ಆವಲಬೆಟ್ಟಕ್ಕೆ ಹೋಗೋಣ ಅಂತಿದ್ದೀರಾ? ಈ ವಿಚಾರ ಗೊತ್ತಿರಲಿ..
ಬೆಂಗಳೂರಿಗರಿಗೆ ವೀಕೆಂಡ್ ಬಂತು ಅಂದ್ರೆ, ಹಬ್ಬವೋ ಹಬ್ಬ. ಬೈಕ್ ತಗೊಂಡು ಜುಯ್...ಎಂದು ಹೊರಟರೆ ಕಣ್ತುಂಬಿಕೊಂಡು ಬರೋಕೆ ಸಾಕಷ್ಟು ಜಾಗಗಳು ಬೆಂಗಳೂರಿನ ಸುತ್ತಮುತ್ತಲೇ ಇದೆ. ಅದರಲ್ಲೂ ಬೆಂಗಳೂರಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ಧಿ ಹೊಂದಿದೆ.
ಹಾಗಾಗಿ ವೀಕೆಂಡ್ ಬಂದರೆ, ನೇರವಾಗಿ ಏರ್‌ಪೋರ್ಟ್ ರೋಡಲ್ಲಿ ಚಿಕ್ಕಬಳ್ಳಾಪುರದ ಕಡೆಗೆ ಗುಂಪು ಗುಂಪಾಗಿ ಹೋಗುತ್ತಾರೆ. ಈ ಜಿಲ್ಲೆಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳಲ್ಲಿ ಆವಲಬೆಟ್ಟ ಕೂಡ ಒಂದು. ಇದು ಮೊದಲಿಗೆ ಹೆಚ್ಚು ಪ್ರಸಿದ್ಧಿ ಪಡೆದಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸಖತ್ ಫೇಮಸ್ ಅಂತೂ ಆಗಿದೆ. ಆವಲಬೆಟ್ಟದಲ್ಲಿರುವ ಒಂದು ಬಂಡೆ ಕೂಡ ಫುಲ್ ಫೇಮಸ್ ಆಗಿದೆ. ಅದರ ಮೇಲೆ ಕುಳಿತು ಫೋಟೋ ಕ್ಲಿಕ್ಕಿಸಿಕೊಳ್ಳಲೆಂದೇ ಬಹುತೇಕರು ಆವಲಬೆಟ್ಟಕ್ಕೆ ಬರುವುದೂ ಉಂಟು.

ಅದು ನೋಡಲು ಬೆಟ್ಟದ ತುದಿಯ ಮೇಲೆ ಎತ್ತರದ ಪ್ರದೇಶದಲ್ಲಿ ಕುಳಿತಿರುವಂತೆ ಕಾಣುತ್ತದೆ. ಹಾಗಾಗಿ, ಈಶಾ, ನಂದಿ ಹಿಲ್ಸ್ ನೋಡಲು ಬರುವವರು ಆವಲಬೆಟ್ಟಕ್ಕೆ ಬರದೆ ಹೋಗುವುದೇ ಇಲ್ಲ. ಇನ್ನು ಇತ್ತೀಚೆಗೆ ಈ ಆವಲಬೆಟ್ಟದಲ್ಲಿ ಕೆಲವರು ಮಿತಿಮೀರಿ ವರ್ತಿಸುತ್ತಿರುವ ಕಾರಣ, ಅಲ್ಲಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದರೂ ಕೆಲವರು ನಿಯಮ ಉಲ್ಲಂಘಿಸಿ ಬೆಟ್ಟಕ್ಕೆ ಹೋಗಿ ಬರುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.
ಇದೇ ರೀತಿ ಆವಲಬೆಟ್ಟಕ್ಕೆ ಹೋಗಿದ್ದ ಯುವಕರು ರೀಲ್ಸ್ ಅಪ್ಲೋಡ್ ಮಾಡಿ ಚಿಕ್ಕಬಳ್ಳಾಪುರ ಪೊಲೀಸರ ಅತಿಥಿಯಾಗಿದ್ದಾರೆ. ಬೆಟ್ಟಕ್ಕೆ ಅತಿಕ್ರಮ ಪ್ರವೇಶ ಮಾಡಿರುವ ಯುವಕರು, ಆ ಅಪಾಯಕಾರಿ ಬಂಡೆಯ ಮೇಲೆ ನೇತಾಡುತ್ತಾ ರೀಲ್ಸ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೇ ಅವರ ಪಾಲಿಗೆ ಮುಳುವಾಗಿ ಪರಿಣಮಿಸಿದೆ. ಈ ರೀಲ್ಸ್ ಪೊಲೀಸರ ಕಣ್ಣಿಗೆ ಬಿದ್ದಿದ್ದೇ ತಡ ಸೀದಾ ಅವರನ್ನ ಸ್ಟೇಷನ್‌ಗೆ ಕರೆಸಿಕೊಂಡು ಕ್ರಮ ಜರುಗಿಸಿದ್ದಾರೆ.

ಅಲ್ಲದೆ, ಆವಲಬೆಟ್ಟದಲ್ಲಿ ಅತಿಕ್ರಮ ಪ್ರವೇಶ ಮಾಡುವುದು ಗಂಭೀರ ಅಪರಾಧ! ಆವಲಬೆಟ್ಟ ಪ್ರದೇಶವನ್ನು ಸುರಕ್ಷತೆಯ ಅಪಾಯದ ಕಾರಣದಿಂದ ʼಅಪಾಯಕಾರಿʼ ಎಂದು ಗುರುತಿಸಲಾಗಿದೆ. ಇಲ್ಲಿ ರೀಲ್ಸ್‌ಗಳು, ವಿಡಿಯೋಗಳು ಅಥವಾ ಇತರ ಚಟುವಟಿಕೆಗಳಿಗಾಗಿ ಯಾರಾದರೂ ಅತಿಕ್ರಮವಾಗಿ ಪ್ರವೇಶಿಸಿದರೆ, ಅತಿಕ್ರಮಣಕ್ಕಾಗಿ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ವಾರ್ನಿಂಗ್ ಕೊಟ್ಟಿದ್ದಾರೆ.
ʼನಿಮ್ಮ ಸುರಕ್ಷತೆಯು ನಮ್ಮ ಆದ್ಯತೆಯಾಗಿದೆ-ನಿಯಮಗಳನ್ನು ಗೌರವಿಸಿ ಮತ್ತು ನಿರ್ಬಂಧಿತ ಪ್ರದೇಶಗಳನ್ನು ತಪ್ಪಿಸಿ! ಸುರಕ್ಷಿತವಾಗಿರಿ, ಕಾನೂನುಬದ್ಧವಾಗಿರಿʼ ಎಂದು ಪೊಲೀಸರು ಹೇಳಿದ್ದಾರೆ. ಹಾಗಾಗಿ ಆವಲಬೆಟ್ಟಕ್ಕೆ ಹೋಗಬೇಕು ಅಂದುಕೊಂಡಿದ್ದರೆ, ಕೂಡಲೇ ಆ ನಿರ್ಧಾರ ಕೈಬಿಡಿ..
ಅತಿಕ್ರಮಣಕ್ಕಾಗಿ ದಾಖಲಾದ ಪ್ರಕರಣಗಳು ಸೇರಿದಂತೆ ಕಠಿಣ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ನಿಮ್ಮ ಸುರಕ್ಷತೆಯು ನಮ್ಮ ಆದ್ಯತೆಯಾಗಿದೆ-ನಿಯಮಗಳನ್ನು ಗೌರವಿಸಿ ಮತ್ತು ನಿರ್ಬಂಧಿತ ಪ್ರದೇಶಗಳನ್ನು ತಪ್ಪಿಸಿ! ಸುರಕ್ಷಿತವಾಗಿರಿ, ಕಾನೂನುಬದ್ಧವಾಗಿರಿ! 🛑 @DgpKarnataka @IgpRange pic.twitter.com/mDpor4aaps
— Chikkaballapura District Police (@spcbpura) September 8, 2024
ಆವಲಬೆಟ್ಟದ ಹಿನ್ನೆಲೆ: ಆವಲಬೆಟ್ಟವನ್ನು ʼಧೇನುಗಿರಿʼ ಎಂದೂ ಕರೆಯಲಾಗುತ್ತದೆ. ಪುರಾಣದ ಪ್ರಕಾರ ಧೇನು ಅಥವಾ ಕಾಮಧೇನು, ಆವಲಬೆಟ್ಟದ ಪುರಾಣವನ್ನು ಹೊಂದಿದೆ. ಆವಲ ಎನ್ನುವುದು ತೆಲುಗು ಮೂಲದ ಹೆಸರು. ಆವು, ಆವಲ ಎಂದರೆ ಹಸು ಎಂದರ್ಥ. ಇದಕ್ಕಾಗಿಯೇ ಈ ಬೆಟ್ಟವನ್ನು ಆವಲಬೆಟ್ಟ ಎನ್ನುವ ಹೆಸರು ಬಂದಿದೆ ಎನ್ನಲಾಗಿದೆ.
ಬೆಂಗಳೂರಿನಿಂದ ಹೆಬ್ಬಾಳದ ರಸ್ತೆ, ಯಲಹಂಕದ ಮೂಲಕ ದೇವನಹಳ್ಳಿ ರಸ್ತೆಗೆ ಬಂದರೆ, ಚಿಕ್ಕಬಳ್ಳಾಪುರದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿ ಆವಲಬೆಟ್ಟ ತಲುಪಬಹುದಿತ್ತು. ಅಲ್ಲಿ ಸೂಕ್ತ ಭದ್ರತೆಯ ಕೊರತೆ ಹಾಗೂ ಅಪಾಯಕಾರಿ ಎಂದು ತಿಳಿದುಬಂದಿದ್ದರಿಂದ ಪೊಲೀಸರು ಇಲ್ಲಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದರು.












Click it and Unblock the Notifications