Nikhil Kumaraswamy profile: ಜೆಡಿಎಸ್‌ನ ಯುವ ನೇತಾರ ನಿಖಿಲ್
ನಿಖಿಲ್ ಕುಮಾರಸ್ವಾಮಿ ಅವರು ಕರ್ನಾಟಕದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಏಕಮಾತ್ರ ಪುತ್ರ. ಅವರದು ಕರ್ನಾಟಕ ರಾಜಕೀಯ ಕುಟುಂಬ. ನಿಖಿಲ್ ಅವರ ತಾತಾ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು.
ಬೆಂಗಳೂರು, ಮಾರ್ಚ್ 2: ಕರ್ನಾಟಕದ ಯುವ ರಾಜಕಾರಣಿಗಳಲ್ಲಿ ಜೆಡಿಎಸ್‌ನ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಒಬ್ಬರು. ಕರ್ನಾಟಕದಾದ್ಯಂತ ತಮ್ಮದೇ ಯುವ ಪಡೆ ಹೊಂದಿರುವ ಅವರು ರಾಜಕೀಯ ಕುಟುಂಬದ ಹಿನ್ನೆಲೆಯವರು. ಹೀಗಾಗಿ ಅವರ ರಾಜಕೀಯ ಹಿನ್ನೆಲೆಯ ಬಗ್ಗೆ ತಿಳಿಯೋಣ.
ನಿಖಿಲ್ ಕುಮಾರಸ್ವಾಮಿ ಅವರು ಕರ್ನಾಟಕದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಏಕಮಾತ್ರ ಪುತ್ರ. ಅವರದು ಕರ್ನಾಟಕ ರಾಜಕೀಯ ಕುಟುಂಬ. ನಿಖಿಲ್ ಅವರ ತಾತಾ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು. ನಿಖಿಲ್ ಅವರ ತಾಯಿ ಕೂಡ ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು. ಹೀಗಾಗಿ ಸಂಪೂರ್ಣ ರಾಜಕೀಯ ಕುಟುಂಬದವರು ನಿಖಿಲ್ ಕುಮಾರಸ್ವಾಮಿ.

ಜನವರಿ 22 1988ರಲ್ಲಿ ಶಾಸಕಿ ಅನಿತಾ ಮತ್ತು ಎಚ್‌ಡಿ ಕುಮಾರಸ್ವಾಮಿ ಅವರ ಮಗನಾಗಿ ನಿಖಿಲ್ ಕುಮಾರಸ್ವಾಮಿ ಅವರು ಜನಿಸಿದರು. ಅವರ ದೊಡ್ಡಪ್ಪ ಎಚ್‌ಡಿ ರೇವಣ್ಣ ಕೂಡ ಹಾಸನ ಜಿಲ್ಲೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ನಿಖಿಲ್ ಅವರು ಏಪ್ರಿಲ್ 17 2020ರಲ್ಲಿ ನಿಖಿಲ್ ಅವರು ರೇವತಿ ಅವರನ್ನು ತಮ್ಮ ಬಿಡದಿಯ ತೋಟದ ಮನೆಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾದರು. ಅವರಿಗೆ ಈಗ ಒಂದು ಗಂಡು ಮಗು ಕೂಡ ಇದೆ.
ಪದವಿ ಶಿಕ್ಷಣ ಪೂರೈಸಿರುವ ನಿಖಿಲ್ ಕುಮಾರಸ್ವಾಮಿ ಮೊದಲು ಒಬ್ಬ ನಟರಾಗಿದ್ದು ನಂತರ ರಾಜಕಾರರಣಕ್ಕೆ ಬಂದರು. ಅವರು ಕೆಲವು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿದ್ದಾರೆ. ಅವರು ತಮ್ಮ ಕನ್ನಡ-ತೆಲುಗು ದ್ವಿಭಾಷಾ ಚಿತ್ರ ಜಾಗ್ವಾರ್ (2016) ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಬಳಿಕ 2019ರಲ್ಲಿ ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಚಿತ್ರಗಳಲ್ಲಿ ಅಭಿನಯಿಸಿದರು.

ಬಳಿಕ 2021ರಲ್ಲಿ ರೈಡರ್ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಜಾಗ್ವಾರ್‌ನಲ್ಲಿನ ಅಭಿನಯಕ್ಕಾಗಿ ಸಿಮಾ (ಎಸ್‌ಐಐಎಂಎ) ನ ಅತ್ಯುತ್ತಮ ಹೊಸ ನಟ (ಪುರುಷ) ಕನ್ನಡ ವಿಭಾಗದ ಪ್ರಶಸ್ತಿ, ಅತ್ಯುತ್ತಮ ಹೊಸ ನಟ (ಪುರುಷ) ವಿಭಾಗದ ಟಿಎಸ್‌ಆರ್ ಫಿಲ್ಮ್ ಅವಾರ್ಡ್ ತೆಲುಗು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಸಿಮಾ ಅತ್ಯುತ್ತಮ ಹೊಸ ನಟ (ಪುರುಷ) ತೆಲುಗು ವಿಭಾಗಕ್ಕೆ ನಾಮಿನೇಟ್ ಆಗಿದ್ದರು.
ನಿಖಿಲ್ 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಿಂದ ಜನತಾ ದಳ (ಜಾತ್ಯತೀತ) ಅಭ್ಯರ್ಥಿಯಾಗಿ ಮೊದಲ ಬಾರಿ ಸ್ಪರ್ಧಿಸಿದರು. ಮಂಡ್ಯವನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸುರಕ್ಷಿತ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಆದರೆ ಈ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದ ಗಂಡು ಎಂದು ಖ್ಯಾತರಾದ ದಿವಂಗತ ನಟ ಅಂಬರೀಷ್ ಅವರ ಪತ್ನಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಎದುರು 128,876 ಮತಗಳ ಅಂತರದಲ್ಲಿ ಸೋತರು. ಇದು ಇಬ್ಬರಿಗೂ ಮೊದಲ ಚುನಾವಣೆಯಾಗಿತ್ತು.

ಈಗ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರು ಸ್ಫರ್ಧೆ ಮಾಡುವುದು ಅಂತಿಮವಾಗಿದೆ. ಈಗಾಗಲೇ ಹಾಲಿ ಶಾಸಕಿಯಾಗಿರುವ ಅನಿತಾ ಕುಮಾರಸ್ವಾಮಿ ಅವರು ಮಗ ನಿಖಿಲ್‌ಗಾಗಿ ತಮ್ಮ ಕ್ಷೇತ್ರವನ್ನು ತ್ಯಾಗ ಮಾಡಲಿದ್ದಾರೆ. ಅಲ್ಲಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮಂಡ್ಯದಿಂದ ನಿಖಿಲ್ ನಿಲ್ಲುತ್ತಾರೆ ಎಂಬ ಮಾತು ಸುಳ್ಳಾಗಿದೆ. ಇತ್ತ ಕ್ಷೇತ್ರ ಘೋಷಣೆಯಾಗುತ್ತಿದ್ದಂತೆಯೇ ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸಕ್ರಿಯರಾಗಿದ್ದು, ಕ್ಷೇತ್ರದ ಜನರ ಕುಂದು ಕೊರತೆಯನ್ನು ಆಲಿಸುವ ನಿಟ್ಟಿನಲ್ಲಿ ಕ್ಷೇತ್ರ ಸಂಚಾರವನ್ನು ಭರ್ಜರಿಯಾಗಿ ನಡೆಸಿದ್ದಾರೆ.
ಅಲ್ಲದೆ ನನ್ನ ರಾಜಕೀಯ ಜೀವನ ಇಲ್ಲಿಂದಲೇ ಪ್ರಾರಂಭ ಹಾಗೂ ಇಲ್ಲೇ ಅಂತ್ಯ, ಯಾವುದೇ ಕಾರಣಕ್ಕೂ ಯಾರೊಬ್ಬರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಕೊನೆ ಉಸಿರು ಇರುವ ತನಕ ನಿಮ್ಮ ಜೊತೆಗೆ ನಿಲ್ಲುತ್ತೇನೆ ಎಂದು ಕ್ಷೇತ್ರದ ಜನತೆಗೆ ನಿಖಿಲ್ ಕುಮಾರಸ್ವಾಮಿ ಭರವಸೆಯನ್ನು ನೀಡಿದ್ದಾರೆ.












Click it and Unblock the Notifications