ಜಗತ್ತು ಏನೇ ಮಾಡಿದರೂ ನಮ್ಮಂತಹ ಜನರು ಸಕಾರಾತ್ಮಕವಾಗಿರುತ್ತಾರೆ: ಶಾರುಖ್ ಖಾನ್
ಕೋಲ್ಕತ್ತ, ಡಿಸೆಂಬರ್ 15: ಜಗತ್ತು ಏನೇ ಮಾಡಿದರೂ ನಮ್ಮಂತಹ ಜನರು ಸಕಾರಾತ್ಮಕವಾಗಿರುತ್ತಾರೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹೇಳಿದರು.
ಕೋಲ್ಕತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತು ಏನೇ ಮಾಡಲಿ, ಎಷ್ಟೇ ದ್ವೇಷವನ್ನು ಹರಡಲಿ ನಮ್ಮಂತಹ ಜನರು ಸಕಾರಾತ್ಮಕವಾಗಿರುತ್ತೇವೆ ಎಂದು ತಿಳಿಸಿದರು.
ಶಾರುಕ್ ಅಭಿನಯದ ಪಠಾಣ್ ಚಿತ್ರದ ವಿರುದ್ಧ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ದ್ವೇಷ ಹೇಳಿಕೆಗಳು ಹರಿದಾಡುತ್ತಿರುವ ಈ ಸಂದರ್ಭದಲ್ಲಿ ಶಾರುಖ್ ಅವರ ಮಾತುಗಳು ಹೆಚ್ಚು ಗಮನ ಸೆಳೆದಿವೆ.

ನಕಾರಾತ್ಮಕತೆ ಹರಡುತ್ತಿರುವ ಸಾಮಾಜಿಕ ಮಾಧ್ಯಮ
ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ಅವರು, 'ಸಾಮಾಜಿಕ ಮಾಧ್ಯಮವು ಸಾಮಾನ್ಯವಾಗಿ ಮಾನವ ಸ್ವಭಾವವನ್ನು ಪ್ರಕಟಗೊಳಿಸುತ್ತದೆ. ಆತನನ್ನು ಕೀಳು ಸ್ವಭಾವಕ್ಕೆ ಸೀಮಿತಗೊಳಿಸುತ್ತದೆ. ಸಂಕುಚಿತ ದೃಷ್ಟಿಕೋನದಿಂದ ಸಾಮಾಜಿಕ ಮಾಧ್ಯಮ ನಡೆಸಲ್ಪಡುತ್ತದೆ' ಎಂದು ಅವರು ಹೇಳಿದರು.
'ನಾನು ಎಲ್ಲೋ ಓದಿದ್ದೇನೆ-ನಕಾರಾತ್ಮಕತೆಯು ಸಾಮಾಜಿಕ ಮಾಧ್ಯಮ ಬಳಕೆಯನ್ನು ಹೆಚ್ಚಿಸುತ್ತದೆ. ಈಗ ಅಂತಹ ಅನ್ವೇಷಣೆಗಳೇ ಸಾಮೂಹಿಕ ಅಭಿಪ್ರಾಯಗಳನ್ನು ಸುತ್ತುವರೆದಿವೆ. ನಮ್ಮನ್ನು ವಿಭಜಿಸಿ ವಿನಾಶಕಾರಿಯಾಗಿಸುತ್ತದೆ' ಎಂದು ಶಾರುಖ್ ಖಾನ್ ಖೇದ ವ್ಯಕ್ತಪಡಿಸಿದರು.

ಸಾಮಾಜಿಕ ಮಾಧ್ಯಮದಿಂದ ರೂಪುಗೊಂಡಿರುವ ಸಾಮೂಹಿಕ ನಿರೂಪಣೆ
"ನಮ್ಮ ಕಾಲದ ಸಾಮೂಹಿಕ ನಿರೂಪಣೆಯು ಸಾಮಾಜಿಕ ಮಾಧ್ಯಮದಿಂದ ರೂಪುಗೊಂಡಿದೆ. ಸಾಮಾಜಿಕ ಮಾಧ್ಯಮವು ಸಿನೆಮಾದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಹುಟ್ಟಿಕೊಂಡಿದೆ. ಇಂತಹ ಕಾಲಘಟ್ಟದಲ್ಲಿ ಸಿನಿಮಾ ಹೆಚ್ಚು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದಾಗಿ ನಾನು ನಂಬುತ್ತೇನೆ' ಎಂದು ಶಾರುಖ್ ತಿಳಿಸಿದ್ದಾರೆ.

ಸಕಾರಾತ್ಮಕ ವ್ಯಕ್ತಿಗಳು ಇಂದಿಗೂ ಜೀವಂತವಾಗಿದ್ದಾರೆ
'ನಾನು ಸ್ವಲ್ಪ ಸಮಯದವರೆಗೆ ನಿಮ್ಮನ್ನು(ನೆರೆದಿದ್ದ ಪ್ರೇಕ್ಷಕರು) ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ, ಜಗತ್ತು ಈಗ ಕೋವಿಡ್‌ನಿಂದ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ನಾವೆಲ್ಲರೂ ಸಂತೋಷವಾಗಿದ್ದೇವೆ. ನಾನು ಹೆಚ್ಚು ಸಂತೋಷವಾಗಿದ್ದೇನೆ. ಜಗತ್ತು ಏನು ಮಾಡಿದರೂ ನಾನು ಮತ್ತು ನೀವು ಸಂತೋಷವಾಗಿರುತ್ತೇವೆ. ಇದನ್ನು ಹೇಳಲು ನನಗೆ ಯಾವುದೇ ಸಂಕೋಚವಿಲ್ಲ. ಪ್ರಪಂಚದ ಎಲ್ಲಾ ಸಕಾರಾತ್ಮಕ ಜನರು ಜೀವಂತವಾಗಿದ್ದಾರೆ' ಎಂದು ಅವರು ಹೇಳಿದರು.

ಅಚ್ಚರಿಯ ಹೇಳಿಕೆ ನೀಡಿದ ಅಮಿತಾಬ್ ಬಚ್ಚನ್
ರಾಜಕೀಯ ವಿವಾದಗಳಿಂದ ದೂರವೇ ಇರುವ ಹಿರಿಯ ಅಮಿತಾಬ್ ಬಚ್ಚನ್ ಅವರೂ ಸಹ ಅಪರೂಪವಾಗಿ ಹೇಳಿಕೆ ನೀಡಿದರು.
ಕೋಲ್ಕತ್ತಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾಗರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರು.
ಬ್ರಿಟಿಷ್ ಸೆನ್ಸಾರ್‌ಶಿಪ್, ದಬ್ಬಾಳಿಕೆಯ ವಿರುದ್ಧದ ಸ್ವಾತಂತ್ರ್ಯಪೂರ್ವ ಚಲನಚಿತ್ರಗಳು, ಕೋಮುವಾದ ಮತ್ತು ಸಾಮಾಜಿಕ ಐಕ್ಯತೆಯ ಕುರಿತು ಸುದೀರ್ಘವಾಗಿ ಮಾತನಾಡಿದ ಬಚ್ಚನ್, 'ವೇದಿಕೆ ಮೇಲಿರುವ ನನ್ನ ಸಹೋದ್ಯೋಗಿಗಳು ನಾಗರಿಕ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾರೆ ಎಂದು ನನಗೆ ಖಾತ್ರಿಯಿದೆ' ಎಂಬುದಾಗಿ ತಿಳಿಸಿದರು.

ಬೇರೆಯದನ್ನು ತಿರಸ್ಕರಿಸುವುದು ಭಾರತದ ಚೈತನ್ಯವಲ್ಲ
ಇದೇ ವೇಳೆ ಮಾತನಾಡಿದ ಚಿತ್ರ ನಿರ್ದೇಶಕ ಮಹೇಶ್ ಭಟ್, 'ಯಾವುದೇ ಜನಾಂಗ, ಯಾವುದೇ ಸಂಸ್ಕೃತಿಯನ್ನು ತಿರಸ್ಕರಿಸುವುದು ಭಾರತದ ಚೈತನ್ಯವಲ್ಲ. ಎಲ್ಲವನ್ನೂ ಸಹಾನುಭೂತಿ ಮತ್ತು ಪ್ರೀತಿಯಿಂದ ಒಪ್ಪಿಕೊಳ್ಳುವುದು ನಮ್ಮ ಅತ್ಯುನ್ನತ ಗುರಿಯಾಗಬೇಕು. ಇದು ಭಾರತದ ಆತ್ಮ' ಎಂದು ನುಡಿದರು.
'ಪ್ರಸ್ತುತ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ, ಭಾರತದ ಮಕ್ಕಳು ಪಾಶ್ಚಿಮಾತ್ಯರ ವಿಚಾರಗಳನ್ನು ತಿರಸ್ಕರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಅವರು ಪಾಶ್ಚಿಮಾತ್ಯರಿಂದ ಪಡೆದ ಪಾಠವಾಗಿದೆ. ಇದು ನಮ್ಮ ಧ್ಯೇಯವಲ್ಲ. ಎಲ್ಲಾ ಜನಾಂಗಗಳನ್ನು ಒಂದುಗೂಡಿಸಲು ಭಾರತವಿದೆ' ಎಂದು ಮಹೇಶ್ ಭಟ್ ತಿಳಿಸಿದರು.
ಹಿರಿಯ ನಟರಾದ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್, ಚಲನಚಿತ್ರ ತಾರೆಯರಾದ ಶಾರುಖ್ ಖಾನ್, ರಾಣಿ ಮುಖರ್ಜಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ 28 ನೇ ಅಂತರರಾಷ್ಟ್ರೀಯ ಕೋಲ್ಕತ್ತಾ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.












Click it and Unblock the Notifications