ಅಡುಗೆ ಅರಮನೆ: ಸಿಂಪಲ್ಲಾಗೊಂದ್ ಅವರೆಕಾಯಿ ಸಾಂಬಾರು ಮಾಡಿ ನೋಡಿ
ಚಳಿಗಾಲದ ಧಾನ್ಯ ಅವರೇಕಾಯಿ ತಿನ್ನೋದರಿಂದ ಹೇಗೆಲ್ಲ ಆರೋಗ್ಯ ವರ್ಧನೆ, ಶಕ್ತಿ ವರ್ಧನೆ ಸಾಧ್ಯ ಅನ್ನೋದು ತಿಳಿದುಕೊಂಡಿದ್ದೀರಿ.. ಈಗ ಅವರೆಯ ಸ್ಪೆಷಲ್ ಐಟಂಗಳ ಬಗ್ಗೆ ಓದಿ..
'ಈಗ ಮುಂಚೆ ಇದ್ದಂತೆ ಸವಡಿಲ್ಲ, ಹೈಬ್ರೀಡ್ ಬೆಳೆಗಳು ಬಂದ ಬಳಿಕ ಚಳಿಗಾಲದಲ್ಲಿ ಮಾತ್ರ ತಿನ್ನೋ ಮಜಾ ಹೊರಟ್ಟೋಯ್ತು, ಈಗ ಎಲ್ಲಾ ಕಮರ್ಷಿಯಲ್' ಎಂದು ಬಸವನಗುಡಿಯ ಮೂಲ ನಿವಾಸಿ, ಒಂದು ಕಾಲದ ರೈತ ಚಿಕ್ಕ ಗಂಗಪ್ಪ ತಮ್ಮ ಆ ದಿನಗಳನ್ನು ಸ್ಮರಿಸಿಕೊಂಡರು. ಆದರೆ, ಅವರೆಕಾಳಿನಿಂದ ತಯಾರಿಸುವ ನಾನಾಬಗೆಯ ತಿಂಡಿತಿನಿಸುಗಳನ್ನು ನೆನೆದರಂತೂ ಕುಂತಲ್ಲಿಯೇ ಬಾಯಲ್ಲಿ ನೀರೂರಲು ಪ್ರಾರಂಭಿಸುತ್ತದೆ ಎಂದು ಹೇಳೋದನ್ನು ಮರೆಯಲಿಲ್ಲ.
ಅವರೆ ಇಂದ ಏನೆಲ್ಲ ಮಾಡಬಹುದು ಎಂಬುದರ ಪಟ್ಟಿ ಬೇಕಾದರೆ ಒಂದು ಸಲ ಅವರೆ ಮೇಳ ನಡೆಯುವ ಬೆಂಗಳೂರಿನ ಫುಡ್ ಸ್ಟ್ರೀಟ್ ಕಡೆ ಹೋಗಿ ಬಂದಿರಲೇ ಬೇಕು. ಅವರೆಕಾಳು ನಿಪ್ಪಟ್ಟು, ಕೋಡುಬಳೆ, ಉಸಳಿ, ಹುಳಿ, ಬಸ್ಸಾರು, ಮಸಾಲೆವಡೆ... ಒಂದೆ ಎರಡೇ, ಎನಿಸಿದರೆ 108ಕ್ಕೂ ಅಧಿಕ ಖಾದ್ಯ, ತಿನಿಸು, ಭಕ್ಷ್ಯಗಳನ್ನು ಒಂದೇ ಕಡೆ ಸವಿಯಬಹುದು. ಕೋವಿಡ್ ಬಂದ ಬಳಿಕ ಅವರೆ ಬೆಲೆಗೂ ಸರಿಯಾದ ಬೆಳೆ ಸಿಕ್ಕಿಲ್ಲ, ಅವರೆ ಮೇಳವೂ ಸರಿಯಾಗಿ ಆಯೋಜನೆಯಾಗಿಲ್ಲ.
ಜಹಾಂಗೀರು, ಹಿತಕಬೇಳೆ ಹಲ್ವಾ, ಕಾಜು ಬರ್ಫಿ, ಸ್ವೀಟ್ ಬೂಂದಿ, ಕಟ್‌ಲೆಟ್, ಅವರೆಕಾಯಿ ಹೋಳಿಗೆ, ನಿಪ್ಪಟ್ಟು, ಕೋಡುಬಳೆ, ಜಾಮೂನು, ಪಾಯಸ, ವಡೆ, ದೋಸೆ, ಉಪ್ಪಿಟ್ಟು, ಅವರೆಕಾಳು ಚಿತ್ರಾನ್ನ, ಮಸಾಲೆ ವಡೆ, ಅವಲಕ್ಕಿ ಮಿಕ್ಸ್.. ಎಲ್ಲವೂ ದುಬಾರಿ ದುನಿಯಾದಲ್ಲೂ ಶ್ರೀಸಾಮಾನ್ಯ ಜೇಬಿಗೆ ಕತ್ತರಿ ಹಾಕದೆ 30 -50 ರು ಒಳಗೆ ಸಿಗುತ್ತದೆ ಎಂಬುದು ಬಾಯಿ ಚಪ್ಪರಿಸುವಂಥ ಸಂಗತಿ.

20 ರು ಗೆ ಸಿಗುವ ಅವರೆಕಾಳು ಮಲ್ಲಿಗೆ ಇಡ್ಲಿ, 30 ರು ಗೆ ಸಿಗುವ ಮೊಸರು ಕೊಡುಬಳೆ, 50 ರು ಗೆ ನಾನಾ ಬಗೆಯ ದೋಸೆ ಇಲ್ಲಿನ ಜನಪ್ರಿಯ ಐಟಂಗಳು.
ಅಡುಗೆ ಅರಮನೆಗೆ ಮರಳಿದರೆ..
ಅವರೇಕಾಯಿ ಬಳಸಿ ಹಿಚುಕಿದ ಬೇಳೆ ಹುಳಿ ತಿನ್ನುವುದು ಚಳಿಗಾಲದಲ್ಲಿ ಮಾಮೂಲಿ. ಉಸುಳಿ, ಸಾರು, ಹುಳಿ, ಕೂಟು, ಇಡ್ಲಿ, ಉಪ್ಪಿಟ್ಟು, ರೊಟ್ಟಿ, ಚಕ್ಕುಲಿ, ಸೊಪ್ಪು ಕಾಳು ಸೇರಿಸಿ ಬಸಿದ ಸಾರು, ಮಸೊಪ್ಪಿನಲ್ಲಿ ಸೊಪ್ಪು ಅರೆದ ಮೇಲೆ ಬೇಯಿಸಿದ ಕಾಳು, ಹಿಸುಕಿದ ಅವರೇ ಕಾಳು, ಮಸಾಲೆ ಹಾಕಿದ ಬೇಳೆ ಇವೆಲ್ಲಾ ಅವರೆಯ ಸ್ಪೆಷಲ್ ಐಟಂಗಳು.
ಸದ್ಯಕ್ಕೆ ಬಲಿತಿರುವ ಅವರೆ ಬಳಸಿ ಸಾಂಬಾರು ಮಾಡುವ ವಿಧಾನ ಹೀಗಿದೆ:
ಅವರೆ ಜೊತೆಗೆ ಟೊಮೊಟೋ, ಬದನೆ, ಆಲೂಗೆಡ್ಡೆ, ಸೊಪ್ಪು ಹೀಗೆ ರುಚಿಗೆ ತಕ್ಕಂತೆ ತರಕಾರಿ ಬೆರೆಸಿ ಸಾಂಬಾರು ಮಾಡಬಹುದು. ಸದ್ಯಕ್ಕೆ ಅವರೆ ಹಾಗೂ ಪಾಲಾಕ್ ಸೊಪ್ಪು ಜೋಡಿಯ ಸಾಂಬಾರ್ ಮಾಡೋದು ಹೀಗೆ: ಮಸಾಲೆ ಮಾಡಿಕೊಳ್ಳೋದು ಕಷ್ಟವಾದ್ರೆ, ರೆಡಿಮೇಡ್ ಮಸಾಲೆ ಪುಡಿ ತಂದು ಇಟ್ಕೊಳಿ.. ಆದರೆ,

ಬೇಕಾದ ಸಾಮಾಗ್ರಿ:
* ಬಲಿತ ಅವರೆಕಾಯಿ- ಒಂದೂವರೆ ಅಥವಾ 2 ಕಪ್
* ಫ್ರೆಶ್ ತೆಂಗಿನಕಾಯಿ ತುರಿ- ಒಂದು ಕಪ್ ಇಲ್ಲಾಂದ್ರೆ ಅರ್ಧ ಗಿಟಕು ಒಣಕೊಬ್ಬರಿ ತುರಿದುಕೊಳ್ಳಿ
* ಒಂದು ಚಮಚ ತುಪ್ಪ,
* ಒಂದು ಚಮಚ ಮೆಂತ್ಯ
* ಒಂದು ಚಮಚ ಹುರಿಗಡಲೆ
* ಒಂದರ್ಧ ಚಮಚದಷ್ಟು ಅರಿಶಿನ, ಜೀರಿಗೆ, ಕೊತ್ತಂಬರಿ ಬೀಜ, ಗಸಗಸೆ,
* ಒಂದು ದೊಡ್ಡ ಈರುಳ್ಳಿ, ಆರೇಳು ಎಸಳು ಬೆಳ್ಳುಳ್ಳಿ
* ಕೆಂಪು ಮೆಣಸಿನಕಾಯಿ -10-15
* ಪಾಲಾಕ್ ಸೊಪ್ಪು -1 ಕಪ್
* ಅಡುಗೆ ಎಣ್ಣೆ
ಎರಡಕ್ಕೆ ಮೂರರಷ್ಟು ಅನುಪಾತದಲ್ಲಿ ನೀರಿಟ್ಟು ಅವರೆಕಾಯಿ ಬೇಯಿಸಿಕೊಳ್ಳಿ.. ಜೊತೆಗೆ ಸಣ್ಣಗೆ ಹೆಚ್ಚಿದ ಪಾಲಾಕ್ ಸೊಪ್ಪನ್ನು ನಿಮ್ಮ ಅಳತೆಗೆ ತಕ್ಕಂತೆ ಉಪಾಯೋಗಿಸಿ. ಕುಕ್ಕರಿನಲ್ಲಿ ಎರಡು-ಮೂರು ಸೀಟಿ ಹೊಡೆದರೆ ಸಾಕು ಬೆಂದಿರುತ್ತೆ. ತುಂಬಾ ಮೆತ್ತಗೆ ಮಾಡಿಕೊಳ್ಳಬೇಡಿ.
ಮಸಾಲೆ ಮಾಡಿಕೊಳ್ಳಿ: ಬಾಣಲೆಗೆ 1 ಟೀ ಸ್ಪೂನ್ ಎಣ್ಣೆ ಹಾಕಿ, ಸಣ್ಣ ಉರಿಯಲ್ಲಿ ಈರುಳ್ಳಿಯನ್ನು ಚೆನ್ನಾಗಿ ಬಾಡಿಸಿಕೊಳ್ಳಿ, ಬೆಳ್ಳುಳ್ಳಿ, ಚಕ್ಕೆ, ಲವಂಗ ಕೂಡಾ ಹುರಿದುಕೊಳ್ಳಿ, ಈರುಳ್ಳಿ ಕೆಂಪಾದ ಬಳಿಕ ಬಾಣಲೆಯಿಂದ ತೆಗೆದು ಮಿಕ್ಸಿಗೆ ಹಾಕಿ. ಇದರ ಜೊತೆಗೆ 1 ಚಮಚ ಮೆಂತ್ಯ, ತುರಿದ ಕೊಬ್ಬರಿ, ಹುರಿಗಡಲೆ,ಸ್ವಲ್ಪ ಅರಿಶಿನ, ಜೀರಿಗೆ, ಕೊತ್ತಂಬರಿಬೀಜ, ಗಸಗಸೆ, ಹಸಿ ಶುಂಠಿ ಬೆರೆಸಿ, ಹುಣಸೆ ಹಣ್ಣು, ಕೊತ್ತಂಬರಿ ಸೊಪ್ಪು, ಒಂದೂವರೆ ಸ್ಪೂನ್ ಸಾಂಬಾರು ಪುಡಿ ಹಾಕಿ ರುಬ್ಬಿಕೊಳ್ಳಿ. ಜಾಸ್ತಿ ನುಣ್ಣಗೆ ಬೇಡ.
ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಒಂದು ಈರುಳ್ಳಿ ಚಿಕ್ಕದಾಗಿ ಹೆಚ್ಚಿದ್ದು, ಐದು ಎಸಳು ಬೆಳ್ಳುಳ್ಳಿ, ಎರಡು ಚಿಟಿಕೆ ಅರಿಶಿನ, ಕರಿಬೇವು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ, ಸ್ವಲ್ಪ ಉಪ್ಪು, ಅಚ್ಚ ಖಾರದಪುಡಿ(ನಿಮ್ಮ ಅಗತ್ಯಕ್ಕೆ ಬಿಟ್ಟಿದ್ದು, ) ಬೇಯಿಸಿದ ಅವರೆ ಕಾಯಿ ಸೇರಿಸಿ, ಸಣ್ಣಗೆ ಹೆಚ್ಚಿದ ಪಾಲಾಕ್ ಸೊಪ್ಪನ್ನು ಬೆರೆಸಿ, ಮಸಾಲೆ ಹಾಕಿ ಹಸಿ ವಾಸನೆ ಹೋಗುವ ತನಕ ಕೈಯಾಡಿಸುತ್ತಿರಿ..
ಅನ್ನ, ದೋಸೆ, ಚಪಾತಿ, ರೊಟ್ಟಿ, ರಾಗಿ ಮುದ್ದೆ ಹೀಗೆ ಯಾವುದರ ಜೊತೆ ಬೇಕಾದರೂ ಈ ಸಾಂಬಾರು ತಿನ್ನಲು ರುಚಿಕರ. ನೀವು ಒಮ್ಮೆ ಟ್ರೈ ಮಾಡಿ ನೋಡಿ...












Click it and Unblock the Notifications