ಸುತ್ತೂರು ಜಾತ್ರೆ ಅಂದ್ರೆ ಅದು ಬರೀ ಜಾತ್ರೆಯಲ್ಲ..ಇದು ವಿಶೇಷತೆಗಳ ಮಹೋತ್ಸವ!
ಮೈಸೂರು, ಜನವರಿ 25: ನಂಜನಗೂಡು ತಾಲೂಕಿನ ಕಪಿಲಾ ನದಿ ದಡದಲ್ಲಿ ನೆಲೆನಿಂತಿರುವ ಸುತ್ತೂರು ಕ್ಷೇತ್ರದಲ್ಲಿ ನಡೆಯುವ ಆರು ದಿನಗಳ ಮಹಾಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ಕ್ಷೇತ್ರ ಜಾತ್ರೆಯ ಸಡಗರ, ಸಂಭ್ರಮದಲ್ಲಿ ತೇಲಾಡುತ್ತಿದೆ. ಸುತ್ತಮುತ್ತಲ ಹತ್ತೂರಿನ ಜನ ಮಾತ್ರವಲ್ಲದೆ ಜಿಲ್ಲೆ, ರಾಜ್ಯ, ಹೊರರಾಜ್ಯ, ವಿದೇಶಗಳಿಂದಲೂ ಭಕ್ತರು ಆಗಮಿಸಿ ಜಾತ್ರೆಯಲ್ಲಿ ಎಲ್ಲೆಂದರಲ್ಲಿ ಅಡ್ಡಾಡಿ, ವಿಶೇಷತೆಗಳನ್ನೆಲ್ಲ ಕಣ್ತುಂಬಿಕೊಂಡು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಖುಷಿಪಡಲು ಕಾತರರಾಗಿದ್ದಾರೆ.
ಈ ಸಮಯದಲ್ಲಿ ಜಾತ್ರೆಗಳು ಎಲ್ಲೆಂದರಲ್ಲಿ ನಡೆಯುತ್ತಿದ್ದು, ಪ್ರತಿಯೊಂದು ಜಾತ್ರೆಯೂ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಆದರೆ ಸುತ್ತೂರು ಜಾತ್ರೆ ಮಾತ್ರ ಬೇರೆಡೆಗಳಲ್ಲಿ ನಡೆಯುವ ಎಲ್ಲ ಜಾತ್ರೆಗಳಿಗಿಂತ ಭಿನ್ನ ಮತ್ತು ವಿಶಿಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಇಲ್ಲಿನ ಜಾತ್ರೆ ಬರೀ ಜಾತ್ರೆಯಾಗಿರದೆ ಇದೊಂದು ಪರಂಪರೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮಹೋತ್ಸವಗಳ ಸಂಗಮವಾಗಿ, ಗ್ರಾಮೀಣ ಸೊಗಡನ್ನು ಬಿಂಬಿಸುವ ಕಲೆಗಳ ಪ್ರದರ್ಶನವಾಗಿ ಗಮನಸೆಳೆಯುತ್ತದೆ.

ಸುತ್ತೂರು ಜಾತ್ರೆಯು ಒಂದು ದಿನದಲ್ಲಿ ಮುಗಿದು ಹೋಗುವ ಜಾತ್ರೆಯಲ್ಲ. ಇದು ಸುಮಾರು ಆರು ದಿನಗಳ ಕಾಲ ನಡೆಯುವ ಜಾತ್ರೆಯಾಗಿದ್ದು, ಜಾತ್ರೆ ಆರಂಭ ಮತ್ತು ಅಂತ್ಯದವರೆಗೆ ಪ್ರತಿದಿನವೂ ವಿಶೇಷತೆಯಿಂದ ಕೂಡಿರುತ್ತದೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಆರೋಗ್ಯ, ಕೃಷಿ, ಕ್ರೀಡೆ, ಶೈಕ್ಷಣಿಕ, ಸಾಹಿತ್ಯ, ಸಂಗೀತ, ನಾಟಕ, ಸಾಮೂಹಿಕ ವಿವಾಹ, ಸರ್ವ ಧರ್ಮ ಸಮ್ಮೇಳನ ಹೀಗೆ ಹತ್ತಾರು ವಿಶೇಷತೆಗಳ ಸಂಗಮವಾಗಿ ಆಕರ್ಷಿಸುತ್ತದೆ. ಇನ್ನು ಜಾತ್ರೆ ಸಂಬಂಧ ಆರು ದಿನಗಳ ಕಾಲವೂ ಧಾರ್ಮಿಕ ಕೈಂಕರ್ಯಗಳು ನಡೆಯುತ್ತವೆ.
ಜನವರಿ 26ರಿಂದ 31ರವರೆಗೆ 6 ದಿನ ಜಾತ್ರೆ
ಈ ಬಾರಿ ಜಾತ್ರೆ ಜನವರಿ 26ರಿಂದ ಆರಂಭವಾಗಿ 31ರವರೆಗೆ ನಡೆಯಲಿದ್ದು, ಈ ವೇಳೆ ಒಂದೊಂದು ದಿನವೂ ಜಾತ್ರೆಗೆ ಸಂಬಂಧಿಸಿದ ಧಾರ್ಮಿಕ ಕೈಂಕರ್ಯಗಳು ನಡೆಯಲಿದೆ. ಜಾತ್ರೆಯ ಮೊದಲ ದಿನ ಸುತ್ತೂರಿನ ಶ್ರೀಮಠದಿಂದ ಆದಿಜಗದ್ಗುರು ಶಿವಯೋಗಿಗಳ ಉತ್ಸವ ಮೂರ್ತಿಯನ್ನು ಕರ್ತೃಗದ್ದುಗೆಗೆ ತರುವುದರೊಂದಿಗೆ ಜಾತ್ರೆಗೆ ಚಾಲನೆ ಸಿಗಲಿದೆ. ಆ ನಂತರ ಜಾತ್ರೆಯ ಎರಡನೇ ದಿನ ಸಹಸ್ರಕುಂಭೋತ್ಸವ ನಡೆದರೆ, ಮೂರನೇ ದಿನದಂದು ಬೆಳಿಗ್ಗೆ ರಥೋತ್ಸವ ನಡೆಯುತ್ತದೆ. ನಾಲ್ಕನೇ ದಿನದಂದು ಸಂಜೆ ಶ್ರೀ ಮಹದೇಶ್ವರ ಕೊಂಡೋತ್ಸವ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ ಗಮನಸೆಳೆಯುತ್ತದೆ.
ಐದನೇ ದಿನ ರಾತ್ರಿ ಲಕ್ಷದೀಪೋತ್ಸವ ಹಾಗೂ ತೆಪ್ಪೋತ್ಸವ, ಆರನೇ ದಿನ ಅನ್ನ ಬ್ರಹ್ಮೋತ್ಸವ, ಶ್ರೀ ವೀರಭದ್ರೇಶ್ವರ ಕೊಂಡೋತ್ಸವಗಳು ನಡೆಯುತ್ತವೆ. ಜಾತ್ರೆಯ ಸಂದರ್ಭ ನಡೆಯುವ ಕಲಾತಂಡಗಳ ಮೆರವಣಿಗೆ ಛತ್ರಿ, ಚಾಮರ, ಸೂರಾಪಾನಿ, ಗಾರುಡಿಗೊಂಬೆ, ಮರಗಾಲು ಕುಣಿತ, ನೃತ್ಯ, ವೀರಗಾಸೆ, ಡೊಳ್ಳು ಹಾಗೂ ಪೂಜಾ ಕುಣಿತ, ಕರಡಿ ಮೇಳ, ನಾದಸ್ವರ ಸೇರಿ ವಿವಿಧ ಜನಪದ ಕಲಾತಂಡಗಳ ಮೆರವಣಿಗೆ ನಡೆಯುತ್ತದೆ. ಇದರ ಜತೆಗೆ ಪ್ರತಿದಿನವೂ ಬೇರೆ, ಬೇರೆ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ.

ಸುತ್ತೂರಲ್ಲಿ ಗಮನ ಸೆಳೆಯುವ ಕರ್ತೃಗದ್ದುಗೆ
ಜಾತ್ರೆಯ ಸಂದರ್ಭ ಶ್ರೀ ಕ್ಷೇತ್ರದಲ್ಲಿರುವ ಕರ್ತೃಗದ್ದುಗೆ ಮತ್ತು ಪುರಾಣ ಪ್ರಸಿದ್ಧ ದೇವಾಲಯಗಳಾದ ಶ್ರೀ ಸೋಮೇಶ್ವರ, ಶ್ರೀ ಮಹದೇಶ್ವರ, ಶ್ರೀ ಶಂಕರನಾರಾಯಣ, ಶ್ರೀ ವೀರಭದ್ರೇಶ್ವರ, ಶ್ರೀ ನಾರಾಯಣಸ್ವಾಮಿ ದೇವಾಲಯಗಳಲ್ಲಿ ತ್ರಿಕಾಲ ಪೂಜೆ, ಮಹಾರುದ್ರಾಭಿಷೇಕ, ನವನೀತಾಲಂಕಾರ, ಹಸಿರುವಾಣಿ ಅಲಂಕಾರ ಹಾಗೂ ಗುರುಪರಂಪರೆಯ ಸಂಸ್ಮರಣೋತ್ಸವಗಳು ಕೂಡ ನಡೆಯುತ್ತವೆ. ಇದೆಲ್ಲದರ ನಡುವೆ ಜಾನುವಾರುಗಳ ಜಾತ್ರೆಯೂ ಗಮನಸೆಳೆಯಲಿದೆ. ಇದೆಲ್ಲವೂ ಜಾತ್ರೆ ಕುರಿತ ವಿಚಾರವಾದರೆ ಸುತ್ತೂರು ಕ್ಷೇತ್ರದ ಬಗ್ಗೆಯೂ ನಾವು ತಿಳಿಯಲೇ ಬೇಕಾಗುತ್ತದೆ. ಏಕೆಂದರೆ ಈ ಕ್ಷೇತ್ರಕ್ಕೆ ಸುಮಾರು ಹತ್ತು ಶತಮಾನಗಳ ಇತಿಹಾಸವಿರುವುದು ಗಮನಾರ್ಹವಾಗಿದೆ.
ಆದಿಗುರು ಶ್ರೀ ಶಿವರಾತ್ರಿಶ್ವರ ಭಗವತ್ಪಾದರಿಂದ (ಕ್ರಿ.ಶ.950-1030) ಇಲ್ಲಿವರೆಗೆ ಸುತ್ತೂರು ಮಠವು ಸುಮಾರು ಇಪ್ಪತ್ತಮೂರು ಜಗದ್ಗುರುಗಳನ್ನು ಕಂಡಿದ್ದು, 1986 ರಿಂದ 24ನೇ ಪೀಠಾಧಿಕಾರಿಗಳಾಗಿರುವ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಮಠವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಇದೆಲ್ಲದರ ನಡುವೆ ಸುತ್ತೂರು ಕ್ಷೇತ್ರದ ಇತಿಹಾಸದ ಮೆಲುಕು ಹಾಕಿದರೆ ಈ ಕ್ಷೇತ್ರ ಶಾಂತಿ, ಸಂಯಮ, ಸಹಬಾಳ್ವೆಯನ್ನು ನಾಡಿಗೆ ಸಾರಿದ ಕ್ಷೇತ್ರ ಎಂಬುದು ಮನದಟ್ಟಾಗುತ್ತದೆ.
ಶಾಂತಿ, ಸಹಬಾಳ್ವೆಯನ್ನು ಕಲಿಸಿದ ಕ್ಷೇತ್ರ
ಈ ಮಠದ ಮತ್ತೊಂದು ವಿಶೇಷ ಏನೆಂದರೆ ಅವತ್ತು ಮಠಕ್ಕೆ ಮಾಡಿದ ಭೂಮಿ ಪೂಜೆಯೊಂದಿಗೆ ಶುರುವಾದ ಕಾಮಗಾರಿ ಇವತ್ತಿಗೂ ನಿಂತಿಲ್ಲ. ಮಠಕ್ಕೆ ಸಂಬಂಧಿಸಿದಂತೆ ಎಲ್ಲದರೂ ಒಂದು ಕಡೆ ನಡೆಯುತ್ತಲೇ ಇರುತ್ತದೆ. ಸುತ್ತೂರು ಶಾಂತಿ, ಸಹಬಾಳ್ವೆಯನ್ನು ಕಲಿಸಿದ ಕ್ಷೇತ್ರವಾಗಿದೆ. ಇದಕ್ಕೆ ಸುತ್ತೂರಿನ ಇತಿಹಾಸದ ಕಥೆ ಸಾಕ್ಷಿಯಾಗಿದೆ. ಒಂದು ಸಾವಿರ ವರ್ಷದ ಹಿಂದೆ ಆಗಿನ ಕಂಚಿಯ ರಾಜೇಂದ್ರ ಚೋಳನೂ ಹಾಗೂ ತಲಕಾಡಿನ ಗಂಗರಾಜ ರಾಚಮಲ್ಲ ಇಬ್ಬರು ವೈರಿಗಳಾಗಿದ್ದರು. ಇವರಿಬ್ಬರ ನಡುವೆ ಆಗಾಗ್ಗೆ ಯುದ್ಧಗಳು ನಡೆಯುತ್ತಿದ್ದವು.

ಒಮ್ಮೆ ಇವರಿಬ್ಬರು ಭಾರೀ ಸೈನ್ಯದೊಂದಿಗೆ ಯುದ್ಧಕ್ಕೆ ಸಜ್ಜಾಗುತ್ತಾರೆ. ಆಗ ರಾಜೇಂದ್ರ ಚೋಳ ಏರಿ ಹೊರಟಿದ್ದ ಕುದುರೆ ಗೊತ್ತುಗುರಿಯಿಲ್ಲದೆ ಓಡತೊಡಗಿತ್ತು. ಏನೇ ಮಾಡಿದರೂ ಕುದುರೆಯನ್ನು ತಡೆದು ನಿಲ್ಲಿಸುವುದಕ್ಕೆ ರಾಜನಿಗೆ ಸಾಧ್ಯವಾಗಲಿಲ್ಲ. ಹೀಗೆ ಓಡಿದ ಕುದುರೆ ಕಪಿಲಾ ನದಿ ತೀರದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಬಳಿಗೆ ತೆರಳಿ ಅವರಿಗೆ ಪ್ರದಕ್ಷಿಣೆ ಹಾಕಿ ನಿಂತಿತು. ಇದರಿಂದ ಅಚ್ಚರಿಗೊಂಡ ರಾಜಾ ರಾಜೇಂದ್ರ ಚೋಳ ಕುದುರೆಯಿಂದಿಳಿದು ಧ್ಯಾನದಲ್ಲಿ ನಿರತರಾಗಿದ್ದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಪಾದಕ್ಕೆರಗುತ್ತಾನೆ.
ಕಪಿಲಾ ನದಿ ದಡದ ಸುಂದರ ಸುತ್ತೂರು ಕ್ಷೇತ್ರ
ಅದೇ ವೇಳೆಗೆ ರಾಜೇಂದ್ರ ಚೋಳನ ಕುದುರೆಯನ್ನು ಹಿಂಬಾಲಿಸಿಕೊಂಡು ರಾಚಮಲ್ಲನೂ ಅಲ್ಲಿಗೆ ಬರುತ್ತಾನೆ. ತನ್ನ ಮುಂದೆ ಬಂದು ನಿಂತ ರಾಜರಿಬ್ಬರನ್ನು ಕಂಡ ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳು ಅವರಿಬ್ಬರಿಗೆ ವೈರತ್ವವನ್ನು ಬಿಟ್ಟು ಸಹಬಾಳ್ವೆ ನಡೆಸುವಂತೆ ಬೋಧನೆ ಮಾಡುತ್ತಾರೆ. ಶ್ರೀಗಳ ಬೋಧನೆಯಿಂದ ವೈರಿಗಳಾಗಿದ್ದ ರಾಜರಿಬ್ಬರ ನಡುವೆ ಕೋಪ, ಸಿಟ್ಟು ದ್ವೇಷ ಎಲ್ಲವೂ ಮಾಯವಾಗಿ ಜ್ಞಾನೋದಯವಾಗುತ್ತದೆ.
ಅವರಿಬ್ಬರು ವೈರತ್ವ ಮರೆತು ತಮ್ಮ ರಾಜ್ಯಕ್ಕೆ ತೆರಳಿ ರಾಜ್ಯಭಾರ ಮಾಡುತ್ತಾರೆ. ಅಷ್ಟೇ ಅಲ್ಲದೆ ನಮ್ಮ ಕಣ್ಣು ತೆರೆಸಿದ ಈ ಕ್ಷೇತ್ರ ನಿಜಕ್ಕೂ ಪುಣ್ಯಕ್ಷೇತ್ರ ಎಂಬುದು ಅವರಿಗೆ ಅರಿವಾಗುತ್ತದೆ. ಇವತ್ತು ಸುತ್ತೂರು ಕ್ಷೇತ್ರ ಅಗಾಧವಾಗಿ ಬೆಳೆದಿದೆ. ಕಪಿಲ ನದಿಯ ದಡದ ಈ ಕ್ಷೇತ್ರ ನಿಸರ್ಗ ರಮಣೀಯತೆಯನ್ನು ಹೊಂದಿ ಮೈಮನವನ್ನು ತಣಿಸುತ್ತದೆ.












Click it and Unblock the Notifications