• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶೇಷ ಲೇಖನ: ಅಂಗೈನಲ್ಲಿ ಶಿಕ್ಷಣ ಎಂಬ ಚಾಲಾಕಿ ಚೆಲುವೆ..!

By ಸೋಮನಗೌಡ ಎಸ್.ಎಂ.ಕಟ್ಟಿಗೆಹಳ್ಳಿ
|

ಶಿಕ್ಷಕರು ಸಾಮಾನ್ಯ ತರಗತಿಯಲ್ಲಿ ಮಕ್ಕಳಿಗೆ ಬೋಧಿಸುವ ಪಾಠವೇ ಮನೆಗೆ ಬಂದಾಗ ನೆನಪಿನಲ್ಲಿ ಇರುವುದಿಲ್ಲ. ಇನ್ನು ಅದೆಲ್ಲೋ ಕುಳಿತು ಬೋಧಿಸುವ ಪಾಠವನ್ನು ಕೇಳುವ ಮಗು ತನ್ನ ಯೋಚನೆಗಳನ್ನು ಎಲ್ಲೆಲ್ಲೋ ಹರಿಬಿಟ್ಟಾಗ ಮಾಡುವ ಪಾಠ ಸ್ಮೃತಿಯಲ್ಲಿ ಇರಲು ಸಾಧ್ಯವೇ?

ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ನನ್ನ ಗೆಳೆಯನ ಯೋಗಕ್ಷೇಮ ವಿಚಾರಿಸಲು ಕರೆ ಮಾಡಿದೆ. ಆ ಕಡೆಯಿಂದ ಮೆಲು ಧ್ವನಿಯಲ್ಲಿ ಆಮೇಲೆ ಕಾಲ್ ಮಾಡ್ತಿನಿ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ.

ಮಕ್ಕಳಿಗಷ್ಟೇ ಅಲ್ಲ, ಶಿಕ್ಷಣ ಸಚಿವರಿಗೂ ಪರೀಕ್ಷೆ; ಯಾರೂ 'ಫೇಲ್' ಆಗದಿರಲಿ

ಸ್ವಲ್ಪ ಹೊತ್ತಿನ ನಂತರ ಕರೆ ಬಂತು. 'ಯಾಕೆ ಇಷ್ಟೊಂದು ಮೆಲು ಧ್ವನಿಯಲ್ಲಿ ಮಾತನಾಡುತ್ತಿದ್ದೀಯಲ್ಲ' ಎಂದು ಕೇಳಿದ್ದಕ್ಕೆ, 'ಮಗಳಿಗೆ ಶಿಕ್ಷಕರಿಂದ ಆನ್‍ಲೈನ್ ಟೀಚಿಂಗ್ ನಡೆಯುತ್ತಿದೆ. ನಾವು ಅವಳ ಜೊತೆಯಲ್ಲೇ ಇದ್ದು ಹೇಳಿಕೊಡಬೇಕು. ಇಲ್ಲದಿದ್ದರೆ ಕಷ್ಟವಾಗುತ್ತದೆ' ಎಂದ!

'ಮಗಳು ಓದುತ್ತಿರುವುದು ಈ ವರ್ಷ ಒಂದನೇ ತರಗತಿ. ಈಗಾಗಲೇ ಮನೆಯಲ್ಲೇ ಮೊಬೈಲ್ ಮತ್ತು ಲ್ಯಾಪ್‍ಟಾಪ್ ಮೂಲಕ ಆನ್‍ಲೈನ್‍ನಲ್ಲೇ ಶಿಕ್ಷಣ ಆರಂಭಿಸಿದ್ದಾರೆ. ₹ 60 ಸಾವಿರ ಫೀ ಕಟ್ಟಿದ್ದೇನೆ. ಏನು ಮಾಡುವುದು ಶಿಕ್ಷಣ ಎಂಬ ದುಬಾರಿ ಮಾರುಕಟ್ಟೆಯಲ್ಲಿ...'ಎಂದು ಸೋತವನಂತೆ ತನ್ನ ಮಗಳ ಭವಿಷ್ಯವನ್ನು ಆಯಾಸದ ಧ್ವನಿಯಲ್ಲೇ ಉತ್ತರಿಸಿದ್ದು ನಿಜಕ್ಕೂ ಬೇಸರವಾಯಿತು.

No ಆನ್ಲೈನ್ ಶಾಲೆ, No ಶುಲ್ಕ ಹೆಚ್ಚಳ, ಸುರೇಶ್ ಕುಮಾರ್

ಆಗ ನನಗೆ ನಾವು ಓದಿದ ನಮ್ಮೂರ ಸರ್ಕಾರಿ ಶಾಲೆ ನೆನಪಾಯಿತು. ಎರಡು ಕಿಲೋಮೀಟರ್‌ ನಡೆದೇ ಶಾಲೆಗೆ ಹೋಗುವ ಅನುಭವ. ಬರುವಾಗ ಬೇಲಿಯಲ್ಲಿನ ಚಿಟ್ಟೆ ಜೇನು ಮುರಿದು ನನ್ನ ಸ್ನೇಹಿತರೆಲ್ಲರೂ ತಿಂದು ಕುಣಿದು ಕುಪ್ಪಳಿಸುತ್ತಿದ್ದ ಆನಂದ ಕ್ಷಣಗಳು, ಲಗೋರಿ, ಚಿನ್ನಿದಾಂಡು, ಗೋಲಿ, ಕಬಡ್ಡಿ ಆಟಗಳು ಕಣ್ಣ ಮುಂದೆ ಕಟ್ಟಿದಂತೆ ಕಂಡವು.

ಮಗುವಿನ ಮೇಲೆ ಎಂತಹ ಪರಿಣಾಮ

ಮಗುವಿನ ಮೇಲೆ ಎಂತಹ ಪರಿಣಾಮ

ಲಾಕ್‍ಡೌನ್ ಸಂದರ್ಭದಲ್ಲಿ ಮಕ್ಕಳನ್ನು ಮನೆಯಲ್ಲೇ ಕೂಡಿಹಾಕಿ ಅವರನ್ನು ಸಂಭಾಳಿಸುವ ಕಷ್ಟ ತಾಯಿಗಷ್ಟೇ ಗೊತ್ತು. ಶಾಲೆಯಿಲ್ಲ, ಪಾರ್ಕ್‌ಗಳಲ್ಲಿ ಮಕ್ಕಳಿಗೆ ಪ್ರವೇಶವಿಲ್ಲ. ನಾಲ್ಕುಗೋಡೆಗಳ ಮಧ್ಯೆ ಮಕ್ಕಳು ಕೇಳುವ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದೇ ಅದೆಷ್ಟೋ ಪೋಷಕರು ಮಕ್ಕಳನ್ನು ದಂಡಿಸುತ್ತಿದ್ದಾರೆ. ಕೂತಲ್ಲಿಯೇ ಕೈಲಾಸ ತೋರಿಸುವ ಇಂದಿನ ಮೊಬೈಲ್, ಕಂಪ್ಯೂಟರ್ ಜಗತ್ತಿನಲ್ಲಿ ಮಕ್ಕಳು ಮಂಕಾಗುತ್ತಿದ್ದಾರೆ.

ಬೆರಳತುದಿಯಿಂದ ನಾಜೂಕಾಗಿ ಸಣ್ಣದೊಂದು ತೆರೆಯ ಮೇಲೆ ಅತ್ತಿತ್ತ ಸರಿಸಿದರೆ ಸಾಕು ಜಗತ್ತಿನ ಎಲ್ಲಾ ವಿಷಯಗಳು ನಮ್ಮ ಕಣ್ಣಮುಂದೆ ಬಂದು ನಿಲ್ಲುತ್ತವೆ. ಇಂದಿನ ಹದಿಹರೆಯ, ಯುವಜನರ ಭಾವೋದ್ರೇಕ ವರ್ತನೆಗಳಿಗೆ ಕಾರಣ ಮೊಬೈಲ್ ಎಂಬ ಭೂತ. ಅದರಲ್ಲಿ ಬರುವ ಗೇಮ್‍ಗಳಿಂದ ರಾತ್ರಿ ಮಗು ಮಲಗಿದಾಗ ಡಿಶುಂ... ಡಿಶುಂ.. ಎಂಬ ಕನವರಿಕೆಗಳು ನಿಜಕ್ಕೂ ಆ ಮಗುವಿನ ಮೇಲೆ ಎಂತಹ ಪರಿಣಾಮ ಸೃಷ್ಟಿಸಿರಬಹುದು!?

ದೈಹಿಕ ಸಮಸ್ಯೆಗಳು ಮಗುವನ್ನು ಕಾಡುತ್ತಿವೆ

ದೈಹಿಕ ಸಮಸ್ಯೆಗಳು ಮಗುವನ್ನು ಕಾಡುತ್ತಿವೆ

ಆಧುನಿಕ ತಂತ್ರಜ್ಞಾನ ಒದಗಿಸುತ್ತಿರುವ ಸಲಕರಣೆ, ಸೌಲಭ್ಯಗಳು ವ್ಯಕ್ತಿಯ ಬದುಕಿನ ಎಲ್ಲಾ ಆಯಾಮಗಳಿಗೂ ಬೆಂಬಲ ನೀಡುತ್ತಿರುವುದನ್ನು ನಿರಾಕರಿಸಲಾಗದು. ವ್ಯಕ್ತಿಯ ನಡೆನುಡಿಗಳಲ್ಲಿ, ಸಾಮಾಜಿಕ, ವೈಯಕ್ತಿಕ ವರ್ತನೆಗಳಲ್ಲಿ ಇದರ ಪ್ರಾಬಲ್ಯ ಹೆಚ್ಚುತ್ತಿರುವುದಂತೂ ಸ್ಪಷ್ಟ. ಅದೇ ತಂತ್ರಜ್ಞಾನ ಮಗುವಿನ ಮನಸ್ಸಿಗೆ ಮನೋಪಕ್ವತೆ ಮತ್ತು ವಿಕಾಸ ಆಗುವುದೇನೋ ನಿಜ. ಆದರೆ ಮಗುವಿನ ದೇಹದ ವಿಕಾಸದಲ್ಲಿ ಬದಲಾವಣೆಯಾಗುವುದನ್ನು ನಾವು ಕಾಣುತ್ತಿದ್ದೇವೆ. ಮೊಬೈಲ್, ಕಂಪ್ಯೂಟರ್ ಮುಂದೆ ಕುಳಿತ ಮಗುವಿನ ಮೂಗಿನ ಮೇಲೆ ಕನ್ನಡಕ ಬರುತ್ತಿದೆ. ದೇಹ ಕುಬ್ಜವಾಗುತ್ತಿದೆ, ಅಶಕ್ತ ಮನಸ್ಸು, ದೃಢತೆಯಿಲ್ಲದ ದೇಹ... ಹೀಗೆ ಅನೇಕ ದೈಹಿಕ ಸಮಸ್ಯೆಗಳು ಮಗುವನ್ನು ಕಾಡುತ್ತಿವೆ. ಮನರಂಜನೆ, ಮಾಹಿತಿಗಳೆರಡನ್ನೂ ಒಟ್ಟಿಗೆ ಸಿಗುವಂತೆ ಮಾಡುವ ನೂತನ ತಂತ್ರಜ್ಞಾನ ಮಿದುಳಿಗೇನೋ ಹಿತ ಕೊಡಬಹುದು. ಆದರೆ ದೈಹಿಕವಾಗಿ ಸದೃಢವಾಗಲು ಸಾಧ್ಯವೇ ಇಲ್ಲ.

ಪರದೆಯನ್ನು ನೋಡಿ ಶಿಕ್ಷಣ ಕಲಿಯಲು ಸಾಧ್ಯವೇ?

ಪರದೆಯನ್ನು ನೋಡಿ ಶಿಕ್ಷಣ ಕಲಿಯಲು ಸಾಧ್ಯವೇ?

ಪುಸ್ತಕಗಳನ್ನು ನೋಡಿ ಕಲಿಯಬೇಕಾದ ಮಗು ಪರದೆಯನ್ನು ನೋಡಿ ಶಿಕ್ಷಣ ಕಲಿಯಲು ಸಾಧ್ಯವಿಲ್ಲ. ಮಕ್ಕಳಿಗೆ ಕೊಠಡಿಯಲ್ಲಿ ಉದಾಹರಣೆಗಳನ್ನು ಕೊಡುತ್ತಾ... ಶಿಕ್ಷಕರು ಮಕ್ಕಳಿಗೆ ಬೋಧಿಸುವ ಪಾಠವೇ ಮನೆಗೆ ಬಂದಾಗ ನೆನಪಿನಲ್ಲಿ ಇರುವುದಿಲ್ಲ. ಇನ್ನು ಅದೆಲ್ಲೋ ಕುಳಿತು ಬೋಧಿಸುವ ಪಾಠವನ್ನು ಕೇಳುವ ಮಗು ತನ್ನ ಯೋಚನೆಗಳನ್ನು ಎಲ್ಲೆಲ್ಲೋ ಹರಿಬಿಟ್ಟಾಗ ನಾಟುವ ಪಾಠ ಸ್ಮೃತಿಯಲ್ಲಿ ಇರಲು ಸಾಧ್ಯವೇ?

‘ಮೊದಲ ನೋಟದಲ್ಲೇ ಪ್ರೇಮ' (ಲವ್ ಅಟ್ ಫಸ್ಟ್ ಸೈಟ್) ಎನ್ನುವಂತೆ ವರ್ಣರಂಜಿತ ದೃಶ್ಯಾವಳಿ, ಧ್ವನಿಯ ಏರಿಳಿತಗಳ ಸ್ಮಾರ್ಟ್ ಫೋನ್‌ ಎಂಬ ಚೆಲುವೆ ಮಕ್ಕಳಿಂದ ಮುದುಕರವರೆಗೆ ಎಲ್ಲರನ್ನೂ ಆಕರ್ಷಿಸಿದ್ದಾಳೆ. ತೆವಳಲು ಬಾರದ ಕಂದಮ್ಮಗಳಿಗೆ ಅಳು, ನಗು, ಸಮಾಧಾನದಂತಹ ಭಾವನಾತ್ಮಕ ಸ್ಥಿತಿಯನ್ನು ನಿರ್ವಹಿಸಲು ಈ ಸ್ಮಾರ್ಟ್ ಫೋನ್ ಎನ್ನುವ ಚೆಲುವೆಯೇ ಬೇಕು. ಸ್ಮಾರ್ಟ್ ಫೋನ್‍ನಲ್ಲಿ ಮಗು ಶಿಕ್ಷಣ ಕಲಿಯುತ್ತಿದೆ ಎಂದು ಇಂಟರ್‌ನೆಟ್ ಹಾಕಿಸಿದ ಅಪ್ಪ-ಅಮ್ಮ ಹೊರಗಡೆ ಎಲ್ಲೋ ಹೋದರೆ ಸ್ಮಾರ್ಟ್ ಚೆಲುವೆ ತೋರಿಸುವ ಮನರಂಜನೆಗೆ ಮಗು ಭೌತಿಕವಾಗಿ ಈ ಲೋಕದಲ್ಲೇ ಇರುವುದಿಲ್ಲ.

 ‘ಪೀಳಿಗೆ ಅಂತರ’ ದೊಡ್ಡದಾಗಿಸುತ್ತಿದೆ.

‘ಪೀಳಿಗೆ ಅಂತರ’ ದೊಡ್ಡದಾಗಿಸುತ್ತಿದೆ.

ನೋಡಬಾರದ, ಕೇಳಬಾರದ ಅದೆಷ್ಟೋ ಸಂಗತಿಗಳು ಮೊಬೈಲ್ ಪರಿಕರಗಳಲ್ಲಿ ಹರಿದು ಬಂದಾಗ ವ್ಯಕ್ತಿಯ ಮಿದುಳಿನ ಅಲೆಗಳಲ್ಲಿ ಕಂಪನ ಸೃಷ್ಟಿಸಿ, ವಶೀಕರಣಕ್ಕೆ ಒಳಗಾಗಿ ಹೊಸ ವಿಧದ ತವಕ ತಲ್ಲಣಗಳು ವಿಶೇಷವಾಗಿ ಮಕ್ಕಳು, ಹದಿಹರೆಯದವರಲ್ಲಿ ಮೂಡಬಲ್ಲವು ಎಂದು ಮನೋತಜ್ಞರ ಸಂಶೋಧನೆಗಳು ಹೇಳುತ್ತಿವೆ.

ಗೆಳೆತನ, ಸಂಬಂಧ, ಸಂಭ್ರಮ, ಆಟ, ಆಚರಣೆಗಳನ್ನೆಲ್ಲಾ ಮರೆಸಿ ಸೋಮಾರಿತನಕ್ಕೆ ಮಕ್ಕಳನ್ನು ನೂಕುವ ಮೊಬೈಲ್ ಎಂಬ ಭೂತ ಇಂದು ಅಂಗೈನಲ್ಲೇ ''ಸ್ವರ್ಗ'' ತೋರಿಸಿ ಅನೇಕ ಹೊಸ ವರ್ತನೆಗಳನ್ನು ರೂಪಿಸುತ್ತಿದೆ. ಪರಂಪರಾನುಗತವಾದ ನಡೆ-ನುಡಿಗಳನ್ನು ಬದಲಾಯಿಸುತ್ತಿರುವುದರ ಪರಿಣಾಮ ‘ಪೀಳಿಗೆ ಅಂತರ' ದೊಡ್ಡದಾಗಿಸುತ್ತಿದೆ.

ಮೊಬೈಲ್ ಅವಲಂಬನೆಯಿಂದಾಗಿ ಏಕಾಂಗಿತನ, ಗೌಪ್ಯತೆ

ಮೊಬೈಲ್ ಅವಲಂಬನೆಯಿಂದಾಗಿ ಏಕಾಂಗಿತನ, ಗೌಪ್ಯತೆ

ಮೊಬೈಲ್ ಅವಲಂಬನೆಯಿಂದಾಗಿ ಏಕಾಂಗಿತನ, ಗೌಪ್ಯತೆ ಮಕ್ಕಳಲ್ಲಿ ಹೆಚ್ಚಾಗುತ್ತಿವೆ ಎಂದು ಅಧ್ಯಯನಗಳು ಹೇಳುತ್ತಿವೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ಪರಿಹಾರ ಸಿಗದೇ ಹತಾಶೆ, ಆಕ್ರೋಶ, ಅಪನಂಬಿಕೆಯಂತಹ ನಕಾರಾತ್ಮಕ ಮನಸ್ಸು ಅನೇಕ ಪೋಷಕರನ್ನು ಕಾಡಿಸುತ್ತಿರುವುದಂತೂ ನಿಜ. ಎಳೆಯ ಮಿದುಳಿನಲ್ಲಿ ಮನುಷ್ಯ ಸಂಬಂಧಗಳ ಮೂಲ ನಕಾಶೆಯನ್ನು ಮೊಬೈಲ್, ಟ್ಯಾಬ್ಲೆಟ್‍ಗಳು ರೂಪಿಸುತ್ತಿರುವ ರೀತಿಯು ಪೋಷಕರಿಗೊಂದು ರೀತಿಯ ಸವಾಲು. ಆದರೆ, ಎಳೆಯರಿಗದು ‘ಯಂತ್ರವೇ ನಮಗೆ ಆದರ್ಶ' ಎನ್ನುವಂತಾಗಿದೆ.

ತಂತ್ರಜ್ಞಾನದ ಸೆಳೆತದಿಂದ ‘ಇಂಟರ್ನೆಟ್ ಹಾಕಿಸಲಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆ' ಮಾಡಿಕೊಂಡ ಮಗು ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಬಂತು. ಮಾನಹಾನಿ, ಆತ್ಮಹತ್ಯೆ, ಹಿಂಸೆಯ ಮನಸ್ಸು ಅನಾಯಾಸವಾಗಿ ವ್ಯಾಪಿಸುತ್ತಿದೆ. ಮೊಬೈಲ್ ಎನ್ನುವ ನಾಲ್ಕು ಮೂಲೆಯ ಚೌಕದಲ್ಲಿ ಇಂಟರ್ನೆಟ್ ಎಂಬ ಮಾಯಾಂಗನೆ ಸೇರಿದರೆ ವೈಯಕ್ತಿಕ ಸಂವೇದನೆ, ಸ್ಪಂದನೆಗಳ ಮೇಲೆ ಹತೋಟಿ ಸಾಧಿಸುವ ವೇಗವು ಅಚ್ಚರಿ, ಆತಂಕವನ್ನು ಮೂಡಿಸುತ್ತಿದೆ.

ನಮ್ಮಜ್ಜಿ ಹೇಳುತ್ತಿದ್ದ ಚಂದಮಾಮನ ಕಥೆ

ನಮ್ಮಜ್ಜಿ ಹೇಳುತ್ತಿದ್ದ ಚಂದಮಾಮನ ಕಥೆ

ಆಧುನಿಕ ಮಾಧ್ಯಮಗಳೇ ಇಲ್ಲದ ಕಾಲದಲ್ಲಿ ಮಲಗುವಾಗ ನಮ್ಮಜ್ಜಿ ಹೇಳುತ್ತಿದ್ದ ಚಂದಮಾಮನ ಕಥೆ, ''ನಿಮ್ಮಜ್ಜ ಸತ್ತು ಚುಕ್ಕಿಯಾಗಿ ನಮ್ಮನ್ನೆಲ್ಲಾ ದೂರದಿಂದಲೇ ಆಕಾಶದಿಂದಲೇ ನೋಡುತ್ತಿದ್ದಾನೆ ಎಂದು'' ಕೈತೋರಿಸುತ್ತಲ್ಲೇ ಹೇಳಿ ಮಲಗಿಸುತ್ತಿದ್ದ ಅಜ್ಜಿ ಈಗ ಇಲ್ಲ. ಆದರೆ ಅಜ್ಜಿ ಹೇಳಿದ ಕಥೆಗಳು ನಾವು ಅಳಿಯುವವರೆಗೂ ನಮ್ಮ ಸ್ಮೃತಿಪಟಲದಿಂದ ಆಚೆ ಹೋಗಲು ಸಾಧ್ಯವಿಲ್ಲ. ಹಳೆಯ ಸಂಪ್ರದಾಯಗಳು, ದೊಡ್ಡ ಕುಟುಂಬಗಳು ಮತ್ತು ಸಮುದಾಯ ಒಟ್ಟಾರೆ ಆಚರಿಸುತ್ತಿದ್ದ, ಅನುಸರಿಸುತ್ತಿದ್ದಂತಹ ಮನಸೆಳೆಯುವ ಚಟುವಟಿಕೆಗಳು ದೊಡ್ಡವರಿಂದ ಮಕ್ಕಳವರೆಗೆ ಕಾಣೆಯಾಗುತ್ತಿವೆ. ಮಕ್ಕಳಲ್ಲಿ ಅಂತಃಕರಣ ಗಟ್ಟಿಯಾಗಬೇಕಾದರೆ ಮನೆ ಭಾಷೆ, ಶಾಲೆಯಲ್ಲಿ ಕಲಿಯುವ ಪಾಠವೇ ಶ್ರೇಷ್ಠ. ಮನೆ ಎಂಬ ಕ್ವಾರಂಟೈನ್‍ನಲ್ಲಿ ಆನ್‍ಲೈನ್ ಮೂಲಕ ಕಲಿತ ಪಾಠ ವ್ಯಕ್ತಿತ್ವದ ಸಮಸ್ಯೆಗಳಿಗೆ ಕಾರಣವಾಗಬಲ್ಲದು.

English summary
Online Class is attractive but definetly not a game changer says Oneindia Kannada reader Davanagere district Jagaluru Kattigehalli resident Somanagowda S. M. He explains pros and cons for the education system
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X