ಸಿಂಧನೂರಿನ ಸುಬಾನ್‍ಸಾಬ: ಇವರಿಗೆ ಕಾಲಿಲ್ಲ ಆದರೂ ಕೆಲಸ ಮಾಡ್ತಾರೆ!
ರಾಯಚೂರು ಡಿಸೆಂಬರ್ 3: ಜೀವನದಲ್ಲಿ ಉತ್ತಮ ಬದುಕು ಕಟ್ಟಿಕೊಂಡು ಸಾಧನೆ ಮಾಡಲು ಸದೃಢ ಕಾಯವೇ ಇರಬೇಕಾಗಿಲ್ಲ. ಕಾಲು ಇಲ್ಲದಿದ್ದರೂ ಸುಂದರ ಬದುಕು ಕಟ್ಟಿಕೊಳ್ಳಬಹುದೆಂದು ಸಿಂಧನೂರಿನ ಸುಬಾನ್‍ಸಾಬ ನಿರೂಪಿಸಿದ್ದಾರೆ.
ಸಿಂಧನೂರಿನ ಇಂದಿರಾನಗರದ ನಿವಾಸಿಯಾಗಿರುವ ಸುಬಾನ್‍ಸಾಬ ಅವರಿಗೆ ಎರಡು ಕಾಲುಗಳಿಲ್ಲ. ತೆವಳುತ್ತಲೇ ನಡೆಯುತ್ತಾರೆ. ಗೆಳೆಯರ ಸಹಾಯದಿಂದ ಸೈಕಲ್ ಮೇಲೆ ಕುಳಿತು ಹೋಗಿ ಪಿಯುಸಿಯವರೆಗೆ ಓದಿದ್ದಾರೆ. ಮೂರು ಗಾಲಿ ಸೈಕಲ್ ಸಹಾಯದಿಂದ ಪದವಿ ಮುಗಿಸಿರುವ ಇವರಿಗೆ ಬೆಂಗಳೂರಿನ ಬಿಇಡಿ ಕಾಲೇಜೊಂದು ಪ್ರವೇಶ ಕೊಡದ ಕಾರಣಕ್ಕಾಗಿ ಅವರು ಹುಡುಕಿಕೊಂಡ ಉದ್ಯೋಗ ಗ್ಯಾರೇಜ್ ಕೆಲಸ. ಮನೆ, ಗೋಡೌನ್, ವಾಣಿಜ್ಯ ಮಳಿಗೆ ಸೇರಿದಂತೆ ಯಾವುದೇ ವೆಲ್ಡಿಂಗ್ ಕೆಲಸಗಳಿದ್ದರೂ ಸುಬಾನ್‍ಸಾಬ ಅವರನ್ನು ಜನರು ಹುಡುಕಿಕೊಂಡು ಬರುತ್ತಾರೆ.

25 ವರ್ಷಗಳಿಂದ ಗ್ಯಾರೇಜ್ ಕೆಲಸ ಮಾಡುತ್ತಾ ಬಂದಿರುವ ಅವರು ಇತ್ತೀಚಿನ ಏಳೆಂಟು ವರ್ಷಗಳಿಂದ ಕುರಿಮರಿ ಮತ್ತು ಮೇಕೆಯ ಮರಿ ಹಾಗೂ ಕೋಳಿಯನ್ನು ಸಾಕಿ ಮಾರಾಟ ಮಾಡುತ್ತಿದ್ದಾರೆ. ಗ್ಯಾರೇಜ್‍ನಲ್ಲಿ ಪ್ರತಿನಿತ್ಯ ಸರಾಸರಿ ರೂ.1000 ದುಡಿಯುವ ಸುಬಾನ್‍ಸಾಬ ಐದಾರು ಜನರಿಗೆ ತಮ್ಮ ಗ್ಯಾರೇಜ್‍ನಲ್ಲಿ ಉದ್ಯೋಗ ಕೊಟ್ಟಿದ್ದಾರೆ. ಕುರಿಮರಿ ಮತ್ತು ಮೇಕೆ ಮರಿಗಳನ್ನು ಕುರಿ ಸಂತೆಯಿಂದ ರೂ.4 ಸಾವಿರಕ್ಕೆ ತಂದು ಮೂರ್ನಾಲ್ಕು ತಿಂಗಳು ಸಾಕಿ ತಲಾ ರೂ.18 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದು, ಮೇಕೆಯ ಗಂಡು ಮರಿಗೆ ಹೆಚ್ಚಿನ ಬೇಡಿಕೆಯಿದೆ ಎನ್ನುತ್ತಾರೆ.
30 ಕುರಿಮರಿ, 35 ಆಡಿನ ಮರಿ, 30 ಕೋಳಿಗಳನ್ನು ಸಾಕಿದ್ದು, ರೂ.500 ದಿಂದ ರೂ.2500 ವರೆಗೆ ಪ್ರತಿ ಕೋಳಿಗೆ ದರ ಸಿಗುತ್ತದೆ ಎಂದು ಸುಬಾನ್‍ಸಾಬ ಹೇಳುತ್ತಾರೆ.
ಕುಗ್ಗದ ಜೀವನೋತ್ಸಾಹ: ಕಾಯಕ ಮಾಡಿ ಜೀವನ ಸಾಗಿಸುತ್ತಿದ್ದ ಸುಬಾನ್‍ಸಾಬರಿಗೆ 2013 ರಲ್ಲಿ ಪಾಶ್ರ್ವವಾಯು ಕಾಯಿಲೆ ಕಾಡಿತಾದರೂ ಧೈರ್ಯಗೆದೆ ಮನೋಬಲದಿಂದ ವ್ಯಾಯಾಮ, ಧ್ಯಾನ, ಪ್ರಾಣಾಯಾಮ ಮಾಡುವ ಮೂಲಕ ಪುನಃ ಮೊದಲಿನಂತಾಗಿದ್ದಾರೆ. 50 ವರ್ಷ ದಾಟಿದ್ದರೂ ತಮ್ಮ ವೃತ್ತಿಯಿಂದ ಹಿಂದೆ ಸರಿದಿಲ್ಲ.
ತುಂಬಾ ಜೀವನೋತ್ಸಾಹ ಹೊಂದಿರುವ ಸುಬಾನ್‍ಸಾಬ ಪಟ್ಟಣದ ಪಕ್ಕದಲ್ಲಿಯೇ ಇರುವ ಹಳ್ಳದ ದಂಡೆಯಲ್ಲಿ ಬಪ್ಪೂರು ರಸ್ತೆಗೆ ಹೊಂದಿಕೊಂಡುರುವ ಜಮೀನಿನಲ್ಲಿ ಆಕಳು ಮತ್ತು ಎಮ್ಮೆ ಸಾಕಾಣಿಕೆ ಮಾಡಿ ಹೈನುಗಾರಿಕೆಯನ್ನು ಅಭಿವೃದ್ಧಿಗೊಳಿಸುವ ಗುರಿ ಹೊಂದಿರುವುದಾಗಿ ಹೇಳುತ್ತಿರುವ ಅವರು ಈಗಾಗಲೇ ರೂ.5 ಲಕ್ಷ ಸಾಲಕ್ಕೆ ಅರ್ಜಿ ಹಾಕಿದ್ದು, ಇಷ್ಟರಲ್ಲಿಯೇ ಮಂಜೂರಾಗು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಪತ್ನಿ ಜೈನಾಬಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದರೂ ಗಂಡನ ಕುರಿಮರಿ, ಮೇಕೆಮರಿ ಮತ್ತು ಕೋಳಿ ಸಾಕಾಣಿಕೆಗೆ ಸಹಕಾರ ನೀಡುತ್ತಿದ್ದಾರೆ. ಮಕ್ಕಳಾದ ಶಬಾನಾಬೇಗಂ, ಶಮ್ರೀನ್‍ಬೇಗಂ ಮತ್ತು ಪುತ್ರ ಸಮೀರ್‍ಪಾಶಾ ಹಾಗೂ ಅಳಿಯಂದಿರ ಸಹಕಾರವಿದೆಯೆಂದು ಸುಬಾನ್‍ಸಾಬ ಕೃತಜ್ಞತೆಯಿಂದ ಹೇಳುತ್ತಾರೆ.
ಅಪ್ಪಟ ಸ್ವಾಭಿಮಾನಿ: ಸ್ವಂತ ಶ್ರಮದಿಂದ ದುಡಿದರೆ ಮಾತ್ರ ನನಗೆ ಊಟ ಮಾಡುವ ಅಧಿಕಾರವಿದೆ. ಇಲ್ಲದಿದ್ದರೆ ನಾನು ಪರರ ಮುಲಾಜಿನಲ್ಲಿ ಜೀವನ ಮಾಡಬೇಕಾಗುತ್ತದೆ. ಆದ್ದರಿಂದ ಯಾರನ್ನು ಕೈಯೊಡ್ಡಿ ಬೇಡದಂತೆ ಕಾಪಾಡಲು ಅಲ್ಲಾಹನನ್ನು ಪ್ರಾರ್ಥಿಸುತ್ತಿದ್ದೇನೆ ಎಂದು ಸ್ವಾಭಿಮಾನ ಬಿಚ್ಚಿಟ್ಟರು.












Click it and Unblock the Notifications