ಕರ್ನಾಟಕದಲ್ಲಿ ಎಂದಿಗೂ ಕನ್ನಡ ಮಾತನಾಡಲ್ಲ: ಲೇಡಿ ಬ್ಯಾಂಕ್ ಮ್ಯಾನೇಜರ್ ದರ್ಪ
ಕರ್ನಾಟಕಕ್ಕೆ ಬಂದು ಇಲ್ಲೇ ಬದುಕು ಕಟ್ಟಿಕೊಂಡರೂ ಈ ನೆಲದ ಮೇಲೆ ಹಲವು ಪರಭಾಷಿಕರಿಗೆ ಕೊಂಚವೂ ಕೃತಜ್ಞತೆಯೇ ಇಲ್ಲ. ಇತ್ತೀಚೆಗೆ ಕೋರಮಂಗಲದ ಹೋಟೆಲ್‌ನಲ್ಲಿ ಕನ್ನಡಿಗರ ಬಗ್ಗೆ ಹಿಂದಿಯಲ್ಲಿ ಅತಿ ಕೆಟ್ಟದಾಗಿ ನಿಂದಿಸಿದ ಪದಗಳನ್ನು ಎಲ್‌ಇಡಿ ಸ್ಕ್ರೀನ್‌ನಲ್ಲಿ ಹಾಕುವ ಮೂಲಕ ಅವಮಾನಿಸಿದ್ದರು. ಅದಕ್ಕೆ ತಕ್ಕ ಶಾಸ್ತಿಯೂ ಆಗಿದೆ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ಲೇಡಿ ಬ್ಯಾಂಕ್ ಮ್ಯಾನೇಜರ್‌ವೊಬ್ಬರು ನಾನು ಕನ್ನಡದಲ್ಲಿ ಮಾತನಾಡೋದೇ ಇಲ್ಲ, ಏನಿವಾಗ? ಎಂದು ಗ್ರಾಹಕನಿಗೆ ದರ್ಪದಿಂದ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರಿನ ಚಂದಾಪುರದಲ್ಲಿರುವ ಎಸ್‌ಬಿಐ ಬ್ಯಾಂಕಿನ ಮಹಿಳಾ ಮ್ಯಾನೇಜರ್ ನಾನು ಎಂದಿಗೂ ಕನ್ನಡ ಮಾತನಾಡುವುದಿಲ್ಲ. ಏಕೆಂದರೆ ಇದು ಭಾರತ, ನಾನು ಹಿಂದಿಯಲ್ಲೇ ಮಾತನಾಡುತ್ತೇನೆ ಎಂದು ದರ್ಪದಿಂದ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗ್ರಾಹಕರೊಬ್ಬರು ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದ್ದಕ್ಕೆ ಈ ರೀತಿ ವರ್ತಿಸಿದ್ದಾರೆ. ಅಲ್ಲದೆ. ಬ್ಯಾಂಕ್ ಸಿಬ್ಬಂದಿ ಸ್ಥಳೀಯ ಭಾಷೆಯಲ್ಲಿ ಸೇವೆ ಒದಗಿಸಬೇಕೆಂದು ಆರ್‌ಬಿಐ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ ಎಂದು ಹೇಳಿದ್ದಕ್ಕೆ, ಅದೆಲ್ಲ ಇಲ್ಲ ಎಂದು ಜೋರು ಮಾಡಿದ್ದಾರೆ.

ಮ್ಯಾನೇಜರ್ ಮಹಿಳೆಯನ್ನು ಪ್ರಶ್ನೆ ಮಾಡಿದ್ದಕ್ಕೆ, ನೀವೇನು ನನಗೆ ಇಲ್ಲಿ ಕೆಲಸ ಕೊಟ್ಟಿಲ್ಲ. ಇದು ಇಂಡಿಯಾ, ನಾನು ಕನ್ನಡ ಮಾತನಾಡಲ್ಲ ಎಂದು ಅಹಂಕಾರದಿಂದ ಮಾತನಾಡಿದ್ದಾರೆ. ಅದಕ್ಕೆ ಕನ್ನಡಿಗರೊಬ್ಬರು ನೀವು ಕೆಲಸ ಮಾಡುತ್ತಿರೋದು ಕರ್ನಾಟಕದಲ್ಲಿ, ಇಲ್ಲಿ ಕನ್ನಡ ಮೊದಲು ಎಂದು ತಿರುಗೇಟು ನೀಡಿದ್ದಾರೆ. ಪದೇ ಪದೇ ನಾನು ಎಂದಿಗೂ ಕನ್ನಡ ಮಾತನಾಡುವುದಿಲ್ಲ, ಬರೀ ಹಿಂದಿ, ಹಿಂದಿ ಅಷ್ಟೇ. ನೀನು ಬೇಕಾದ್ರೆ ನಮ್ಮ ಎಸ್‌ಬಿಐ ಚೇರ್‌ಮನ್ ಅವರನ್ನು ಕೇಳಿಕೋ ಎಂದು ಪೊಗರಿನಿಂದ ಉತ್ತರಿಸಿದ್ದಾರೆ.
ಆರ್‌ಬಿಐ ರೂಲ್ಸ್ ಪ್ರಕಾರವೇ ಪ್ರಾದೇಶಿಕ ಭಾಷೆಯಲ್ಲಿ ಅಲ್ಲಿನ ಗ್ರಾಹಕರಿಗೆ ಸೇವೆ ಕೊಡಬೇಕು ಎಂದಿದ್ದಕ್ಕೆ ಅದೇ ಬ್ಯಾಂಕ್‌ನಲ್ಲಿದ್ದ ಕನ್ನಡದ ವ್ಯಕ್ತಿ ಕೂಡ ಆ ಮಹಿಳೆ ಪರವಾಗಿಯೇ ವಾದಿಸಿದ್ದಾರೆ. ಕೊನೆಗೆ ನೀನು ಏನು ಬೇಕಾದ್ರೂ ಮಾಡಿಕೋ, ನಾನು ಎಂದಿಗೂ ಕನ್ನಡ ಮಾತನಾಡುವುದಿಲ್ಲ ಎಂದೇ ಆಕೆ ಕೂಗಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನ್ನಡಿಗರೆಲ್ಲರೂ ಎಸ್‌ಬಿಐ ವಿರುದ್ಧ ತಿರುಗಿಬಿದ್ದಿದ್ದಾರೆ.
ನಿಮ್ಮ ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ, ಕನ್ನಡ ಭಾಷೆಯನ್ನು ಅಗೌರವಿಸುತ್ತಾರೆ. ಕರ್ನಾಟಕದ ಜನರ ಮೇಲೆ ಹಿಂದಿ ಹೇರುತ್ತಾರೆ. ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ, ಕರ್ತವ್ಯದ ಸಮಯದಲ್ಲಿ ಸೇವೆ ನೀಡುವುದಿಲ್ಲ ಎಂದು ಆರ್‌ಬಿಐಗೆ ಟ್ಯಾಗ್ ಮಾಡಿದ್ದಾರೆ. ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವುದಿಲ್ಲ. ಹಾಗಾಗಿ ತಕ್ಷಣ ಈ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಈ ವಿಡಿಯೋ ಹಂಚಿಕೊಂಡು ಖಂಡಿಸಿದ್ದಾರೆ. ಮೊದಲು ಬ್ಯಾಂಕ್‌ಗಳಿಗೆ ಹೋದರೆ ಕನ್ನಡವೇ ಕೇಳಿಸುತ್ತಿತ್ತು. ಬನ್ನಿ, ಹೋಗಿ, ಕೂತ್ಕೊಳ್ಳಿ ಹೀಗೆ. ಈಗೆಲ್ಲ ಲೈನ್ ಮೇ ಕಡೋ, ಬಾಹರ್ ಜಾವ್ ಅನ್ನೋ ದಬ್ಬಾಳಿಕೆ ಹೆಚ್ಚಾಗಿದೆ. ಇಲ್ನೋಡಿ ಇದು ಇಂಡಿಯಾ ಅಂತೇ, ಕನ್ನಡ ಬೇಡವಂತೆ. ಇಂಡಿಯಾ ಅಂದ್ರೆ ಹಿಂದಿ ಅಂದೋನು ಯಾವ ಮೂರ್ಖ ಎಂದು ಎಸ್‌ಬಿಐಗೆ ಕೇಳಿದ್ದಾರೆ. ಈಕೆಯನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications