ಉಡುಪಿ; ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಾಣ, ಯಶಸ್ವಿ ಪ್ರಯೋಗ
ಉಡುಪಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ನಿರ್ಮಿಸಿದ ರಸ್ತೆ ಯಶಸ್ವಿಯಾಗಿದೆ. ಪ್ಲಾಸ್ಟಿಕ್ ಅನ್ನು ಸೂಕ್ತವಾಗಿ ಮರುಬಳಕೆ ಮಾಡಿದರೆ ಅದು ಒಂದು ಸಂಪನ್ಮೂಲವಾಗುತ್ತದೆ ಎಂದು ಸಾಬೀತಾಗಿದೆ.
ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ದೊಡ್ಡ ಸವಾಲು. ಸಾರ್ವಜನಿಕರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಿರುವ ಪ್ಲಾಸ್ಟಿಕ್ ತಾಜ್ಯ ವಿಲೇವಾರಿ ಸಮಸ್ಯೆ ಎಲ್ಲೆಡೆ ಕಂಡು ಬರುತ್ತಿದೆ.
ಪ್ಲಾಸ್ಟಿಕ್‌ನಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬೇಕಾದ ಬೃಹತ್ ಸಮಸ್ಯೆಯೂ ನಮ್ಮ ಮುಂದಿದೆ. ಪ್ಲಾಸ್ಟಿಕ್ ಅನ್ನು ಒಂದು ತ್ಯಾಜ್ಯವೆಂದು ಪರಿಗಣಿಸುವ ಬದಲಿಗೆ ಅದನ್ನು ಸೂಕ್ತ ರೀತಿಯಲ್ಲಿ ಮರುಬಳಕೆ ಮಾಡಿದರೆ ಅದು ಸಂಪನ್ಮೂಲವಾಗುತ್ತದೆ.
ಉಡುಪಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ನಿರ್ಮಿಸಿದ ರಸ್ತೆ ಇಂತಹ ಮಾತಿಗೆ ಸಾಕ್ಷಿಯಾಗಿದೆ. ಪ್ಲಾಸ್ಟಿಕ್ ಬಳಿಕೆ ಮಾಡಿಕೊಂಡು ನಿರ್ಮಿಸಿದ ರಸ್ತೆ 3 ವರ್ಷದ ಬಳಿಕವೂ ಒಂದೇ ಒಂದು ಗುಂಡಿಗಳಿಲ್ಲದೇ ಉತ್ತಮವಾಗಿದೆ. ಪ್ರಯೋಗ ಯಶಸ್ವಿಯೂ ಆಗಿದೆ.

ಜಿಲ್ಲಾ ಪಂಚಾಯತಿಯಲ್ಲಿ ತರಬೇತಿ; 2019ರ ಡಿಸೆಂಬರ್ 10ರಂದು ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಅಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡುವ ಕಾರ್ಯಾಗಾರವನ್ನು ಉಡುಪಿ ಜಿಲ್ಲಾ ಪಂಚಾಯತಿಯಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಾಗಾರದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ಹಾಗೂ ಪ್ಲಾಸ್ಟಿಕ್ ಮ್ಯಾನ್ ಖ್ಯಾತಿ ಪಡೆದ ತಮಿಳುನಾಡಿನ ಡಾ. ವಾಸುದೇವನ್ ಜಿಲ್ಲೆಯ ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳಿಗೆ ತರಬೇತಿ ನೀಡಿದ್ದರು.
ಉಡುಪಿ ಜಿಲ್ಲೆಯ SLRM ಕೇಂದ್ರಗಳಲ್ಲಿ ಶೇಖರಣೆಯಾಗಿದ್ದ ಪ್ಲಾಸ್ಟಿಕ್‌ಗಳನ್ನು ವಿಲೇವಾರಿ ಮಾಡುವುದು ಸವಾಲಾಗಿದ್ದು, ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ಗಳಿಗೆ ಸ್ಥಳೀಯವಾಗಿ ಬೇಡಿಕೆ ಇದ್ದು,ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್, Multi layered plastic (MLP), Theramocol, foams ಮುಂತಾದವುಗಳಿಗೆ ಯಾವುದೇ ಬೇಡಿಕೆ ಇಲ್ಲದೇ ಇವುಗಳನ್ನು ವಿಲೇವಾರಿ ಮಾಡುವುದು ಕಷ್ಟವಾಗಿತ್ತು.

ಇಂತಹ ವ್ಯರ್ಥ ಪ್ಲಾಸ್ಟಿಕ್‌ಗಳನ್ನು ರಸ್ತೆ ನಿರ್ಮಾಣಕ್ಕೆ ಮರುಬಳಕೆ ಮಾಡುವ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸಬಹುದು ಎಂದು ಡಾ. ವಾಸುದೇವನ್ ಮಾಹಿತಿ ನೀಡಿ, 1 ಕಿ. ಮೀ ರಸ್ತೆಗೆ ಸುಮಾರು 100 ಕಿಜಿ ವ್ಯರ್ಥ ಪ್ಲಾಸ್ಟಿಕ್ ಬಳಕೆ ಮಾಡುವ ಮೂಲಕ ಬಿಟ್ಯುಮನ್ (ಡಾಂಬರ್) ಉಳಿತಾಯ ಮಾಡಬಹುದು ಎಂದು ಹೇಳಿದ್ದರು.
ತರಬೇತಿಯ ನಂತರ ಪ್ರಾಯೋಗಿಕವಾಗಿ ಇಂತಹ ವ್ಯರ್ಥ ಪ್ಲಾಸ್ಟಿಕ್‌ಗಳನ್ನು ಮರುಬಳಕೆ ಮಾಡುವ ಉದ್ದೇಶದಿಂದ, ಅದೇ ದಿನ ಜಿಲ್ಲೆಯಲ್ಲಿ ಮೊದಲ ಬಾರಿಗೆ ಉಡುಪಿ ಜಿಲ್ಲೆಯ ಅಲೆವೂರು ಗ್ರಾಮ ಪಂಚಾಯತಿ ವ್ಯಾಪಿಯಲ್ಲಿ ಪ್ರಾಯೋಗಿಕವಾಗಿ 300 ಮೀಟರ್ ಉದ್ದದ ರಸ್ತೆ ನಿರ್ಮಾಣ ಮಾಡುವ ಮೂಲಕ ಇದರ ಪ್ರಾತ್ಯಕ್ಷಿಕೆ ಮಾಡಲಾಗಿತ್ತು.
ಇಂದಿಗೂ ಉತ್ತಮ ಗುಣಮಟ್ಟ; ಅಂದು ವ್ಯರ್ಥ ಪ್ಲಾಸ್ಟಿಕ್‌ನಿಂದ ನಿರ್ಮಿಸಿದ ಈ ರಸ್ತೆ ಪ್ರಸ್ತುತ 3 ವರ್ಷ ಕಳೆದರೂ ಕೂಡಾ ಇಂದಿಗೂ ಒಂದೇ ಒಂದು ಗುಂಡಿಗಳು ನಿರ್ಮಾಣವಾಗದೇ ಇದ್ದು, ಉತ್ತಮ ಗುಣಮಟ್ಟದಿಂದ ಕೂಡಿದೆ. ಪ್ಲಾಸ್ಟಿಕ್ ಬಳಕೆ ಮಾಡಿ ನಿರ್ಮಾಣ ಮಾಡಿದ ರಸ್ತೆ ಬಾಳಿಕೆ ಬರುತ್ತದೆಯೇ? ಎಂದು ಅನುಮಾನ ವ್ಯಕ್ತಪಡಿಸಿದವರಿಗೆ ಉತ್ತರ ನೀಡಿದೆ. ರಸ್ತೆಯು ದೀರ್ಘ ಕಾಲ ಬಳಿಕೆ ಬರುವುದರ ಜೊತೆಗೆ ನಿರ್ವಹಣೆ ವೆಚ್ಚ ಕೂಡಾ ಕಡಿಮೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಮಾತನಾಡಿ, "ವ್ಯರ್ಥ ಪ್ಲಾಸ್ಟಿಕ್ ಸಂಗ್ರಹವು ವಂಡ್ಸೆ, ಶಂಕರನಾರಾಯಣ, ಹೆಬ್ರಿ ಹಾಗೂ ನಿಟ್ಟೆ ಗ್ರಾಮ ಪಂಚಾತಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ವ್ಯರ್ಥ ಪ್ಲಾಸ್ಟಿಕ್ ತ್ಯಾಜ್ಯದ ಸೂಕ್ತ ವಿಲೇವಾರಿ ಜೊತೆಗೆ ರಸ್ತೆ ನಿರ್ಮಾಣಕ್ಕೆ ತಗಲುವ ವೆಚ್ಚವೂ ಕಡಿಮೆಯಾಗಲಿದೆ" ಎಂದು ಹೇಳಿದ್ದಾರೆ.
ಅಲೆವೂರು ಮಾತ್ರವಲ್ಲದೇ ಜಿಲ್ಲೆಯ ಮರವಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೂ ಸಹ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಎರಡು ವರ್ಷಗಳ ಹಿಂದೆ 120 ಮೀ ಉದ್ದದ ರಸ್ತೆಯನ್ನು ವ್ಯರ್ಥ ಪ್ಲಾಸ್ಟಿಕ್ ಬಳಸಿ ನಿರ್ಮಿಸಲಾಗಿದ್ದು, ಅದೂ ಸಹ ಇಂದಿಗೂ ಉತ್ತಮ ಗುಣಮಟ್ಟ ಹೊಂದಿದೆ.
ಪ್ಲಾಸ್ಟಿಕ್ ಬಳಸಿ ನಿರ್ಮಿಸಿದ ರಸ್ತೆಯು ಬಹಳ ಕಾಲ ಬಾಳಿಕೆ ಬರುತ್ತದೆ ಹಾಗೂ ಉತ್ತಮ ಗುಣಮಟ್ಟದಿಂದ ಕೂಡಿರಲಿದೆ ಎಂಬುದಕ್ಕೆ ಅಲೆವೂರು 3 ವರ್ಷದ ಹಿಂದೆ ನಿರ್ಮಿಸಿರುವ ರಸ್ತೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗ , ಕೆ. ಆರ್. ಐ. ಡಿ. ಎಲ್ ಸೇರಿದಂತೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಎಲ್ಲಾ ಇಲಾಖೆಗಳಲ್ಲಿನ ರಸ್ತೆ ಕಾಮಗಾರಿಗಳಲ್ಲಿ ಶೇ. 10 ರಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡ್ಡಾಯವಾಗಿ ಬಳಕೆ ಮಾಡುವ ಕುರಿತಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.












Click it and Unblock the Notifications