Maha Kumbh Mela 2025: ಮಹಾಕುಂಭ ಮೇಳದಿಂದ ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್
ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನತ್ತ ಭಕ್ತರ ದಂಡು ಹರಿದುಬರುತ್ತಿದೆ. ಇಲ್ಲಿವರೆಗೆ ಪ್ರಯಾಗ್‌ರಾಜ್‌ನಲ್ಲಿ ಮಾತ್ರ ಜನಸಂದಣಿ ಹೆಚ್ಚಾಗಿತ್ತು ಎಂದು ಸುದ್ದಿಯಾಗಿತ್ತು. ಆದರೆ, ಟ್ರಾಫಿಕ್ ವಿಚಾರದಲ್ಲೂ ಮಹಾಕುಂಭ ಮೇಳ ದಾಖಲೆ ನಿರ್ಮಿಸಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಕಾರಣ ಈ ಭಾಗದಲ್ಲಿ ವಿಪರೀತ ಟ್ರಾಫಿಕ್ ಜಾಮ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಹರಿದಾಡುತ್ತಿವೆ.
ಲಕ್ಷಾಂತರ ಭಕ್ತರು ಮಹಾಕುಂಭಕ್ಕೆ ಬರುತ್ತಿರುವ ಹಿನ್ನೆಲೆ ಒಂದಲ್ಲ ಎರಡಲ್ಲ, ಬರೋಬ್ಬರಿ 300 ಕಿಲೋಮೀಟರ್ ದೂರದವರೆಗೆ ಈ ಟ್ರಾಫಿಕ್ ಜಾಮ್ ಆಗಿದೆ ಎನ್ನಲಾಗಿದೆ. ನೂರಾರು ಕಿಲೋಮೀಟರ್‌ವರೆಗೆ ಟ್ರಾಫಿಕ್ ಜಾಮ್ ಪ್ರಯಾಗ್‌ರಾಜ್ ಬಳಿ ಕಂಡುಬಂದಿದೆ. ವಾಹನಗಳು ಗಂಟೆಗಟ್ಟಲೆ ಸಿಲುಕಿಕೊಂಡಿದ್ದು, ಕೇವಲ 50 ಕಿ.ಮೀ ಕ್ರಮಿಸಲು 10ರಿಂದ 12 ಗಂಟೆಗಳು ಸಮಯ ತೆಗೆದುಕೊಳ್ಳುತ್ತಿದೆ. ಇದನ್ನು ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್ ಎಂದು ಜನ ಕರೆಯುತ್ತಿದ್ದಾರೆ.

ಪ್ರಯಾಗ್‌ರಾಜ್‌ಗೆ ಹೋಗುವ ಹಲವು ಮಾರ್ಗಗಳಲ್ಲಿ ಸುದೀರ್ಘ ಟ್ರಾಫಿಕ್ ಜಾಮ್ ಕಂಡುಬಂದಿದೆ. ಜನಸಂದಣಿಯಿಂದಾಗಿ ಭಕ್ತರು ತಮ್ಮ ಮನೆಗಳಿಗೆ ವಾಪಸ್ ತೆರಳಲು ಮುಂದಾಗಿದ್ದಾರೆ. ಪ್ರಯಾಗರಾಜ್‌ನಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಮಧ್ಯಪ್ರದೇಶದ ನಗರವಾದ ಕಟ್ನಿಗೂ ಬರಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರ ಮತ್ತು ದಕ್ಷಿಣ ರಾಜ್ಯಗಳಿಂದ ಮಹಾಕುಂಭ ಮೇಳಕ್ಕೆ ತೆರಳಿರುವ ವಾಹನಗಳು ಟ್ರಾಫಿಕ್ ಜಾಮ್‌ನಿಂದಾಗಿ ಕಟ್ನಿ, ಮೈಹಾರ್ ಮತ್ತು ರೇವಾ ಜಿಲ್ಲೆಗಳಲ್ಲಿ ಸಿಲುಕಿಕೊಂಡಿವೆ ಎನ್ನಲಾಗಿದೆ. ಕುಂಭಮೇಳದ ಬಳಿ 20 ಕಿ.ಮೀ ಟ್ರಾಫಿಕ್ ಜಾಮ್ ಇದೆ ಎಂದು ಸ್ಥಳೀಯರು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಪ್ರಯಾಗರಾಜ್‌ನಲ್ಲಿ ಸಾರ್ವಜನಿಕರ ಭಾರೀ ಜನದಟ್ಟಣೆಯಿಂದಾಗಿ ಇಲ್ಲಿನ ರೈಲು ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಹೆಚ್ಚುತ್ತಿರುವ ಜನಸಂದಣಿ ತಡೆಯಲು ರೈಲು ಸೇವೆಗಳು ಎಂದಿನಂತೆ ಮುಂದುವರಿದಿದ್ದರೂ, ಸಾರ್ವಜನಿಕರಿಗೆ ಪ್ರಯಾಗ್‌ರಾಜ್ ಸಂಗಮ್ ರೈಲು ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಿದ್ದಾರೆ ಎಂದು ತಿಳಿದುಬಂದಿದೆ.
ರಾಷ್ಟ್ರಪತಿ ಮುರ್ಮು ಪವಿತ್ರ ಸ್ನಾನ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳಕ್ಕೆ ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಸ್ನಾನ ಮಾಡಿದ ನಂತರ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮವಾಗಿರುವ ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ ಸಲ್ಲಿಸಿದರು. ರಾಷ್ಟ್ರಪತಿ ಮುರ್ಮು ಅವರು ತ್ರಿವೇಣಿ ಸಂಗಮದಲ್ಲಿ ವಲಸೆ ಹಕ್ಕಿಗಳಿಗೆ ಆಹಾರ ನೀಡಿದರು. ಬಳಿಕ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ಅಕ್ಷಯವತ್ ಮತ್ತು ಬಡೇ ಹನುಮಾನ್ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಭಾನುವಾರ ಸುಮಾರು 8.429 ಮಿಲಿಯನ್ ಭಕ್ತರು ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದರು ಎಂದು ಉತ್ತರ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ. ಮಹಾಕುಂಭ ಮೇಳದಲ್ಲಿ ಇಲ್ಲಿಯವರೆಗೆ 42 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಜನವರಿ 13ರಂದು ಪ್ರಾರಂಭವಾದ ಮಹಾ ಕುಂಭ ಮೇಳವು ಫೆಬ್ರವರಿ 26ರ ಮಹಾಶಿವರಾತ್ರಿಯವರೆಗೆ ನಡೆಯಲಿದೆ.












Click it and Unblock the Notifications