ಆಂಧ್ರ ಪ್ರದೇಶದಲ್ಲಿ ಪುಷ್ಪ ಸಿನಿಮಾ ಹುಟ್ಟುಹಾಕಿದ 'ಜಾತಿ ಬಿರುಗಾಳಿ'
ರಾಜಕೀಯ ಮತ್ತು ಸಿನಿಮಾಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವ ರಾಜ್ಯಗಳಲ್ಲಿ ಒಂದು ಆಂಧ್ರ ಪ್ರದೇಶ. ಹಿಂದಿನಿಂದಲೂ ಈ ಎರಡೂ ರಂಗಗಳ ನಡುವೆ ಬಿಡಿಸಲಾಗದ ನಂಟು. ಆಂಧ್ರ ಪ್ರದೇಶದಲ್ಲಿ ರಾಜಕಾರಣ, ಸಿನಿಮಾ ಮಾಡಿಕೊಂಡು ಜೈಸುವುದು ಅಷ್ಟು ಸುಲಭದ ಮಾತಲ್ಲ.
ಜಾತಿ ರಾಜಕಾರಣದಲ್ಲೂ ಹೆಸರಾಗಿರುವ ಆಂಧ್ರ ಪ್ರದೇಶದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪುಷ್ಪ ಸಿನಿಮಾ ಸದ್ದನ್ನು ಮಾಡುತ್ತಿದೆ. ಸಿನಿಮಾದ ಕಲೆಕ್ಷನ್ ನಿಂದ ಈಗಾಗಲೇ ದೇಶವ್ಯಾಪಿ ಹೆಸರು ಮಾಡಿರುವ ಪುಷ್ಪ ಸಿನಿಮಾಗೆ ಜಾತಿ ರಾಜಕೀಯ ಅಂಟು ಕೊಂಡಿದೆ.
ಸಿನಿಮಾವನ್ನು ಸಿನಿಮಾದ ರೀತಿಯಲ್ಲಿ ನೋಡದ ವೈಎಸ್ಆರ್ ಕಾಂಗ್ರೆಸ್ ಮತ್ತು ತೆಲುಗುದೇಶಂ ಪಕ್ಷದ ಮುಖಂಡರು, ಒಂದು ಜಾತಿಗೆ ಸಿನಿಮಾದಲ್ಲಿ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗಿದೆ ಎಂದು ಆರೋಪಿಸುತ್ತಿವೆ. ಅದೂ, ಪುಷ್ಪ ಸಿನಿಮಾ ಒಟಿಟಿಗೆ ಬಿಕರಿಯಾದ ನಂತರ.
ಕೋವಿಡ್ ಹಾವಳಿಯ ನಡುವೆಯೂ ಪುಷ್ಪ ಸಿನಿಮಾ ಭರ್ಜರಿ ಕಲೆಕ್ಷನ್ ಅನ್ನು ಮಾಡಿತ್ತು. ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರು ಕೂಡಾ, ಸಿನಿಮಾ ಬಾಲಿವುಡ್ ಸಿನಿಮಾಗಳನ್ನು ಮೂಲೆಗೆ ತಳ್ಳಿ ಮುನ್ನೂರು ಕೋಟಿಗೂ ಅಧಿಕ ಬ್ಯೂಸಿನೆಸ್ ಮಾಡಿತ್ತು. ಚಿತ್ರದಲ್ಲಿನ ಖಳನಾಯಕನ ಪಾತ್ರಕ್ಕೆ ಇಟ್ಟ ಹೆಸರು ಈಗ ವಿವಾದಕ್ಕೆ ಕಾರಣವಾಗಿದೆ.

ರೆಡ್ಡಿ ಸಮುದಾಯವನ್ನು ಅವಮಾನಿಸುವ ಉದ್ದೇಶ ಈ ಚಿತ್ರಕ್ಕಿದೆ
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಶೇಷಾಚಲಂ ದಟ್ಟಾರಣ್ಯದಲ್ಲಿನ ರಕ್ತಚಂದನ ಕಳ್ಳಸಾಗಣಿ ಮಾಡುವ ತಂಡದ ಮಾಲೀಕ ಪಾತ್ರವನ್ನು ಪುಷ್ಪ ಚಿತ್ರದಲ್ಲಿ ಅಜಯ್ ಘೋಶ್ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಈ ಪಾತ್ರಕ್ಕೆ ಕೊಂಡ ರೆಡ್ಡಿ ಎಂದು ನಿರ್ದೇಶಕ ಸುಕುಮಾರ್ ಹೆಸರಿಟ್ಟಿದ್ದಾರೆ. ಇದು ಈಗ ಅಲ್ಲಿನ ಎರಡು ಪಕ್ಷಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ರೆಡ್ಡಿ ಎಂದು ಖಳನಾಯಕನ ಪಾತ್ರಕ್ಕೆ ಹೆಸರಿಟ್ಟಿದ್ದು, ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ. ರೆಡ್ಡಿ ಸಮುದಾಯವನ್ನು ಅವಮಾನಿಸುವ ಉದ್ದೇಶ ಈ ಚಿತ್ರಕ್ಕಿದೆ ಎನ್ನುವುದು ಅವರ ಆರೋಪ.

ಅಲ್ಲು ಅರ್ಜುನ್ ಪ್ರಮುಖ ಭೂಮಿಕೆಯಲ್ಲಿರುವ ಪುಷ್ಪ ಚಿತ್ರ
ಅಲ್ಲು ಅರ್ಜುನ್ ಪ್ರಮುಖ ಭೂಮಿಕೆಯಲ್ಲಿರುವ ಪುಷ್ಪ ಚಿತ್ರದ ನಿರ್ಮಾಪಕರು ಚೌಧುರಿ ಮತ್ತು ಪ್ರೊಡಕ್ಷನ್ ಹೌಸ್ ಮೈತ್ರಿ ಮೂವಿ ಮೇಕರ್ಸ್, ಮುಟ್ಟಂಶೆಟ್ಟಿ ಮಿಡಿಯಾ. ಚಿತ್ರದಲ್ಲಿ ಕೊಂಡ ರೆಡ್ಡಿ, ಜಾಲಿ ರೆಡ್ಡಿ (ಡಾಲಿ ಧನಂಜಯ್ ಪಾತ್ರಧಾರಿ), ಜಕ್ಕ ರೆಡ್ಡಿ ಮುಂತಾದ ಹಲವು ಪಾತ್ರಗಳಿವೆ. ವಿಲನ್ ಪಾತ್ರಧಾರಿಗಳಿಗೆ ರೆಡ್ಡಿ ಎನ್ನುವ ಉಪನಾಮ ಇಟ್ಟಿರುವುದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖಂಡರ ಸಿಟ್ಟಿಗೆ ಕಾರಣವಾಗಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈಎಸ್ಆರ್ ಜಗನ್ ಸೇರಿದಂತೆ, ಸಂಪುಟದ ಹಲವರು ಆ ಸಮುದಾಯದವರಾಗಿದ್ದಾರೆ. ಚಿತ್ರದ ನಿರ್ಮಾಪಕರು ರೆಡ್ಡಿ ಜನಾಂಗದವರಲ್ಲ.

ವೈಎಸ್ಆರ್ ಕಾಂಗ್ರೆಸ್ಸಿನ ವಕ್ತಾರ ಕಣ್ಣಮೂರಿ ರವಿಚಂದ್ರ ರೆಡ್ಡಿ
"ಮಾಜಿ ಮುಖ್ಯಮಂತ್ರಿ ಮತ್ತು ತೆಲುಗುದೇಶಂ ನಾಯಕ ಎನ್.ಚಂದ್ರಬಾಬು ನಾಯ್ಡು ಅಣತಿಯಂತೆ ಖಳನಾಯಕರ ಪಾತ್ರಧಾರಿಗಳಿಗೆ ರೆಡ್ಡಿ ಹೆಸರನ್ನು ಇಡಲಾಗಿದೆ. ಈ ಚಿತ್ರವನ್ನು ನಾನು ಎರಡು ಬಾರಿ ವೀಕ್ಷಿಸಿದ್ದೇನೆ, ಚಿತ್ರವು ಅಮೆಜಾನ್ ಪ್ರೈಂನಲ್ಲೂ ಬಿಡುಗಡೆಯಾಗಿದೆ, ನಿರ್ಮಾಪಕರ ಹೆಸರು ಕೂಡಾ ಚೌಧುರಿ. ಈ ಬಗ್ಗೆ ನಾವು ಹೋರಾಟ ನಡೆಸುತ್ತೇವೆ" ಎಂದು ವೈಎಸ್ಆರ್ ಕಾಂಗ್ರೆಸ್ಸಿನ ವಕ್ತಾರ ಕಣ್ಣಮೂರಿ ರವಿಚಂದ್ರ ರೆಡ್ಡಿ ಆರೋಪಿಸಿದ್ದಾರೆ.
Recommended Video

ಎರಡು ರಾಜಕೀಯ ಪಕ್ಷಗಳ ನಡುವೆ ಮೇಲಾಟಕ್ಕೆ ಕಾರಣ
ಚಿತ್ರಮಂದಿರದಲ್ಲಿ ಟಿಕೆಟ್ ಬೆಲೆ ನಿಗದಿಯ ವಿಚಾರದಲ್ಲಿ ಆಂಧ್ರ ಪ್ರದೇಶ ಸರಕಾರ ಒಂದು ಕಡೆ, ಇಡೀ ಟಾಲಿವುಡ್ ಉದ್ಯಮ ಇನ್ನೊಂದು ಕಡೆ ಎನ್ನುವ ಪರಿಸ್ಥಿತಿ ಸದ್ಯಕ್ಕೆ ಅಲ್ಲಿದೆ. ನ್ಯಾಯಾಲಯವು ಟಾಲಿವುಡ್ ಪರವಾಗಿಯೇ ಆದೇಶವನ್ನು ನೀಡಿದ್ದರೂ, ಥಿಯೇಟರ್ ನಲ್ಲಿ ಮೂಲಭೂತ ಸೌಕರ್ಯ ಇಲ್ಲ ಎನ್ನುವ ಕಾರಣಕ್ಕಾಗಿ ಹಲವು ಚಿತ್ರಮಂದಿರಗಳನ್ನು ಜಗನ್ ಸರಕಾರ ಬಂದ್ ಮಾಡಿತ್ತು. ಇವೆಲ್ಲಾ ಅಡೆತಡೆ ಮತ್ತು ಕೋವಿಡ್ ಹಾವಳಿಯ ನಡುವೆ ಪುಷ್ಪ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿತ್ತು. ಈಗ, ಖಳನಾಯಕನ ಪಾತ್ರಕ್ಕೆ ರೆಡ್ಡಿ ಹೆಸರು ಇಟ್ಟಿರುವುದು ಎರಡು ರಾಜಕೀಯ ಪಕ್ಷಗಳ ನಡುವೆ ಮೇಲಾಟಕ್ಕೆ ಕಾರಣವಾಗಿದೆ.












Click it and Unblock the Notifications