ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾ: ಜಂಬೂಸವಾರಿಗಾಗಿ ಗಜಪಡೆಗೆ ಕಠಿಣ ತಾಲೀಮು

By ಬಿಎಂ ಲವಕುಮಾರ್
|
Google Oneindia Kannada News

ಐತಿಹಾಸಿಕ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ಗಜಪಡೆಯನ್ನು ತಯಾರಿಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ವಿವಿಧ ಆನೆಶಿಬಿರಗಳಿಂದ ಮೊದಲ ಹಂತದಲ್ಲಿ ಬಂದಿರುವ ಒಂಬತ್ತು ಆನೆಗಳು ತಾಲೀಮು ನಡೆಸುತ್ತಿದ್ದು, ಉಳಿದ ಐದು ಆನೆಗಳು ಶೀಘ್ರವೇ ಆಗಮಿಸಿ ತಾಲೀಮಿನಲ್ಲಿ ಸೇರಿಕೊಳ್ಳಲಿವೆ.

ಈ ಬಾರಿ ಜಂಬೂ ಸವಾರಿಯಲ್ಲಿ ಅಂಬಾರಿ ಹೊರುವ ಅಭಿಮನ್ಯು, ಅರ್ಜುನ, ಧನಂಜಯ, ಗೋಪಾಲಸ್ವಾಮಿ, ಭೀಮ, ಮಹೇಂದ್ರ, ಕಾವೇರಿ, ಚೈತ್ರಾ, ಲಕ್ಷ್ಮೀ, ವಿಕ್ರಮ, ಗೋಪಿ, ಶ್ರೀರಾಮ, ಪಾರ್ಥಸಾರಥಿ, ವಿಜಯ ಸೇರಿ 14 ಆನೆಗಳು ಪಾಲ್ಗೊಳ್ಳುತ್ತಿದ್ದು, ಅಕ್ಟೋಬರ್‌ 5ರಂದು ನಡೆಯಲಿರುವ ಜಂಬೂಸವಾರಿಯನ್ನು ಯಶಸ್ವಿಗೊಳಿಸಲು ಬೇಕಾದ ತಯಾರಿ ಭರದಿಂದ ಸಾಗುತ್ತಿದ್ದು, ಗಜಪಡೆಗಳಿಗೆ ಅದರಲ್ಲೂ ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ ಧನಂಜಯ ಮತ್ತು ಗೋಪಾಲಸ್ವಾಮಿಗೆ ಕಠಿಣ ತಾಲೀಮು ಆರಂಭವಾಗಿದೆ.

ದಸರಾ ಆನೆ-ಕುದುರೆಗಳಿಗೆ ಸಿಡಿಮದ್ದಿನ ತಾಲೀಮು!ದಸರಾ ಆನೆ-ಕುದುರೆಗಳಿಗೆ ಸಿಡಿಮದ್ದಿನ ತಾಲೀಮು!

ಹಾಗೆ ನೋಡಿದರೆ ವಿವಿಧ ಆನೆಶಿಬಿರಗಳಲ್ಲಿದ್ದ ಗಜಪಡೆಗಳು ಆಗಸ್ಟ್‌ 10 ರಂದು ಅರಮನೆಯನ್ನು ಪ್ರವೇಶಿಸಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಆಗಸ್ಟ್‌ 14ರಿಂದ ಅರಮನೆಯಿಂದ ಸುಮಾರು ಐದು ಕಿ.ಮೀ ದೂರವಿರುವ ಬನ್ನಿಮಂಟಪದವರೆಗೆ ಬೆಳಗ್ಗೆ ಮತ್ತು ಸಂಜೆ ತಾಲೀಮು ಆರಂಭಿಸಿದ್ದವು. ಮೊದಲ ತಾಲೀಮಿನಲ್ಲಿ ಕೇವಲ ಗಜಪಡೆಗಳು ಸಾಲಾಗಿ ತೆರಳಿ ಹಿಂತಿರುಗಿದ್ದವು. (ಇದನ್ನು ಒಣ ತಾಲೀಮು ಎಂದು ಕರೆಯಲಾಗುತ್ತದೆ.) ಇದಾದ ಬಳಿಕ ಎರಡನೇ ಹಂತದ ತಾಲೀಮಿನಲ್ಲಿ 350 ರಿಂದ 550 ಕೆ.ಜಿ. ಭಾರದ ಮರಳು ಮೂಟೆಯನ್ನಿಟ್ಟು ಭಾರ ಹೊರುವ ತಾಲೀಮನ್ನು ಯಶಸ್ವಿಯಾಗಿ ನಡೆಸಲಾಗಿತ್ತು.

 55 ಕೆಜಿ ಭಾರಹೊತ್ತ ಭೀಮ

55 ಕೆಜಿ ಭಾರಹೊತ್ತ ಭೀಮ

ಈ ತಾಲೀಮಿನಲ್ಲಿ ಪಾಲ್ಗೊಂಡಿದ್ದ ಗಜಪಡೆ ಪೈಕಿ ಮೊದಲ ಬಾರಿಗೆ ದಸರೆಗೆ ಆಗಮಿಸಿರುವ ಮಹೇಂದ್ರ ಹಾಗೂ ಎರಡನೇ ಬಾರಿಗೆ ಆಗಮಿಸಿರುವ ಭೀಮ ಆನೆ ಯಾವುದೇ ಅಂಜಿಕೆ ಇಲ್ಲದೆ ನಿರ್ಭೀತಿಯಿಂದ ತಾಲೀಮಿನಲ್ಲಿ ಭಾಗವಹಿಸಿ ಭಾರ ಹೊತ್ತು ಹೆಜ್ಜೆ ಹಾಕಿರುವುದು ಇದುವರೆಗೆ ನಡೆದ ತಾಲೀಮಿನ ವಿಶೇಷವಾಗಿದೆ. ಎರಡನೇ ಭಾರದ ತಾಲೀಮಿನಲ್ಲಿ ಭೀಮ ಬೆಳಗ್ಗೆ ಮತ್ತು ಸಂಜೆ 550 ಕೆ.ಜಿ. ಭಾರ ಹೊತ್ತು ನಿರಾಯಾಸವಾಗಿ ಸಾಗಿದ್ದು ಎಲ್ಲರ ಗಮನಸೆಳೆದಿದೆ. ಅಷ್ಟೇ ಅಲ್ಲದೆ, ಈತ ಮುಂದೆ ಅಂಬಾರಿಯನ್ನು ಹೊರಬಲ್ಲ ಎಂಬುದನ್ನು ಸಾಬೀತು ಪಡಿಸಿದೆ.

 ಅಭಿಮನ್ಯುವಿನ ಮೇಲೆ 1000 ಕೆಜಿ ಹೊರಿಸಿ ತಾಲೀಮು

ಅಭಿಮನ್ಯುವಿನ ಮೇಲೆ 1000 ಕೆಜಿ ಹೊರಿಸಿ ತಾಲೀಮು

ಈ ನಡುವೆ ಮೂರನೇ ಸುತ್ತಿನ ಕಠಿಣ ತಾಲೀಮು ಆರಂಭವಾಗಿದ್ದು, ಅಂಬಾರಿ ಆನೆ ಅಭಿಮನ್ಯುವಿಗೆ 750 ಕೆ.ಜಿ ತೂಕದ ಮರಳು ಮೂಟೆ ಹಾಗೂ 250 ಕೆಜಿ ತೂಕದ ಗಾದಿ ಮತ್ತು ನಮ್ದಾ ಸೇರಿ ಒಟ್ಟು ಸಾವಿರ ಕೆ.ಜಿ ಭಾರ ಹೊತ್ತು ತಾಲೀಮು ನಡೆಸಲಾಗುತ್ತಿದೆ. ಇದನ್ನು ಅಭಿಮನ್ಯು ಯಶಸ್ವಿಯಾಗಿ ನಿರ್ವಹಿಸಿದ್ದಾನೆ. ಈತನಿಗೆ ಇತರೆ ಆನೆಗಳು ಸಾಥ್ ನೀಡುತ್ತಿವೆ.

ಈ ಭಾರ ಹೊರುವ ತಾಲೀಮು ಅಭಿಮನ್ಯು ಜತೆಗೆ ಗೋಪಾಲಸ್ವಾಮಿ, ಧನಂಜಯನಿಗೂ ನಡೆಸಲಾಗುತ್ತಿದೆ. ಕಿರಿಯ ಆನೆಗಳಾದ ಭೀಮ ಮತ್ತು ಮಹೇಂದ್ರನಿಗೆಗೆ ಒಂದು ಸಾವಿರ ಕೆ.ಜಿ ಬದಲಿಗೆ 750 ಕೆ.ಜಿ. ಭಾರ ಹೊರಿಸಿ ತಾಲೀಮು ನಡೆಸಲಾಗುತ್ತಿದೆ. ಭಾರ ಹೊರುವ ತಾಲೀಮಿಗೆ ಗಜಪಡೆಯನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಮಾವುತರು ಮಗ್ನರಾಗಿದ್ದಾರೆ.

 ಒಂದೂವರೆ ಗಂಟೆ ಬಾರ ಕಟ್ಟುವ ಕೆಲಸ

ಒಂದೂವರೆ ಗಂಟೆ ಬಾರ ಕಟ್ಟುವ ಕೆಲಸ

ಪ್ರತಿದಿನವೂ ತಾಲೀಮಿಗೆ ಗಜಪಡೆಯನ್ನು ಸಜ್ಜುಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆನೆಗಳ ಬೆನ್ನಿಗೆ ಭಾರ ಕಟ್ಟುವುದಕ್ಕೆ ನೈಪುಣ್ಯತೆ ಬೇಕಾಗುತ್ತದೆ. ಜತೆಗೆ ಸುಮಾರು ಒಂದೂವರೆ ಗಂಟೆಯಾದರೂ ಬೇಕು. ಅಷ್ಟೇ ಅಲ್ಲ ಚೆನ್ನಾಗಿ ತಿಳಿದಿರುವ ಮಾವುತರು ಮತ್ತು ಕಾವಾಡಿಗಳು ಬೇಕಾಗುತ್ತಾರೆ. ಸಾಮಾನ್ಯವಾಗಿ ದಸರಾದಲ್ಲಿ ಪಾಲ್ಗೊಳ್ಳುವ ಮಾವುತರು ಮತ್ತು ಕಾವಾಡಿಗಳು ಈ ಬಗ್ಗೆ ಅರಿತಿರುತ್ತಾರೆ. ಹಾಗಾಗಿ ಅವರು ಅರಣ್ಯಾಧಿಕಾರಿಗಳ ಸೂಚನೆಯಂತೆ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

ಭಾರ ಹೊರಿಸುವ ಮುನ್ನ ನಮ್ದಾ ಎಂದು ಕರೆಯುವ ಹೊದಿಕೆಯನ್ನು ಆನೆಯ ಬೆನ್ನಿನ ಮೇಲೆ ಹೊದಿಸಲಾಗುತ್ತದೆ. ಈ ನಮ್ದಾವನ್ನು ಗೋಣಿಚೀಲ ಮತ್ತು ಬಿಳಿ ಕಾಟನ್ ಬಟ್ಟೆಯಿಂದ ಹೊಲೆದು ಅದಕ್ಕೆ ತೆಂಗಿನ ನಾರು ತುಂಬಿಸಲಾಗಿರುತ್ತದೆ. ಮೆತ್ತನೆಯ ನಮ್ದಾದ ಮೇಲೆ 'ಗಾದಿ' ಎಂದು ಕರೆಯುವ ಚೌಕಾಕಾರದ ದೊಡ್ಡ ಹೊರೆಯನ್ನು ಹೊರಿಸಲಾಗುತ್ತದೆ. ಈ ಗಾದಿಯ ತೂಕ ಸುಮಾರು 300 ಕೆ.ಜಿ ಇರುತ್ತದೆ. ಇದನ್ನು ಕೆರೆಯಲ್ಲಿ ಬೆಳೆಯುವ ಜೊಂಡು ಹುಲ್ಲುನ್ನು ತುಂಬಿಸಿ ಮಾಡಲಾಗುತ್ತದೆ.

 ಜಂಬೂಸವಾರಿಗೆ ಗಜಪಡೆ ಪೂರ್ಣ ಸಿದ್ಧ

ಜಂಬೂಸವಾರಿಗೆ ಗಜಪಡೆ ಪೂರ್ಣ ಸಿದ್ಧ

ಇದನ್ನು ಆನೆ ಬೆನ್ನಿನ ಮೇಲೆ ಇರಿಸಿ ಸುಮಾರು 80 ರಿಂದ 90 ಅಡಿ ಉದ್ದದ ಹಗ್ಗದಿಂದ ಬಿಗಿಯಲಾಗುತ್ತದೆ. ಅದರ ಮೇಲೆ ಮತ್ತೊಂದು ತೆಂಗಿನ ನಾರು ತುಂಬಿದ ಛಾಪು ಎಂಬ ಬಟ್ಟೆಯನ್ನು ಹೊದಿಸಿ ಅದರ ಮೇಲೆ ಬೃಹತ್ ಗಾತ್ರದ ತೊಟ್ಟಿಲು ಮಾದರಿಯ ಚಾರ್ಜಾಮಾ ಇಟ್ಟು ಈ ಮೂರನ್ನು ಸೇರಿಸಿ ಆನೆಯ ಹಿಂಭಾಗದಿಂದ 'ದುಮುಚಿ' ಎಂಬ ರಬ್ಬರ್ ಮತ್ತು ಆನೆಯ ಹೊಟ್ಟೆ ಭಾಗಕ್ಕೆ ಚೆಸ್ಟ್ ಲೆಗ್ ರಬ್ಬರ್ ಹಗ್ಗದಿಂದ ಬಿಗಿದು ಕಟ್ಟಲಾಗುತ್ತದೆ.

ಚಾರ್ಜಾಮಾದಲ್ಲಿ ಮರಳಿನ ಮೂಟೆಗಳನ್ನು ಹಾಕಿ ಭಾರ ಹೊರುವ ತಾಲೀಮು ನಡೆಯುತ್ತದೆ. ಈಗಾಗಲೇ ಸಾವಿರ ಕೆಜಿ ಭಾರದ ತಾಲೀಮನ್ನು ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ ಮುಗಿಸಿ ಸೈ ಎನಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಚಿನ್ನದ ಅಂಬಾರಿ ಮಾದರಿಯ ಮರದ ಅಂಬಾರಿಯನ್ನು ಅಭಿಮನ್ಯು ಮೇಲೆ ಹೊರಿಸಿ ಅಂಬಾರಿ ಹೊರುವ ಅಭ್ಯಾಸ ಮಾಡಿಸಲಾಗುತ್ತದೆ. ಅಲ್ಲಿಗೆ ಜಂಬೂಸವಾರಿಗೆ ಗಜಪಡೆ ಪೂರ್ಣ ಪ್ರಮಾಣದಲ್ಲಿ ಸಿದ್ಧರಾಗಿದ್ದಾರೆ ಎಂದೇ ಅರ್ಥ. ಈ ಹೊಣೆಗಾರಿಕೆಯನ್ನು ಅಭಿಮನ್ಯು ಮಾತ್ರವಲ್ಲದೆ, ಗೋಪಾಲಸ್ವಾಮಿ, ಧನಂಜಯನಿಗೂ ಮಾಡಿಸುವ ಸಾಧ್ಯತೆಯಿದೆ.

ಜಂಬೂಸವಾರಿಗೆ ಸುಮಾರು ಮೂವತೈದು ದಿನಗಳು ಬಾಕಿಯಿದ್ದು, ಒಂದೊಂದು ದಿನವೂ ಪ್ರಮುಖವಾಗಿದೆ. ಲಕ್ಷಾಂತರ ಜನ ಪಾಲ್ಗೊಳ್ಳಲಿರುವ ದಸರಾ ಜಂಬೂಸವಾರಿಯಲ್ಲಿ ಗಜಪಡೆ ಯಾವುದೇ ರೀತಿಯಲ್ಲೂ ಗಾಬರಿಗೊಳ್ಳದೆ ಶಿಸ್ತಿನಿಂದ ಸಾಗಬೇಕಾದರೆ ಅವುಗಳನ್ನು ಪ್ರತಿಯೊಂದು ರೀತಿಯಲ್ಲಿಯೂ ಸಿದ್ಧಗೊಳಿಸುವುದು ಅರಣ್ಯ ಇಲಾಖೆಯ ಜವಬ್ದಾರಿಯಾಗಿದ್ದು, ಆ ನಿಟ್ಟಿನಲ್ಲಿ ತಾಲೀಮು ಭರದಿಂದ ಸಾಗುತ್ತಿರುವುದು ಕಂಡು ಬರುತ್ತಿದೆ.

English summary
Abhimanyu alon withn 8 Elephants have started thier weight training for Jamboo savari at Mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X