2023ರ ಹಿನ್ನೋಟ; ಹೆಚ್ಚು ಹುಡುಕಿದ ಪ್ರವಾಸಿ ತಾಣಗಳಲ್ಲಿ ಕೊಡಗು!
ಕರ್ನಾಟಕದ ಕಾಶ್ಮೀರ ಎಂದು ಕರೆಯುವ ಕೊಡಗು ಪಶ್ಚಿಮ ಘಟ್ಟದ ತಪ್ಪಲಿನ ದಟ್ಟವಾದ ಕಾಡುಗಳನ್ನು ಹೊಂದಿರುವ ರಾಜ್ಯದ ಅತ್ಯಂತ ಸುಂದರ ಗಿರಿಧಾಮ. ಕರ್ನಾಟಕದ 30 ಜಿಲ್ಲೆಗಳಲ್ಲಿಯೇ ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಕೊಡಗಿನ ಕಾಫಿ ಮತ್ತು ಕೊಡಗಿನ ಕೆಚ್ಚೆದೆಯ ಯೋಧರರು ಪ್ರಪಂಚದಲ್ಲಿ ಪ್ರಸಿದ್ದಿ ಪಡೆದಿದ್ದಾರೆ. ಮಡಿಕೇರಿಯು ಕೊಡಗಿನ ಕೇಂದ್ರಸ್ಥಾನವಾಗಿದೆ. ಇಲ್ಲಿನ ಸ್ಥಳೀಯರು ಕೊಡವ ಭಾಷೆಯನ್ನು ಮಾತನಾಡುತ್ತಾರೆ.
ವರ್ಷದ ಸದಾಕಾಲ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಜಿಲ್ಲೆ ಕೊಡಗು. ಕರ್ನಾಟಕದ ಜೀವ ನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯು ಸಹ ಕೊಡಗು ಜಿಲ್ಲೆಯಲ್ಲಿದೆ. ರಾಜ್ಯ, ದೇಶದ ವಿವಿಧ ರಾಜ್ಯಗಳಿಂದ ಮಾತ್ರವಲ್ಲ ವಿದೇಶದಿಂದಲೇ ಜನರು ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಆಗಮಿಸುತ್ತಾರೆ.

ಕೃಷಿ ಹೊರತುಪಡಿಸಿದರೆ ಕೊಡಗು ಜಿಲ್ಲೆಗೆ ಪ್ರವಾಸೋದ್ಯಮವೇ ಆಧಾರ. ಕೋವಿಡ್ ಪರಿಸ್ಥಿತಿ ಬಳಿಕ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಮತ್ತೆ ಚೇತರಿಕೆ ಕಂಡಿದೆ. 2023ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೊಡಗು 7ನೇ ಸ್ಥಾನದಲ್ಲಿದೆ.
ಅತಿ ಹೆಚ್ಚು ಹುಡುಕಿದ ಪ್ರವಾಸಿ ತಾಣ; 2023ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಪ್ರವಾಸಿ ತಾಣಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ ಕೊಡಗು ಮಾತ್ರ ಸ್ಥಾನವನ್ನು ಪಡೆದಿದೆ.
ಗೂಗಲ್‌ನ ಮಾಹಿತಿಯಂತೆ ಅತಿ ಹೆಚ್ಚು ಹುಡುಕಿದ ಪ್ರವಾಸಿ ತಾಣಗಳಲ್ಲಿ ಮೊದಲು ವಿಯೇಟ್ನಾಂ, 2ನೇ ಸ್ಥಾನದಲ್ಲಿ ಗೋವಾ, 3ನೇ ಸ್ಥಾನದಲ್ಲಿ ಬಾಲಿ, 4ನೇ ಸ್ಥಾನದಲ್ಲಿ ಶ್ರೀಲಂಕಾವಿದೆ.
5ನೇ ಸ್ಥಾನದಲ್ಲಿ ಥೈಲ್ಯಾಂಡ್, 6ನೇ ಸ್ಥಾನದಲ್ಲಿ ಕಾಶ್ಮೀರ ಮತ್ತು 7ನೇ ಸ್ಥಾನದಲ್ಲಿ ಕೂರ್ಗ್ (ಕೊಡಗು) ಇದೆ. 8 ಅಂಡಮಾನ್ & ನಿಕೋಬಾರ್, 9 ಇಟಲಿ ಮತ್ತು 10ನೇ ಸ್ಥಾನದಲ್ಲಿ ಸ್ವಿಡ್ಜರ್‌ಲ್ಯಾಂಡ್ ಇದೆ.
ಪ್ರವಾಸೋದ್ಯಮ ಮತ್ತು ಕೃಷಿಗೆ ನೆಲೆಯಾಗಿರುವ ಕೊಡಗು ಜಿಲ್ಲೆಗೆ ವರ್ಷದ ಎಲ್ಲಾ ಕಾಲದಲ್ಲಿಯೂ ಪ್ರವಾಸಿಗರು ಆಗಮಿಸುತ್ತಾರೆ. ಸಾಲು ಸಾಲು ರಜೆ, ವರ್ಷಂತ್ಯದಲ್ಲಿ ಕೊಡಗು ಪ್ರವಾಸಿಗರಿಂದ ತುಂಬಿ ಹೋಗುತ್ತದೆ.
ಕೊಡಗು ಕೃಷಿಗೂ ಪ್ರಸಿದ್ಧಿ ಪಡೆದಿದೆ. ಭತ್ತದ ಗದ್ದೆಗಳು, ಕಾಫಿ ಮತ್ತು ಮೆಣಸಿನಗಿಡಗಳು ಸುತ್ತಮುತ್ತಲಿನ ಬೆಟ್ಟಗಳಲ್ಲಿ ಕಂಡು ಬರುತ್ತದೆ. ವಿಶೇಷವಾಗಿ ರೋಬಸ್ಟಾ ಕಾಫಿಯನ್ನು ಹೇರಳವಾಗಿ ಬೆಳೆಯಲಾಗುತ್ತದೆ. ಆದ್ದರಿಂದ ಕೃಷಿ ಚಟುವಟಿಕೆಯಿಂದಲೂ ಕೊಡಗು ಶ್ರೀಮಂತ ಜಿಲ್ಲೆಯಾಗಿದೆ.
ಪ್ರವಾಸೋದ್ಯಮದಿಂದ ಆದಾಯದ ಮೂಲವನ್ನು ಕಂಡುಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಮಳೆ, ಭೂಕುಸಿತದಂತಹ ಪ್ರಕೃತಿ ವಿಕೋಪದಿಂದ ನಷ್ಟವೂ ಸಂಭವಿಸಿತ್ತು. ಕೋವಿಡ್ ಸಂದರ್ಭದಲ್ಲಿಯೂ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿತ್ತು.
ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ, ಹೊರ ದೇಶಗಳಿಂದಲೂ ಕೊಡಗು ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪ್ರವಾಸೋದ್ಯಮದ ಮತ್ತು ಅದರ ಸುತ್ತಲೂ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಂತಹ ಉದ್ಯಮಗಳು ಬೆಳೆದು ನಿಂತಿವೆ, ಇವುಗಳಿಂದಲೇ ನೂರಾರು ಉದ್ಯೋಗ ಸೃಷ್ಟಿಯಾಗಿವೆ.












Click it and Unblock the Notifications