ಮೈಸೂರಿನ ಕೂರ್ಗಲ್ಲು ಗ್ರಾಮದಲ್ಲಿ ಸಿಕ್ತು ಶಿಲಾಯುಗದ ಕಲ್ಲಿನ ಕೊಡಲಿ!

ಮೈಸೂರು, ಜನವರಿ 8: ಸುಮಾರು ನಾಲ್ಕು ಸಾವಿರ ವರ್ಷಗಳ ಕಾಲಮಾನದ ನವಶಿಲಾಯುಗ ಸಂಸ್ಕೃತಿಯ ಮಾನವನ ಕಲ್ಲಿನ ಕೊಡಲಿ, ಕಲ್ಲಿನಾಯುಧಗಳು ಹಾಗೂ ಹುಟ್ಟು ಬಂಡೆಯ ಮೇಲೆ ಆಯುಧಗಳನ್ನು ನಯಗೊಳಿಸಿಕೊಂಡಿರುವ, ಅರೆದಿರುವ ಎರಡು ಕುಳಿಗಳು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯ ಕೂರ್ಗಲ್ಲು ಗ್ರಾಮದಲ್ಲಿ ಪತ್ತೆಯಾಗಿವೆ.

ಮೈಸೂರಿನ ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಜಿ. ರಾಮದಾಸ ರೆಡ್ಡಿ ಅವರು ಕೂರ್ಗಲ್ಲು ಗ್ರಾಮದ ಜಯಣ್ಣ, ಕೆ.ಎನ್.ಮಹೇಶ್, ಗ್ರಾಮದ ಯಜಮಾನರಾದ ಕೆ.ಎಸ್. ಚಂದ್ರಣ್ಣ ಹಾಗೂ ಉಪನ್ಯಾಸಕರಾದ ಬಿ,ಎಸ್.ಚರಣ್‍ಕುಮಾರ್, ಎಚ್.ಜೆ.ರಾಜು ಹಾಗೂ ಎನ್.ಎಸ್.ಎಸ್.ಸ್ವಯಂ ಸೇವಕರಾದ ಸಿ.ಧನರಾಜ್ ಹಾಗೂ ಎಸ್.ಪಿ.ಮಲ್ಲಪ್ಪ, ಎ.ಆರ್.ವಿಕಾಸ್ ಅವರ ಸಹಕಾರದೊಂದಿಗೆ ಕ್ಷೇತ್ರ ಕಾರ್ಯ ಮಾಡಿ ನೆಲೆಯನ್ನು ಹಾಗೂ ಅವಶೇಷಗಳನ್ನು ಶೋಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಂಗರು ಆಳ್ವಿಕೆ ನಡೆಸುತ್ತಿದ್ದ ಪ್ರದೇಶ

ಗಂಗರು ಆಳ್ವಿಕೆ ನಡೆಸುತ್ತಿದ್ದ ಪ್ರದೇಶ

ಇತಿಹಾಸವನ್ನು ತಿರುವಿದರೆ ಕೂರ್ಗಲ್ಲು ಎಂಬ ಗ್ರಾಮವು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಹೋಬಳಿಯ ಗ್ರಾಮವಾಗಿದ್ದು, ಈ ಗ್ರಾಮದ ನೆಲೆಯು ಹೋಬಳಿ ಕೇಂದ್ರದಿಂದ 2 ಕಿ.ಮೀ, ತಾಲ್ಲೂಕು ಕೇಂದ್ರದಿಂದ 14 ಕಿ.ಮೀ, ಜಿಲ್ಲಾ ಕೇಂದ್ರದಿಂದ 74 ಕಿ.ಮೀ ದೂರದಲ್ಲಿದೆ. ಈ ಗ್ರಾಮದ ಭೂ ಭಾಗವನ್ನು ಗಂಗರ ರಾಜನಾದ ಭೂತುಗನ ರಾಣಿ ಪರಮಬ್ಬೆಯು ಆಳ್ವಿಕೆ ನಡೆಸುತ್ತಿದ್ದ ಭೂ ಪ್ರದೇಶವಾಗಿತ್ತು. (ಇ.ಸಿ.ಸಂ.4 ಶಾಸನ 28, ಕೂರಗಲ್ಲು) ಇದು 10ನೇ ಶತಮಾನದಿಂದ 17 ನೇ ಶತಮಾನದವರೆಗಿನ 8 ಶಾಸನಗಳಿರುವ ಶಾಸನೋಕ್ತ ಐತಿಹಾಸಿಕ ಗ್ರಾಮವಾಗಿರುವುದು ಕಂಡು ಬರುತ್ತದೆ.

ಪಿರಿಯಾಪಟ್ಟಣ ತಾಲೂಕಿನಲ್ಲಿಯೇ ಮೊದಲ ಶೋಧನೆ

ಪಿರಿಯಾಪಟ್ಟಣ ತಾಲೂಕಿನಲ್ಲಿಯೇ ಮೊದಲ ಶೋಧನೆ

ಇದೀಗ ಶೋಧನೆ ವೇಳೆ ಕಲ್ಲಿನ ಕೊಡಲಿ, ಕಲ್ಲಿನಾಯುಧಗಳು, ಹುಟ್ಟು ಬಂಡೆಯ ಮೇಲೆ ಆಯುಧಗಳನ್ನು ನಯಗೊಳಿಸಿಕೊಂಡಿರುವ, ಅರೆದಿರುವ ಎರಡು ಕುಳಿಗಳು ದೊರೆತಿದ್ದು, ಇದು ಪಿರಿಯಾಪಟ್ಟಣ ತಾಲೂಕಿನಲ್ಲಿಯೇ ಮೊಟ್ಟ ಮೊದಲ ಶೋಧನೆಯಾಗಿದೆ. ಸುಮಾರು ಮೂರು ಸಾವಿರ ವರ್ಷಗಳ ಕಾಲಾವಧಿಯ ಬೃಹತ್ ಶಿಲಾಯುಗ ಸಂಸ್ಕೃತಿಯ ಎರಡು ಕಲ್ಲು ವೃತ್ತವಿರುವ, ಮಧ್ಯಭಾಗದಲ್ಲಿ ಶಿಲಾತೊಟ್ಟಿ ಸಮಾಧಿಗಳು, ಹಾಳಾಗಿರುವ ಕಂಡಿ ಕೋಣೆ ಶಿಲಾತೊಟ್ಟಿ ಸಮಾಧಿಗಳು, ಕಲ್ಲು ವೃತ್ತ ಸಮಾಧಿಗಳು ಮತ್ತು ವಿವಿಧ ಬಣ್ಣಗಳ ಮಣ್ಣಿನ ಮಡಕೆಗಳ ತುಣುಕುಗಳು ಶೋಧನೆ ವೇಳೆ ದೊರೆತಿವೆ.

ನಾಲ್ಕು ಸಾವಿರ ವರ್ಷಗಳ ಹಿಂದಿನ ಕಲ್ಲಿನ ಕೊಡಲಿ

ನಾಲ್ಕು ಸಾವಿರ ವರ್ಷಗಳ ಹಿಂದಿನ ಕಲ್ಲಿನ ಕೊಡಲಿ

ಕೂರ್ಗಲ್ಲು ಗ್ರಾಮದ ಉತ್ತರಕ್ಕೆ ಜಯಣ್ಣ ಅವರ ಜಮೀನಿನಲ್ಲಿ ನವಶಿಲಾಯುಗ ಸಂಸ್ಕೃತಿಯ (4000 ವರ್ಷ) ಡಾಲೋರೈಟ್ ಡೈಕ್‍ನ 5 ಇಂಚು ಉದ್ದದ ಕಲ್ಲಿನಕೊಡಲಿ, ರಂಧ್ರವಿರುವ ತಿರುಗಣಿ, ಅರೆಯುವ ಕಲ್ಲು, ಕಲ್ಲಿನ ಒನಕೆ ಇತರೆ ಕಲ್ಲಿನಾಯುಧಗಳು ದೊರಕಿವೆ ಹಾಗೂ ಹುಟ್ಟು ಬಂಡೆಯ ಮೇಲೆ ಆಯುಧಗಳನ್ನು ನಯಗೊಳಿಸಿ ಕೊಂಡಿರುವ 8 ಇಂಚು ಉದ್ದ, 5 ಇಂಚು ಆಗಲ, 5 ಇಂಚು ಆಳವಿರುವ ಹಾಗೂ 8 ಇಂಚು ಉದ್ದ, 6 ಇಂಚು ಅಗಲ, 6 ಇಂಚು ಆಳವಿರುವ ಎರಡು ಕುಳಿಗಳು ಶೋಧನವಾಗಿವೆ, ಈ ತರಹದ ಕಲ್ಲಿನ ಕೊಡಲಿ ಮತ್ತು ಇತರೆ ಕಲ್ಲಿನಾಯುಧಗಳು ಹಾಗೂ ಆಯುಧಗಳನ್ನು ಅರೆದಿರುವ ಕುಳಿಗಳು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಂಗನಕಲ್ಲು, ಕುಪ್ಪಗಲ್ಲು ನೆಲೆಗಳ ಆಯುಧಗಳ ಹಾಗೂ ಕುಳಿಗಳ ಹಾಗೆ ಹೋಲಿಕೆ ಇವೆ.

ಗ್ರಾಮದಲ್ಲಿ ದೊರೆತಿದೆ ಶಿಲಾಯುಗ ವಸ್ತುಗಳು

ಗ್ರಾಮದಲ್ಲಿ ದೊರೆತಿದೆ ಶಿಲಾಯುಗ ವಸ್ತುಗಳು

ಇನ್ನು ಬೃಹತ್ ಶಿಲಾಯುಗ ಸಂಸ್ಕೃತಿಯ ಕಾಲದ ಕೆಂಪು, ಕಪ್ಪು ಬಣ್ಣದ ಹಾಗೂ ಕೆಂಪು ಮತ್ತು ಕಪ್ಪು ಬಣ್ಣದ ಮಡಕೆ ತುಣುಕುಗಳು ಮತ್ತು ಗಾಜಿನಂತೆ ಹೊಳೆಯುವ ಕಪ್ಪು ಬಣ್ಣದ ಮಡಕೆ ತುಣುಕುಗಳು, ಕೆಂಪು ಬಣ್ಣದ ಮಡಕೆಗಳ ಮೇಲೆ ಕೆಂಪು ಬಣ್ಣ ಲೇಪನ ಮಾಡಿದ ಮಡಿಕೆ ತುಂಡುಗಳು ದೊರಕಿವೆ. ಹಾಗೂ ಜಯಣ್ಣನವರ ಜಮೀನಿನಲ್ಲಿ ಹಾಳಾಗಿರುವ ಕಲ್ಲುವೃತ್ತ ಶಿಲಾತೊಟ್ಟಿ ಸಮಾಧಿಗಳು, ಇದೇ ಗ್ರಾಮದ ಕಾಳೇಗೌಡ, ರಾಮೇಗೌಡರವರ ಜಮೀನಿನಲ್ಲಿ ತ್ರುಟಿತ ಗೊಂಡಿರುವ ಕಂಡಿಕೋಣೆ ಶಿಲಾತೊಟ್ಟಿ ಸಮಾಧಿಗಳು, ಕಲ್ಲು ವೃತ್ತ ಸಮಾಧಿಗಳು, ಬೆಟ್ಟದಪುರದ ನಾಗರಾಜು, ಕೂರ್ಗಲ್ಲಿನ ಅಣ್ಣಯ್ಯ, ಗೋವಿಂದಯ್ಯ ಇವರ ಜಮೀನುಗಳಲ್ಲಿ ಸುಮಾರು 23 ಅಡಿ, 19 ಅಡಿ ಸುತ್ತಳತೆ ಇರುವ ವಿವಿಧ ಆಳತೆಯ ಎರಡು ಕಲ್ಲು ವೃತ್ತವಿರುವ ಹಾಗೂ ಮಧ್ಯಭಾಗದಲ್ಲಿ ಶಿಲಾತೊಟ್ಟಿ ಇರುವ 5 ಸಮಾಧಿಗಳು ಶೋಧವಾಗಿವೆ. ಸಮಾಧಿಗಳ ಮೇಲೆ 9 ಅಡಿ ಉದ್ದ, 3 ಅಡಿ ವಿಸ್ತಿರ್ಣದ ಬಂಡೆಗಳನ್ನು ಹಾಸಲಾಗಿದೆ.

ಇತರೆಡೆಯ ಸಮಾಧಿಗಳ ಹೋಲಿಕೆ ಇಲ್ಲಿದೆ

ಇತರೆಡೆಯ ಸಮಾಧಿಗಳ ಹೋಲಿಕೆ ಇಲ್ಲಿದೆ

ಈ ರೀತಿಯ ಸಮಾಧಿಗಳ ಹಾಗೂ ಅವಶೇಷಗಳ ಹಾಗೆಯೇ ನಾಗರಹೊಳೆ, ಬಂಡಿಪುರ ಆಭಯಾರಣ್ಯಗಳಲ್ಲಿ, ಇದೇ ತಾಲೂಕಿನ ದೊಡ್ಡ ನೆರಳೆ, ಚಿಕ್ಕನೆರಳೆ, ಕೊಪ್ಪ, ಹೆಗ್ಗಡೆಹಳ್ಳಿ, ಬ್ರಹ್ಮಗಿರಿ, ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಆಯರಹಳ್ಳಿ, ಹುಣಸೂರು ತಾಲೂಕಿನ ಆಯಿರಹಳ್ಳಿ, ರಾಮನಗರ, ಬೆಂಗಳೂರು ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇಶ, ಕೇರಳ ರಾಜ್ಯಗಳಲ್ಲಿ ಈ ಸಮಾಧಿಗಳ ಹಾಗೆ ಹೋಲಿಕೆ ಇವೆ. ಗ್ರಾಮದ ಭೂಭಾಗದಲ್ಲಿ ಚಿತ್ರಮಠ, ಕಳ್ಳರಗವಿ, ಚೌಡಮ್ಮನ ಕೊಳ, ಬಸವನ ಕಟ್ಟೆ, ಎಮ್ಮೆ ಬಸವೇಶ್ಪರ ದೇವಾಲಯ, ಉಪ್ಪರಿಗೆ ಬಸಪ್ಪ ದೇವಾಲಯ, ಸೀತೆಯ ಪಾದ, ನಾಲ್ಕು ಕಾಲು ಮಂಟಪ, ಸೀತೆಯ ಕಣ್ಣೀರು ಎಂದು ಕರೆಯುವ ಐತಿಹಾಸಿಕ ಸ್ಥಳಗಳು ಇಲ್ಲಿವೆ.

ಸಂರಕ್ಷಣೆ ಮಾಡಿಕೊಳ್ಳುವ ಅಗತ್ಯತೆ ಇದೆ

ಸಂರಕ್ಷಣೆ ಮಾಡಿಕೊಳ್ಳುವ ಅಗತ್ಯತೆ ಇದೆ

ಈ ತರಹದ ವಿವಿಧ ನಮೂನೆಯ ಸಮಾಧಿಗಳನ್ನು ಉತ್ಖನನಕ್ಕೆ ಒಳಪಡಿಸಿದ್ದು, ಬೃಹತ್ ಶಿಲಾಯುಗ ಸಂಸ್ಕೃತಿ ಜನ ಸಮುದಾಯದ ಸಮಾಧಿ ಕ್ರಿ.ಪೂ. 800-700ಗಳೆಂದು ಖಚಿತಪಟ್ಟಿದೆ. ಈ ಶೋಧನೆ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿಯೇ ಮೊಟ್ಟ ಮೊದಲ ಶೋಧನೆಯಾಗಿದ್ದು, ನೆಲೆ ಹಾಗೂ ಸಮಾಧಿಗಳನ್ನು ಕಿತ್ತು ಕೃಷಿಗೆ ಒಳಪಡಿಸಿಕೊಳ್ಳುತ್ತಿರುವುದರಿಂದ ಇದನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಮೈಸೂರಿನ ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಜಿ. ರಾಮದಾಸ ರೆಡ್ಡಿ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+