ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾ 2022: ಇವರೇ ಈ ಬಾರಿಯ ಜಂಬೂಸವಾರಿ ಸೂತ್ರಧಾರಿಗಳು!

|
Google Oneindia Kannada News

ಮೈಸೂರು ದಸರಾದ ಪ್ರಮುಖ ಆಕರ್ಷಣೆಯೇ ಜಂಬೂ ಸವಾರಿ. ಈ ಜಂಬೂಸವಾರಿಗೆ ಪ್ರತಿಯೊಂದು ಆನೆಯ ಪಾಲ್ಗೊಳ್ಳುವಿಕೆಯೂ ಬಹುಮುಖ್ಯವಾಗಿದೆ. ಅದರಲ್ಲೂ ಚಿನ್ನದ ಅಂಬಾರಿಯಲ್ಲಿ ವೀರಾಜಮಾನಳಾದ ಚಾಮುಂಡೇಶ್ವರಿಯನ್ನು ಹೊತ್ತು ನಡೆಯುವ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿಗೆ ಜವಾಬ್ದಾರಿ ಹೆಚ್ಚಿದೆ.

ಕಳೆದ ಎರಡು ವರ್ಷಗಳಿಂದ ಅರಮನೆ ಆವರಣದಲ್ಲಷ್ಟೆ ಅಂಬಾರಿಯನ್ನು ಹೊತ್ತು ಸಾಗಿದ್ದ ಅಭಿಮನ್ಯು ಈ ಬಾರಿ ಸುಮಾರು ಐದು ಕಿಮೀ ದೂರದಲ್ಲಿರುವ ಬನ್ನಿ ಮಂಟಪದವರೆಗೆ ಮೆರವಣಿಗೆಯಲ್ಲಿ ಸಾಗಬೇಕಿದೆ. ಈಗಾಗಲೇ ಸರ್ವ ರೀತಿಯಲ್ಲಿಯೂ ಗಜಪಡೆ ತಯಾರಾಗಿದೆ. ಈ ಸಲದ ಜಂಬೂ ಸವಾರಿಗೆ ವಿವಿಧ ಆನೆಶಿಬಿರಗಳಿಂದ 14 ಆನೆಗಳನ್ನು ಕರೆ ತರಲಾಗಿತ್ತಾದರೂ ಅದರಲ್ಲಿ ಲಕ್ಷ್ಮಿ ಗಂಡು ಮರಿಗೆ ಜನ್ಮನೀಡಿರುವುದರಿಂದ ಅದು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಉಳಿದಂತೆ 13 ಆನೆಗಳು ಜಂಬೂಸವಾರಿಗೆ ಕಳೆಕಟ್ಟಲು ಸಿದ್ಧವಾಗಿವೆ.

ಇನ್ನು ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿರುವ ಗಜಪಡೆಯಲ್ಲಿ ಯಾವ ಆನೆಗಳು ಪಾಲ್ಗೊಳ್ಳುತ್ತಿವೆ. ಅವು ಯಾವ ಶಿಬಿರದಿಂದ ಬಂದಿದೆ. ಅವುಗಳ ಬಗೆಗಿನ ವಿವರಗಳನ್ನು ನೋಡಿದ್ದೇ ಆದರೆ ಕೆಲವು ಆನೆಗಳಿಗೆ ಇದು ಮೊದಲ ಜಂಬೂಸವಾರಿಯಾಗಿದ್ದರೆ ಮತ್ತೆ ಕೆಲವು ಆನೆಗಳು ಈ ಹಿಂದೆಯೂ ಭಾಗವಹಿಸಿದ ಅನುಭವ ಹೊಂದಿವೆ.

 ಅಂಬಾರಿ ಹೊತ್ತು ಜಂಬೂಸವಾರಿ ಮುನ್ನಡೆಸುವ ಅಭಿಮನ್ಯು

ಅಂಬಾರಿ ಹೊತ್ತು ಜಂಬೂಸವಾರಿ ಮುನ್ನಡೆಸುವ ಅಭಿಮನ್ಯು

ಜಂಬೂಸವಾರಿಯಲ್ಲಿ 21 ವರ್ಷಗಳ ಕಾಲ ಭಾಗವಹಿಸಿ ಅನುಭವ ಹೊಂದಿರುವ ಅಭಿಮನ್ಯು ಈಗ ಗಜಪಡೆಯ ಕ್ಯಾಪ್ಟನ್ ಆಗಿದ್ದು, ಕಳೆದ ಎರಡು ವರ್ಷಗಳಿಂದ ಅಂಬಾರಿ ಹೊರುತ್ತಿದೆ. ಈ ಹಿಂದೆ ಅರಮನೆ ವಾದ್ಯ ಸಂಗೀತದ ಗಾಡಿಯನ್ನು ಎಳೆಯುವ ಜವಬ್ದಾರಿಯನ್ನು ನೀಡಲಾಗಿತ್ತು, ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಅನುಭವ ಹೊಂದಿದೆ. 57ವರ್ಷದ ಅಭಿಮನ್ಯುವನ್ನು 1977ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಖೆಡ್ಡಾದ ಮೂಲಕ ಸೆರೆಹಿಡಿಯಲಾಯಿತು. ಪುಂಡ ಆನೆಗಳನ್ನು ಸದೆಬಡಿದು ಹೆಡೆಮುರಿಗೆ ಕಟ್ಟುವುದರಲ್ಲಿ ಈತ ನಿಸ್ಸೀಮ. ತಿತಿಮತಿಯ ಮತ್ತಿಗೋಡು ಆನೆಶಿಬಿರ ಖಾಯಂ ವಾಸಸ್ಥಾನ. 2.72 ಮೀ ಎತ್ತರ, 3.51 ಮೀ. ಉದ್ದ ಹಾಗೂ 5000 ಕೆಜಿ ತೂಕ ಹೊಂದಿದೆ.

 ನಿಶಾನೆ ಆನೆಯಾದ ಅರ್ಜುನ

ನಿಶಾನೆ ಆನೆಯಾದ ಅರ್ಜುನ

63ವರ್ಷದ ಅರ್ಜುನನಿಗೆ ಜಂಬೂಸವಾರಿಯಲ್ಲಿ 22 ವರ್ಷಗಳ ಕಾಲ ಭಾಗವಹಿಸಿದ ಅನುಭವವಿದೆ. ಈ ಹಿಂದೆ ಅಂಬಾರಿ ಹೊರುತ್ತಿದ್ದನಾದರೂ ಈ ಬಾರಿ ನಿಶಾನೆ ಆನೆಯಾಗಿ ಕಾರ್ಯನಿರ್ವಹಿಸಲಿದ್ದಾನೆ. ಈತನನ್ನು 1968ರಲ್ಲಿ ಹೆಚ್.ಡಿ.ಕೋಟೆಯ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಖೆಡ್ಡಾದ ಮೂಲಕ ಸೆರೆ ಹಿಡಿಯಲಾಯಿತು. ಬಳ್ಳೆ ಆನೆಶಿಬಿರ ಈತನ ವಾಸ್ತವ್ಯದ ಕೇಂದ್ರವಾಗಿದೆ. ಎತ್ತರ 2.95ಮೀ, ಉದ್ದ 3.75 ಮೀ, 5775 ಕೆಜಿ ತೂಕವಿದ್ದಾನೆ.

 ಗಜಪಡೆಗಳಲ್ಲೇ ಸಾಧು ವಿಜಯ

ಗಜಪಡೆಗಳಲ್ಲೇ ಸಾಧು ವಿಜಯ

ಗಜಪಡೆಗಳ ಪೈಕಿ ಸಾಧುಸ್ವಭಾವದ 63 ವರ್ಷದ ಹೆಣ್ಣು ಆನೆ ವಿಜಯ ಕಳೆದ 13 ವರ್ಷಗಳಿಂದ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿದ್ದಾಳೆ. ದುಬಾರೆ ಆನೆಶಿಬಿರದಲ್ಲಿರುವ ಈಕೆಯನ್ನು 1963ರಲ್ಲಿ ದುಬಾರೆ ಅರಣ್ಯದಲ್ಲಿ ಸೆರೆ ಹಿಡಿಯಲಾಗಿತ್ತು. 2.29ಮೀ. ಎತ್ತರ, 3 ಮೀ ಉದ್ದ ಹಾಗೂ 2760 ಕೆಜಿ ತೂಕವನ್ನು ಹೊಂದಿದ್ದಾಳೆ.

 ಕಾವೇರಿಗೆ 11ನೇ ಜಂಬೂಸವಾರಿ

ಕಾವೇರಿಗೆ 11ನೇ ಜಂಬೂಸವಾರಿ

ಕೊಡಗಿನ ಸೋಮವಾರಪೇಟೆಯ ಅಡನಾಡೂರು ಅರಣ್ಯಪ್ರದೇಶದಲ್ಲಿ 2009ರಲ್ಲಿ ಸೆರೆಸಿಕ್ಕಿರುವ ಹೆಣ್ಣಾನೆ ಕಾವೇರಿಗೆ ಈಗ 45 ವರ್ಷ. 10 ವರ್ಷ ಜಂಬೂಸವಾರಿಯಲ್ಲಿ ಭಾಗವಹಿಸಿದ ಅನುಭವವಿದೆ. 2.60ಮೀ ಎತ್ತರ, 3.32ಮೀ ಉದ್ದ ಹಾಗೂ 3245 ಕೆಜಿ ತೂಕ ಹೊಂದಿರುವ ಈಕೆ ದುಬಾರೆ ಆನೆ ಶಿಬಿರದವಳಾಗಿದ್ದಾಳೆ.

 ಶಾಂತ ಸ್ವಭಾವದ ಬಲಶಾಲಿ ಗೋಪಾಲ

ಶಾಂತ ಸ್ವಭಾವದ ಬಲಶಾಲಿ ಗೋಪಾಲ

8ನೇ ಬಾರಿಗೆ ದಸರಾದಲ್ಲಿ ಭಾಗವಹಿಸಲಿರುವ 39 ವಯಸ್ಸಿನ ಗೋಪಾಲಸ್ವಾಮಿ ತಿತಿಮತಿಯ ಮತ್ತಿಗೋಡು ಆನೆ ಶಿಬಿರದವನಾಗಿದ್ದು, ಶಾಂತ ಸ್ವಭಾವದ ಬಲಶಾಲಿ. 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಹೆತ್ತೂರಿನಲ್ಲಿ ಸೆರೆಹಿಡಿಯಲಾಗಿದೆ. 2.85 ಮೀ. ಎತ್ತರ, 3.42ಮೀ. ಉದ್ದ, 5460ಕೆಜಿ ತೂಕ ಹೊಂದಿದ್ದಾನೆ.

 ಸಫಾರಿ ಕಿಂಗ್ ಗೋಪಿ

ಸಫಾರಿ ಕಿಂಗ್ ಗೋಪಿ

1993ರಲ್ಲಿ ಕಾರೆಕೊಪ್ಪ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾದ 41 ವರ್ಷದ ಗೋಪಿ ದುಬಾರೆ ಆನೆ ಶಿಬಿರದವನು. ಅಲ್ಲಿ ಸಫಾರಿ ಕಾರ್ಯ ನಿರ್ವಹಿಸುತ್ತಾನೆ. ಎತ್ತರ 2.92 ಮೀ. ಉದ್ದ 3.42 ಮೀ. ತೂಕ 4670ಕೆಜಿ. ಇದು ಈತ 11ವರ್ಷದಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ.

 3ನೇ ಬಾರಿ ದಸರಾಕ್ಕೆ ಆಗಮಿಸಿರುವ ಚೈತ್ರ

3ನೇ ಬಾರಿ ದಸರಾಕ್ಕೆ ಆಗಮಿಸಿರುವ ಚೈತ್ರ

ಮತ್ತಿಗೋಡು ಆನೆ ಶಿಬಿರದಿಂದ ಆಗಮಿಸಿರುವ 49 ವರ್ಷದ ಚೈತ್ರ ಕಳೆದ ಎರಡು ವರ್ಷಗಳಿಂದ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿದೆ. ಎತ್ತರ 2.30 ಮೀ, ಉದ್ದ 3.10 ಮೀ. 2600 ಕೆಜಿ ತೂಕ ಹೊಂದಿದೆ. ಇದು ಗಂಗೆಯ ಮರಿಯಾಗಿದ್ದು, ಕಾಡಾನೆ ಮತ್ತು ಹುಲಿ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದೆ.

 ಪಟ್ಟದ ಆನೆ ಹೊರುತ್ತಿರುವ ಧನಂಜಯ

ಪಟ್ಟದ ಆನೆ ಹೊರುತ್ತಿರುವ ಧನಂಜಯ

ಧನಂಜಯ ಆನೆಯು ದುಬಾರೆ ಆನೆಶಿಬಿರದ್ದಾಗಿದ್ದು, 44ವರ್ಷ ಪ್ರಾಯದ್ದಾಗಿದೆ. ಕಳೆದ ನಾಲ್ಕು ವರ್ಷದಿಂದ ದಸರಾದಲ್ಲಿ ಭಾಗವಹಿಸುತ್ತಿದ್ದುಮ ಈ ಬಾರಿ ಪಟ್ಟದ ಆನೆಯ ಜವಬ್ದಾರಿ ವಹಿಸಿಕೊಂಡಿದೆ. ಇದನ್ನು 2013ರಲ್ಲಿ ಹಾಸನದ ಯಸಳೂರು ವಲಯದಲ್ಲಿ ಸೆರೆಹಿಡಿಯಲಾಗಿದೆ. 2.93 ಮೀ ಎತ್ತರ, 3.84 ಮೀ ಉದ್ದ ಮತ್ತು 4890 ಕೆಜಿ ತೂಕ ಹೊಂದಿದೆ.

 ಭವಿಷ್ಯದ ಅಂಬಾರಿ ಆನೆ ಭೀಮ

ಭವಿಷ್ಯದ ಅಂಬಾರಿ ಆನೆ ಭೀಮ

ಮತ್ತಿಗೋಡು ಆನೆ ಶಿಬಿರದಿಂದ ಆಗಮಿಸಿರುವ ಭೀಮನಿಗೆ 22 ವರ್ಷ ಪ್ರಾಯ. ಈತನಿಗೆ ಈ ಹಿಂದೆ ಒಮ್ಮೆ ದಸರಾದಲ್ಲಿ ಭಾಗವಹಿಸಿದ ಅನುಭವವಿದೆ. ಈ ಬಾರಿ ನಿಶಾನೆ ಆನೆಯ ಪಟ್ಟ ನೀಡಲಾಗಿದೆ.2.87ಮೀ ಎತ್ತರ, 3.05 ಮೀ ಉದ್ದ ಹಾಗೂ 4345 ತೂಕವಿದೆ.

 ಕೊಡಗಿನ ಸುಗ್ರೀವ

ಕೊಡಗಿನ ಸುಗ್ರೀವ

ದುಬಾರೆ ಆನೆ ಶಿಬಿರದ 40 ವರ್ಷದ ಸುಗ್ರೀವನನ್ನು 2016ರಲ್ಲಿ ಕೊಡಗಿನ ಸುಂಟಿಕೊಪ್ಪದ ಭೂತನಕಾಡು ಅರಣ್ಯ ವಲಯದ ಕಾಫಿ ತೋಟದಲ್ಲಿ ಸೆರೆಹಿಡಿಯಲಾಗಿದೆ. 2.60 ಮೀ ಎತ್ತರ ಮತ್ತು 3.25 ಮೀ ಉದ್ದ ಹೊಂದಿದೆ. 4785 ಕೆಜಿ ತೂಕವನ್ನು ಈ ಆನೆ ಹೊಂದಿದೆ.

 ಅರಮನೆಯಲ್ಲಿ ಮರಿಗೆ ಜನ್ಮ ನೀಡಿರುವ ಲಕ್ಷ್ಮಿ

ಅರಮನೆಯಲ್ಲಿ ಮರಿಗೆ ಜನ್ಮ ನೀಡಿರುವ ಲಕ್ಷ್ಮಿ

ಇನ್ನು ಬಂಡೀಪುರ ಆನೆ ಶಿಬಿರದಿಂದ ಬಂದಿರುವ 21 ವರ್ಷದ ಹೆಣ್ಣಾನೆ ಲಕ್ಷ್ಮಿ. ಇದು 2.32 ಮೀ ಎತ್ತರ, 2.60 ಮೀ ಉದ್ದ ಮತ್ತು 3150 ಕೆಜಿ ತೂಕವಿದೆ. ಮೊದಲ ಕೆಲವು ದಿನಗಳ ಕಾಲ ತಾಲೀಮಿನಲ್ಲಿ ಭಾಗವಹಿಸಿತ್ತು. ಜತೆಗೆ ಮೊದಲ ಶಬ್ದ ತಾಲೀಮಿನಲ್ಲಿಯೂ ಪಾಲ್ಗೊಂಡಿತ್ತು. ಆದರೆ ಸೆ.19ರಂದು ಗಂಡು ಮರಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ. ಇದರ ಪುತ್ರನಿಗೆ ಶ್ರೀದತ್ತಾತ್ರೇಯ ಎಂದು ನಾಮಕರಣ ಮಾಡಿದ್ದು, ಅರಮನೆ ಆವರಣದಲ್ಲಿ ಪೋಷಣೆ ಮಾಡಲಾಗುತ್ತಿದೆ.

 ಮೊದಲ ದಸರಾದಲ್ಲಿ ಶ್ರೀರಾಮ, ಪಾರ್ಥಸಾರಥಿ

ಮೊದಲ ದಸರಾದಲ್ಲಿ ಶ್ರೀರಾಮ, ಪಾರ್ಥಸಾರಥಿ

ಈ ಗಜಪಡೆಗಳ ಪೈಕಿ ಮಹೇಂದ್ರ, ಪಾರ್ಥಸಾರಥಿ ಮತ್ತು ಶ್ರೀರಾಮ ಮೂರು ಆನೆಗಳಿಗೆ ಇದು ಮೊದಲ ಜಂಬೂಸವಾರಿಯಾಗಿದೆ. ಆದರೂ ತಾಲೀಮಿನಲ್ಲಿ ಉತ್ತಮವಾಗಿ ಸ್ಪಂದಿಸಿರುವ ಈ ಆನೆಗಳು ಜಂಬೂಸವಾರಿಗೆ ತಯಾರಾಗಿವೆ. ಬಂಡೀಪುರ ರಾಂಪುರ ಆನೆಶಿಬಿರದ 18ವರ್ಷದ ಕಿರಿಯ ಆನೆ ಪಾರ್ಥಸಾರಥಿಗೂ ಇದು ಮೊದಲ ದಸರವಾಗಿದೆ. ಎತ್ತರ 2.60, ಉದ್ದ 3.30ಮೀ. ಹಾಗೂ 3445 ಕೆಜಿ ತೂಕ ಹೊಂದಿದ್ದಾನೆ. ಈತನ ವಿಶೇಷತೆ ಏನೆಂದರೆ ಹುಲಿಗಳ ಕಾರ್ಯಾಚರಣೆ ಮತ್ತು ವಾಹನಗಳ ಶಬ್ದಗಳಿಗೆ ಹೊಂದಿಕೊಳ್ಳುವ ಗುಣ ಹೊಂದಿದ್ದಾನೆ,

ದುಬಾರೆ ಆನೆಶಿಬಿರದ 40 ವರ್ಷ ಪ್ರಾಯದ ಶ್ರೀರಾಮನಿಗೂ ಇದು ಮೊದಲ ದಸರಾವಾಗಿದೆ. ಈತನನ್ನು 2016ರಲ್ಲಿ ಹಾಸನದ ಬಳಿ ಸೆರೆಹಿಡಿಯಲಾಗಿದೆ. ಎತ್ತರ 2.77, ಉದ್ದ 3.45, ತೂಕ 4475 ಕೆಜಿ ತೂಕವಿದೆ.

 ಶ್ರೀರಂಗಪಟ್ಟಣದಲ್ಲಿ ಅಂಬಾರಿ ಹೊತ್ತ ಮಹೇಂದ್ರ

ಶ್ರೀರಂಗಪಟ್ಟಣದಲ್ಲಿ ಅಂಬಾರಿ ಹೊತ್ತ ಮಹೇಂದ್ರ

ಮತ್ತಿಗೋಡು ಆನೆ ಶಿಬಿರದ ಮಹೇಂದ್ರನನ್ನು 2018ರಲ್ಲಿ ಸೆರೆಹಿಡಿಯಲಾಗಿದ್ದು, ಇದು ಮೊದಲ ಬಾರಿಯ ಜಂಬೂಸವಾರಿಯಾಗಿದೆ. ವಯಸ್ಸು 39, ಎತ್ತರ 2.74, ಉದ್ದ 3.25, ತೂಕ 4450 ಕೆಜಿಯಿದೆ. ಈಗಾಗಲೇ ಶ್ರೀರಂಗಪಟ್ಟಣದ ದಸರಾಕ್ಕೆ ತೆರಳಿದ ಈತ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗಿ ದಸರಾ ಯಶಸ್ಸುಗೊಳಿಸಿ ಬಂದಿರುವುದು ಈತನ ವಿಶೇಷತೆಯಾಗಿದೆ.

English summary
Mysuru Dasara 2022: Interesting Facts and Information about 14 Elephants that participate in world-famous Jamboo Savari; Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X