ಎಬೋಲಾ ಹೋಲುವ ಮಾರ್ಬರ್ಗ್ ರೋಗದ ಲಕ್ಷಣ, ಇತಿಹಾಸ ಮತ್ತು ಚಿಕಿತ್ಸೆ ಬಗ್ಗೆ ತಿಳಿಯೋಣ
ನವದೆಹಲಿ, ಆಗಸ್ಟ್ 10: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ನಲುಗಿದ ಜಗತ್ತಿನಲ್ಲಿ ಮತ್ತೊಂದು ಮಾರಕ ರೋಗ ಕಾಣಿಸಿಕೊಂಡಿದೆ. ಪಶ್ಚಿಮ ಆಫ್ರಿಕಾದ ಗಿನಿ ದೇಶದಲ್ಲಿ ಮಾರ್ಬರ್ಗ್ ಎಂಬ ರೋಗ ಕಾಣಿಸಿಕೊಂಡಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. ಎಬೋಲಾಗೆ ಸಂಬಂಧಿಸಿದ ಹಾಗೂ ಕೊವಿಡ್-19 ರೋಗದಂತೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಮಾರ್ಬರ್ಗ್ ಸೋಂಕಿನ ಬಗ್ಗೆ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ.
ಕಳೆದ ಆಗಸ್ಟ್ 2ರಂದು ದಕ್ಷಿಣ ಗ್ವೆಕೆಡೌ ಪ್ರಾಂತ್ಯದಲ್ಲಿ ಮೃತಪಟ್ಟ ಸೋಂಕಿತ ವ್ಯಕ್ತಿಯ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಯಿತು. ಈ ವೇಳೆ ಬಾವಲಿಗಳಿಂದ ಜನರಿಗೆ ಹರಡುವ ಈ ರೋಗಾಣು ಶೇ.88ರಷ್ಟು ಸಾವಿನ ಪ್ರಮಾಣವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಮಾರ್ಬರ್ಗ್ ವೈರಸ್ ದೂರದವರೆಗೆ ಹರಡುವ ಅಪಾಯವಿದೆ ಎಂತಾದರೆ ಅದೇ ಹಾದಿಯಲ್ಲಿ ನಾವು ಅದನ್ನು ನಿಯಂತ್ರಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾದ ಪ್ರಾದೇಶಿಕ ನಿರ್ದೇಶಕ ಡಾ. ಮಾಶಿಡಿಸೋ ಮೋಟಿ ತಿಳಿಸಿದ್ದಾರೆ. ಗಿನಿ ಪ್ರಾಂತ್ಯದಲ್ಲಿ ಎಬೋಲಾ ವೈರಸ್ ಸೋಂಕಿನ ಎರಡನೇ ಅಲೆಯು ಅಂತ್ಯಗೊಂಡಿದೆ ಎಂದು ಘೋಷಿಸಿದ ಎರಡು ತಿಂಗಳಿನಲ್ಲೇ ಅಪಾಯ ಹೆಚ್ಚಾಗಿದೆ. ಕಳೆದ ವರ್ಷ ಶುರುವಾಗಿದ್ದ ಈ ಸೋಂಕು 12 ಮಂದಿಯ ಪ್ರಾಣವನ್ನೇ ಕಿತ್ತುಕೊಂಡಿತ್ತು. ಜಿನೇವಾದ ವಿಶ್ವ ಆರೋಗ್ಯ ಸಂಸ್ಥೆಯು ರೋಗಾಣುವಿನ ಹರಡುವಿಕೆ ಬಗ್ಗೆ ಉಲ್ಲೇಖಿಸಿತ್ತು. ಈ ರೋಗವು ಪ್ರಾದೇಶಿಕ ಮತ್ತು ದೇಶೀಯ ಮಟ್ಟದಲ್ಲಿ ಹೆಚ್ಚಾಗಿದೆಯೇ ವಿನಃ ಅಂತಾರಾಷ್ಟ್ರೀಯ ಮಟ್ಟಕ್ಕೆ ಹರಡುವ ಅಪಾಯ ಅಷ್ಟಾಗಿಲ್ಲ ಎಂದು ಹೇಳಿತ್ತು.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಲೆಗಳ ಹಾವಳಿಯಿಂದ ಸುಧಾರಿಸಿಕೊಳ್ಳಲು ಸಾಧ್ಯವಾಗದ ದುಸ್ಥಿತಿಯಲ್ಲೇ ಮತ್ತೊಂದು ರೋಗದ ಭೀತಿ ಶುರುವಾಗಿದೆ. ಅಫ್ರಿಕಾ ರಾಷ್ಟ್ರಗಳಲ್ಲಿ ಜನರ ಜೀವವನ್ನು ಕಿತ್ತುಕೊಂಡ ಎಬೋಲಾದಷ್ಟೇ ಅಪಾಯಕಾರಿ ರೋಗವಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಎಬೋಲಾ ರೋಗದ ಹಿನ್ನೆಲೆ ಏನು, ಎಬೋಲಾ ಮತ್ತು ಕೊರೊನಾವೈರಸ್ ನಡುವಿನ ಸಾಮ್ಯತೆ ಹೇಗಿದೆ. ಇವುಗಳ ಮಧ್ಯೆ ಸದ್ದು ಮಾಡುತ್ತಿರುವ ಮಾರ್ಬರ್ಗ್ ವೈರಸ್ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಏನು ಎಂಬುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

ಮಾರ್ಬರ್ಗ್ ವೈರಸ್ ಇತಿಹಾಸ
ಜರ್ಮನಿ ಮತ್ತು ಯುಗೋಸ್ಲೋವಿಯಾದಲ್ಲಿ ಹಸಿರು ಬಣ್ಣದ ಕೋತಿಗಳನ್ನು ಆಮದು ಮಾಡಿಕೊಂಡ ನಂತರದಲ್ಲಿ ಮೊದಲಿಗೆ ಈ ಮಾರ್ಬರ್ಗ್ ವೈರಸ್ ಕಾಣಿಸಿಕೊಂಡಿತ್ತು. ಅಂದು 31 ರೋಗಿಗಳ ಪೈಕಿ ಶೇ.23ರಷ್ಟು ಸೋಂಕಿತರು ಪ್ರಾಣ ಬಿಟ್ಟಿದ್ದರು. 2005ರ ಅವಧಿಯಲ್ಲಿ ಅಗೋಲಾದಲ್ಲಿ 252 ಮಂದಿ ಸೋಂಕಿತರ ಪೈಕಿ ಶೇ.90ರಷ್ಟು ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದು, ಪರಿಸ್ಥಿತಿ ಶೋಚನೀಯವಾಗಿತ್ತು. ಶಿಶು ವೈದ್ಯಕೀಯ ವ್ಯವಸ್ಥೆಗೆ ಸಂಬಂಧಿಸಿದಂತೆ ಬಳಸಿರುವ ವಸ್ತುಗಳ ಕಲುಷಿತ ಮರುಬಳಕೆಯಿಂದಾಗಿ ಈ ರೋಗ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ. ಎಬೋಲಾದ ರೀತಿಯಲ್ಲಿ ಶವ ಸಂಸ್ಕಾರ ಹಾಗೂ ಮೃತದೇಹಗಳ ನಿರ್ವಹಣೆಯಲ್ಲಿ ಆಗುವ ಲೋಪದೋಷದಿಂದ ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ.
2009ರಲ್ಲಿ ಉಗಾಂಡಾದ ಗುಹೆಗೆ ತೆರಳಿದ ಪ್ರವಾಸಿಗರಲ್ಲಿ ಎರಡು ರೀತಿಯ ಗಮನಾರ್ಹ ರೋಗಗಳು ಕಾಣಿಸಿಕೊಂಡಿವೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಮೊದಲನೆ ಪ್ರಕರಣದಲ್ಲಿ ಡಚ್ ಮಹಿಳೆಯು ಬಾವಲಿ ಕಚ್ಚಿದರ ಹಿನ್ನೆಲೆ ಸಾವನ್ನಪ್ಪಿದರು. ಎರಡನೆಯದಾಗಿ ಕೊಲೊರಾಡೋ ಮಹಿಳೆಯು ಉಗಾಂಡಾ ಪ್ರವಾಸದ ನಂತರ ಜ್ವರದ ಕಾಯಿಲೆ ಕಾಣಿಸಿಕೊಂಡು, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆರಂಭಿಕ ಹಂತದಲ್ಲಿ ಇಂಥದ್ದೇ ರೋಗ ಎಂಬುದನ್ನು ಗುರುತಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಮಹಿಳೆಯು ಮೃತಪಟ್ಟ ಡಚ್ ಮಹಿಳೆಯ ಜೊತೆಗೆ ಒಂದೇ ಗುಹೆಯಲ್ಲಿದ್ದರು ಎಂಬುದು ತಿಳಿಯಲಾಗಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಮಾರ್ಬರ್ಗ್ ಸೋಂಕು ಇರುವುದು ಸ್ಪಷ್ಟವಾಗಿದೆ.

ಮಾರ್ಬರ್ಗ್ ರೋಗಾಣು ಹರಡುವಿಕೆ ಹೇಗೆ?
ಸಾಮಾನ್ಯವಾಗಿ ಮಾರ್ಬರ್ಗ್ ವೈರಸ್ ಎನ್ನುವುದು ಗುಹೆಗಳು ಅಥವಾ ಗಣಿ, ಹಾಗೂ ವಸತಿ ಪ್ರದೇಶಗಳಲ್ಲಿ ಹೆಚ್ಚಾಗಿರುವ ರೂಸೆಟ್ಟಸ್ ಬಾವಲಿಗಳಿಂದ ಹರಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಒಮ್ಮೆ ಸೋಂಕು ಅಂಟಿಕೊಂಡ ವ್ಯಕ್ತಿ ಜೊತೆಗಿನ ಸಂಪರ್ಕ ಅಥವಾ ಸೋಂಕಿತನ ದ್ರವ್ಯದಿಂದ ಹಾಗೂ ಸೋಂಕಿತನು ಬಳಸಿ ಕಲುಷಿತಗೊಂಡ ವಸ್ತುಗಳಿಂದ ಸೋಂಕು ಹರಡುವ ಅಪಾಯವಿದೆ ಎಂದು ತಿಳಿಸಿದೆ. 1967ರಿಂದ ಈವರೆಗೂ ಮಾರ್ಬರ್ಗ್ ರೋಗಾಣುವಿನ 12 ಪ್ರಕರಣಗಳು ವರದಿಯಾಗಿವೆ. ಈ ವರ್ಷ ಕಾಣಿಸಿಕೊಂಡಿರುವ ಎಬೋಲಾ ರೋಗ ಮತ್ತು ಮಾರ್ಬರ್ಗ್ ರೋಗಾಣುವಿನ ಎರಡು ಪ್ರಕರಣಗಳು ಗಿನಿಯ ಲಿಬೇರಿಯಾ ಮತ್ತು ಐವೋರಿ ಕರಾವಳಿ ಗಡಿಭಾಗದ ಗ್ವೆಕೆಡೌ ಪ್ರದೇಶದಲ್ಲಿ ವರದಿಯಾಗಿತ್ತು. ಇಡೀ ಜಗತ್ತನ್ನು ನಲುಗುವಂತೆ ಮಾಡಿದ್ದ ಎಬೋಲಾ ರೋಗ ಕೂಡಾ 2014-16ನೇ ಸಾಲಿನಲ್ಲಿ ಇದೇ ಪ್ರದೇಶದಲ್ಲಿ ಮೊದಲು ಕಾಣಿಸಿಕೊಂಡಿತ್ತು.

ಮಾರ್ಬರ್ಗ್ ವೈರಸ್ ರೋಗದ ಲಕ್ಷಣಗಳು ಏನು?
ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡಿರುವ ಮಾರ್ಬರ್ಗ್ ವೈರಸ್ ತಗುಲಿರುವ ಸೋಂಕಿತನಲ್ಲಿ ಯಾವ ಯಾವ ರೀತಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಯಾವ ರೀತಿ ಲಕ್ಷಣಗಳನ್ನು ಹೊಂದಿರುತ್ತಾರೆ ಎಂಬುದನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
* ತಲೆನೋವು,
* ರಕ್ತದ ವಾಂತಿ
* ಸ್ನಾಯು ನೋವು
* ರಕ್ತಸ್ರಾವ
* ರೋಗಾಣುವಿನ ತಳಿ ಆಧರಿಸಿ ಸಾವಿನ ಪ್ರಮಾಣ ಶೇ.24ರಿಂದ ಶೇ.88ರಷ್ಟು ಬದಲಾಗುವ ಅಪಾಯ

ಎಬೋಲಾ ಮತ್ತು ಮಾರ್ಬರ್ಗ್ ರೋಗಾಣುವಿನ ಸಾಮ್ಯತೆ
ಒಂದು ಕಾಲದಲ್ಲಿ ಜಗತ್ತನ್ನು ಬೆಚ್ಚಿ ಬೀಳಿಸಿದ ಎಬೋಲಾ ರೋಗಿಗಳಲ್ಲೂ ಕೂಡಾ ಮಾರ್ಬರ್ಗ್ ರೋಗದ ಲಕ್ಷಣಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವು. ಈ ಎರಡು ರೋಗಗಳ ನಡುವಿನ ಸಾಮ್ಯತೆ ಮತ್ತು ಹಿನ್ನೆಲೆಯನ್ನು ಅವಲೋಕಿಸಿ ನೋಡುವುದಾದರೆ, ಒಮ್ಮೆ ಎಬೋಲಾ ವೈರಸ್ ಸೋಂಕು ತಗಲಿದ ನಂತರ 2 ರಿಂದ 21 ದಿನಗಳವರೆಗೂ ಸೋಂಕಿತರಲ್ಲಿ ಈ ಲಕ್ಷಣಗಳು ಕಂಡು ಬರುತ್ತವೆ ಎಂದು ವಿಜ್ಞಾನಿಗಳು ಮತ್ತು ವೈದ್ಯರು ತಿಳಿಸಿದ್ದಾರೆ.
* ಜ್ವರ
* ತಲೆನೋವು, ಮೈ-ಕೈ ನೋವು,
* ಹೊಟ್ಟೆನೋವು
* ಅತಿಸಾರ ಮತ್ತು ವಾಂತಿ
* ತೀವ್ರ ರಕ್ತಸ್ರಾವ

ಅಸಲಿಗೆ 'ಎಬೋಲಾ' ಎಂದರೇನು?
ಐದು ತಳಿಯ ವೈರಸ್ ಗಳಿಂದ ಹರಡುವ ಮಾರಕ ರೋಗವನ್ನು ಎಬೋಲಾ ಎಂದು ವಿಜ್ಞಾನಿಗಳು ಗುರುತಿಸಿದ್ದರು. ಸುಡಾನ್ ವೈರಸ್, ತೈ ಫಾರೆಸ್ಟ್ ವೈರಸ್, ಬಂದಿಬುಂಗ್ಯಾ ವೈರಸ್, ರೆಸ್ಟೋನ್ ವೈರಸ್, ಬೊಂಬಲಿ ವೈರಸ್ ಹೀಗೆ ಐದು ತಳಿಯ ವೈರಸ್ ಗಳ ಒಂದು ಪಂಗಡವನ್ನು ಎಬೋಲಾ ವೈರಸ್ ಎಂದು ಕರೆಯಲಾಗುತ್ತಿತ್ತು. ಈ ಪೈಕಿ ನಾಲ್ಕು ವೈರಸ್ ಗಳು ಮಾತ್ರ ಮನುಷ್ಯರಿಗೆ ಅಪಾಯಕಾರಿ ಎನ್ನಲಾಗಿತ್ತು. ಆಫ್ರಿಕಾದ ಕೇಂದ್ರ ಭಾಗದಲ್ಲಿ ಇರುವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಪ್ರದೇಶದಲ್ಲಿ 1976ರಲ್ಲಿ ಮೊದಲಿಗೆ ವ್ಯಕ್ತಿಯೊಬ್ಬರಲ್ಲಿ ಎಬೋಲಾ ಸೋಂಕು ಪತ್ತೆಯಾಗಿತ್ತು. ಅಂದು ಮಾರಕ ಹೇಗೆ ಹುಟ್ಟಿಕೊಂಡಿತು ಎಂದು ವಿಜ್ಞಾನಿಗಳೂ ಪತ್ತೆ ಮಾಡಲು ಆಗಲಿಲ್ಲ. ಆರಂಭದಲ್ಲಿ ಎಬೋಲಾ ಕೂಡಾ ಸಾಮಾನ್ಯ ವೈರಸ್ ಗಳಂತೆ ಗೋಚರಿಸಿದ್ದು, ಬಾವತಿ ಅಥವಾ ಸಸ್ತನಿಗಳಲ್ಲಿ ಹುಟ್ಟಿಕೊಂಡಿದ್ದು, ಮನುಷ್ಯರಿಗೆ ಹರಡಿದೆ ಎಂದು ನಂಬಲಾಗಿತ್ತು.

ಎಬೋಲಾ ವೈರಸ್ ಎಷ್ಟರ ಮಟ್ಟಿಗೆ ಅಪಾಯಕಾರಿ?
ಮಂಗ, ಕೋತಿ, ಬಾವಲಿ ಹೀಗೆ ಪ್ರಾಣಿಗಳಲ್ಲಿ ಕಾಣಿಸಿಕೊಂಡ ಎಬೋಲಾ ಸೋಂಕು ಕ್ರಮೇಣ ಮನುಷ್ಯರನ್ನೂ ಪ್ರವೇಶಿಸಿತು. ಮೊದಲು ಪ್ರಾಣಿಗಳಿಂದ ಆರಂಭವಾದ ಸೋಂಕಿನ ಹಾವಳಿ ನಂತರ ಜನರ ನಡುವಿನ ನೇರ ಸಂಪರ್ಕ ಮತ್ತು ಸ್ಪರ್ಶ, ಸೋಂಕಿತನ ರಕ್ತ, ಸೋಂಕಿತನ ಎಂಜಲು, ಸೋಂಕಿತ ವ್ಯಕ್ತಿ ಜೊತೆಗಿನ ಲೈಂಗಿಕ ಸಂಪರ್ಕದಿಂದಲೂ ಎಬೋಲಾ ಹರಡುತ್ತದೆ. ಎಬೋಲಾ ವೈರಸ್ ಸೋಂಕಿತನನ್ನು ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತವೆ. ಮನುಷ್ಯರ ದೇಹವನ್ನು ಸೇರುವ ಸೂಕ್ಷ್ಮಾಣುಗಳು ನರಮಂಡಲದ ಮೇಲೆ ಪ್ರಭಾವ ಬೀರುತ್ತವೆ. ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಸೋಂಕಿತನ ಪ್ರತಿಯೊಂದು ಅಂಗದ ಮೇಲೂ ವೈರಸ್ ದಾಳಿ ನಡೆಸಿ ದುರ್ಬಲಗೊಳಿಸುತ್ತವೆ. ಇದರಿಂದ ದೇಹದಲ್ಲಿ ರಕ್ತ ಸೋರಿಕೆಯಾಗುವ ಅಪಾಯವಿರುತ್ತದೆ.

2018ರಲ್ಲಿ ನಾಲ್ಕು ರೀತಿಯ ಚಿಕಿತ್ಸಾ ವಿಧಾನ
ಕಳೆದ 2018ರವರೆಗೂ ಎಬೋಲಾ ವೈರಸ್ ಸೋಂಕಿತರಿಗೆ ನಿರ್ದಿಷ್ಠವಾದ ಲಸಿಕೆ ಅಥವಾ ಔಷಧಿಯನ್ನು ಪತ್ತೆ ಹಚ್ಚಿರಲಿಲ್ಲ. 2018ರಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿ ನಾಲ್ಕು ರೀತಿಯಲ್ಲಿ ಎಬೋಲಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಬಗ್ಗೆ ತನಿಖಾತ್ಮಕ ಪ್ರಯೋಗ ನಡೆಸಲಾಯಿತು. ಸದ್ಯದ ಮಟ್ಟಿಗೆ ಎಬೋಲಾ ಸೋಂಕಿತರ ಚಿಕಿತ್ಸೆಗೆ REGN-EB3 ಮತ್ತು mAb114 ಔಷಧವನ್ನು ಬಳಸಲಾಗುತ್ತಿದೆ. 1976ರಲ್ಲೇ ಮೊದಲು ಕಾಣಿಸಿಕೊಂಡ ಎಬೋಲಾ ವೈರಸ್ ಗೆ 2019ರ ಡಿಸೆಂಬರ್ 19ರಲ್ಲಿ ಔಷಧಿ ಪತ್ತೆ ಮಾಡಲಾಗಿತು. rVSV-ZEBOV ಎಂಬ ಔಷಧಿಯನ್ನು ಅಮೆರಿಕಾದ ಆಹಾರ ಮತ್ತು ಔಷಧಿ ಆಡಳಿತ ಮಂಡಳಿಯು ಅನುಮೋದನೆ ನೀಡಿತು. rVSV-ZEBOV ಲಸಿಕೆಯು ಸಿಂಗಲ್ ಡೋಸ್ ಆಗಿದ್ದು ಈ ಔಷಧಿಯು ಎಬೋಲಾ ವೈರಸ್ ನ ಜೈರಾ ತಳಿಯಿಂದ ಮಾತ್ರ ರಕ್ಷಿಸಲು ಸಹಕಾರಿ ಎಂದು ಎಫ್ ಡಿಎ ತಿಳಿಸಿತು.

ಎಬೋಲಾ ಆಯ್ತು ಮಾರ್ಬರ್ಬ್ ರೋಗಿಗಳ ಚಿಕಿತ್ಸೆ
ಜಗತ್ತಿನಲ್ಲಿ ಎಬೋಲಾ ರೋಗಿಗಳ ಚಿಕಿತ್ಸೆಗೆ ಬಳಸುವ ವೈದ್ಯಕೀಯ ವಿಧಾನವಾಗಲಿ ಅಥವಾ ಲಸಿಕೆಗಳಾಗಲಿ ಮಾರ್ಬರ್ಗ್ ರೋಗಗಳ ಮೇಲೆ ಪರಿಣಾಮಕಾರಿ ಆಗಿರುವುದಿಲ್ಲ. ರೋಗಿಯ ದ್ರವಗಳು ಮತ್ತು ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸುವುದು, ಆಮ್ಲಜನಕದ ಸ್ಥಿತಿ ಮತ್ತು ರಕ್ತದೊತ್ತಡವನ್ನು ಕಾಪಾಡಿಕೊಳ್ಳುವುದು, ಕಳೆದುಹೋದ ರಕ್ತ ಮತ್ತು ಹೆಪ್ಪುಗಟ್ಟುವಿಕೆ ಅಂಶಗಳನ್ನು ಬದಲಿಸುವುದಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಚಿಕಿತ್ಸೆ ವಿಧಾನವನ್ನು ಬಳಸಿಕೊಳ್ಳಬೇಕು ಸಿಡಿಸಿ ಹೇಳಿದೆ.

ನಿರಾಳತೆ ಮೂಡಿಸುವ ಸುದ್ದಿ
ಎಬೋಲಾದಂತೆ ಗೋಚರಿಸುವ ಹಾಗೂ ಒಂದೇ ರೀತಿಯ ರೋಗದ ಲಕ್ಷಣಗಳನ್ನು ಒಳಗೊಂಡಿರುವ ಮಾರ್ಬರ್ಗ್ ವೈರಸ್ ಕಡಿಮೆ ಅಪಾಯವನ್ನು ಹೊಂದಿದೆ.












Click it and Unblock the Notifications