R Ashok profile; ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕನ ಪರಿಚಯ
ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕ, ಕಂದಾಯ ಸಚಿವ ಆರ್. ಅಶೋಕ. ಕರ್ನಾಟಕದ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ.
ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕ. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಆರ್. ಅಶೋಕ. ರಾಜ್ಯದ ಉಪ ಮುಖ್ಯಮಂತ್ರಿಯಾಗಿಯೂ ಇವರು ಕೆಲಸ ಮಾಡಿದ್ದಾರೆ. ಬೆಂಗಳೂರು ಮತ್ತು ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಇವರನ್ನು ಅಭಿಮಾನಿಗಳು, ಕಾರ್ಯಕರ್ತರು ಸಾಮ್ರಾಟ ಅಶೋಕ ಎಂದೂ ಕರೆಯುವುದುಂಟು. ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕಂದಾಯ ಸಚಿವರು.
1/7/1957ರಲ್ಲಿ ಜನಿಸಿದ ಆರ್. ಅಶೋಕ ರಾಮಯ್ಯ, ಆಂಜನಮ್ಮ ದಂಪತಿಗಳ ಪುತ್ರ. ವಿದ್ಯಾರ್ಥಿಯಾಗಿದ್ದಾಗಲೇ ಹೋರಾಟಗಳಲ್ಲಿ ಆರ್. ಅಶೋಕ ಪಾಲ್ಗೊಂಡಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿ.ವಿ.ಪುರಂ ಕಾಲೇಜಿನಲ್ಲಿ ಓದುವಾಗ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಜೈಲು ಸೇರಿದ್ದರು. ಪೊಲೀಸರ ಲಾಠಿ ಏಟು ತಿಂದು ಜೈಲು ಸೇರಿದ್ದ ಆರ್. ಅಶೋಕ ರಾಜಕಾರಣಕ್ಕೆ ಬಂದು, ಗೃಹ ಖಾತೆ ಸಚಿವರಾಗಿ ಪೊಲೀಸ್ ಇಲಾಖೆಯ ಮುಖ್ಯಸ್ಥರಾದರು.

ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ಬಂದು 46 ವರ್ಷವಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು. 2021ರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆಗ ಕಂದಾಯ ಸಚಿವರಾಗಿದ್ದ ಆರ್. ಅಶೋಕ, "1975ರಲ್ಲಿ ಸ್ನೇಹಿತರ ಜತೆ ಪ್ರತಿಭಟನೆ ನಡೆಸಿದ್ದಕ್ಕೆ ಜೈಲಿಗೆ ಹಾಕಿದ್ದರು. ಆಗ ವಿ. ವಿ. ಪುರಂ ಕಾಲೇಜಿನಲ್ಲಿ ನಾನು ಓದುತ್ತಿದೆ. ಜೈಲಿನಲ್ಲಿ ಸಿಲ್ವರ್ ತಟ್ಟೆ ಹಾಗೂ ಕಂಬಳಿ ಕೊಟ್ಟಿದ್ದರು. ಜೈಲಿನ ಕೋಣೆಯೊಳಗೆ ಅದರಲ್ಲಿ ಹಿಡಿಯುವುದಕ್ಕಿಂತ ಐದು ಪಟ್ಟು ಹೆಚ್ಚು ಜನರನ್ನು ತುಂಬಿದ್ದರು. ನಾನು 1 ತಿಂಗಳು ಜೈಲಿನಲ್ಲಿದ್ದೆ" ಎಂದು ಅಂದಿನ ದಿನವನ್ನು ನೆನಪು ಮಾಡಿಕೊಂಡಿದ್ದರು.
ವಿದ್ಯಾರ್ಥಿಯಾಗಿದ್ದಾಗಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಡೆಗೆ ಆರ್. ಅಶೋಕ ಆಕರ್ಷಿತರಾಗಿದ್ದರು. ಬೆಂಗಳೂರಿನ ವಿಶ್ವೇಶ್ವರಪುರಂ ಕಾಲೇಜಿನಲ್ಲಿ ಓದುವಾಗ ಕಬಡ್ಡಿ ಚಾಂಪಿಯನ್ ಆಗಿ ಹೆಸರು ಮಾಡಿದ್ದರು. ಕಾಲೇಜು ಮುಗಿದ ಬಳಿಕ ಬಿಜೆಪಿಯೊಂದಿಗೆ ಗುರುತಿಸಿಕೊಂಡು ರಾಜಕೀಯಕ್ಕೆ ಬಂದರು. ನಂತರ ಹಂತ ಹಂತವಾಗಿ ಪಕ್ಷ ಹಾಗೂ ರಾಜಕೀಯದಲ್ಲಿ ಬೆಳೆದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಜೊತೆ ಜೈಲಿನಲ್ಲಿದ್ದರು. ಹೈಕಮಾಂಡ್ ಮಟ್ಟದಲ್ಲಿ ಉತ್ತಮ ಒಡನಾಟ ಹೊಂದಿರುವ ಕರ್ನಾಟಕದ ಬಿಜೆಪಿ ನಾಯಕರಲ್ಲಿ ಆರ್. ಅಶೋಕ ಸಹ ಒಬ್ಬರು.

1997ರಲ್ಲಿ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಎದುರಾಯಿತು. ಚುನಾವಣೆಯಲ್ಲಿ ಗೆದ್ದು ಆರ್. ಅಶೋಕ ವಿಧಾನಸಭೆ ಪ್ರವೇಶ ಮಾಡಿದರು. ಇದುವರೆಗೂ 6 ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. 2004ರಲ್ಲಿ ಬಿಜೆಪಿ-ಜೆಡಿಎಸ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಅಶೋಕ ಕೆಲಸ ಮಾಡಿದ್ದರು. ಬಿಜೆಪಿ ಸರ್ಕಾರ ಬಂದ ಮೇಲೆ ಗೃಹ ಮತ್ತು ಸಾರಿಗೆ ಸಚಿವರಾಗಿ ಕೆಲಸ ಮಾಡಿದರು. ಬೆಂಗಳೂರಿನ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಲಾಭದಲ್ಲಿ ಓಡಲು ಆರ್. ಅಶೋಕ ದೂರದೃಷ್ಟಿಯಿಂದ ಕೆಲಸ ಮಾಡಿದರು. ಕೆಎಸ್ಆರ್‌ಟಿಸಿಗೆ ಐಷಾರಾಮಿ ಬಸ್‌ಗಳನ್ನು ಪರಿಚಯಿಸಿದ ಕೀರ್ತಿ ಅಶೋಕ ಅವರದ್ದಾಗಿದೆ.
2008ರಲ್ಲಿ ವಿಧಾನಾಭಾ ಕ್ಷೇತ್ರಗಳ ಪುನರ್ ವಿಂಗಡೆನೆ ಆಯಿತು. ಆಗ ಆರ್. ಅಶೋಕ ಉತ್ತರಹಳ್ಳಿಯ ಭಾಗವಾಗಿದ್ದ ಪದ್ಮನಾಭನಗರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. 2008, 2013, 2018ರ ಚುನಾವಣೆಯಲ್ಲಿ ಉತ್ತರಹಳ್ಳಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಚುನಾವಣೆ ನಡೆದರೆ ಆರ್. ಅಶೋಕ ಎದುರು ಪ್ರತಿಪಕ್ಷಗಳು ಅಭ್ಯರ್ಥಿ ಹಾಕುವುದು ಬೇಡ ಎಂಬುವಷ್ಟರ ಮಟ್ಟಿಗೆ ಕ್ಷೇತ್ರದ ರಾಜಕೀಯದಲ್ಲಿ ಹಿಡಿತ ಹೊಂದಿದ್ದಾರೆ. ಬೆಂಗಳೂರು ನಗರದ ರಾಜಕೀಯದ ಮೇಲೆ, ಬಿಬಿಎಂಪಿಯ ರಾಜಕೀಯದಲ್ಲೂ ಆರ್. ಅಶೋಕ ಪ್ರಭಾವ ಹೆಚ್ಚಿದೆ.
2019ರಲ್ಲಿ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಆರ್. ಅಶೋಕ ಕಂದಾಯ ಸಚಿವರಾದರು. ಕೋವಿಡ್, ಲಾಡ್‌ಡೌನ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಜೊತೆಗೆ ನಿಂತು ಕೆಲಸ ಮಾಡಿದರು. ಗ್ರಾಮ ಒನ್, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನ, ಕಂದಾಯ ಇಲಾಖೆ ಡಿಜಿಟಲೀಕರಣ ಮುಂತಾದ ಕೆಲಸಗಳಿಂದ ಜನ ಮೆಚ್ಚುಗೆ ಪಡೆದಿದ್ದಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕವೂ ಸಂಪುಟ ಸೇರಿದರು. ಕಂದಾಯ ಸಚಿವರಾಗಿ ಮುಂದುವರೆದರೆ. ಬೆಂಗಳೂರು ನಗರ ಉಸ್ತುವಾರಿ ಸಚಿವ ಸ್ಥಾನ ಬೇಕು ಎನ್ನುವ ಅಶೋಕ ಬೇಡಿಕೆ ಅದೇಕೋ ಈಡೇರಲೇ ಇಲ್ಲ.
ರಾಜಕೀಯ ಸ್ಥಾನಮಾನಗಳು
* 1998-1999 - ವಿಧಾನಸಭಾ ಸದಸ್ಯರು
* 1199-2004 - ವಿಧಾನಸಭಾ ಸದಸ್ಯರು
* 2004-2007- ವಿಧಾನಸಭಾ ಸದಸ್ಯರು
* 2006-2007 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
* 2008-2013 ಉಪ ಮುಖ್ಯಮಂತ್ರಿ, ಸಾರಿಗೆ ಮತ್ತು ಗೃಹ ಸಚಿವರು
* 2013-2018 ವಿಧಾನಸಭಾ ಸದಸ್ಯರು
* 2018 ರ ಚುನಾವಣೆಯಲ್ಲಿ ಮತ್ತೆ ಶಾಸಕರಾಗಿ ಆಯ್ಕೆ, 2019ರಲ್ಲಿ ಕಂದಾಯ ಸಚಿವ ಹೊಣೆ












Click it and Unblock the Notifications