ಸುಮಲತಾ: ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದ ಕರ್ನಾಟಕದ ಮೊದಲ ಮಹಿಳೆ
ಮಂಡ್ಯ,ಮೇ 23: ನಟ, ಮಾಜಿ ಸಂಸದ ದಿವಂಗತ ಅಂಬರೀಷ್ ಅವರ ಪತ್ನಿ ನಟಿ, ಸುಮಲತಾ ಅವರಿಗೆ ರಾಜಕೀಯ ರಂಗ ಹೊಸದೇನಲ್ಲ. ಆದರೆ, ಸಕ್ರಿಯವಾಗಿ ರಾಜಕೀಯ ರಂಗ ಪ್ರವೇಶಿಸಿರಲಿಲ್ಲ. ಅಂಬರೀಷ್ ಅವರ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಪಕ್ಷೇತರರಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದರು. ಇಂದು ಮೇ 23 ಪ್ರಕಟವಾದ ಫಲಿತಾಂಶದಂತೆ ನಿಖಿಲ್ ಕುಮಾರಸ್ವಾಮಿ ವಿರುದ್ಧ ಲಕ್ಷಾಂತರ ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ.
ಮುಖ್ಯಮಂತ್ರಿಗಳ ಪುತ್ರ ನಿಖಿಲ್ ವಿರುದ್ಧ ಸ್ಪರ್ಧಿಸಿದ್ದ ಸುಮಲತಾ ಅವರಿಗೆ ಬಿಜೆಪಿಯ ಬೆಂಬಲ ಸಿಕ್ಕರೂ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಇಂದಿನ ಗೆಲುವಿನ ಮೂಲಕ ಹೊಸ ಇತಿಹಾಸವನ್ನು ಸುಮಲತಾ ಸೃಷ್ಟಿಸಿದ್ದಾರೆ.
ಕರ್ನಾಟಕದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಸಂಸತ್ತಿಗೆ ಆಯ್ಕೆಯಾದವರ ಪೈಕಿ ಸುಮಲತಾ ಮೂರನೇಯವರು. ಆದರೆ, ಕಳೆದ 52 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಪಕ್ಷೇತರವಾಗಿ ನಿಂತು ಗೆದ್ದ ಮೊಟ್ಟ ಮೊದಲ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಮೈಸೂರು ರಾಜ್ಯವಿದ್ದಾಗ ದುಬೇ ರಾಜರಾಮ್ ಗಿರಿಧರ್ ಲಾಲ್ ಎಂಬುವರು ಬಿಜಾಪುರ ಉತ್ತರ ಲೋಕಸಭಾ ಕ್ಷೇತ್ರದಿಂದ 1957ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1967ರಲ್ಲಿ ದಿನಕರ ದೇಸಾಯಿ ಅವರು ಕೆನರಾ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಸುಮಲತಾ ವಿಷಯಕ್ಕೆ ಬಂದರೆ, ಸುಮಲತಾ ಅವರ ದಾಖಲೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗುತ್ತದೆ. 1951ರಲ್ಲಿ ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆನಿ ಮ್ಯಾಸ್ಕರೇನ್ ಎಂಬಾಕೆಯು ಮೊಟ್ಟ ಮೊದಲು ಈ ದಾಖಲೆ ಬರೆದವರಾಗಿದ್ದಾರೆ. ಕೇರಳದಿಂದ ಆಯ್ಕೆಯಾದ ಮೊದಲ ಸಂಸದೆ, ಮೊದಲ ಪಕ್ಷೇತರ ಮಹಿಳಾ ಸಂಸದೆ ಎಂಬ ದಾಖಲೆ ಹೊಂದಿದ್ದಾರೆ. ಈಗ ಈ ಸಾಲಿಗೆ ಸುಮಲತಾ ಕೂಡಾ ಸೇರಿಕೊಂಡಿದ್ದಾರೆ.












Click it and Unblock the Notifications