ರಾಜಕೀಯ ವಿಶೇಷ: ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದ ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು, ಏಪ್ರಿಲ್ 22: ಇದುವರೆಗೆ ನಡೆದ ವಿಧಾನಸಭಾ ಚುನಾವಣೆಗಳಿಗೆ ಹೋಲಿಸಿದರೆ ಮುಂದಿನ 2023ರಲ್ಲಿ ನಡೆಯಲಿರುವ ಚುನಾವಣೆ ವಿಭಿನ್ನವಾಗಿರಲಿದೆ. ಮೇಲ್ನೋಟಕ್ಕೆ ಗಮನಿಸಿದರೆ ಆಡಳಿತ ಪಕ್ಷ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ವಿಪಕ್ಷಗಳು ಅಧಿಕಾರ ಪಡೆಯಲು ಹೋರಾಟ ನಡೆಸುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ವರ್ಷವಿರುವಾಗಲೇ ಚುನಾವಣಾ ತಂತ್ರಗಳನ್ನು ಆರಂಭಿಸಿರುವುದನ್ನು ನೋಡಿದರೆ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತವೆ ಎಂಬುದು ಖಚಿತವಾಗಿದೆ.
ಸಾಮಾನ್ಯವಾಗಿ ಚುನಾವಣೆಗೆ ಒಂದೋ ಎರಡೋ ತಿಂಗಳು ಇರುವಾಗ ಚುನಾವಣಾ ಕಾವು ಶುರುವಾಗುತ್ತದೆ. ಆದರೆ ರಾಜ್ಯದಲ್ಲಿ ಈ ಬಾರಿ ವರ್ಷಕ್ಕೂ ಮುನ್ನವೇ ರಾಜಕೀಯ ತಂತ್ರಗಾರಿಕೆ. ಆರೋಪ, ಪ್ರತ್ಯಾರೋಪಗಳು ಶುರುವಾಗಿದ್ದು, ಚುನಾವಣೆ ಹೊತ್ತಿಗೆ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಎಂಬ ಭಯ ಮತದಾರ ವಲಯವನ್ನು ಕಾಡುತ್ತಿದೆ.

ಅಭಿವೃದ್ಧಿ ವಿಚಾರಗಳು ಗೌಣ
ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ರಾಜಕೀಯ ಪಕ್ಷಗಳಿಗೆ ಜನಹಿತಕ್ಕಿಂತ ಅಧಿಕಾರ ಮುಖ್ಯವಾಗಿರುವುದು ಸ್ಪಷ್ಟವಾಗಿದ್ದು, ಅದಕ್ಕೋಸ್ಕರ ಏನೆಲ್ಲ ಮಾಡಬಹುದೋ ಅದೆಲ್ಲವನ್ನು ಒಂದು ಕಡೆಯಿಂದ ಮಾಡುತ್ತಾ ಬರುತ್ತಿರುವುದು ಎದ್ದು ಕಾಣಿಸುತ್ತಿದೆ. ಎಲ್ಲೋ ಒಂದು ಕಡೆ ರಾಜಕೀಯ ಲಾಭಕ್ಕಾಗಿ ಅಮಾಯಕರನ್ನು ಬಲಿಕೊಡಲಾಗುತ್ತಿದೆಯಾ? ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತಿದೆ.
ಬೆಲೆ ಹೆಚ್ಚಳ, ಭ್ರಷ್ಟಾಚಾರ, ಅಭಿವೃದ್ಧಿ ಸೇರಿದಂತೆ ಕೆಲವು ವಿಚಾರಗಳು ಸಾಮಾನ್ಯವಾಗಿ ಚುನಾವಣೆ ಬಂದಾಗ ಹೊಸ ರೂಪ ಪಡೆದುಕೊಳ್ಳುತ್ತಿದ್ದವು. ವಿರೋಧ ಪಕ್ಷಗಳು ಆಡಳಿತ ಪಕ್ಷದ ಅನಾಚಾರಗಳನ್ನು ಜನರ ಮುಂದಿಟ್ಟು ಹೋರಾಟ ಮಾಡುತ್ತಿದ್ದವು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಇದ್ಯಾವುದೂ ದೊಡ್ಡ ವಿಚಾರಗಳೇ ಆಗುತ್ತಿಲ್ಲ. ಜತೆಗೆ ಅಂತಹ ವಿಚಾರಗಳು ಸರ್ಕಾರವನ್ನು ಕೆಡವುವ ಮಟ್ಟಕ್ಕೆ ಹೋಗುತ್ತಿಲ್ಲ.

ಸಿದ್ದು ಮತ್ತು ಎಚ್‌ಡಿಕೆ ನಡುವೆ ಸಮರ
ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಲವು ಬೆಳವಣಿಗೆಗಳಾಗಿವೆ. ಕೊರೊನಾದಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು. ಕೋವಿಡ್ ನಿಯಮಗಳು ವಿರೋಧ ಪಕ್ಷಗಳನ್ನು ನಿದ್ದೆ ಮಾಡುವಂತೆ ಮಾಡಿತು. ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡ ಬಳಿಕವೂ ಒಂದಾಗಿಯೇ ಉಳಿದಿದ್ದರೆ ಆಡಳಿತದಲ್ಲಿರುವ ಬಿಜೆಪಿಗೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗುತ್ತಿತ್ತು. ಆದರೆ ಬಿಜೆಪಿ ನಾಯಕರ ಅದೃಷ್ಟವೂ ವಿಪಕ್ಷಗಳ ದುರಾದೃಷ್ಟವೋ ಒಂದಾಗಿ ಜೋಡೆತ್ತುಗಳಂತೆ ಸಮ್ಮಿಶ್ರ ಸರ್ಕಾರ ರಚಿಸಿದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಾಯಕರು ಸರ್ಕಾರ ಉರುಳಿದ ಮಾರನೆಯ ದಿನದಿಂದಲೇ ಹಾವು-ಮುಂಗುಸಿಯಂತೆ ಕಚ್ಚಾಡಲು ಆರಂಭಿಸಿದರು.
ಕಾಂಗ್ರೆಸ್‌ನ ಹಿರಿಯ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗಳ ಮೂಲಕ ಒಬ್ಬರನೊಬ್ಬರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವುದರೊಂದಿಗೆ ತಮ್ಮೊಳಗಿನ ಆಕ್ರೋಶಗಳನ್ನು ಹೊರ ಹಾಕಿದರಲ್ಲದೆ, ಒಂದಷ್ಟು ರಹಸ್ಯಗಳನ್ನು ಜಗಜ್ಜಾಹೀರು ಮಾಡಿಕೊಂಡರು. ಅಲ್ಲಿಂದ ಆರಂಭವಾದ ದ್ವೇಷದ ಹೊಗೆ ಇವತ್ತಿಗೂ ನಿಂತಿಲ್ಲ.

ಕಾಂಗ್ರೆಸ್‌ನ ಓಟ್ ಬ್ಯಾಂಕ್‌ಗೆ ಲಗ್ಗೆ
ಅವತ್ತೇನಾದರೂ ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ್ದರೆ ಬಿಜೆಪಿಗೆ ಆಡಳಿತ ನಡೆಸುವುದು ಕಷ್ಟವಾಗುತ್ತಿತ್ತು. ಆದರೆ ಹಾಗೆ ಆಗಲೇ ಇಲ್ಲ. ವಿರೋಧ ಪಕ್ಷಗಳೇ ಒಬ್ಬರನೊಬ್ಬರು ಕಿತ್ತಾಡುತ್ತಾ ಬಂದರು. ಇವತ್ತಿಗೂ ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ಅವರ ಮೇಲೆ ಆಕ್ರೋಶವಿದೆ. ಸಮ್ಮಿಶ್ರ ಸರ್ಕಾರ ಕೆಡವಲು ಸಿದ್ದರಾಮಯ್ಯರೇ ಕಾರಣ ಎಂಬುದು ಅವರ ಅಭಿಪ್ರಾಯವಾಗಿದೆ.
ಹೀಗಾಗಿ ಸಿದ್ದರಾಮಯ್ಯ ಅವರನ್ನು ಸಮಯ, ಸಂದರ್ಭ ಸಿಕ್ಕಿದಾಗಲೆಲ್ಲ ಹಣಿಯುತ್ತಾ ಬಂದಿರುವ ಕುಮಾರಸ್ವಾಮಿ ಸದ್ಯ ಜನತೆಯ ಮುಂದೆ ಸಿದ್ದರಾಮಯ್ಯರನ್ನು ವಿಲನ್ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಓಟ್ ಬ್ಯಾಂಕ್‌ಗೆ ಲಗ್ಗೆಯಿಟ್ಟಿರುವ ಅವರು ಸಮಯ ನೋಡಿಕೊಂಡು ಮೌನ ಮುರಿದು ಹಿಂದೂ ಸಂಘಟನೆಗಳ ವಿರುದ್ಧ ಹರಿಹಾಯ್ದರು. ಅಷ್ಟೇ ಅಲ್ಲದೆ ಅಲ್ಪಸಂಖ್ಯಾತ ನಾಯಕನಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಪಟ್ಟ ಕಟ್ಟಿದರು. ಆ ಮೂಲಕ ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಜೆಡಿಎಸ್‌ನಿಂದಾಗಿ ಬಿಜೆಪಿ ನಿರಾಳ
ಎಚ್.ಡಿ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿ ತಂತ್ರ ರೂಪಿಸಿದರೂ, ಅದರ ಪರಿಣಾಮ ಕಾಂಗ್ರೆಸ್ ಪಕ್ಷದ ಮೇಲಾಗುತ್ತದೆ ಎಂಬುದು ಅಷ್ಟೇ ಸತ್ಯ. ಕುಮಾರಸ್ವಾಮಿ ಅವರ ನಡವಳಿಕೆಯನ್ನು ಗಮನಿಸಿದರೆ ಅವರು ಯಾವುದೇ ಒಂದು ಸಿದ್ಧಾಂತಕ್ಕೆ ಬದ್ಧರಾಗಿರುವಂತೆ ಕಾಣುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದರೆ, ಕಾಂಗ್ರೆಸ್ ವಿರುದ್ಧವೇ ಆರೋಪ ಮಾಡುವ ಮೂಲಕ ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ.
ಹಾಗೆ ನೋಡಿದರೆ ಕಾಂಗ್ರೆಸ್‌ನ ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ ಯಾವ ಹೋರಾಟವೂ ಇದುವರೆಗೆ ಫಲಕೊಟ್ಟಂತೆ ಕಾಣುತ್ತಿಲ್ಲ. ಕಾರಣ ಕಾಂಗ್ರೆಸ್‌ಗೆ ಆಯಾಯ ಸಂದರ್ಭಕ್ಕೆ ತಕ್ಕಂತೆ ಕುಮಾರಸ್ವಾಮಿ ಟಕ್ಕರ್ ಕೊಡುತ್ತಿರುವುದರಿಂದ ಆಡಳಿತ ಪಕ್ಷ ಬಿಜೆಪಿ ನಿರಾಳವಾಗಿದೆ. ಆದರೆ ಇಲ್ಲಿ ತಲೆಕೆಡಿಸಿಕೊಂಡು ಮೈಪರಚಿಕೊಳ್ಳುತ್ತಿರುವುದು ಮಾತ್ರ ಕಾಂಗ್ರೆಸ್ ನಾಯಕರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಎಚ್‌ಡಿಕೆ ಪ್ರಶ್ನೆಗಳಿಗೆ ಸಿದ್ದು ಉತ್ತರ ಕೊಡುತ್ತಾರಾ?
ಇದೀಗ ದೇಶದಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದು, ಕರ್ನಾಟಕದಲ್ಲಿ ಸ್ವಲ್ಪ ಉಸಿರಾಡುತ್ತಿದೆ. ಮುಂದಿನ ಚುನಾವಣೆ ಬಳಿಕ ಅದು ನಿಂತು ಹೋಗಲಿದೆ. ಡಿ.ಜೆ. ಹಳ್ಳಿ ಗಲಾಟೆಯಲ್ಲಿ ಕಾಂಗ್ರೆಸ್ ಮುಖಂಡರ ಪಾತ್ರ ಇತ್ತು. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಯಲು ಕಾಂಗ್ರೆಸ್ ಮುಖಂಡರು ಕಾರಣ ಎಂಬ ಸ್ಪೋಟಕ ವಿಚಾರವನ್ನು ಬಹಿರಂಗವಾಗಿ ಹೇಳುವ ಮೂಲಕ ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾರೆ.
ಮುಂದಿನ 2023ರ ವಿಧಾನಸಭಾ ಚುನಾವಣೆ ವೇಳೆಗೆ ಆಡಳಿತರೂಢ ಬಿಜೆಪಿಯನ್ನು ಹಣಿದು ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಹೊರಟಿದ್ದ ಕಾಂಗ್ರೆಸ್ ನಾಯಕರಿಗೆ ಈಗ ಕುಮಾರಸ್ವಾಮಿ ಅಡ್ಡಗಾಲಾಗಿದ್ದು, ಪ್ರತಿ ಹೆಜ್ಜೆಗೂ ಮುಳ್ಳಾಗಿ ಚುಚ್ಚಲು ಆರಂಭಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಏನೋ ಮಾಡಿಯೇ ಬಿಡುತ್ತೇವೆ ಎಂದು ಹೊರಟಿದ್ದ ಕಾಂಗ್ರೆಸ್‌ಗೆ ಜೆಡಿಎಸ್ ಮಗ್ಗುಲ ಮುಳ್ಳಾಗಿ ಚುಚ್ಚಲು ಆರಂಭಿಸಿದೆ. ಚುನಾವಣೆಗೆ ಕಾಲ ಸನ್ನಿಹಿತವಾಗಿರುವಾಗ ವಿರೋಧ ಪಕ್ಷಗಳೆರಡು ಕಿತ್ತಾಡಿದಷ್ಟು ಬಿಜೆಪಿಗೆ ಲಾಭವಾಗುವುದಂತು ಖಚಿತ.

ಕಾಂಗ್ರೆಸ್‌ಗೆ ಜೆಡಿಎಸ್ ನುಂಗಲಾರದ ತುತ್ತು
ಇದೆಲ್ಲದರ ನಡುವೆ 2008ರಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದು ಯಾರು? ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿ ಬಳಿ ಹಣ ಪಡೆದವರು ಯಾರು? ಅಪರೇಷನ್ ಕಮಲ ನಡೆಸಲು ಬೆಂಬಲ ನೀಡಿ, ಆಪರೇಷನ್ ಕಮಲದಿಂದ ಬಂದು ಚುನಾವಣೆ ಎದುರಿಸಿದವರಿಗೆ ಒಳಗಿಂದೊಳಗೆ ಹಿಂಬದಿಯಲ್ಲಿ ಬೆಂಬಲ ನೀಡಿದವರು ಯಾರು? ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಮತ್ತು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಯಾರು? ಮತ್ತು ಇವರು ಆತ್ಮಹತ್ಯೆ ಮಾಡಿಕೊಂಡಿದ್ದು ಯಾರ ಕಾಲದಲ್ಲಿ? ಹೀಗೆ ಒಂದಷ್ಟು ಪ್ರಶ್ನೆಗಳನ್ನು ಕುಮಾರಸ್ವಾಮಿ ಸಾರ್ವಜನಿಕವಾಗಿ ಕೇಳಿದ್ದಾರೆ.
ಇದಕ್ಕೆ ಸಿದ್ದರಾಮಯ್ಯನವರು ಸೂಕ್ತ ಉತ್ತರಗಳನ್ನು ನೀಡಿ ಸಮರ್ಥನೆ ಮಾಡಿಕೊಳ್ಳಬಹುದು ಆದರೆ ಈ ವಿಚಾರಗಳು ಚುನಾವಣೆ ವೇಳೆಯಲ್ಲಿ ಚರ್ಚೆಗೆ ಗ್ರಾಸವಾಗುತ್ತವೆ. ಅದು ಕಾಂಗ್ರೆಸ್ ಪಕ್ಷದ ಮೇಲೆ ಪರಿಣಾಮ ಬೀರಿದರೂ ಅಚ್ಚರಿಪಡಬೇಕಾಗಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಚುನಾವಣೆಯ ಈ ಕಾಲದಲ್ಲಿ ಕುಮಾರಸ್ವಾಮಿ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವುದಂತು ಸತ್ಯ.












Click it and Unblock the Notifications