• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

"ಕೊರೊನಾಗೆ ಹೆದರಿ ಮನೇಲಿ ಸುಮ್ನೆ ಯಾಕೆ ಇರಬೇಕ್ರಿ?"

By ಶ್ರೀಶಾಂತ್
|

ಕೆಲ ದಿನ ಮನೆಯಲ್ಲೇ ಇರಿ. ನಿಮ್ಮ ಕೆಲಸಗಳನ್ನು ಮನೆಯಿಂದಲೇ ಮಾಡಿಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿಯಿಂದಲೇ ನಾವು ಹೀಗೆ ನಿಯಮಗಳನ್ನು ಮಾಡ್ತಿದ್ದೀವಿ ಎಂದು ಸರ್ಕಾರದ ಕಡೆಯಿಂದ ಹೇಳುತ್ತಿದ್ದರೆ, ನಮ್ಮೆಲ್ಲರ ಒಳಗಿರುವ ಕ್ರಾಂತಿಕಾರಿಯ ಪ್ರಶ್ನೆ ಏನೆಂದರೆ, "ಕೊರೊನಾಗೆ ಹೆದರಿ ಮನೇಲಿ 'ಸುಮ್ನೆ' ಯಾಕೆ ಇರಬೇಕ್ರಿ?"

ಥೇಟ್ ನಾನು ಕೂಡ ಹೀಗೆ ಯೋಚಿಸಿದ್ದೆ. ಒಂದು ವಾರ ಕಳೆದಿದೆ. ಮನೆಯಿಂದಲೇ ಎಲ್ಲ ಕೆಲಸ. ಮೂರು ದಿನದಿಂದ ಮನೆಯ ಕಾಂಪೌಂಡ್ ಕೂಡ ದಾಟಿ ಆಚೆ ಬಂದಿಲ್ಲ. ಆದರೆ ಈ ಅವಧಿ ಇದೆಯಲ್ಲಾ, ನನ್ನ ಜೀವನದ ಜ್ಞಾನೋದಯದ ಕಾಲ. ಅಯ್ಯೋ, ಏನೆಲ್ಲ ಕಳೆದುಕೊಂಡು ಬಿಟ್ಟಿದ್ದೆ ಎಂದು ಸಾವಿರ ಸಲ ಯೋಚಿಸಿದ್ದೀನಿ.

ಭಾರತದಲ್ಲಿ ವರ್ಕೌಟ್ ಆಗ್ತಿಲ್ಲ 'WORK FROM HOME', ವರದಿಗಳು ಬಿಚ್ಚಿಟ್ಟ ಸತ್ಯ

ವರ್ಕ್ ಫ್ರಮ್ ಹೋಮ್ ಅಂತ ಮನೆಯಿಂದಲೇ ಕೆಲಸ ಮಾಡುವುದಕ್ಕೆ ನನ್ನ ಕಂಪೆನಿಯಲ್ಲಿ ಅವಕಾಶ ಕೊಟ್ಟಿದ್ದಾರೆ. ಹಾಗೆ ಘೋಷಣೆಯಾದ ದಿನವೇ ಆಫೀಸಿಂದ ಮನೆಗೆ ಬರ್ತಾ ಐದು ಪುಸ್ತಕಗಳನ್ನು ಕೊಂಡು ತಂದೆ. ರಂಗಣ್ಣನ ಕನಸಿನ ದಿನಗಳು, ಹಳ್ಳ ಬಂತು ಹಳ್ಳ, ಉತ್ತರ ಕಾಂಡ, ವೋಲ್ಗಾ ಗಂಗಾ, ಹಸುರು ಹೊನ್ನು.

ಬಹಳ ಸಮಯದಿಂದ ನಾನು ಮತ್ತೊಮ್ಮೆ ಓದಬೇಕು ಅಂದುಕೊಳ್ಳುತ್ತಿದ್ದ ಪುಸ್ತಕಗಳು. ಆದರೆ ದಿನಕ್ಕೆ ನಾಲ್ಕು ಗಂಟೆ ಆಫೀಸಿಗೆ ಹೋಗಿ- ಬರುವ ಪ್ರಯಾಣಕ್ಕೆ ಹೋಗ್ತಿತ್ತು. ವೀಕೆಂಡ್ ಗಳಲ್ಲಿ ಸ್ನೇಹಿತರನ್ನು ಭೇಟಿಯಾಗು, ಮತ್ಯಾವುದೋ ಕಾರ್ಯಕ್ರಮ, ಮನೆಯವರನ್ನು ಹೊರಗೆ ಶಾಪಿಂಗ್- ರೆಸ್ಟೋರೆಂಟ್ ಕರೆದುಕೊಂಡು ಹೋಗು... ಹೀಗೆ ಕಳೆದುಹೋಗ್ತಿತ್ತು. ಆದರೆ ಈಗ ನನ್ನ ಬದುಕು ಬದಲಾಗಿದೆ.

 ಮುಂಚಿಗಿಂತ ಹೆಚ್ಚಿನ ಉತ್ಸಾಹದಲ್ಲಿ ಕೆಲಸ

ಮುಂಚಿಗಿಂತ ಹೆಚ್ಚಿನ ಉತ್ಸಾಹದಲ್ಲಿ ಕೆಲಸ

ದಿನ ಬೆಳಗ್ಗೆ ಎದ್ದು ಸೂರ್ಯೋದಯವನ್ನು ಕಡ್ಡಾಯವಾಗಿ ನೋಡ್ತೀನಿ. ಯಾವ ಕಾರಣಕ್ಕೂ ಬೆಳಗ್ಗೆ ತಿಂಡಿ ತಪ್ಪಿಸಲ್ಲ. ಅದೇ ರೀತಿ ಸಮಯಕ್ಕೆ ಸರಿಯಾಗಿ ಊಟ ಮಾಡುವುದನ್ನೂ ತಪ್ಪಿಸುತ್ತಿಲ್ಲ. ಹತ್ತರಿಂದ ಹದಿನೈದು ನಿಮಿಷ ಧ್ಯಾನ ಮಾಡುವುದಕ್ಕೆ ಸಾಧ್ಯವಾಗ್ತಿದೆ. ಈ ಮುಂಚಿಗಿಂತ ನನ್ನ ಕೆಲಸವನ್ನು ಹೆಚ್ಚು ಉತ್ಸಾಹದಿಂದ ಮಾಡುವುದಕ್ಕೆ ಆಗುತ್ತಿದೆ. ಅಷ್ಟಿಲ್ಲದೆ ದೊಡ್ಡವರು ಹೇಳ್ತಾರಾ? ಆರೋಗ್ಯವಂತ ದೇಹ ಮತ್ತು ಮನಸ್ಸು ಎರಡಕ್ಕೂ ಸಂಬಂಧ ಇದೆ. ಮನೆಯಿಂದ ಎಲ್ಲೂ ಆಚೆ ಹೋಗುವುದಕ್ಕೆ ಆಗಲ್ಲವಾದ್ದರಿಂದ ದಿನಕ್ಕೆ ಹತ್ತರಿಂದ ಹನ್ನೆರಡು ಸಿಗರೇಟ್ ಸೇದುತ್ತಿದ್ದವನು ಒಂದೆರಡಕ್ಕೆ, ಕೆಲವು ಅದೂ ಇಲ್ಲದಂತೆ ಇದ್ದೀನಿ. ಮನೆಯಿಂದ ಹೊರಗೆ ಹೊರಡಲು ಸಿದ್ಧವಾದರೆ, ಒಂದೂವರೆ ವರ್ಷದ ಮಗ ಹಾಗೂ ಅರವತ್ತು ವರ್ಷ ದಾಟಿರುವ ಅಪ್ಪ- ಅಮ್ಮನ ಕಡೆಗೆ ನನ್ನ ಹೆಂಡತಿ ನೋಡುತ್ತಾಳೆ. "ನೀವು ಏನಾದರೂ ಮಾಡಿಕೊಳ್ಳಿ. ನಮ್ಮ ಆರೋಗ್ಯ ಯಾಕೆ ಹಾಳು ಮಾಡ್ತೀರಿ?" ಎಂದು ಕಣ್ಣಿನಲ್ಲೇ ತಿವಿದಂತಾಗಿ. ಹೊರಗೆ ಹೋಗದೆ ಸುಮ್ಮನಾಗ್ತೀನಿ.

 ಅಪ್ಪ- ಅಮ್ಮನೊಂದಿಗೆ ಸಮಯ

ಅಪ್ಪ- ಅಮ್ಮನೊಂದಿಗೆ ಸಮಯ

ನನ್ನ ಮಗನಿಗೆ ಒಂದೂವರೆ ವರ್ಷ. ಆಫೀಸಿಗೆ ಹೋಗುವಾಗ ನಾನು ಹಾಸಿಗೆ ಬಿಟ್ಟು ಏಳುವ ಹೊತ್ತಿಗೆ ಅವನು ಮಲಗಿರುತ್ತಿದ್ದ. ವಾಪಸ್ ಬರುವ ಹೊತ್ತಿಗೂ ಅದೇ ಕಥೆ. ವೀಕೆಂಡ್ ಗಳಲ್ಲಿ ಅವನ ಜತೆಗೆ ಹೆಚ್ಚು ಸಮಯ ಕಳೆಯಲು ಆಗುತ್ತಲೇ ಇರಲಿಲ್ಲ. ಈಗಲೇ ನನಗೆ ಗೊತ್ತಾಗಿದ್ದು: ಅವನು ನನ್ನಂತೆಯೇ, ನಿದ್ದೆಯಲ್ಲಿ ಕನವರಿಸುತ್ತಾನೆ. "ಅಪ್ಪಾ... ಅಪ್ಪಾ" ಅನ್ನೋದನ್ನೇ ಹೇಳುತ್ತಿರುತ್ತಾನೆ. ಅವನಿಗೆ ಎಷ್ಟು ಸಲ ಹೇಳಿಕೊಟ್ಟರೂ 'ಅಮ್ಮ' ಅನ್ನುವುದಿಲ್ಲ. ನಡೆಯುವ ಪ್ರಯತ್ನದಲ್ಲಿ ಎಲ್ಲಿ ಬೀಳುತ್ತಾನೋ ಎಂದು ಕಣ್ಣು ಕಿರಿದು ಮಾಡಿಕೊಂಡು, ಅವನ ಕಡೆಗೆ ನೋಡುತ್ತಿರುತ್ತೇನೆ. ಇಂಥ ಆತಂಕವನ್ನು ಅನುಭವಿಸದೆ ಏನೆಲ್ಲ ಕಳೆದುಕೊಂಡಿದ್ದೆನಲ್ಲಾ ಎನಿಸುತ್ತದೆ. ನನ್ನ ಹೆಂಡತಿ ಎಷ್ಟೆಲ್ಲ ಕಷ್ಟಪಟ್ಟು ಮಗನನ್ನು ಸಂಭಾಳಿಸುತ್ತಾಳೆ ಎಂಬುದು ಈಗ ಗೊತ್ತಾಗುತ್ತಿದೆ. ಅವಳಿಗೆ ದಿನವಿಡೀ ಮಗ, ಅಡುಗೆ ಮನೆ, ಮನೆ ಕೆಲಸ, ಅತ್ತೆ- ಮಾವ, ನನಗೆ ಸಹಾಯ ಮಾಡಿಕೊಡುವುದರಲ್ಲೇ ಸಮಯ ಕಳೆದುಹೋಗುತ್ತದೆ ಎಂಬುದು ಈಗ ಗೊತ್ತಾಗುತ್ತಿದೆ.

 ಆಪ್ತವಾಗಿ ಮಾತಾಡಿ ವರ್ಷಗಳು ಕಳೆದವೇನೋ?

ಆಪ್ತವಾಗಿ ಮಾತಾಡಿ ವರ್ಷಗಳು ಕಳೆದವೇನೋ?

ಅಮ್ಮ- ಅಪ್ಪ ಹಾಗೂ ನಾನು ಒಟ್ಟಿಗೆ ಕೂತು ಆಪ್ತವಾಗಿ ಮಾತಾಡಿಯೇ ವರ್ಷಗಳು ಕಳೆದುಹೋದವೇನೋ! "ನಿನಗೂ ಕೂಡ ಅಪ್ಪನ ಥರ ತಲೆ ಬೋಳಾಗುತ್ತಿದೆ ನೋಡು, ಎಷ್ಟು ಕೂಡಲು ಉದುರುತ್ತಿದೆ" ಅಂತ ಅಮ್ಮ ಹೇಳಿದಾಗಲೇ ನನಗೆ ಗೊತ್ತಾಗಿದ್ದು, ಅವಳಿಗೆ ಕಳೆದ ಕೆಲ ತಿಂಗಳಿಂದ ಕಣ್ಣಿನ ಸಮಸ್ಯೆ ಇದೆ. ದೂರದಲ್ಲಿ ಇರುವುದು ಕಾಣಿಸುತ್ತಿಲ್ಲ. ಅಷ್ಟಾಗಿ ಗಮನ ನೀಡುವುದಕ್ಕೆ ನನಗೆ ಸಾಧ್ಯವಾಗುತ್ತಿರಲಿಲ್ಲವಾದ್ದರಿಂದ ಅಮ್ಮನ ಸಮಸ್ಯೆ ನನಗೆ ಗೊತ್ತಾಗುತ್ತಿರಲಿಲ್ಲ. ಇನ್ನು ಅಪ್ಪ ಮುಂಚಿನಂತೆ ಮಾತನಾಡುತ್ತಿಲ್ಲ. ಏಕೆಂದರೆ ಅವರ ಜತೆಗೆ ಚೆಸ್ ಆಡುವುದಕ್ಕೆ ಬರುತ್ತಿದ್ದ ಪಕ್ಕದ ಮನೆ ಅಂಕಲ್ ಯು.ಎಸ್. ನಲ್ಲಿರುವ ಮಗನ ಮನೆಗೆ ಹೋಗಿದ್ದಾರೆ. ಅಪ್ಪನ ಸ್ನೇಹಿತರು ಬೇರೆ ಏರಿಯಾಗಳಲ್ಲಿ ಇರುವವರು. ಭೇಟಿ, ಮಾತುಕತೆ ಸಾಧ್ಯವಾಗುತ್ತಿಲ್ಲ. ಬಹಳ ವರ್ಷಗಳ ಮೇಲೆ ಅಪ್ಪನ ಜತೆಗೆ ಚೆಸ್ ಆಡಿದೆ. ಅವರಿಗೆ ಬಹಳ ಇಷ್ಟದ ಆಟ ಅದು. ಬೇರೆ ಯಾವುದೇ ವಸ್ತು ತಂದುಕೊಟ್ಟಿದ್ದರೂ ಇಷ್ಟು ಖುಷಿ ಅವರಿಗೆ ಆಗುತ್ತಿರಲಿಲ್ಲ.

 ಇಪ್ಪತ್ತೊಂದು ದಿನ ಮಾಡಿದರೆ ಅದು ರೂಢಿ

ಇಪ್ಪತ್ತೊಂದು ದಿನ ಮಾಡಿದರೆ ಅದು ರೂಢಿ

ಯಾವುದೇ ಅಭ್ಯಾಸವನ್ನು ಇಪ್ಪತ್ತೊಂದು ದಿನ ಮಾಡಿದರೆ ಅದು ರೂಢಿ ಆಗುತ್ತದೆ ಎಂಬುದು ಸೈಕಾಲಜಿ. ದಿನಕ್ಕೆ ಎಂಟು ಗಂಟೆ ಪಟ್ಟಾಗಿ ಕೂತು ಆಫೀಸಿನ ಕೆಲಸ ಮಾಡ್ತೀನಿ. ಕಡ್ಡಾಯವಾಗಿ ಐವತ್ತರಿಂದ- ಎಪ್ಪತ್ತೈದು ಪುಟದಷ್ಟು ಓದ್ತೀನಿ. ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ಧ್ಯಾನ ಮಾಡ್ತೀನಿ. ಮಗನ ಜತೆಗೆ ಖುಷಿಯಾಗಿ ಸಮಯ ಕಳೆದು, ನಾವೆಲ್ಲ ಒಟ್ಟಿಗೆ ಕೂತು ಊಟ ಮಾಡ್ತೀವಿ. ಸಿಗರೇಟ್ ಸೇದುವುದನ್ನು ಬಿಟ್ಟಿದ್ದೀನಿ ಅಂತಲೇ ಹೇಳಬೇಕು. ತೀರಾ ಅನಿವಾರ್ಯ ಅಲ್ಲದಿದ್ದಲ್ಲಿ ಫೋನ್- ಫೇಸ್ ಬುಕ್ ಮತ್ಯಾವುದೇ ಸೋಷಿಯಲ್ ಮೀಡಿಯಾ ಬಳಸುವುದಿಲ್ಲ. "ಜೈಲಲ್ಲಿ ಕೂಡಿಹಾಕಿದಂಗೆ ಆಗಿದೆ, ಅದ್ಯಾವಾಗ ಮನೆಯಿಂದ ಆಚೆಗೆ ಹೋಗ್ತೀನೋ?" ಅಂತ ಗೆಳೆಯರು ಯಾರಾದರೂ ಹೇಳಿದರೆ ನಗು ಬರುತ್ತದೆ. ಏಕೆಂದರೆ, ಮನೆಯೇ ಜೈಲಿನಂತೆ ನಮಗಾದರೆ, ಕುಟುಂಬದ ಬೇರೆಯವರಿಗೆ ಏನು ಅನ್ನಿಸಬಹುದು? "ಎಲ್ಲ ಮರೆತು, ಫೋನ್ ಕೂಡ ಸಿಗದಿರುವ ಕೂಡ ಹೋಗಿ ಇದ್ದು ಬಿಡಬೇಕು" ಅಂತ ನಾವೇ ಎಷ್ಟು ಸಲ ಹೇಳಿರ್ತೀವಿ? ಈಗ ಸಮಯ ಬಂದಿದೆ. ಇದ್ದಲ್ಲೇ ಇದ್ದುಬಿಡೋಣ; ಪಾರ್ಟಿ, ಸುತ್ತಾಟ, ಮೋಜು- ಮಸ್ತಿ ಎಲ್ಲವನ್ನೂ ಮರೆತು ಕೆಲವು ದಿನಕ್ಕೆ.

English summary
Here is an experience shared by a person about self-isolation during Corona days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X