PM Modi Mandya Visit: ಮೋದಿಗೆ ಅಭಿಮಾನದ ಹೂಮಳೆ: ಜೆಡಿಎಸ್‌ ಬಗ್ಗೆ ತುಟಿ ಬಿಚ್ಚದ ಪ್ರಧಾನಿ, ಏನಿದು ಹೊಸ ಟ್ವಿಸ್ಟ್‌?

ಪ್ರಧಾನಿ ನರೇಂದ್ರ ಮೋದಿಯವರ ಮಂಡ್ಯ ಪ್ರವಾಸದ ವೇಳೆ ಜನರು ಅವರಿಗೆ ಭಾರೀ ಸ್ವಾಗತವನ್ನು ಕೋರಿದರು. ಮೋದಿ ತಮ್ಮ ಭಾಷಣದಲ್ಲಿ ಜೆಡಿಎಸ್ ಬಗ್ಗೆ ಉಲ್ಲೇಖಿಸದೇ ಇದ್ದದ್ದು ಈಗ ಚರ್ಚೆ ವಿಷಯವಾಗಿದೆ. ಈ ಬಗ್ಗೆ ವಿಶ್ಲೇಷಣೆ.

27ವರ್ಷಗಳ ನಂತರ ದೇಶದ ಪ್ರಧಾನಿಯೊಬ್ಬರು ಸಕ್ಕರೆ ನಾಡು ಮಂಡ್ಯಕ್ಕೆ ಭೇಟಿ ನೀಡಿದ್ದಾರೆ. 1996-97ರಲ್ಲಿ ಪ್ರಧಾನಿಯಾಗಿದ್ದ ದೇವೇಗೌಡ್ರು ಇಲ್ಲಿಗೆ ಭೇಟಿ ನೀಡಿದ್ದರು. ಸುಮಾರು ಮೂರು ದಶಕಗಳ ನಂತರ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಒಂದು ಕಡೆಯಾದರೆ, ದೇಶದಾದ್ಯಂತ ಪ್ರಧಾನಿ ಮೋದಿ ಅವರಿಗೆ ಅಪಾರ ವರ್ಚಸ್ಸಿದೆ, ಮಂಡ್ಯದಲ್ಲಿ ದೊರೆತ ಭವ್ಯ ಸ್ವಾಗತವು ಇದಕ್ಕೆ ಸಾಕ್ಷಿಯಾಗಿದೆ.

ಇನ್ನೂ ಸಂಪೂರ್ಣವಾಗಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯನ್ನು ಮೋದಿ ಲೋಕಾರ್ಪಣೆಗೊಳಿಸಿದರು. ಇದರ ಜೊತೆಗೆ ಸುಮಾರು ಎರಡು ಕಿಲೋಮೀಟರ್ ರೋಡ್ ಶೋ. ಇದಾದ ನಂತರ, ಭಾರೀ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಮೋದಿಯವರ ಭಾಷಣ ಈಗ ಚರ್ಚೆಯ ವಿಷಯವಾಗಿದೆ.

PM Modi Speech In Mandya, Speculation Of Future Tie-Up With JDS?

ಸುಮಾರು ಮೂವತ್ತು ನಿಮಿಷಗಳ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅಭಿವೃದ್ದಿಯ ವಿಚಾರದ ಬಗ್ಗೆ ಮತ್ತು ಕಾಂಗ್ರೆಸ್ ವಿರುದ್ದ ವಾಗ್ದಾಳಿಯನ್ನು ನಡೆಸಿದರು. ಆದರೆ, ಜಾತ್ಯಾತೀತ ಜನತಾದಳದ ಕರ್ಮಭೂಮಿಯಂತಿರುವ ಮಂಡ್ಯದ ಜನರ ಮುಂದೆ ಗೌಡ್ರು, ಕುಮಾರಸ್ವಾಮಿ ಅಥವಾ ಜೆಡಿಎಸ್ ಬಗ್ಗೆ ಮೋದಿ ಚಕಾರವನ್ನು ಎತ್ತಲಿಲ್ಲ. ಮೋದಿ ವಿರುದ್ದ ಕುಮಾರಸ್ವಾಮಿ ಸಾಲುಸಾಲು ಟ್ವೀಟ್ ಮಾಡಿದ್ದರೂ, ಮೋದಿ ಆ ಪಕ್ಷದ ಬಗ್ಗೆ ಏನನ್ನೂ ತಮ್ಮ ಭಾಷಣದಲ್ಲಿ ಉಲ್ಲೇಖಿಸಲಿಲ್ಲ.

ಕೆಲವು ದಿನಗಳ ಹಿಂದೆ ಬಿಜೆಪಿಯ ಚಾಣಕ್ಯ ಅಮಿತ್ ಶಾ ತಮ್ಮ ಮಂಡ್ಯ ಭೇಟಿಯ ವೇಳೆ ಜೆಡಿಎಸ್ ಅನ್ನು ಕಾಂಗ್ರೆಸ್ಸಿನ ಬಿಟೀಂ, ಆ ಪಕ್ಷಕ್ಕೆ ಮತ ಹಾಕಿದರೆ ಮತ್ತೆ ಕಾಂಗ್ರೆಸ್ - ಜೆಡಿಎಸ್ ಒಂದಾಗುತ್ತದೆ ಎಂದು ಟೀಕಿಸಿದ್ದರು. ಆದರೆ, ಮೋದಿ ತಮ್ಮ ಭಾಷಣದಲ್ಲಿ ಬಹುತೇಕ ಅಭಿವೃದ್ದಿಯ ಬಗ್ಗೆ ಭಾಷಣ ಮಾಡಿದರೇ ಹೊರತು ಜೆಡಿಎಸ್ ಅಥವಾ ಗೌಡ್ರ ಪರಿವಾರದ ಬಗ್ಗೆ ಮಾತನಾಡದೇ ಜಾಣ ನಡೆ ಇಟ್ಟಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅದು ಏಕೆ?

PM Modi Speech In Mandya, Speculation Of Future Tie-Up With JDS?

ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಲು ಬಿಡಬಾರದು

ಇದುವರೆಗೆ ಬಿಜೆಪಿ ತಮ್ಮ ವಿವಿಧ ಮೂಲಗಳಿಂದ ನಡೆಸಿದ ಆಂತರಿಕ ಸಮೀಕ್ಷೆ ಮತ್ತು ಕರ್ನಾಟಕ ರಾಜ್ಯ ಗುಪ್ತಚರ ವರದಿಯ ಪ್ರಕಾರ, ಬಿಜೆಪಿಯ ರಾಷ್ಟ್ರೀಯ ನಾಯಕರಿಗಾಗಲಿ ಅಥವಾ ಸಂಘ ಪರಿವಾರದ ಮುಖಂಡರಿಗೆ ಪಕ್ಷ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಬಗ್ಗೆ ಖಚಿತತೆ ಇಲ್ಲ. ಬಹುಮತಕ್ಕೆ 15-25ಸೀಟಿನಷ್ಟು ಕೊರತೆ ಎದುರಾಗಬಹುದು ಎನ್ನುವ ಮಾಹಿತಿ ಹೈಕಮಾಂಡಿಗೆ ಇದೆ ಎಂದು ಹೇಳಲಾಗುತ್ತಿದೆ. ಬಹಳ ಪ್ರಯಾಸದಿಂದ ಅಧಿಕಾರಕ್ಕೆ ಬಂದಿರುವ ದಕ್ಷಿಣದ ಏಕೈಕ ರಾಜ್ಯ ಕರ್ನಾಟಕ, ಹಾಗಾಗಿ, ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು. ಅಥವಾ, ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಲು ಬಿಡಬಾರದು ಎನ್ನುವ ನಿಟ್ಟಿನಲ್ಲಿ ಮಂಡ್ಯದಲ್ಲಿ ಮೋದಿ, ಜೆಡಿಎಸ್ ಬಗ್ಗೆ ಮಾತನಾಡಲು ಹೋಗಿಲ್ಲ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಕಳೆದ ಬಾರಿ ಮಂಡ್ಯದಲ್ಲಿ ಜೆಡಿಎಸ್ ಕ್ಲೀನ್ ಸ್ವೀಪ್

ಕಳೆದ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಏಳಕ್ಕೆ ಏಳೂ ಕ್ಷೇತ್ರವನ್ನು ಮಂಡ್ಯದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಸಮೀಕ್ಷೆಯ ಪ್ರಕಾರ ಜೆಡಿಎಸ್ ಸಾಧನೆ ಈ ಬಾರಿಯ ಚುನಾವಣೆಯಲ್ಲೂ ಅದೇ ರೀತಿ ಇರಬಹುದು. ಹಾಗಾಗಿ, ಮಾತನಾಡುವ ಬರದಲ್ಲಿ ಎಡವಟ್ಟಾದರೆ ಚುನಾವಣೆಯ ವೇಳೆ ವಿರೋಧಿಗಳಿಗೆ ಅದೇ ಅಸ್ತ್ರವಾಗುತ್ತದೆ, ಬಿಜೆಪಿಗೆ ಬೀಳುವ ಓಟುಗಳಿಗೂ ಹೊಡೆತ ನೀಡಿದಂತಾಗುತ್ತದೆ ಎನ್ನುವುದೂ ಮೋದಿ ಭಾಷಣದ ವಿಚಾರದಲ್ಲಿ ಇರಬಹುದಾದ ಇನ್ನೊಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

PM Modi Speech In Mandya, Speculation Of Future Tie-Up With JDS?

ಗೌಡ್ರ ಕುಟುಂಬದ ಜೊತೆಗೆ ಪ್ರಧಾನಿ ಮೋದಿ ವಿಶೇಷ ಒಲವು

ದೇವೇಗೌಡ್ರ ಕುಟುಂಬದ ಜೊತೆಗೆ ಪ್ರಧಾನಿ ಮೋದಿ ವಿಶೇಷ ಒಲವನ್ನು ಹೊಂದಿದ್ದಾರೆ ಎನ್ನುವುದು ಗೊತ್ತಿರುವ ವಿಚಾರ. ಗೌಡ್ರು ಪ್ರಧಾನಿಯವರನ್ನು ಭೇಟಿಯಾಗಲು ಹೋದಾಗ ಅವರು ತೋರುವ ಸೌಜನ್ಯತೆಯ ಬಗ್ಗೆ ಗೌಡ್ರೇ ಹೊಗಳಿದ್ದರು. ಇತ್ತೀಚಿನ ದಿನಗಳಲ್ಲಿ ಗೌಡ್ರ ಆರೋಗ್ಯ ಏರುಪೇರಾಗುತ್ತಿದೆ. ಬರೀ ರಾಜಕಾರಣಕ್ಕಾಗಿ ಗೌಡ್ರ ಕುಟುಂಬ ಮತ್ತು ಜೆಡಿಎಸ್ ಬಗ್ಗೆ ಟೀಕೆ ಮಾಡುವುದು ಸರಿಯಾದ ನಡೆಯಲ್ಲ ಎನ್ನುವ ನಿರ್ಧಾರಕ್ಕೆ ಪ್ರಧಾನಿ ಮೋದಿ ಬಂದಿದ್ದಾರಾ ಎನ್ನುವ ಪ್ರಶ್ನೆಯೂ ಮೋದಿ ಭಾಷಣದ ನಂತರ ಹುಟ್ಟಿಕೊಳ್ಳುವುದು ಸಹಜ.

ಅತಂತ್ರ ಫಲಿತಾಂಶ ಬಂದರೆ ಎನ್ನುವ ಚರ್ಚೆ

"ಕಾಂಗ್ರೆಸ್ ನನ್ನ ಸಮಾಧಿ ಮಾಡಲು ನೋಡುತ್ತಿದೆ, ನಾನು ಅಭಿವೃದ್ದಿ ಕೆಲಸದಲ್ಲಿ ನಿರತನಾಗಿದ್ದೇನೆ" ಎಂದು ಕಾಂಗ್ರೆಸ್ ವಿರುದ್ದ ಮೋದಿ ಹರಿಹಾಯ್ದಿದ್ದರು. ಆ ಮೂಲಕ, ಜೆಡಿಎಸ್ ಬಗ್ಗೆ ಮೋದಿ ಸಾಫ್ಟ್ ಕಾರ್ನರ್ ತೋರಿದ್ದು ರಾಜಕೀಯ ವಲಯದಲ್ಲಿ, ಅದರಲ್ಲೂ ಅತಂತ್ರ ಫಲಿತಾಂಶ ಬಂದರೆ ಯಾರು ಯಾರ ಜೊತೆ ಕೈಜೋಡಿಸಬಹುದು ಎನ್ನುವ ಚರ್ಚೆ ಆಗಲೇ ಆರಂಭವಾಗಲು ಕಾರಣವಾಗಿದೆ.

ಮೋದಿ ರಾಜಕೀಯ ನಡೆ, ಖುದ್ದು ಬಿಜೆಪಿಯವರಿಗೇ ಆಶ್ಚರ್ಯ

ಅಭಿವೃದ್ದಿಯೇ ಡಬಲ್ ಇಂಜಿನ್ ಸರಕಾರದ ಮಂತ್ರ, ಮಂಡ್ಯದ ಜನರ ಋಣವನ್ನು ಅಭಿವೃದ್ಧಿ ಮೂಲಕ ತೀರಿಸುತ್ತೇನೆ. ಈಗಾಗಲೇ ಸಾವಿರಾರು ಕೋಟಿ ಅಭಿವೃದ್ಧಿ ಕಾರ್ಯಗಳು ಈ ಭಾಗದಲ್ಲಿ ನಡೆಯುತ್ತಿವೆ, ಕಾಂಗ್ರೆಸ್‌ ಬಡವರ ಕಲ್ಯಾಣಕ್ಕೆ ಶ್ರಮಿಸಲಿಲ್ಲ ಎಂದು ಮೋದಿ ವಾಕ್ ಪ್ರಹಾರ ನಡೆಸಿದ್ದರು. ಒಂದು ಕಡೆ ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿದ್ದು, ಇನ್ನೊಂದು ಕಡೆ ದಳಪತಿಗಳ ವಿರುದ್ದ ಸೊಲ್ಲೆತ್ತದ ಮೋದಿ ರಾಜಕೀಯ ನಡೆ ಖುದ್ದು ಬಿಜೆಪಿಯವರಿಗೇ ಆಶ್ಚರ್ಯ ತಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+