Jaggesh: ಮತ್ತೆ ನೋಡಲಾಗದ ಮಹಾಕುಂಭದ ಬಗ್ಗೆ ಜಗ್ಗೇಶ್ ವರ್ಣನೆ ಹೇಗಿತ್ತು?
ಬೆಂಗಳೂರು, ಫೆಬ್ರವರಿ 20: ಭಾರತದಲ್ಲಿ ಹಿಂದೂ ಧರ್ಮದಲ್ಲಿ ಅತ್ಯಂತ ದೊಡ್ಡ ಹಾಗೂ ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಪ್ರಮುಖವಾದ ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಜನವರಿ 13ರಿಂದ ಚಾಲನೆ ಸಿಕ್ಕಿದ್ದು, ಈವರೆಗೂ ಸುಮಾರು ಐವತ್ತು ಕೋಟಿಗೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಇನ್ನೂ ಆರು ದಿನಗಳ ಕಾಲ ನಡೆಯಲಿರುವ ಮಹಾ ಕುಂಭಮೇಳದಲ್ಲಿ ಆರವತ್ತು ಕೋಟಿ ಭಕ್ತರು ಭಾಗಿಯಾಗುವ ನಿರೀಕ್ಷೆ ಇದೆ.
ಕರ್ನಾಟಕದಿಂದಲೂ ಸಾವಿರಾರು ಭಕ್ತರು ಹಾಗೂ ಗಣ್ಯರು ಕೂಡ ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದು, ಇದೀಗ ರಾಜ್ಯ ಸಭಾ ಸದಸ್ಯ ಹಾಗೂ ಹಿರಿಯ ನಟ ಜಗ್ಗೇಶ್ ಪ್ರಯಾಗ್ ರಾಜ್‌ಗೆ ತೆರಳಿ ಗಂಗಾ, ಯಮುನಾ ಮತ್ತು ಸರಸ್ವತಿ ಮಹಾ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರಾ ಸ್ನಾನ ಕೈಗೊಂಡಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರು ಅವರು, ಮಹಾ ಕುಂಭಮೇಳಕ್ಕೆ ಹೋಗಿ ನಾನು ಭಾವುಕನಾದೆ ನನ್ನ ವಂಶದ ಎಲ್ಲಾ ಹಿರಿಯರ ನೆನೆದೆ. ಮುಂದಿನ ಪೀಳಿಗೆಯ ಮಕ್ಕಳಿಗೆ ಶುಭಕೋರಿದೆ ಎಂದಿದ್ದಾರೆ.

'ಕಳೆದ ಬಾರಿ 1880ರಲ್ಲಿ ನಡೆದದ್ದು ಈ ಮಹಾಕುಂಭಮೇಳ. ನನ್ನ ತಾತನ ಜನನ ಆದದ್ದು 1896 ಅಂದರೆ ನಮ್ಮ ತಾತ ಹುಟ್ಟುವ 16ವರ್ಷದ ಹಿಂದೆ.
ನಮ್ಮ ತಾತನಿಂದ ನನ್ನ ಮೊಮ್ಮಗ ಅರ್ಜುನ 5ನೆ ತಲೆಮಾರಿಗೆ ಬಂದಿದೆ. ಮುಂದಿನ ಬಾರಿ ಈ ಮಹಾಕುಂಭ ಬರೋದು 2170 ಇಸವಿಯಲ್ಲಿ ಅಂದರೆ ನಮ್ಮ ಮುಂದಿನ 5 ತಲೆಮಾರಿನ ಬದುಕು ಇಲ್ಲವಾಗಿರುತ್ತದೆ'.
'ನಾನು ನನ್ನದು, ನನ್ನ ಹಣ, ನನ್ನ ಮನೆ, ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ಪರಿವಾರ ಎನ್ನುವ ಕಥೆ ಏನಾಗಿರುತ್ತದೆಯೋ ದೇವರೆ ಬಲ್ಲ. ಕಡೆಯ ಪಕ್ಷ ನಮ್ಮ ಚಿತ್ರಪಟವು ಗೋಡೆಯಿಂದ ಮರೆಯಾಗಿ ಹಟ್ಟಸೇರುತ್ತೆ ಇಲ್ಲ ಕಸದ ಜೊತೆ ಲೀನ. ನಾವು ದುಡಿದದ್ದು ಮುಂದಿನವರು ಉಳಿಸಿಕೊಂಡಿದ್ದರೆ ಅಲ್ಪಸ್ವಲ್ಪ ಹರಟೆಯಲ್ಲಿ ನಮ್ಮ ಹೆಸರು ಬಂದುಹೋಗಬಹುದು. ಆದರೆ ಯಾರು ಹೋದರು ಒಬ್ಬರು ನೆನಪಲ್ಲಿ ಉಳಿದೆ ಇರುತ್ತಾರೆ ಅವರೇ ಶಾರದಾಸುತರು ಅಂದರೆ ಗಾಯಕರು ನಟರು ನಟಿಯರು ಸಂಗೀತ ವಿದ್ವಾಂಸರು ಹಾಗೂ ಲೇಖಕರು'.

'ಮಹಾಕುಂಭಕ್ಕೆ ಆಧ್ಯಾತ್ಮಿಕ ಸಾಧನೆಗೆ ಹೋದವರಿಗೆ ನಾನು ಮೇಲೆ ಹೇಳಿದ್ದ ಎಲ್ಲಾ ಮಾತುಗಳು ಮಾನಸದಲ್ಲಿ ಮಜ್ಜನವಾಗಿ ನಾನು ದೇಹವಲ್ಲಾ ಮುಂದೆ ಮಣ್ಣು ಎಂಬ ಅರಿವು ಮನದ ಆಳಕ್ಕೆ ಹೋಗಿ ಮನನವಾಗಿ ಮೌನವಾಗಿ ಅಹಂಕಾರ ಅಡಗಿ ಮನಸ್ಸು ಶಾಂತವಾಗುತ್ತದೆ. ನಾನು ಹೋದೆ ನೋಡಿದೆ ಬಂದೆ ಎನ್ನುವವರಿಗೆ ಅವರ ಬದುಕಿನ ಮತ್ತೊಂದು ಪ್ರವಾಸ ಅನ್ನಿಸುತ್ತದೆ. ನಾನು ಭಾವುಕನಾದೆ ನನ್ನ ವಂಶದ ಎಲ್ಲಾ ಹಿರಿಯರ ನೆನೆದೆ. ಮುಂದಿನ ಪೀಳಿಗೆಯ ಮಕ್ಕಳಿಗೆ ಶುಭಕೋರಿದೆ. ನನಗನ್ನಿಸಿದ್ದು ದೇವರ ಕೃಪೆಯಿಲ್ಲದೆ ನಮ್ಮ ಬದುಕಿನ ಆಟ ಯಾವುದು ನಡೆಯದು. ಇನ್ನು ಸಮಯವಿದೆ ಹೋಗುವವರು ಹೋಗಿ ಬನ್ನಿ ಮತ್ತೆ ನೋಡಲಾಗದು ಈ ಮಹಾಕುಂಭ' ಎಂದು ಜಗ್ಗೇಶ್ ಮಹಾ ಕುಂಭಮೇಳದ ಮಹತ್ವವನ್ನು ವಿವರಿಸಿದ್ದಾರೆ.












Click it and Unblock the Notifications