ಸೋಲಿನ ಭಯ: ಸ್ಪೀಕರ್ ಹುದ್ದೆ ಬೇಡ ಅಂತಿದ್ದಾರೆ ಕಾಂಗ್ರೆಸ್ ಶಾಸಕರು!
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ಗೆ ನಂತರ ಸಿಎಂ ಆಯ್ಕೆ ಕಗ್ಗಂಟಾಗಿತ್ತು, ಹಲವು ದಿನಗಳ ಕಸರತ್ತಿನ ಬಳಿಕ ಸಿದ್ದರಾಮಯ್ಯ ಸಿಎಂ, ಶಿವಕುಮಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಇವರ ಜೊತೆ 8 ಶಾಸಕರು ಸಚಿವರಾಗಿ ಪ್ರಮಾಣ ವಸನ ಸ್ವೀಕರಿಸಿದ್ದಾರೆ. ಸಚಿವ ಸ್ಥಾನಕ್ಕೆ ಸದ್ಯ ಭಾರಿ ಲಾಬಿ ಮಾಡಲಾಗುತ್ತಿದೆ. ಆದರೆ ಸ್ಪೀಕರ್ ಜವಾಬ್ದಾರಿ ವಹಿಸಿಕೊಳ್ಳಲು ಯಾವ ಶಾಸಕರೂ ಮುಂದೆ ಬರುತ್ತಿಲ್ಲ.
ಸ್ಪೀಕರ್ ಹುದ್ದೆಗಾಗಿ ಹಲವು ಹಿರಿಯ ಶಾಸಕರ ಹೆಸರು ಕೇಳಿಬಂದಿತ್ತಾದರೂ, ಯಾರೂ ಕೂಡ ಅದನ್ನು ಒಪ್ಪಲು ತಯಾರಿಲ್ಲ. ಸ್ಪೀಕರ್ ಆದ್ರೆ ದುರಾದೃಷ್ಟ ಹೆಗಲೇರುತ್ತದೆ ಎನ್ನುವ ಭಯ ಹಲವು ನಾಯಕರನ್ನು ಕಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಸ್ಪೀಕರ್ ಹುದ್ದೆ ನಿಭಾಯಿಸಿದ್ದ ಬಹುತೇಕ ಶಾಸಕರು ಮುಂದಿನ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ. ಇನ್ನು ಹಲವರ ರಾಜಕೀಯ ಜೀವನವೇ ಮುಕ್ತಾಯವಾಗಿದೆ. ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್ ಆಘಿದ್ದ ವಿಶ್ವೇಶ್ವರ ಹೆಗಡೆ ಸೋಲು ಕಂಡಿರುವುದು ಈ ನಂಬಿಕೆಯನ್ನು ಮತ್ತಷ್ಟು ಗಟ್ಟಿಯಾಗಿಸಿದೆ. ಕಾಗೇರಿ ಸೋಲು ಬಿಜೆಪಿಗೆ ಆಘಾತ ಉಂಟು ಮಾಡಿದೆ, ಕಾಗೇರಿ ಕೂಡ ಈ ಸೋಲಿನಿಂದ ಕಂಗೆಟ್ಟಿದ್ದಾರೆ.
2004ರಿಂದ ಈವರೆಗೆ ಯಾರೆಲ್ಲಾ ಸ್ಪೀಕರ್ ಹುದ್ದೆ ನಿಭಾಯಿಸಿದ್ದಾರೋ ಅವರೆಲ್ಲಾ ರಾಜಕೀಯದಲ್ಲಿ ಭಾರಿ ಹಿನ್ನಡೆ ಸಾಧಿಸಿದ್ದಾರೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. 2004ರಲ್ಲಿ ಎಸ್.ಎಂ.ಕೃಷ್ಣ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಕೆಆರ್ ಪೇಟೆ ಶಾಸಕರಾಗಿದ್ದ ಕೃಷ್ಣ ಅವರು 2008ರ ಚುನಾವಣೆಯಲ್ಲಿ ಸೋತಿದ್ದರು. 2013ರಲ್ಲಿ ಸ್ಪೀಕರ್ ಆಗಿದ್ದ ಕಾಂಗ್ರೆಸ್ ಹಿರಿಯ ಶಾಸಕ ಕಾಗೋಡು ತಿಮ್ಮಪ್ಪ 2018ರ ಚುನಾವಣೆಯಲ್ಲಿ ಸೋಲು ಕಂಡರು, 2016ರಲ್ಲಿ ಸ್ಪೀಕರ್ ಆಗಿದ್ದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೆಬಿ ಕೋಳಿವಾಡ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದರು, 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಕೂಡ ಅವರು ಸೋಲು ಕಂಡರು.
ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ 2018 ರಲ್ಲಿ ಅವರು 15 ನೇ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದ ರಮೇಶ್ ಕುಮಾರ್ 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.
ಆರ್.ವಿ. ದೇಶಪಾಂಡೆ ಹಂಗಾಮಿ ಸ್ಪೀಕರ್
ಸದ್ಯ ಸ್ಪೀಕರ್ ಹುದ್ದೆಗೆ ಹಿರಿಯ ನಾಯಕರನ್ನು ಒಪ್ಪಿಸುವುದೇ ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿದೆ. ಸೋಮವಾರದಿಂದ ಆರಂಭವಾಗುವ ಮೂರು ದಿನಗಳ ಚೊಚ್ಚಲ ಅಧಿವೇಶನದಲ್ಲಿ ಹಂಗಾಮಿ ಸ್ಪೀಕರ್ ಆಗಿ ಆರ್.ವಿ. ದೇಶಪಾಂಡೆ ಅವರನ್ನು ಸಿಎಂ ಸಿದ್ದರಾಮಯ್ಯ ನೇಮಕ ಮಾಡಿದ್ದಾರೆ. ಅಧಿವೇಶನದ ವೇಳೆ ನೂತನ ಸ್ಪೀಕರ್ ಆಯ್ಕೆಯಾಗಲಿದ್ದಾರೆ.
ಡಾ.ಜಿ. ಪರಮೇಶ್ವರ ಅವರ ಮುಂದೆ ಕೂಡ ಸ್ಪೀಕರ್ ಆಗುವ ಪ್ರಸ್ತಾಪ ಇಡಲಾಗಿತ್ತು, ಆದರೆ ಅದನ್ನು ತಿರಸ್ಕರಿಸಿದ ಅವರು ಸಚಿವರಾಗಿದ್ದಾರೆ. ಇನ್ನು ಪಕ್ಷದ ಹಿರಿಯ ನಾಯಕರಾದ ಟಿ.ಬಿ. ಜಯಚಂದ್ರ, ಎಚ್‌ಕೆ ಪಾಟೀಲ್, ಬಿಆರ್ ಪಾಟೀಲ್ ಮತ್ತು ವೈಎನ್ ಗೋಪಾಲಕೃಷ್ಣ ಇವರಲ್ಲಿ ಯಾರಾದರೂ ಸ್ಪೀಕರ್ ಆಗಲಿ ಎಂದು ಪಕ್ಷ ಕೇಳಿದೆ, ಆದರೆ ಮೂವರು ಕೂಡ ಇದಕ್ಕೆ ಒಪ್ಪಿಲ್ಲ ಎಂದು ಹೇಳಲಾಗಿದೆ.
ಹಲವು ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾರಣ ಸ್ಪೀಕರ್ ಹುದ್ದೆಯನ್ನು ನಿರಾಕರಿಸಿದರೆ, ಇನ್ನೂ ಹಲವರು ಸೋಲಿನ ಭಯದಿಂದ ಸ್ಪೀಕರ್ ಹುದ್ದೆಯನ್ನು ತಿರಸ್ಕರಿಸಿ ಶಾಸಕರಾಗಿಯೇ ಉಳಿಯುತ್ತೇವೆ ಎಂದು ಹೇಳಿದ್ದಾರೆ ಎಂದು ಕಾಂಗ್ರೆಸ್‌ನ ಮೂಲಗಳು ತಿಳಿಸಿವೆ.












Click it and Unblock the Notifications