೆ. ಮುಂದಿನ ಪೀಳಿಗೆಗೆ ಗಾಣದ ಬಗ್ಗೆ ತಿಳಿಸಿಕೊಡಲಾದರೂ ನಾವು ಗಾಣದ ಸಾಧನವನ್ನು ಸಂರಕ್ಷಿಸುವ ಅಗತ್ಯವಿದೆ. ಒಂದು ಕಾಲದಲ್ಲಿ ಮೈಸೂರಿನಲ್ಲಿ ಎಲ್ಲೆಂದರಲ್ಲಿ ಎತ್ತಿನ ಗಾಣಗಳು ಇದ್ದವು ಎಂಬ ವಿಚಾರ ಈಗ ಇತಿಹಾಸದ ಪುಟ ಸೇರಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+