ಎತ್ತ ಸಾಗುತ್ತಿದೆ ಬ್ರಿಟನ್-ಚೀನಾ ಸಂಬಂಧ? ರಿಷಿ, ಲಿಜ್ ವಾಗ್ಬಾಣದ ಇಂಗಿತ ಏನು?
ಲಂಡನ್, ಆಗಸ್ಟ್ 17: ಬ್ರಿಟನ್ ಪ್ರಧಾನಿ ರೇಸ್‌ನಲ್ಲಿರುವ ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಮಧ್ಯೆ ಬಹುತೇಕ ಎಲ್ಲಾ ವಿಚಾರಗಳಲ್ಲೂ ಭಿನ್ನಾಭಿಪ್ರಾಯಗಳಿವೆ. ಆದರೆ, ಒಂದು ವಿಚಾರದಲ್ಲಿ ಮಾತ್ರ ಇಬ್ಬರ ಮಧ್ಯೆ ಸಹಮತ ಕಂಡುಬಂದಿದೆ. ಅದು 'ಚೀನಾ' ವಿಚಾರ.
ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ನಡೆಯುತ್ತಿರುವ ಅಂತಿಮ ಹಂತದ ಚುನಾವಣೆಯಲ್ಲಿ ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ನಿರತರಾಗಿದ್ದಾರೆ. ಈ ಸಂಬಂಧ ದೇಶದ ವಿವಿಧೆಡೆ ಇಬ್ಬರ ಮಧ್ಯೆ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿದ್ದು ಪಕ್ಷದ ಸದಸ್ಯರನ್ನು ಆಕರ್ಷಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಭಾಷಣೆಗಳಲ್ಲಿ ಇಬ್ಬರೂ ಕೂಡ ಚೀನಾದಿಂದ ಎದುರಾಗುತ್ತಿರುವ ಅಪಾಯದ ಬಗ್ಗೆ ಮಾತನಾಡಿದ್ದಾರೆ.
ತಾನು ಅಧಿಕಾರಕ್ಕೆ ಬಂದರೆ ಚೀನಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವವನ್ನು ಕಡಿಮೆ ಮಾಡುವುದಾಗಿ ಇಬ್ಬರೂ ಕೂಡ ಭರವಸೆ, ಆಶ್ವಾಸನೆಗಳನ್ನು ನೀಡುತ್ತಿದ್ದಾರೆ.
ಈ ಇಬ್ಬರಲ್ಲಿ ಯಾರೇ ಪ್ರಧಾನಿಯಾದರೂ ಚೀನಾ ವಿಚಾರದಲ್ಲಿ ಬ್ರಿಟನ್ ನೀತಿಯಲ್ಲಿ ಬದಲಾವಣೆ ಆಗುವುದು ನಿಶ್ಚಿತ. ಇಷ್ಟು ವರ್ಷಗಳ ಕಾಲ ಚೀನಾ ಜೊತೆ ಉತ್ತಮ ವ್ಯಾಪಾರ ಸಂಬಂಧ ಹೊಂದಿದ್ದ ಬ್ರಿಟನ್ ಈಗ ಕವಲುದಾರಿಗೆ ತಿರುಗುತ್ತಿದೆ. ಆದರೆ, ಇದು ಕೇವಲ ಪಕ್ಷದ ಕಾರ್ಯಕರ್ತರನ್ನು ಆಕರ್ಷಿಸಲು ಈ ಇಬ್ಬರು ಆಡುತ್ತಿರುವ ಮಾತುಗಳೇ, ಅಥವಾ ನಿಜವಾಗಿಯೂ ಚೀನಾ ವಿಚಾರದಲ್ಲಿ ಗಂಭೀರವಾಗಿದ್ದಾರಾ ಎಂಬುದನ್ನು ಕಾಲವೇ ಉತ್ತರಿಸಬೇಕು.

ಬ್ರಿಟನ್ ಕುಪಿತಕ್ಕೆ ಕಾರಣ?
ಆದರೆ, ಇತ್ತೀಚಿನ ವರ್ಷಗಳಲ್ಲಿನ ಕೆಲ ಬೆಳವಣಿಗೆಗಳು ಚೀನಾ ಎದುರು ಬ್ರಿಟನ್ ನಿಲ್ಲುವಂತೆ ಮಾಡಿರುವುದು ಹೌದು. ಹಾಂಕಾಂಗ್ ವಿಚಾರದಲ್ಲಿ ಚೀನಾ ನಡೆದುಕೊಳ್ಳುವ ರೀತಿಯನ್ನು ಬ್ರಿಟನ್ ಬಲವಾಗಿ ವಿರೋಧಿಸಿದೆ. ಚೀನಾದಲ್ಲಿನ ಮಾನವ ಹಕ್ಕು ಉಲ್ಲಂಘನೆ, ಚೀನಾದಿಂದ ಎದುರಾಗಿರುವ ಸೈಬರ್ ಭದ್ರತೆ ಇತ್ಯಾದಿ ವಿಚಾರಗಳೂ ಬ್ರಿಟನ್ ಅನ್ನು ಕುಪಿತಗೊಳಿಸಿವೆ. ಈ ಹಿನ್ನೆಲೆಯಲ್ಲಿ ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಇಬ್ಬರೂ ಚೀನಾ ವಿರೋಧಿ ನಿಲುವು ತಳೆದಿರುವುರಲ್ಲಿ ಅಚ್ಚರಿ ಇಲ್ಲ.
"ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಇಬ್ಬರೂ ಚೀನಾ ವಿರುದ್ಧ ಕಠಿಣ ನಿಲುವು ತಳೆಯಲು ಪ್ರಯತ್ನಿಸುತ್ತಿರುವುದು ಬ್ರಿಟನ್‌ನ ಮುಂದಿನ ಹಾದಿಯ ಸುಳಿವು ಸಿಕ್ಕಿದೆ. ಯಾರೇ ಪ್ರಧಾನಿಯಾದರೂ ಬ್ರಿಟನ್ ಚೀನಾ ವಿಚಾರದಲ್ಲಿ ಯಾವ ನೀತಿ ಅನುಸರಿಸಬಹುದು ಎಂಬುದು ವ್ಯಕ್ತವಾಗುತ್ತಿದೆ," ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ರಾಣಾ ಮಿಟ್ಟರ್ ಹೇಳುತ್ತಾರೆ.
"ರಿಷಿ ಸುನಕ್ ಅಥವಾ ಲಿಜ್ ಟ್ರುಸ್ ಅವರಲ್ಲಿ ಯಾರೇ ಪ್ರಧಾನಿಯಾದರೂ ಚೀನಾ ವಿಚಾರದಲ್ಲಿ ವ್ಯಾಪಾರ ಅಂಶಕ್ಕಿಂತ ಹೆಚ್ಚಾಗಿ ಭದ್ರತಾ ಅಂಶಕ್ಕೆ ಹೆಚ್ಚು ಒತ್ತುಕೊಡುವ ಸಾಧ್ಯತೆ ಇದೆ" ಎಂಬುದು ಅವರ ಅನಿಸಿಕೆ.

ಬ್ರಿಟನ್-ಚೀನಾ ಮಧ್ಯೆ ಒಳ್ಳೆಯ ವ್ಯಾಪಾರ ಬಾಂಧವ್ಯ
ಬ್ರಿಟನ್ ಮತ್ತು ಚೀನಾ ಮಧ್ಯೆ ಉತ್ತಮ ವ್ಯಾಪಾರ ಬಾಂಧವ್ಯ ಇದೆ. ಬ್ರಿಟನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶಗಳಲ್ಲಿ ಚೀನಾ ಮೂರನೇ ಸ್ಥಾನದಲ್ಲಿದೆ. ಬ್ರಿಟನ್‌ನ ಒಟ್ಟು ಜಾಗತಿಕ ವಾಣಿಜ್ಯ ವ್ಯವಹಾರದಲ್ಲಿ ಚೀನಾದ ಪಾಲು ಶೇ. 7ರಷ್ಟು ಇದೆ. ಎರಡು ದೇಶಗಳ ಮಧ್ಯೆ ವಾರ್ಷಿಕವಾಗಿ ನಡೆಯುವ ಸರಕು ಮತ್ತು ಸೇವೆಗಳ ಒಟ್ಟು ಮೊತ್ತ 93 ಬಿಲಿಯನ್ ಪೌಂಡ್ (ಸುಮಾರು 9 ಲಕ್ಷ ಕೋಟಿ ರೂಪಾಯಿ) ಇದೆ.
2015ರಲ್ಲಿ ಈ ಎರಡು ದೇಶಗಳ ಮಧ್ಯೆ ಇದ್ದದ್ದು ವಾರ್ಷಿಕ ವ್ಯವಹಾರದ ಮೊತ್ತ 58 ಬಿಲಿಯನ್ ಪೌಂಡ್. ಅಂದಿನ ಪ್ರಧಾನಿ ಡೇವಿಡ್ ಕೆಮರಾನ್ ಮತ್ತು ವಿದೇಶಾಂಗ ಸಚಿವ ಜಾರ್ಜ್ ಓಸ್ಬೋರ್ನ್ ಇಬ್ಬರೂ ಕೂಡ ಚೀನಾ ಜೊತೆಗಿನ ವ್ಯಾಪಾರಕ್ಕೆ ಹೆಚ್ಚು ಪ್ರಧಾನ್ಯತೆ ಕೊಟ್ಟರು. ಸಿನೋ ಬ್ರಿಟನ್ ಭಾಯ್ ಭಾಯ್ ಎಂದರು. ಬ್ರಿಟನ್‌ಗೆ ಚೀನಾ ಬೆಸ್ಟ್ ಪಾರ್ಟ್ನರ್ ಆಯಿತು.
ಬ್ರಿಟನ್ ಮತ್ತು ಚೀನಾ ಸಂಬಂಧ 'ಚಿನ್ನದ ಯುಗ'ಕ್ಕೆ ಕಾಲಿಟ್ಟಿತು ಎಂದು ಎಲ್ಲರೂ ಭಾವಿಸುವಷ್ಟರಲ್ಲಿ ಮತ್ತೆ ಬಿರುಕುಗಳು ಕಾಣಿಸಿವೆ. ಮಾಜಿ ಬ್ರಿಟಿಷ್ ಕಾಲೊನಿಯಾದ ಹಾಂಕಾಂಗ್ ಮೇಲೆ ಚೀನಾದ ಹಿಡಿತ ಹೆಚ್ಚುತ್ತಿರುವುದು, ಚೀನಾದ ಊಯ್ಗರ್ ಮುಸ್ಲಿಮ್ ಸಮುದಾಯದವರ ಮೇಲೆ ಚೀನಾ ದೌರ್ಜನ್ಯ ನಡೆಸುತ್ತಿರುವುದು, ಅಂತಾರಾಷ್ಟ್ರೀಯ ಗುರಿಗಳ ಮೇಲೆ ಚೀನಾ ಸೈಬರ್ ದಾಳಿ ಮಾಡುತ್ತಿರುವುದು ಬ್ರಿಟನ್‌ಗೆ ಅಸಮಾಧಾನ ತಂದಿದೆ.
ಹಾಗೆಯೇ, ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾಗೆ ಚೀನಾ ಪರೋಕ್ಷ ಬೆಂಬಲ ಕೊಡುತ್ತಿರುವುದು ಮತ್ತು ತೈವಾನ್ ಮೇಲೆ ಆಕ್ರಮಣಕಾರಿ ಧೋರಣೆ ಅನುಸರಿಸುತ್ತಿರುವುದೂ ಕೂಡ ಬ್ರಿಟನ್ ಕೆಂಗಣ್ಣಿಗೆ ಕಾರಣವಾಗಿದೆ.

ರಿಷಿ ಸುನಕ್ ಹೇಳುವುದೇನು?
ಚೀನಾ ಹಾಗೂ ಅದರ ಕಮ್ಯೂನಿಸ್ಟ್ ಆಡಳಿತವು ಬ್ರಿಟನ್‌ಗೆ ಮಾತ್ರವಲ್ಲ ವಿಶ್ವದ ಭದ್ರತೆಗೆ ಅತಿದೊಡ್ಡ ಬೆದರಿಕೆ ಆಗುತ್ತಿದೆ ಎಂದು ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಹೇಳುತ್ತಾರೆ.
"ನಾನು ಪ್ರಧಾನಿಯಾದರೆ ಚೀನಾದ ಸೈಬರ್ ದಾಳಿ ಅಪಾಯವನ್ನು ಎದುರಿಸಲು ಮುಕ್ತ ರಾಷ್ಟ್ರಗಳ ಅಂತಾರಾಷ್ಟ್ರೀಯ ಮೈತ್ರಿ ಕಟ್ಟುತ್ತೇನೆ. ಚೀನಾದ ಔದ್ಯಮಿಕ ಬೇಹುಗಾರಿಕೆಯನ್ನು ನಿಗ್ರಹಿಸಲು ಭದ್ತಾ ಪಡೆಗಳಿಗೆ ಹೆಚ್ಚಿನ ಅಧಿಕಾರ ನೀಡುತ್ತೇನೆ" ಎಂದು 42 ವರ್ಷದ ರಿಷಿ ಸುನಕ್ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಚೀನೀ ಭಾಷೆ ಮತ್ತು ಸಂಸ್ಕೃತಿಯನ್ನು ಬೋಧಿಸುವ ಬ್ರಿಟನ್‌ನ ಎಲ್ಲಾ 30 ಕನ್ಫೂಷಿಯಸ್ ಇನ್ಸ್‌ಟಿಟ್ಯೂಟ್‌ಗಳನ್ನು ಮುಚ್ಚಿಸುತ್ತೇನೆ. ಚೀನಾದ ಬಲವರ್ಧನೆಗೆ ಈ ಸಂಸ್ಥೆಗಳು ನೆರವಾಗಿವೆ ಎಂಬುದು ಅವರ ಅಭಿಪ್ರಾಯ.

ಲಿಜ್ ಟ್ರುಸ್ ಹೇಳುವುದೇನು?
ಇನ್ನು, ಬ್ರಿಟನ್ ಪ್ರಧಾನಿ ರೇಸ್‌ನಲ್ಲಿರುವ ಇನ್ನೊಬ್ಬ ಸ್ಪರ್ಧಿ ಲಿಜ್ ಟ್ರುಸ್ ಕೂಡ ಚೀನಾದಿಂದ ಎದುರಾಗುವ ಅಪಾಯದ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ. ಚೀನಾ ಮೇಲೆ ಬ್ರಿಟನ್ ಅವಲಂಬಿತವಾದರೆ ಎಷ್ಟು ಕಷ್ಟವಾಗುತ್ತದೆ ಎಂಬುದನ್ನು ಅವರು ರಷ್ಯಾ ವಿಚಾರ ಉಲ್ಲೇಖಿಸಿ ತಿಳಿಸಿದ್ದಾರೆ.
ಅದೇನೇ ಇದ್ದರೂ ಈ ಇಬ್ಬರು ನಾಯಕರು ಚೀನಾ ಬಗ್ಗೆ ನೀಡುತ್ತಿರುವ ಹೇಳಿಕೆಗಳು ಮುಂದಿನ ದಿಗ್ಸೂಚಿಯಂತೆ ತೋರುತ್ತಿದೆ. ಅಮೆರಿಕ, ಬ್ರಿಟನ್ ಮೊದಲಾದ ದೇಶಗಳ ನಾಯಕರು ಚೀನಾ ವಿಚಾರದಲ್ಲಿ ಏಕರೀತಿಯ ಅಭಿಪ್ರಾಯವನ್ನು ರೂಪಿಸುತ್ತಿರುವಂತೆ ಕಾಣುತ್ತಿದೆ. ಡ್ರ್ಯಾಗನ್ ಚೀನಾ ಈಗ ಪಾಶ್ಚಿಮಾತ್ಯ ದೇಶಗಳಿಗೆ ಸಮಾನ ಶತ್ರುವಾಗಿ ಪರಿಣಮಿಸಿದೆ. ಮುಂದಿನ ಅಂತಾರಾಷ್ಟ್ರೀಯ ಸಮೀಕರಣ ಬಹಳ ಕುತೂಹಲ ಮೂಡಿಸುತ್ತದೆ ಎಂಬುದು ರಾಜಕೀಯ ತಜ್ಞರ ಕುತೂಹಲ.
ಅದರೆ, ಆರ್ಥಿಕವಾಗಿ ಕಷ್ಟದ ಪರಿಸ್ಥಿತಿಲ್ಲಿರುವ ಬ್ರಿಟಿನ್ ಈ ಸಂದರ್ಭದಲ್ಲಿ ಚೀನಾವನ್ನು ಸಂಪೂರ್ಣವಾಗಿ ಎದಿರುಹಾಕಿಕೊಳ್ಳಲು ಆಗುತ್ತಾ ಎಂಬುದು ಪ್ರಶ್ನೆ. ಚುನಾವಣೆಯಲ್ಲಿ ಗೆಲ್ಲಲು ಈ ನಾಯಕರು ಚೀನಾ ಬಗ್ಗೆ ಎದೆತಟ್ಟುವ ಹೇಳಿಕೆ ನೀಡುತ್ತಿದ್ದಾರಾ, ಅಥವಾ ಪ್ರಧಾನಿ ಆದ ಮೇಲೆ ಆ ದಿಕ್ಕಿನಲ್ಲಿ ಸಾಗುತ್ತಾರಾ ಎಂಬುದು ಈಗಲೇ ಸ್ಪಷ್ಟವಾಗಿ ಹೆಳಲು ಸಾಧ್ಯವಿಲ್ಲ.
ಹಣದುಬ್ಬರ ಅಪಾಯಕಾಗಿ ಮಟ್ಟದಲ್ಲಿ ಇರುವ ಬ್ರಿಟನ್ ದೇಶ ಈಗ ಚೀನಾ ಜೊತೆಗಿನ ವ್ಯಾಪಾರ ಸಂಬಂಧವನ್ನು ಕಡಿದುಕೊಂಡರೆ ಆರ್ಥಿಕ ಪರಿಸ್ಥಿತಿ ಬಿಗಡಾಯಿಸುವುದರಲ್ಲಿ ಸಂಶಯ ಇಲ್ಲ. ಹೀಗಾಗಿ, ಬ್ರಿಟನ್‌ನ ಮುಂದಿನ ಹೆಜ್ಜೆ ಏನಾಗಿರಬಹುದು ಎಂಬ ಪ್ರಶ್ನೆ ಉಳಿದುಕೊಂಡಿದೆ.
ಬೋರಿಸ್ ಜಾನ್ಸನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ರಿಷಿ ಸುನಕ್ ಮತ್ತು ಲಿಜ್ ಟ್ರುಸ್ ಇಬ್ಬರೂ ಅಂತಿಮ ಹಂತದ ಚುನಾವಣೆಯಲ್ಲಿದ್ದಾರೆ. ಸೆಪ್ಟೆಂಬರ್ 5ರಂದು ಕನ್ಸರ್ವೇಟಿವ್ ಪಕ್ಷದ ಸರ್ವಸದಸ್ಯರು ಸೇರಿ ಹೊಸ ನಾಯಕರನ್ನು ಆರಿಸಲಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications