Summer Vacation: ಮಕ್ಕಳ ಬೇಸಿಗೆ ರಜೆ; ಪೋಷಕರೇ ಈ ವಿಚಾರಗಳನ್ನು ಮರೆಯಬೇಡಿ!
ಮಕ್ಕಳು ಪ್ರತಿದಿನ ಶಾಲಾ ಕೊಠಡಿ, ಪುಸ್ತಕಗಳನ್ನು ನೋಡಿ, ಕೈಯಲ್ಲಿ ಪೆನ್ನನ್ನು ಹಿಡಿದು ಹಿಡಿದು ಯಾವಾಗಪ್ಪ ಇದರಿಂದ ಮುಕ್ತಿ ಎಂಬ ಭಾವದಲ್ಲಿ ಬೇಸಿಗೆ ರಜೆಗಾಗಿ ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಪರೀಕ್ಷೆಗೂ ಮೊದಲೆ ಅಪ್ಪ-ಅಮ್ಮನೊಂದಿಗೆ ಬೇಸಿಗೆ ರಜಾ ದಿನಗಳನ್ನು ಹೇಗೆ ಕಳೆಯಬೇಕೆಂಬುದರ ಬಗೆಗೆ ಸಾಕಷ್ಟು ಯೋಜನೆ ಮಾಡಿಕೊಂಡಿರುತ್ತಾರೆ.
ಹಾಗಾದರೆ ಈ ಬಾರಿ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಬೇಜಾರಾಗದಂತೆ, ಹೆಚ್ಚು ಉಪಯುಕ್ತವಾಗುವ ಹಾಗೆ ಮಾಡುವುದು ಹೇಗೆ ಎನ್ನುವುದಕ್ಕೆ ಹಲವು ಸಲಹೆಗಳನ್ನು ನೀಡಲಾಗಿದೆ.

ಅಜ್ಜಿ ಮನೆ ಅನುಭವದ ಗಣಿ
ಎಲ್ಲ ವಿದ್ಯೆಗಳಿಗಿಂತ ದೊಡ್ಡದು ಅನುಭವ. ಹೀಗಾಗಿಯೇ ಮನೆಗಳಲ್ಲಿರುವ ಹಿರಿಯರು ವಿಶ್ವಕೋಶ ಇದ್ದಂತೆ ಎಂಬ ಮಾತಿದೆ. ಇವರು ಎಲ್ಲ ರೀತಿಯ ಅನುಭವಗಳಿಂದ ಮಾಗಿರುತ್ತಾರೆ. ಅದರಲ್ಲೂ ಅಜ್ಜ, ಅಜ್ಜಿಯರಿಗೆ ಮೊಮ್ಮಕ್ಕಳೆಂದರೆ ಪ್ರೀತಿ ಜಾಸ್ತಿಯೇ ಇರುತ್ತದೆ. ತಮ್ಮೆಲ್ಲ ಅನುಭವಗಳನ್ನು ಅವರಿಗೆ ಧಾರೆ ಎರೆಯಬೇಕೆಂಬ ಬಯಕೆ ಇಟ್ಟುಕೊಂಡಿರುತ್ತಾರೆ.
ಮುದ್ದು ಮಾಡುತ್ತಾ, ಬೇಕಾದ ತಿಂಡಿ ತಿನಿಸುಗಳನ್ನು ಕೊಡುತ್ತಾ ತನ್ನ ಮೊಮ್ಮಗನಿಗೆ ಇಲ್ಲವೆ ಮೊಮ್ಮಗಳಿಗೆ ಏನು ಕಲಿಸಬೇಕು. ಯಾವ ರೀತಿ ಕಲಿಸಬೇಕೆಂಬ ಜಾಣ್ಮೆಯು ಅವರಿಗೆ ಇರುತ್ತದೆ. ಮೊಮ್ಮಕ್ಕಳು ಕೂಡ ಅಜ್ಜ, ಅಜ್ಜಿಯಂದಿರ ಜೊತೆ ಬಹುಬೇಗನೆ ಹೊಂದಿಕೊಂಡು ಬಿಡುತ್ತಾರೆ. ಕೆಲವು ದಿನಗಳಾದರೂ ಅಜ್ಜಿ ಮನೆಗೆ ಹೋಗಿಬನ್ನಿ.
ಮಕ್ಕಳು ಶಾಲೆಗಳಲ್ಲಿ ತಾವು ಕಲಿತದನ್ನು ಸೃಜನಾತ್ಮಕವಾಗಿ ಎಕ್ಸ್ ಪ್ಲೋರ್ ಮಾಡಲು ಉತ್ತಮ ಅವಕಾಶ ಸಿಗುವುದು ಅಜ್ಜಿ ಮನೆಗಳಲ್ಲಿ ಮಾತ್ರ. ಅಜ್ಜ, ಅಜ್ಜಿಯರು ತಮ್ಮ ಮೊಮ್ಮಕ್ಕಳ ಬೇಕು, ಬೇಡಗಳಿಗೆ ಮೊದಲ ಆದ್ಯತೆ ಕೊಡುತ್ತಾರೆ. ಹಾಗೂ ಮೊಮ್ಮಕ್ಕಳು ಮಾಡುವ ಹೊಸ ಪ್ರಯೋಗಗಳು ಹೇಗಾಗುತ್ತವೆ ಎಂಬುದನ್ನು ಖುದ್ದು ನೋಡುವಂತಹ ಕಾಳಜಿ ಹಾಗೂ ಸಮಯ ಇರುವುದು ಅಜ್ಜ ಅಜ್ಜಿಯರಿಗೆ ಮಾತ್ರ.
ಕಲಿಕೆಯ ಅವಕಾಶಗಳು
ನಮ್ಮಲ್ಲಿ ಕಲಿಕೆ ಅಂದ್ರೆ ಅಕ್ಷರಾಭ್ಯಾಸವೊಂದೇ ಅಂದುಕೊಳ್ಳುವವರೇ ಹೆಚ್ಚು. ಆದರೆ, ರಾಗಿ ಮಾಟುವ ವಿದ್ಯೆ ಯಾವ ಶಾಲಾ, ಕಾಲೇಜುಗಳಲ್ಲಿ ಕಲಿಯಲು ಸಾಧ್ಯ. ರಾಗಿ ಮಾಟುವ ಲಯವನ್ನು ಅಜ್ಜಿಯಂದಿರ ಬಳಿಯೇ ಕಲಿಯಲು ಸಾಧ್ಯ. ಈಜು, ರಂಗೋಲಿ, ಅಡುಗೆ ಮಾಡುವುದು, ಸೈಕಲ್ ಕಲಿಕೆ ಹೀಗೆ ಹತ್ತಾರು ಕಲಿಕೆಯನ್ನು ಅಜ್ಜಿ ಮನೆಯಲ್ಲಿ ಕಲಿಯಲು ಸೂಕ್ತ ಜಾಗವೆಂದರೆ ತಪ್ಪಾಗಲಾರದು.
ಗ್ರಾಮೀಣ ಆಟಗಳ ಪರಿಚಯ ಮಾಡಿಸಿ
ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಗ್ರಾಮೀಣ ಆಟಗಳ ಪರಿಚಯ ಮಾಡಿಸಿ. ಇದರಿಂದ ಮೊಮ್ಕಕ್ಕಳಿಗೆ ಆಗುವ ಅನುಕೂಲ ಒಂದೆರಡಲ್ಲ. ಅಜ್ಜಿ ಮನೆಯ ಅನುಭವದ ಜೊತೆ ಜೊತೆಗೆ ನಗರ ಪ್ರದೇಶದಲ್ಲಿ ಬೆಳೆದಿರುವ ಮಕ್ಕಳಿಗೆ ಪ್ರತಿ ಜಾಗವು ಹೊಸ ಅನುಭವವೇ ಆಗಿರುತ್ತದೆ. ಹೊಲ, ತೋಟಗಳ ಕಡೆಗೆ ಒಂದು ರೌಂಡ್ ಹೋಗಿ ಬಂದರೂ ನಗರದ ಮಕ್ಕಳಿಗೆ ಕಂಡಿದೆಲ್ಲ ಹೊಸದೇ ಆಗಿರುತ್ತದೆ.
ತಾವು ತಟ್ಟೆಯಲ್ಲಿ ತಿನ್ನುವ ಕ್ಯಾರೆಟ್, ಮೂಲಂಗಿ, ಟೊಮೆಟೊ, ತೊಂಡೆಕಾಯಿ, ಬಿನ್ಸ್ ಹೀಗೆ ನಮ್ಮ ಊಟದ ತಟ್ಟೆಗಳಲ್ಲಿರುವ ತರಕಾರಿಗಳ ಮೂಲ ಎಲ್ಲಿ, ಅವುಗಳ ಮೂಲ ಸ್ವರೂಪ ಹೇಗಿರುತ್ತದೆ. ಅವುಗಳ ಬೆಳವಣಿಗೆಯ ಹಂತಗಳನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ. ಮಾವಿನ ಮರದಲ್ಲಿ ಮಾವಿನ ರುಚಿ, ತೆಂಗಿನ ಮರದಲ್ಲಿ ಎಳೆನೀರನ್ನು ಅಲ್ಲಿಯೇ ಸವಿಯುವಂತಹ ಅವಕಾಶ ನಗರದಲ್ಲಿ ಸಿಗಲಾರದು.
ಇನ್ನೂ ಮುಂದುವರೆದಂತೆ ಗ್ರಾಮೀಣ ಆಟಗಳಿಗೆ ನಗರದ ಮಕ್ಕಳು ಮನಸಾರೆ ಆನಂದಿಸುವುದರಲ್ಲಿ ಎರಡು ಮಾತಿಲ್ಲ. ಬುಗರಿ, ಗೋಲಿ, ಕುಂಟಾಟ, ಕುಂಟೆ ಬಿಲ್ಲೆ, ಲಗೋರಿ ಹೀಗೆ ಹತ್ತಾರು ಗ್ರಾಮೀಣ ಆಟಗಳಲ್ಲಿ ಮಿಂದೇಳುವ ಅವಕಾಶವನ್ನು ಯಾರು ಮಿಸ್ ಮಾಡಿಕೊಳ್ಳಲಾರರು. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ರಜೆಯಲ್ಲಿ ಗ್ರಾಮೀಣ ಭಾಗದ ಕಡೆಗೆ ಸುತ್ತಾಡಿಸುವಂತಹ, ಅಜ್ಜ ಅಜ್ಜಿಯರ ಮಡಿಲಲ್ಲಿ ಆಡುವ ಅವಕಾಶವನ್ನು ಕಲ್ಪಿಸಿಕೊಡುವುದನ್ನು ಮಾತ್ರ ಮರೆಯಬೇಡಿ.












Click it and Unblock the Notifications