2021ರ ಮೇ ವಿಶೇಷ: ಭಾರತದಲ್ಲಿ ಪಿಪಿಇ ಕಿಟ್‌ಗಳದ್ದೇ ಕಾರುಬಾರು!
ನವದೆಹಲಿ, ಡಿಸೆಂಬರ್ 24: ಭಾರತದಲ್ಲಿ 2021ರ ಏಪ್ರಿಲ್ ಹೊತ್ತಿಗೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಮಿತಿ ಮೀರಿತ್ತು. ಉಸಿರಾಟ ಸಮಸ್ಯೆಯಿಂದ ಸಾವಿರಾರು ಕೊವಿಡ್-19 ಸೋಂಕಿತರು ಸಾವಿನ ಮನೆ ಸೇರಿದ್ದರು. ಪ್ರತಿನಿತ್ಯ 1,000ಕ್ಕೂ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗುವುದಕ್ಕೆ ಶುರುವಾಯಿತು.
ದೇಶದಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮತ್ತೊಮ್ಮೆ ಕಠಿಣ ನಿಯಮಗಳನ್ನು ಜಾರಿಗೊಳಿಸಿತು. ರೋಗಿಗಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳು, ಕೊವಿಡ್-19 ಕೇಂದ್ರಗಳಲ್ಲಿ ಪಿಪಿಇ ಕಿಟ್ ಬಳಕೆ ಹೆಚ್ಚಾಯಿತು. ಮದುವೆಗಾಗಿ ಹಸೆಮಣೆ ಏರಿದ ನವ ದಂಪತಿ ಸಹ ಪಿಪಿಇ ಕಿಟ್ ಧರಿಸಿ ಕುಳಿತುಕೊಂಡ ಫೋಟೋಗಳು ಸಖತ್ ಸದ್ದು ಮಾಡಿದವು.
2021ರ ಮೇ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣಗಳ ಆದಿಯಾಗಿ ಎಲ್ಲ ಕಡೆಗಳಲ್ಲಿ ಆಕ್ಸಿಜನ್ ವ್ಯವಸ್ಥೆ, ಪಿಪಿಇ ಕಿಟ್, ಲಾಕ್ ಡೌನ್ ಹಾಗೂ ಅದರ ಪರಿಣಾಮ ಹೇಗಿತ್ತು ಎಂಬುದನ್ನು ಸಾರಿ ಹೇಳುವ ಚಿತ್ರಗಳೇ ಸದ್ದು ಮಾಡಿದವು. ಮೇ ತಿಂಗಳಿನಲ್ಲಿ ವೈರಲ್ ಆಗಿರುವ ಪ್ರಮುಖ ಫೋಟೋಗಳ ಹಿಂದಿನ ಕಥೆಯನ್ನು ಮುಂದೆ ಓದಿ.

ಹೈದ್ರಾಬಾದ್ ಡಿಎಂಓಗೆ ಆಮ್ಲಜನಕದ ಸಿಲಿಂಡರ್ ರವಾನೆ
2021ರ ಮೇ ತಿಂಗಳ ಹೊತ್ತಿನಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಹೆಚ್ಚಾಗಿತ್ತು. ಡೆಲ್ಟಾ ರೂಪಾಂತರ ವೈರಸ್ ಜನರ ಜೀವ ತೆಗೆಯುತ್ತಿತ್ತು. ಸೋಂಕು ತಗುಲಿದ ಬಹುಪಾಲು ಜನರಲ್ಲಿ ಉಸಿರಾಟದ ಸಮಸ್ಯೆ ತೀವ್ರವಾಗ ತೊಡಗಿತ್ತು. ಈ ಸಂದರ್ಭದಲ್ಲಿ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ದೊಡ್ಡ ಸವಾಲಾಗಿತ್ತು. ತೆಲಂಗಾಣದ ರಾಜಧಾನಿ ಹೈದ್ರಾಬಾದ್ ನಲ್ಲಿ ಜನರು ಸಾರ್ವಜನಿಕ ಪ್ರದೇಶಗಳಲ್ಲೇ ಆಕ್ಸಿಜನ್ ಹಾಕಿಕೊಂಡು ಕುಳಿತಿರುವ ಫೋಟೋಗಳು ವಾಸ್ತವ ಸ್ಥಿತಿಯನ್ನು ಸಾರಿ ಹೇಳುವಂತಿದ್ದವು. ಮೇ ತಿಂಗಳು ಆಕ್ಸಿಜನ್ ಪೂರೈಕೆಯಲ್ಲೂ ಕೊರತೆ ಸೃಷ್ಟಿಯಾಗಿತ್ತು. ಈ ವೇಳೆ ಹೈದ್ರಾಬಾದ್ ಜಿಲ್ಲಾಸ್ಪತ್ರೆಗೆ ಅಗತ್ಯವಾಗಿರುವ ಆಕ್ಸಿಜನ್ ಸಿಲಿಂಡರ್ ಅನ್ನು ಕಾರ್ಮಿಕನೊಬ್ಬ ಹೊತ್ತುಕೊಂಡು ಹೋಗುತ್ತಿರುವುದು ಅಂದಿನ ಪರಿಸ್ಥಿತಿಗೆ ಸಾಕ್ಷಿ ಆಗಿತ್ತು.

ನವದೆಹಲಿ ಬಸ್ ಶೆಡ್‌ನಲ್ಲಿ ವಿಶ್ರಾಂತಿ ಪಡೆದ ಕಾರ್ಮಿಕರು
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಕೊವಿಡ್-19 ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರು ಬಸ್ ಶೆಡ್‌ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಮೇ 30ರಂದು ನಿರ್ಮಾಣ ಮತ್ತು ಉತ್ಪಾದನಾ ಘಟಕಗಳಿಗೆ ಅನುಮತಿ ನೀಡಲಾಗಿತ್ತು. ಆದರೆ, ದೆಹಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಜೂನ್ 7 ರವರೆಗೆ "ಕಟ್ಟುನಿಟ್ಟಾದ ಲಾಕ್‌ಡೌನ್" ನಿಯಮಗಳನ್ನು ಜಾರಿಯಲ್ಲಿರಿಸಲಾಗಿತ್ತು.

ತಮಿಳುನಾಡಿನಲ್ಲಿ ಪಿಪಿಇ ಕಿಟ್ ಧರಿಸಿದ ಸಿಎಂ ಸ್ಟ್ಯಾಲಿನ್
ಕೊರೊನಾವೈರಸ್ ಹಾವಳಿ ಮೇ ತಿಂಗಳ ಹೊತ್ತಿಗೆ ತಮಿಳುನಾಡಿನಲ್ಲೂ ಹೆಚ್ಚಾಗಿತ್ತು. ಆಗಷ್ಟೇ ಮುಖ್ಯಮಂತ್ರಿ ಆಗಿ ಅಧಿಕಾರದ ಗದ್ದುಗೆ ಏರಿದ ಸಿಎಂ ಎಂಕೆ ಸ್ಟ್ಯಾಲಿನ್ ಕೊವಿಡ್-19 ಪರಿಸ್ಥಿತಿ ಪರಿಶೀಲನೆಗಾಗಿ ಕೇಂದ್ರಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಸ್ವತಃ ಮುಖ್ಯಮಂತ್ರಿಗಳೇ ಪಿಪಿಇ ಕಿಟ್ ಧರಿಸಿಕೊಂಡು ಹೋಗಿದ್ದರು. ತಮಿಳುನಾಡಿನಲ್ಲಿ ಮುಖ್ಯಮಂತ್ರಿಗಳೇ ಪಿಪಿಇ ಕಿಟ್ ಧರಿಸಿ ಪರಿಸ್ಥಿತಿ ಪರಿಶೀಲಿಸುತ್ತಿರುವುದು ಫೋಟೋ ಸಾಮಾಜಿಕ ಜಾಲತಾಣಗಳಲ್ಲೂ ಸಖತ್ ಸದ್ದು ಮಾಡಿತ್ತು.

ಉತ್ತರಾಖಂಡದಲ್ಲಿ ಪಿಪಿಇ ಕಿಟ್ ಧರಿಸಿ ದಾಂಪತ್ಯಕ್ಕೆ ಪ್ರವೇಶ
ಉತ್ತರಾಖಂಡದಲ್ಲೂ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿ ಹೆಚ್ಚಾಗಿತ್ತು. ಇದರ ಮಧ್ಯೆಯೂ ಉತ್ತರಾಖಂಡದಲ್ಲಿ ನಡೆದ ಒಂದು ಮದುವೆ ಸಾಕಷ್ಟು ಸುದ್ದಿ ಮಾಡಿತ್ತು. ನೈನಿತಾಲ್ ಜಿಲ್ಲೆಯ ಮನರ್ಸಾ ಗ್ರಾಮದಲ್ಲಿ ಕೊವಿಡ್-19 ಸಾಂಕ್ರಾಮಿಕದ ಮಧ್ಯೆ ತಮ್ಮ ವಿವಾಹ ಸಮಾರಂಭದಲ್ಲಿ ಪಿಪಿಇ ಕಿಟ್ ಧರಿಸಿದ ದಂಪತಿಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಕಾಬಾ ಪ್ರದಕ್ಷಿಣೆ ವೇಳೆ ಸಾಮಾಜಿಕ ಅಂತರ
ಮುಸ್ಲಿಂ ಯಾತ್ರಾರ್ಥಿಗಳು ಸೌದಿ ಅರೇಬಿಯಾದ ಮುಸ್ಲಿಂ ಪವಿತ್ರ ನಗರವಾದ ಮೆಕ್ಕಾದಲ್ಲಿ ಉಮ್ರಾ ಎಂದು ಕರೆಯಲ್ಪಡುವ ಸಣ್ಣ ತೀರ್ಥಯಾತ್ರೆಯ ಸಮಯದಲ್ಲಿ ಕೊರೊನಾವೈರಸ್ ಹರಡುವುದನ್ನು ತಡೆಯಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ದೊಡ್ಡ ಮಸೀದಿಯ ಘನ ಕಟ್ಟಡವಾದ ಕಾಬಾದ ಸುತ್ತಲೂ ಪ್ರದಕ್ಷಿಣೆ ಹಾಕಿದ ಫೋಟೋ ಕೂಡಾ ಮೇ ತಿಂಗಳಿನಲ್ಲಿ ಸುದ್ದಿ ಮಾಡಿತ್ತು.












Click it and Unblock the Notifications