ಬೀದಿ ಬದಿಯ ಫುಡ್ ಸ್ಟಾಲ್ ಮುಚ್ಚಿಸಿದ್ದಕ್ಕೆ ಮುಖ್ಯಮಂತ್ರಿಯೇ ಅಡ್ಡ ಬಂದ್ರು..! ಯಾರು ಈ ಸೆಲಬ್ರಿಟಿ 'ಕುಮಾರಿ ಆಂಟಿ'?
ಇದು ಸೋಶಿಯಲ್ ಮೀಡಿಯಾಗಳ ಕಾಲ. ಯಾರು.. ಎಲ್ಲಿ.. ಏನೇ ಮಾಡಿದರೂ ಅದಕ್ಕೆ ತಕ್ಷಣ ಸೋಶಿಯಲ್ ಮೀಡಿಯಾ ರಿಯಾಕ್ಟ್ ಮಾಡುತ್ತದೆ. ಅದರ ಒಂದು ವಿಡಿಯೋ.. ಒಂದು ಫೋಟೋಗಳಿಂದ ಸ್ಟಾರ್ ಆದವರಿಗೆ ಲೆಕ್ಕವಿಲ್ಲ. ಯಾರನ್ನು ಬೇಕಿದ್ದರೂ ಸ್ಟಾರ್ ಮಾಡುವ, ಯಾರನ್ನಾದರೂ ಒಂದೇ ಕ್ಷಣದಲ್ಲಿ ಕೆಳಕ್ಕೆ ಬೀಳಿಸುವ ತಾಕತ್ತು ಇದಕ್ಕಿದೆ.
ಹೀಗೆ ಸ್ಟಾರ್ ಆದರವರಲ್ಲಿ ತೆಲಂಗಾಣದ 'ಕುಮಾರಿ ಆಂಟಿ' ಫುಡ್ ಸ್ಟಾಲ್ ಕೂಡ ಒಂದು. ಸೋಶಿಯಲ್ ಮಿಡಿಯಾದ ವಿಡಿಯೋದಿಂದ ಖ್ಯಾತಿ ಗಳಿಸಿದ ಈ ಫುಡ್ ಸ್ಟಾಲ್‌ಗೆ ಈಗ ಪ್ರತಿ ದಿನ ಸಾವಿರಾರು ಮಂದಿ ಊಟಕ್ಕೆ ಬರುತ್ತಾರೆ. ಇದೇ ಕಾರಣಕ್ಕೆ ಇಡೀ ರಸ್ತೆಯಲ್ಲಿ ಭಯಂಕರ ಟ್ರಾಫಿಕ್ ಕೂಡ ಉಂಟಾಗುತ್ತಿತ್ತು. ಹೀಗಾಗಿ ಅವರ ಅಂಗಡಿಯನ್ನು ಮುಚ್ಚುವಂತೆ ಹೈದರಾಬಾದ್ ಪೊಲೀಸರು ಆದೇಶಿಸಿದ್ದರು. ಇದಕ್ಕೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆಕ್ಷೇಪಿಸಿದ್ದು, ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಡಿಜಿಪಿ ಮತ್ತು ನಗರಾಭಿವೃದ್ಧಿ ಸಚಿವಾಲಯಕ್ಕೆ ಸೂಚಿಸಿದ್ದಾರೆ!.

ಹೌದು, ಇದು ಸತ್ಯವಾದ ಮಾತೇ. 'ಕುಮಾರಿ ಆಂಟಿ' ಕಳೆದ ಎರಡು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳ ಮೂಲಕ ಖ್ಯಾತಿ ಗಳಿಸಿದ್ದು, ಅವರ ಮಾದಾಪುರದ ಐಟಿಸಿ ಕೊಹೆನೂರ್ ಜಂಕ್ಷನ್ ಬಳಿಯ ತನ್ನ ರಸ್ತೆ ಬದಿಯ ಫುಡ್ ಸ್ಟಾಲ್‌ಗೆ ಜನ ಸಾಗರವೇ ಹರಿದು ಬರುತ್ತಿದೆ. ಫುಡ್ ಸ್ಟಾಲ್‌ನಲ್ಲಿ ಅನ್ನ, ಚಿಕನ್, ಮಟನ್ ಕರಿ ಮತ್ತು ಹಲವಾರು ಮಾಂಸಾಹಾರಿ ಆಹಾರಗಳು, ವೆಜ್ ಊಟವೂ ಸಿಗುತ್ತದೆ. ಕೈಗೆಟುಕುವ ಬೆಲೆಯಲ್ಲಿ ನಾನ್ ವೆಜ್ ಥಾಲಿ ಸಿಗುವ ಕಾರಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದರು.
#KumariAunty #streetfood pic.twitter.com/z1thWPqAl7
— HEMA NIDADHANA (@Hema_Journo) January 31, 2024
ಆದರೆ, ಈ ಫುಡ್ ಸ್ಟಾಲ್ ಇಂದಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಈ ಕುರಿತು ಪ್ರಯಾಣಿಕರಿಂದ ಹಲವಾರು ದೂರುಗಳು ಬಂದ ಕಾರಣ, ಹೈದರಾಬಾದ್‌ನ ಮಾದಾಪುರದ ರಾಯದುರಾಮ್ ಟ್ರಾಫಿಕ್ ಪೊಲೀಸರು ಮಂಗಳವಾರ ತಮ್ಮ ಸ್ಟಾಲ್ ಅನ್ನು ಮುಚ್ಚಿ, ಅದನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವಂತೆ 'ಕುಮಾರಿ ಆಂಟಿ'ಗೆ ಆದೇಶಿಸಿದ್ದರು. ಆದರೆ, ಬುಧವಾರ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಕುಮಾರಿ ಆಂಟಿ ಮತ್ತು ಅವರ ಆಹಾರ ಮಳಿಗೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಜೊತೆಗೆ ಶೀಘ್ರದಲ್ಲೇ ಅವರ ಸ್ಟಾಲ್‌ಗೆ ಭೇಟಿ ನೀಡಲಿದ್ದಾರೆ.

ರಾಜಕೀಯ ಸ್ವರೂಪ ಪಡೆದ ಕುಮಾರಿ ಆಂಟಿ ಸಮಸ್ಯೆ!
ತಮ್ಮ ಅಂಗಡಿ ಮುಚ್ಚುವ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಿ ಆಂಟಿ, ನಾನು 13 ವರ್ಷಗಳಿಂದ ಸ್ಟಾಲ್ ಅನ್ನು ನಡೆಸುತ್ತಿದ್ದೇನೆ. ಸಾಮಾಜಿಕ ಮಾಧ್ಯಮದ ಜನಪ್ರಿಯತೆಯೇ ಅಂಗಡಿ ಮುಚ್ಚಲು ಕಾರಣವಾಯಿತು ಎಂದು ತಮ್ಮ ಪತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದರು. ಕುಮಾರಿ ಆಂಟಿ ಆಂಧ್ರ ಪ್ರದೇಶದ ಗುಡಿವಾಡ ಮೂಲದವರು.
ಇನ್ನು, ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್‌ಸಿಪಿ ಸರ್ಕಾರವು ಪ್ರತಿಪಕ್ಷದ ನಾಯಕ ನಾರಾ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಆಹಾರ ಮಳಿಗೆಯನ್ನು ಮುಚ್ಚುವಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದ ಈ ವಿಷಯವು ರಾಜಕೀಯ ಸ್ವರೂಪ ಪಡೆಯಿತು. ವೈಎಸ್‌ಆರ್‌ಸಿಪಿ ಜಗನ್ ರೆಡ್ಡಿ ಸರ್ಕಾರವು 'ಕುಮಾರಿ ಆಂಟಿ' ಫುಡ್ ಸ್ಟಾಲ್‌ನ ಮಾಲೀಕ ಸಾಯಿ ಕುಮಾರಿ ಅವರಿಗೆ ಮನೆಯನ್ನು ಹಸ್ತಾಂತರಿಸಿದ ನಂತರ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.












Click it and Unblock the Notifications