ಮೂವರಿಂದ ದೂರವಿರಿ, ಸಿದ್ದರಾಮಯ್ಯಗೆ ಆಪ್ತರ ಸಲಹೆ: ಆ ಮೂವರು ಯಾರು?
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನ ಬಿ.ಕೆ.ಹರಿಪ್ರಸಾದ್ ಅವರ ಪಾಲಾದ ನಂತರದ ಬೆಳವಣಿಗೆಯ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪರಮಾಪ್ತರ ಜೊತೆಗೆ ರೆಸಾರ್ಟಿಗೆ ಹೋಗಿದ್ದರು. ಎಚ್.ಡಿ.ಕೋಟೆಯ ಕಬಿನಿ ಹಿನ್ನೀರಿನ ಬಳಿಯಿರುವ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆದು ಈಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ರಾಜಧಾನಿಗೆ ಆಗಮಿಸುತ್ತಿದ್ದಂತೆಯೇ ಮತ್ತೆ ಸಕ್ರಿಯರಾಗಿರುವ ಸಿದ್ದರಾಮಯ್ಯ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಯು.ಟಿ.ಖಾದರ್ ಭೇಟಿಯಾಗಿದ್ದಾರೆ. ಈ ವೇಳೆ, ಅವರ ಆಪ್ತರಾದ ಅಶೋಕ್ ಪಟ್ಟಣ್ ಮತ್ತು ಜಮೀರ್ ಅಹ್ಮದ್ ಅವರು ಸಿದ್ದರಾಮಯ್ಯನವರ ಜೊತೆಗಿದ್ದರು.
ಮೇಕೆದಾಟು ಪಾದಯಾತ್ರೆ, ಇದಾದ ನಂತರ ಸ್ವಕ್ಷೇತ್ರ ಬಾದಾಮಿಯಲ್ಲಿನ ಕಾರ್ಯಕ್ರಮದಲ್ಲಿ ಸತತವಾಗಿ ಭಾಗವಹಿಸಿದ್ದ ಸಿದ್ದರಾಮಯ್ಯ, ಫೆಬ್ರವರಿ ಒಂದರಂದು ಕಬಿನಿ ರೆಸಾರ್ಟಿಗೆ ತೆರಳಿದ್ದರು. ಅವರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವ ಹಲವು ನಾಯಕರು ಅವರ ಜೊತೆಗಿದ್ದರು.
ಬಿ.ಕೆ.ಹರಿಪ್ರಸಾದ್ ಅವರ ಆಯ್ಕೆ ತನಗಾದ ಹಿನ್ನಡೆ, ಅದ್ಯಾಕೋ ನಮ್ಮ ಹೈಕಮಾಂಡ್ ನನ್ನ ಮಾತಿಗೆ ಬೆಲೆಕೊಡುತ್ತಿಲ್ಲ ಎನ್ನುವ ವಿಷಾದದ ಮಾತನ್ನು ಸಿದ್ದರಾಮಯ್ಯನವರು ತಮ್ಮಾಪ್ತರ ಜೊತೆಗೆ ಆಡಿದ್ದರು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ವೇಳೆ, ಅವರ ಆಪ್ತರು ಮೂವರಿಂದ ಅಂತರ ಕಾಯ್ದುಕೊಳ್ಳಿ ಎನ್ನುವ ಸಲಹೆಯನ್ನು ನೀಡಿದ್ದಾರೆ ಎಂದು ಸುದ್ದಿಯಾಗಿದೆ.

ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಮನಸ್ತಾಪ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಮನಸ್ತಾಪ ಇರುವುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಒಪ್ಪಿಕೊಂಡಿದ್ದರು. ಸಿದ್ದರಾಮಯ್ಯ ಆಪ್ತ ಅಶೋಕ್ ಪಟ್ಟಣ್ ಅವರಿಗೆ ನೋಟಿಸ್ ನೀಡಿದ ನಂತರ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವಿನ ಅಂತರ ಇನ್ನಷ್ಟು ಹೆಚ್ಚಾಗಿದೆ ಎನ್ನುವ ಮಾತು ಕೆಪಿಸಿಸಿ ವಲಯದಲ್ಲೇ ಕೇಳಿ ಬರುತ್ತಿದೆ. ಪ್ರಮುಖವಾಗಿ, ಮೂವರಿಂದ ಕನಿಷ್ಟ ಪಕ್ಷ ಚುನಾವಣೆ ಮುಗಿಯುವವರೆಗಾದರೂ ದೂರವಿರಿ ಎನ್ನುವ ಸಲಹೆಯನ್ನು ಸಿದ್ದರಾಮಯ್ಯ ಆಪ್ತರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯನವರ ಜೊತೆಗೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇತರರು
ಕಬಿನಿ ರೆಸಾರ್ಟಿನಲ್ಲಿ ಸಿದ್ದರಾಮಯ್ಯನವರ ಜೊತೆಗೆ ಮಾಜಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಕೆ ವೆಂಕಟೇಶ್, ಹೆಚ್ ಪಿ ಮಂಜುನಾಥ್, ಬಾದರ್ಲಿ ಹಂಪನಗೌಡ, ಅನಿಲ್ ಮಾಧು ಮತ್ತು ಕೆಲವು ಸ್ನೇಹಿತರಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಕೂಡಾ ರೆಸಾರ್ಟಿನಲ್ಲಿ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದರು. ರೆಸಾರ್ಟಿನಿಂದಲೇ ಕೇಂದ್ರ ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಿದ್ದರಾಮಯ್ಯ ಮಂಡಿಸಿದ್ದರು. ಈ ವೇಳೆ, ಹೈಕಮಾಂಡ್ ವಿಚಾರ ಬಂದಾಗ ಅವರ ಆಪ್ತರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಅಶೋಕ್ ಮಹಾದೇವಪ್ಪ ಪಟ್ಟಣ್ ಅವರಿಂದ ದೂರವಿರಿ
ಸದಾ ಸಿದ್ದರಾಮಯ್ಯನವರ ಬಳಿಯೇ ಇರುವ, ಕಳೆದ ಬಾರಿ ರಾಮದುರ್ಗ ಕ್ಷೇತ್ರದ ಅಸೆಂಬ್ಲಿ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅಶೋಕ್ ಮಹಾದೇವಪ್ಪ ಪಟ್ಟಣ್ ಅವರನ್ನು ದೂರವಿಡುವಂತೆ ಆಪ್ತರು ಸಲಹೆಯನ್ನು ನೀಡಿದ್ದಾರೆ. ಎರಡು ದಿನಗಳ ಕೆಳಗೆ ಕೆಪಿಸಿಸಿ ಶಿಸ್ತು ಸಮಿತಿ ಪಟ್ಟಣ್ ಅವರಿಗೆ ನೋಟಿಸ್ ನೀಡಿತ್ತು. ಈ ವಿಚಾರದ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, "ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರು ತಮ್ಮ ಬೆಂಬಲಿಗರ ಜೊತೆಗೆ ಬಂದಿದ್ದರು ಎಂದು ಪಟ್ಟಣ್ ಅವರು ನನ್ನ ಬಳಿ ಹೇಳಿದ್ದು, ಅಷ್ಟೇ, ನೊಟೀಸ್ ಕೊಟ್ಟಿದ್ದಾರೆ, ಅದಕ್ಕೆ ಅವನು ರಿಪ್ಲೈ ಮಾಡುತ್ತಾನೆ"ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮತ್ತು ಮತ್ತೋರ್ವ ಕಾಂಗ್ರೆಸ್ ಮುಖಂಡ ಪ್ರಕಾಶ್ ರಾಥೋಡ್
ಇನ್ನು, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮತ್ತು ಮತ್ತೋರ್ವ ಕಾಂಗ್ರೆಸ್ ಮುಖಂಡ ಪ್ರಕಾಶ್ ರಾಥೋಡ್ ಅವರಿಂದಲೂ ದೂರವಿರುವಂತೆ ಸಿದ್ದರಾಮಯ್ಯ ಆಪ್ತರು ಅವರಿಗೆ ಸಲಹೆಯನ್ನು ನೀಡಿದ್ದಾರೆ. ಸಲೀಂ ಪ್ರಕರಣದ ನಂತರ ಉಗ್ರಪ್ಪ ಎಲ್ಲರ ಜೊತೆಗೂ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಅದು ಹಾಗೆಯೇ ಮುಂದುವರಿಯಲಿ, ಇನ್ನು ರಾಥೋಡ್ ಅವರು ಆಪ್ತರಂತೆ ಫೋಸ್ ಕೊಡುತ್ತಾರೆ. ಅವರಿಂದ ನಿಮಗಾಗಲಿ ಅಥವಾ ಪಕ್ಷಕ್ಕಾಗಿ ಏನೂ ಲಾಭವಿಲ್ಲ ಎನ್ನುವ ಸಲಹೆಯನ್ನು ಆಪ್ತರು ಸಿದ್ದರಾಮಯ್ಯನವರಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications