ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐತಿಹಾಸಿಕ ಮೈಸೂರು ದಸರಾ ನಡೆದು ಬಂದ ಹಾದಿ...

|
Google Oneindia Kannada News

ಮೈಸೂರು, ಅಕ್ಟೋಬರ್ 15: ಮೈಸೂರಿನಲ್ಲಿ ನಡೆಯುವ ದಸರಾ ಇತರೆಡೆಯಲ್ಲಿ ಆಚರಿಸಲ್ಪಡುವ ದಸರಾಕ್ಕಿಂತ ವಿಭಿನ್ನ ಮತ್ತು ವಿಶಿಷ್ಟವಾಗಿದ್ದು, ಗತದಿನಗಳ ರಾಜವೈಭವದ ಇತಿಹಾಸವನ್ನು ಸಾರುತ್ತಲೇ ಸಾಗುತ್ತಿದೆ. ಆದರೆ ಕೊರೊನಾ ಮಹಾಮಾರಿ ಸೃಷ್ಠಿಸಿದ ತಲ್ಲಣದಿಂದ ಈ ಬಾರಿ ದಸರಾದ ವೈಭವ ಮೈಸೂರು ನಗರದಲ್ಲಿ ಕಾಣದೆ, ಅರಮನೆಗಷ್ಟೆ ಸೀಮಿತವಾಗಿದೆ.

ಮೈಸೂರು ದಸರಾ ಆರಂಭವಾದಲ್ಲಿಂದ ಇಲ್ಲಿವರೆಗಿನ ಇತಿಹಾಸವನ್ನು ನಾವು ಕೆದಕುತ್ತಾ ಹೋದರೆ, ಹತ್ತು ಹಲವು ವಿಚಾರಗಳು ದಸರಾ ಸುತ್ತ ನಡೆದಿರುವುದನ್ನು ನಾವು ಕಾಣಬಹುದಾಗಿದೆ. ಮೈಸೂರು ಮಹಾರಾಜರು ನಡೆಸಿಕೊಂಡು ಬರುತ್ತಿದ್ದ ದಸರಾವನ್ನು ಸ್ವಾತಂತ್ರ್ಯನಂತರ ಸರ್ಕಾರ ವಹಿಸಿಕೊಳ್ಳುವ ತನಕದ ಇತಿಹಾಸವನ್ನು ಮೆಲುಕು ಹಾಕಿದರೆ, ಗಮನಾರ್ಹ ಹತ್ತು ಹಲವು ವಿಶೇಷತೆಗಳು ಇದರ ಸುತ್ತ ಹೆಣೆದುಕೊಂಡಿರುವುದು ಕಂಡು ಬರುತ್ತದೆ.

ವಿಜಯನಗರ ಅರಸರ ಕಾಲದ ಆಚರಣೆ

ವಿಜಯನಗರ ಅರಸರ ಕಾಲದ ಆಚರಣೆ

ದಸರಾ ಅರ್ಥಾತ್ ವಿಜಯದಶಮಿ ಇದು ದುಷ್ಟಶಕ್ತಿಯನ್ನು ನಿಗ್ರಹಿಸಿ ವಿಜಯ ಪಡೆದ ಸಂಕೇತವೂ ಹೌದು. ವಿಜಯದಶಮಿಯನ್ನು ವಿಜಯನಗರದ ಅರಸರು ಆಚರಿಸಿಕೊಂಡು ಬರುತ್ತಿದ್ದರಂತೆ. ಆದರೆ ಅವರ ಸಾಮ್ರಾಜ್ಯ ಪತನಗೊಂಡ ಬಳಿಕ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದ ಮೈಸೂರಿನ ಯದುವಂಶಸ್ಥರು ಇದನ್ನು ಮುಂದುವರೆಸಿಕೊಂಡು ಬಂದರು ಎಂದು ಇತಿಹಾಸ ಹೇಳುತ್ತದೆ.

ದಸರಾ ವೇಳೆ ಮೈಸೂರಿನ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧದಸರಾ ವೇಳೆ ಮೈಸೂರಿನ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ

ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾವಣೆ

ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾವಣೆ

ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದ ರಾಜ ಒಡೆಯರ್ 1610 ರಲ್ಲಿ ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ವಿಜಯದಶಮಿ ಆಚರಣೆಯನ್ನು ಮೊದಲ ಬಾರಿಗೆ ಆಚರಿಸಿದರು. ಆ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (1799-1868) ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದಲ್ಲದೆ, ಮೈಸೂರಿನಲ್ಲಿ ದಸರಾ ಆಚರಣೆಯನ್ನು ಮುಂದುವರೆಸಿದರು. ನಂತರದ ಕಾಲಾವಧಿಯಲ್ಲಿ ಇದು ತನ್ನದೇ ಆದ ವೈಭವಪಡೆಯುವುದರೊಂದಿಗೆ ವಿಶ್ವವಿಖ್ಯಾತವಾಯಿತು.

ನಾಲ್ವಡಿಯವರಿಂದ ದಸರಾಕ್ಕೆ ಮತ್ತಷ್ಟು ಕಳೆ

ನಾಲ್ವಡಿಯವರಿಂದ ದಸರಾಕ್ಕೆ ಮತ್ತಷ್ಟು ಕಳೆ

ಮೈಸೂರಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರಿಂದ ಮತ್ತಷ್ಟು ಭವ್ಯಗೊಂಡು, ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆ(1902-1940) ಕಾಲಕ್ಕೆ ಮಗದಷ್ಟು ವೈಭವದ ಉತ್ತುಂಗಕ್ಕೇರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವಾಗಿ ವಿಜೃಂಭಿಸಿತು. ನಾಲ್ವಡಿಯವರ ನಂತರ ಯದುವಂಶದ 25 ನೆಯ ಹಾಗೂ ಕಟ್ಟಕಡೆಯ ದೊರೆಯಾಗಿ ಅಧಿಕಾರಕ್ಕೆ ಬಂದ ಶ್ರೀ ಜಯಚಾಮರಾಜ ಒಡೆಯರ್ ಆಳ್ವಿಕೆ ಕಾಲದಲ್ಲಿ (1940-1947) ಇನ್ನಷ್ಟು ವೈಭವ ಪಡೆದುಕೊಂಡು ಜಾಗತಿಕ ಆಕರ್ಷಣೆ ಪಡೆಯಿತು. ಆದರೆ, 1947 ಆಗಸ್ಟ್ 15 ರಂದು ಭಾರತ ಸ್ವಾತಂತ್ರ್ಯಗಳಿಸಿದ ನಂತರ ರಾಜ ಮಹಾರಾಜರ ಸಂಸ್ಥಾನಗಳೆಲ್ಲವೂ ಭಾರತ ಸರ್ಕಾರದಲ್ಲಿ ವಿಲೀನವಾದವು. ಆದರೂ ಸಹ ಯಾವುದೇ ಅಡ್ಡಿಯಿಲ್ಲದೆ ಮೈಸೂರು ದಸರಾ ಆಚರಣೆ ನಡೆದುಕೊಂಡು ಬರುತ್ತಿತ್ತು. ಶ್ರೀ ಜಯಚಾಮರಾಜ ಒಡೆಯರು ರಾಜ ಪ್ರಮುಖರಾಗಿ ಹಿಂದಿನಂತೆ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿದ್ದರು.

ದಸರಾದಲ್ಲಿ ಅಂಬಾರಿ ಹೊತ್ತ ದ್ರೋಣ-ರಾಜೇಂದ್ರರ ಸಮಾಧಿ ನೋಡಿದ್ದೀರಾ?ದಸರಾದಲ್ಲಿ ಅಂಬಾರಿ ಹೊತ್ತ ದ್ರೋಣ-ರಾಜೇಂದ್ರರ ಸಮಾಧಿ ನೋಡಿದ್ದೀರಾ?

ಎಫ್.ಕೆ.ಇರಾನಿ ನೇತೃತ್ವದಲ್ಲಿ ಸರಳ ದಸರಾ

ಎಫ್.ಕೆ.ಇರಾನಿ ನೇತೃತ್ವದಲ್ಲಿ ಸರಳ ದಸರಾ

1962 ರಲ್ಲಿ ರಾಜಧನ ಮತ್ತು ರಾಜತ್ವ ರದ್ದಾದಾಗ ಮೂರ್ನಾಲ್ಕು ವರ್ಷಗಳ ಕಾಲ ದಸರಾ ನಿಂತು ಹೋಗಿತ್ತು. ಆದರೆ, ಮೈಸೂರಿನ ಪ್ರಮುಖ ಕೈಗಾರಿಕೋದ್ಯಮಿ ಎಫ್.ಕೆ. ಇರಾನಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಸರಳವಾಗಿ ದಸರಾ ಹಬ್ಬವನ್ನು ನಡೆಸಿಕೊಂಡು ಬರಲಾಯಿತು. 1980 ರಲ್ಲಿ ಆರ್.ಗುಂಡೂರಾವ್ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದಾಗ ಭವ್ಯ ಪರಂಪರೆಯ ಮೈಸೂರು ದಸರಾ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿ ಅದರ ಉಸ್ತುವಾರಿಯನ್ನು ಸರ್ಕಾರವೇ ವಹಿಸಿಕೊಂಡಿತು. ಹಾಗಾಗಿ ಅಂದಿನಿಂದ ಇಂದಿನ ತನಕವೂ ನಾಡಹಬ್ಬವಾಗಿ ರಾಜ್ಯ ಸರ್ಕಾರದಿಂದಲೇ ಪ್ರತಿವರ್ಷ ಮೈಸೂರು ದಸರಾ ನಡೆಯುತ್ತಾ ಬಂದಿದೆ.

ಅಂಬಾರಿಯನ್ನು ದರ್ಶಿಸುವುದೇ ಪುಣ್ಯ

ಅಂಬಾರಿಯನ್ನು ದರ್ಶಿಸುವುದೇ ಪುಣ್ಯ

ಇನ್ನು ರಾಜ ಪ್ರತ್ಯಕ್ಷ ದೈವವೆಂಬ ಭಾವನೆಯಿದ್ದ ಆ ಕಾಲದಲ್ಲಿ ಆಳರಸರದೇ ದರ್ಬಾರು. ಅಂದು ಅಂಬಾರಿಯಲ್ಲಿ ಸ್ವತಃ ಮಹಾರಾಜರೇ ಕೂರುತ್ತಿದ್ದರೆ, ಇಂದು ಮೈಸೂರಿನ ಅಧಿದೇವತೆ ನಾಡದೇವಿ ಶ್ರೀಚಾಮುಂಡೇಶ್ವರಿ ಅಂಬಾರಿಯಲ್ಲಿ ಅಲಂಕೃತವಾಗಿ ಪೂಜಿಸಲ್ಪಡುತ್ತಾಳೆ. 750 ಕೆ.ಜಿ ಭಾರದ ಬಂಗಾರದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ ಸುಂದರ ಮೂರ್ತಿಯನ್ನು ಹೊತ್ತ ಗಜರಾಜನ ಗಾಂಭೀರ್ಯ ನಡಿಗೆಯಲ್ಲಿ ಮೈಸೂರು ರಾಜಬೀದಿಯಲ್ಲಿ ಸಾಗುವ ಮೈಸೂರು ದಸರೆಯ ಜಂಬೂ ಸವಾರಿಯಲ್ಲಿ ಈ ಚಿನ್ನದ ಅಂಬಾರಿಯನ್ನು ದರ್ಶಿಸುವುದು ಮಹಾ ಪುಣ್ಯವೆಂಬ ಭಾವನೆ ಇಲ್ಲಿ ಬೇರೂರಿರುವುದರಿಂದ ಕಣ್ತುಂಬಿಕೊಳ್ಳಲು ಜನ ಕಿಕ್ಕಿರಿದು ಸೇರುತ್ತಾರೆ.

ಹತ್ತು ದಿನಗಳ ಧಾರ್ಮಿಕ ಕೈಂಕರ್ಯ

ಹತ್ತು ದಿನಗಳ ಧಾರ್ಮಿಕ ಕೈಂಕರ್ಯ

ಇದಕ್ಕೂ ಮೊದಲು ಮೈಸೂರು ದಸರಾದ ಸಂದರ್ಭ ನಡೆಯುವ ಆಚರಣೆಗಳಲ್ಲಿಯೂ ಹತ್ತು ಹಲವು ವೈಶಿಷ್ಟ್ಯತೆಗಳು ಇರುವುದನ್ನು ನಾವು ಕಾಣಬಹುದು. ನವರಾತ್ರಿ ಆರಂಭದ ಒಂಭತ್ತು ದಿನಗಳ ಕಾಲ ಅಂದರೆ ಪಾಡ್ಯದಿಂದ ಬಿದಿಗೆ, ತದಿಗೆ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಠಮಿ, ನವಮಿ ಹೀಗೆ ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ಚಾಮುಂಡಿ ಬೆಟ್ಟ ಹಾಗೂ ಅಂಬಾವಿಲಾಸ ಅರಮನೆಯಲ್ಲಿ ನಡೆದರೆ ಆ ನಂತರ ವಿಜಯದಶಮಿಯಂದು ಜಂಬೂ ಸವಾರಿಯೊಂದಿಗೆ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವುದರೊಂದಿಗೆ ದಸರಾ ಮುಗಿದು ಬಿಡುತ್ತದೆ. ಆದರೆ ಈ ಹತ್ತು ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಿವೆಯಲ್ಲ ಅವು ದಸರಾಕ್ಕೆ ಮೆರಗು ನೀಡುತ್ತವೆ. ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಧಿವಿಧಾನದಂತೆ ಪೂಜೆ ಸಲ್ಲಿಸಿ ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುತ್ತದೆ. ಬಳಿಕ ಪ್ರತಿದಿನವೂ ಅರಮನೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.

ದಸರಾ ಸಡಗರಕ್ಕೆ ತಣ್ಣೀರೆರಚಿದ ಕೊರೊನಾ

ದಸರಾ ಸಡಗರಕ್ಕೆ ತಣ್ಣೀರೆರಚಿದ ಕೊರೊನಾ

ದಸರಾ ಸುಮಾರು ನಾಲ್ಕು ಶತಮಾನಗಳ ಇತಿಹಾಸ ಹೊಂದಿದ್ದು, ಅಲ್ಲಿಂದ ಇಲ್ಲಿವರೆಗೂ ಹತ್ತು ಹಲವು ಬದಲಾವಣೆಯನ್ನು ಕಂಡಿದೆ. ಇಂತಹ ಬದಲಾವಣೆಗಳ ನಡುವೆ ಈ ಬಾರಿ ಕೊರೊನಾ ಮಹಾಮಾರಿಯಿಂದಾಗಿ ಜಂಬೂಸವಾರಿ ಮೆರವಣಿಗೆ ರಾಜಮಾರ್ಗದಲ್ಲಿ ನಡೆಯದೆ ಕೇವಲ ಅರಮನೆ ಆವರಣಕ್ಕೆ ಸೀಮಿತವಾಗುವಂತಾಗಿದೆ. ಅಷ್ಟೇ ಅಲ್ಲದೆ ದಸರಾ ಸಂಬಂಧ ನಡೆಯುತ್ತಿದ್ದು, ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಉಳಿದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಎಲ್ಲ ಕಾರ್ಯಕ್ರಮಗಳು ರದ್ದಾಗಿವೆ.

English summary
History says that after the fall of the Vijayanagara Empire, Dasara was continued by the King's of Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X