Munirathna profile; ಆಗ ಚಿತ್ರ ನಿರ್ಮಾಪಕ, ಫುಲ್ ಟೈಂ ರಾಜಕಾರಣಿ!
ತೋಟಗಾರಿಕೆ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಸಿನಿಮಾ ನಂಟಿರುವ ರಾಜಕೀಯ ನಾಯಕ.
ನಿರ್ಮಾಪಕರು ಮುನಿರತ್ನ. ಹಿಂದೆ ಕನ್ನಡ ಸಿನಿಮಾ ನೋಡುವಾಗ ಈ ಹೆಸರು ಕಂಡು ಬರುತ್ತಿತ್ತು. ಆದರೆ ಈಗ ಮುನಿರತ್ನ ಫುಲ್ ಟೈಂ ರಾಜಕಾರಣಿ. ಬೆಂಗಳೂರು ನಗರದ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ತೋಟಗಾರಿಕೆ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು. ಸಿನಿಮಾ ನಂಟಿನ ಹಲವರು ರಾಜಕೀಯಕ್ಕೆ ಬಂದು ಯಶಸ್ವಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಮುನಿರತ್ನ ಸಹ ಇದ್ದಾರೆ.
1964ರ ಜುಲೈ 23ರಂದು ಜನಿಸಿದ ಮುನಿರತ್ನ ತಂದೆ ಸುಬ್ರಮಣಿ ನಾಯ್ಡು. ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿರುವ ಮುನಿರತ್ನ ಕನ್ನಡ ಚಿತ್ರ ನಿರ್ಮಾಪಕರಾಗಿ ಜನರಿಗೆ ಚಿರಪರಿಚಿತ. ಕನ್ನಡದ ಸ್ಟಾರ್ ನಟರ ಜೊತೆ ಸಿನಿಮಾ ಮಾಡುವ ಮೂಲಕ ಮುನಿರತ್ನ ಯಶಸ್ವಿ ನಿರ್ಮಾಪಕರಾದರು. ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿದ್ದರು. 2013ರಲ್ಲಿ ವಿಧಾನಸಭೆ ಚುನಾವಣೆಯ ಟಿಕೆಟ್ ಗಿಟ್ಟಿಸಲು ಯಶಸ್ವಿಯಾದರು.

ಮೊದಲ ಚುನಾವಣೆಯಲ್ಲಿಯೇ 71,064 ಮತಗಳನ್ನು ಪಡೆಯುವ ಮೂಲಕ ವಿಧಾನಸಭೆ ಪ್ರವೇಶ ಮಾಡಿದರು. ಮುನಿರತ್ನ, ಎಸ್. ಟಿ. ಸೋಮಶೇಖರ್ ಮತ್ತು ಬೈರತಿ ಬಸವರಾಜ ಮೂವರು ಸಿದ್ದರಾಮಯ್ಯ ಆಪ್ತರಾಗಿದ್ದರು. ಆದರೆ ಈ ಮೂವರು ಈಗ ಬಿಜೆಪಿ ಪಕ್ಷದಲ್ಲಿದ್ದಾರೆ. ಮೂವರು ಸಹ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರು ಎಂಬುದು ರಾಜಕೀಯ ಹೇಗೆ ನಡೆಯುತ್ತದೆ? ಎಂಬುದಕ್ಕೆ ಉದಾಹರಣೆಯಾಗಿದೆ.
ಮುನಿರತ್ನ 2018ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಟಿಕೆಟ್ ಪಡೆಯಲು ಯಶಸ್ವಿಯಾದರು. 40,595 ಮತಗಳನ್ನು ಪಡೆದು ಜಯಗಳಿಸಿದರು. ಎರಡು ಬಾರಿ ಚುನಾವಣೆಯಲ್ಲಿ ಗೆದ್ದ ಮುನಿರತ್ನ ಆರ್. ಆರ್. ನಗರ ಕ್ಷೇತ್ರದಲ್ಲಿ ಭಾರೀ ಪ್ರಭಾವ ಬೆಳೆಸಿಕೊಂಡರು. ಪಕ್ಷವನ್ನು ಮೀರಿ ವ್ಯಕ್ತಿ ಕೇಂದ್ರಿತವಾಗಿ ಜನರು ಮತ ಹಾಕುವ ಮಟ್ಟಿಗೆ ಕ್ಷೇತ್ರದಲ್ಲಿ ಅವರು ಹಿಡಿತ ಹೊಂದಿದ್ದಾರೆ. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳಿಸಿದ ಶಾಸಕರಲ್ಲಿ ಮುನಿರತ್ನ ಸಹ ಒಬ್ಬರು.

ಕಾಂಗ್ರೆಸ್ ಬಿಟ್ಟ ಮುನಿರತ್ನ ಬಿಜೆಪಿ ಸೇರಿದರು. ಆದರೆ ಕೋರ್ಟ್ ಆದೇಶದ ಕಾರಣ ಆರ್. ಆರ್. ನಗರ ಕ್ಷೇತ್ರದ ಉಪ ಚುನಾವಣೆ ತಡವಾಯಿತು. 10/1/2019ರಂದು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮನಿರತ್ನ ನೇಮಕಗೊಂಡರು. 2020ರ ನವೆಂಬರ್‌ನಲ್ಲಿ ನಡೆದ ಆರ್. ಆರ್. ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ 1.25 ಲಕ್ಷ ಮತಗಳನ್ನು ಪಡೆದು ಮುನಿರತ್ನ ಜಯಗಳಿಸಿದರು.
ಆಗ ಮುಖ್ಯಮಂತ್ರಿಯಾಗಿದ್ದ ಬಿ. ಎಸ್. ಯಡಿಯೂರಪ್ಪ ಮುನಿರತ್ನರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡರು. ತೋಟಗಾರಿಕೆ ಹಾಗೂ ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಖಾತೆಯ ಹೊಣೆಯನ್ನು ನೀಡಿದರು. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಆಗಲೂ ಮುನಿರತ್ನಗೆ ಸಂಪುಟದಲ್ಲಿ ಸ್ಥಾನ ನೀಡಿದರು. ತೋಟಗಾರಿಕೆ ಖಾತೆ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದರು.
ಈ ಬಾರಿಯ ಚುನಾವಣೆಯಲ್ಲಿಯೂ ಮುನಿರತ್ನಗೆ ಟಿಕೆಟ್ ಖಚಿತವಾಗಿದೆ. ಆರ್. ಆರ್. ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 2013, 2018ರ ಚುನಾವಣೆಯಲ್ಲಿ ಮುನಿರತ್ನ ಗೆದ್ದಿದ್ದಾರೆ. 2020ರ ಉಪ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ತಮ್ಮ ಪ್ರಭಾವ ಏನು? ಎಂದು ತೋರಿಸಿದ್ದಾರೆ. ಸಚಿವರಾಗಿ ರಾಜಕೀಯಲ್ಲಿ ಬ್ಯುಸಿಯಾದ ಮೇಲೆ ಚಿತ್ರರಂಗದಿಂದ ಮುನಿರತ್ನ ಕೊಂಚ ದೂರ ಉಳಿದಿದ್ದಾರೆ. ಆದರೆ ಆಗಾಗ ಸಿನಿಮಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.
ನಕಲಿ ಬಿಲ್ ತಯಾರಿಕೆ,ಆರ್. ಆರ್. ನಗರ ವ್ಯಾಪ್ತಿಯಲ್ಲಿ ಸಿಕ್ಕ ನಕಲಿ ವೋಟರ್ ಐಡಿ ಪ್ರಕರಣದಲ್ಲಿ ಮುನಿರತ್ನ ಹೆಸರು ಕೇಳಿ ಬಂದಿತ್ತು. ಮುನಿರತ್ನ ಕಾಂಗ್ರೆಸ್‌ನಲ್ಲಿದ್ದಾಗ ಆರ್. ಆರ್. ನಗರ ಕ್ಷೇತ್ರದ ಬಿಜೆಪಿ ನಾಯಕ ತುಳಸಿ ಮುನಿರಾಜು ಗೌಡ ಮುನಿರತ್ನ ವಿರುದ್ಧ ಚುನಾವಣಾ ಆಕ್ರಮದ ದೂರು ದಾಖಲಿಸಿದ್ದರು. ಅವರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡಿ, ತಮ್ಮನ್ನು ವಿಜೇತ ಎಂದು ಘೋಷಣೆ ಮಾಡಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications