Maha Kumbh Mela 2025: ಮಹಾಕುಂಭ ಮೇಳದ ವೇಳೆ ಕಾಶಿಯ ಆರತಿ ಸಮಯದಲ್ಲಿ ಬದಲಾವಣೆ, ಪಟ್ಟಿ ಇಲ್ಲಿದೆ
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇದೇ ತಿಂಗಳಿನಿಂದ ಶುರುವಾಗಲಿರುವ ಮಹಾಕುಂಭಮೇಳವು ಈಗಾಗಲೇ ಕಳೆಗಟ್ಟಿದೆ. ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಸಭೆಯಾಗಿರುವ ಕುಂಭಮೇಳಕ್ಕೆ ದೇಶ ವಿದೇಶಗಳ ಜನರೂ ಸೇರಿ ಕೋಟ್ಯಂತರ ಮಂದಿ ಭಕ್ತರು ಸೇರುವ ನಿರೀಕ್ಷೆ ಇದೆ. ಇನ್ನು ಮಹಾಕುಂಭಮೇಳದ ಹಿನ್ನೆಲೆ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಆರತಿ ಸಮಯ ಕೂಡ ಬದಲಾವಣೆ ಮಾಡಲಾಗಿದೆ.
ಕುಂಭಮೇಳ 2025ಕ್ಕೆ ಪ್ರಯಾಗ್‌ರಾಜ್ ಸಜ್ಜಾಗುತ್ತಿದ್ದಂತೆ ವಾರಣಾಸಿ ಕ್ಷೇತ್ರ ಕೂಡ ಕೋಟ್ಯಂತರ ಭಕ್ತರನ್ನು ಸ್ವಾಗತಿಸಲು ಸಜ್ಜಾಗಿದೆ. ಸಾಮಾನ್ಯವಾಗಿ ಕುಂಭಮೇಳಕ್ಕೆ ಭೇಟಿ ನೀಡುವ ಹೆಚ್ಚಿನ ಯಾತ್ರಾರ್ಥಿಗಳು ಮೊದಲು ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ನಂತರ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಮತ್ತು ಭಗವಾನ್ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸಲು ಕಾಶಿಗೆ ಪ್ರಯಾಣಿಸುತ್ತಾರೆ.

ಇದರಿಂದ ವಾರಣಾಸಿಗೆ ಭೇಟಿ ನೀಡುವವರ ಸಂಖ್ಯೆ ಕೂಡ ಅಧಿಕವಾಗಿರುತ್ತದೆ. ಈ ಹಿನ್ನೆಲೆ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಶ್ರೀಕಾಶಿ ವಿಶ್ವನಾಥ ಟ್ರಸ್ಟ್‌ನವರು ಆರತಿಯ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಮುಖ್ಯವಾಗಿ ಮಹಾ ಕುಂಭಮೇಳದ ನಡೆಯುವ ಸಮಯದಲ್ಲಿ ಕಾಶಿಯಲ್ಲಿ ಆರತಿಯ ಸಮಯವನ್ನು ಬದಲಾಯಿಸಿದೆ. ಜನವರಿ 13 ಮತ್ತು ಫೆಬ್ರವರಿ 26ರ ನಡುವೆ ಸೋಮವಾರ, ಹುಣ್ಣಿಮೆ ಹಾಗೂ ಮಹಾಶಿವರಾತ್ರಿ ಹೊರತುಪಡಿಸಿ ಸಾಮಾನ್ಯ ದಿನಗಳಲ್ಲಿ ಶ್ರೀಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಆರತಿಗಳ ವೇಳಾಪಟ್ಟಿ ಈ ಮುಂದಿನಂತಿರಲಿದೆ..
ಮಂಗಳಾರತಿಯು ಬೆಳಿಗ್ಗೆ 2:45 ಗಂಟೆಗೆ ನಡೆಯಲಿದೆ. ಭೋಗ್ ಆರತಿ ಬೆಳಿಗ್ಗೆ 11:35 ಗಂಟೆಗೆ, ಸಪ್ತಋಷಿ ಆರತಿ ಸಂಜೆ 7:00 ಗಂಟೆಗೆ ಶೃಂಗಾರ್-ಭೋಗ್ ಆರತಿ ರಾತ್ರಿ 8:45 ಗಂಟೆಗೆ ಹಾಗೂ ಶಯನ ಆರತಿ ರಾತ್ರಿ 10:30 ಗಂಟೆಗೆ ನೆರವೇರಲಿದೆ. ಮಹಾ ಕುಂಭಮೇಳದ ಸಮಯದಲ್ಲಿ ಬರುವ ಸೋಮವಾರಗಳಾದ ಜನವರಿ 20, 27 ಮತ್ತು ಫೆಬ್ರವರಿ 3, 10, 17, 24ರಂದು ಶೃಂಗಾರ್-ಭೋಗ್ ಆರತಿ ರಾತ್ರಿ 9:00 ಗಂಟೆಗೆ ಹಾಗೂ ಶಯನ ಆರತಿಯು ರಾತ್ರಿ 10:45 ಗಂಟೆಗೆ ನೆರವೇರಲಿದೆ.

ಹುಣ್ಣಿಮೆಯಂದು ಮಹಾಕುಂಭ ಮೇಳದ ಸಮಯದಲ್ಲಿ, ಸಪ್ತಋಷಿ ಆರತಿ ಮತ್ತು ಶೃಂಗಾರ್-ಭೋಗ್ ಆರತಿಯ ಸಮಯವು ಪೂರ್ಣಿಮಾ ತಿಥಿಯಂದು ಜನವರಿ 13 ಮತ್ತು ಫೆಬ್ರವರಿ 12ರಂದು ಶ್ರೀಕಾಶಿ ವಿಶ್ವನಾಥ ಧಾಮದಲ್ಲಿ ಸಪ್ತಋಷಿ ಆರತಿ ಸಂಜೆ 6:15 ಗಂಟೆಗೆ ಹಾಗೂ ಶೃಂಗಾರ್-ಭೋಗ್ ಆರತಿ ರಾತ್ರಿ 8:00 ಗಂಟೆಗೆ ನೆರವೇರಲಿದೆ. ಆದರೆ ಮಂಗಳಾರತಿ, ಮಧ್ಯಾಹ್ನದ ಭೋಗ್ ಆರತಿ ಮತ್ತು ಶಯನ ಆರತಿ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದೆ.
ಮಹಾ ಶಿವರಾತ್ರಿಯಂದು ಶ್ರೀಕಾಶಿ ವಿಶ್ವನಾಥ ದೇವಾಲಯವು ರಾತ್ರಿಯಿಡೀ ತೆರೆದಿರುತ್ತದೆ. ಜೊತೆಗೆ ಮಹಾಶಿವರಾತ್ರಿಯ ಪ್ರಯುಕ್ತ ಮಹಾಕುಂಭಮೇಳದ ಕೊನೆಯ ದಿನವಾದ ಫೆಬ್ರವರಿ 26ರಂದು ಕಾಶಿ ವಿಶ್ವನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಹಾಗೂ ಜಲಾಭಿಷೇಕ ಸಲ್ಲಿಸಲು ನಾಗಾ ಪಂಥದ ಅನುಯಾಯಿಗಳು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಲಿದ್ದಾರೆ.

ಈ ಹಿನ್ನೆಲೆ ಭಕ್ತರಿಗಾಗಿ ಅಂದು ದೇವಾಲಯದ ಬಾಗಿಲು ಬೆಳಿಗ್ಗೆ 2:15ಕ್ಕೆ ತೆರೆಯಲಿದೆ. ಭೋಗ್ ಆರತಿಯು ಬೆಳಿಗ್ಗೆ 11:35ರಿಂದ 12:35ರವರೆಗೆ ನಡೆಯುತ್ತದೆ. ಮಹಾಶಿವರಾತ್ರಿಯಂದು, ಸಪ್ತಋಷಿ, ಶೃಂಗಾರ್-ಭೋಗ್ ಮತ್ತು ಶಯನ ಆರತಿಗಳನ್ನು ಮಾಡಲಾಗುವುದಿಲ್ಲ. ಮಹಾಶಿವರಾತ್ರಿಯ ಎರಡನೇ ದಿನದಂದು ಮಂಗಳಾರತಿ ಕೂಡ ಮಾಡಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications